ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿವಿ ವಿಭಜನೆ: ಉನ್ನತ ಶಿಕ್ಷಣ ಪರಿಷತ್ ಸಭೆ ಒಪ್ಪಿಗೆ

Last Updated 1 ಫೆಬ್ರುವರಿ 2011, 19:45 IST
ಅಕ್ಷರ ಗಾತ್ರ

ಬೆಂಗಳೂರು: ಅತಿ ದೊಡ್ಡದಾದ ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜಿಸಿ ಹೊಸದಾಗಿ ಬೆಂಗಳೂರು ದಕ್ಷಿಣ ವಿಶ್ವವಿದ್ಯಾಲಯ ಸ್ಥಾಪಿಸಲು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಒಪ್ಪಿಗೆ ನೀಡಿದ್ದು, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

ಮಂಗಳವಾರ ಇಲ್ಲಿ ನಡೆದ ಪರಿಷತ್‌ನ ಸಾಮಾನ್ಯ ಸಭೆಯಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ವಿಶ್ವವಿದ್ಯಾಲಯ ವಿಭಜನೆಗೆ ಒಪ್ಪಿಗೆ ನೀಡಲಾಯಿತು ಎಂದು ಸಭೆಯ ನಂತರ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಸಿ.ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.

ಹೆಸರಘಟ್ಟದಲ್ಲಿರುವ ಫಿಲಂ ಮತ್ತು ಟೆಲಿವಿಜನ್ ಸಂಸ್ಥೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಮೇಲ್ದರ್ಜೆಗೆ ಏರಿಸಲಾಗುವುದು. ಅದನ್ನು ಕಾಲೇಜನ್ನಾಗಿ ಪರಿವರ್ತಿಸಿ ಅಲ್ಲಿ ಪದವಿ ಕೋರ್ಸ್‌ಗಳನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.

ಈ ಕುರಿತ ಪ್ರಸ್ತಾವನೆಗೆ ಪರಿಷತ್ ಒಪ್ಪಿಗೆ ನೀಡಿದ್ದು ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

‘ರಾಜ್ಯದಲ್ಲಿ ಹೊಸದಾಗಿ ವಿ.ವಿ.ಗಳನ್ನು ಸ್ಥಾಪಿಸಲು ಮುಂದೆ ಬರುವ ಖಾಸಗಿ ಸಂಸ್ಥೆಗಳಿಗೆ ನಿಯಮಾವಳಿಗಳನ್ನು ರೂಪಿಸಿ, ಈಗ ಅಸ್ತಿತ್ವದಲ್ಲಿರುವ ಕರ್ನಾಟಕ ಉನ್ನತ ಶಿಕ್ಷಣ ಕಾಯ್ದೆಗೆ ಹೊಸ ಅಧ್ಯಾಯವೊಂದನ್ನು ಸೇರಿಸಲಾಗುವುದು. ಆಗ ಪ್ರತಿ ಬಾರಿ ಹೊಸ ಖಾಸಗಿ ವಿ.ವಿ. ಸ್ಥಾಪನೆಯಾದಾಗ ಪ್ರತ್ಯೇಕ ಕಾಯ್ದೆ ರೂಪಿಸುವ ಅಗತ್ಯ ಇಲ್ಲವಾಗುತ್ತದೆ’ ಎಂದರು.

ಸಂಶೋಧನಾ ಕೇಂದ್ರ ಸ್ಥಾಪಿಸಲು ಮುಂದೆ ಬರುವ ಸರ್ಕಾರಿ ಕಾಲೇಜುಗಳಿಗೆ ನೋಂದಣಿ ಶುಲ್ಕದಿಂದ ವಿನಾಯಿತಿ ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪಿಎಚ್.ಡಿ ಪದವಿ ಪಡೆಯಲು ಏಕರೂಪ ನಿಯಮಾವಳಿಗಳನ್ನು ರೂಪಿಸುವ ಕುರಿತು ವಿವಿಧ ವಿ.ವಿ.ಗಳ ಕುಲಪತಿಗಳಿಂದ ಅಭಿಪ್ರಾಯ ಪಡೆಯಲಾಗಿದ್ದು, ಈ ವಿಚಾರವನ್ನು ಪರಿಷತ್ತಿನ ಮುಂದಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

‘ನ್ಯಾನೊ’ ವಿಚಾರಸಂಕಿರಣ: ಹೊಸ ಅಧ್ಯಯನ ಮತ್ತು ಸಂಶೋಧನೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನ್ಯಾನೊ ತಂತ್ರಜ್ಞಾನ ಕುರಿತು ಎರಡು ದಿನಗಳ ವಿಚಾರ ಸಂಕಿರಣವನ್ನು ಆಯೋಜಿಸಲು ಪರಿಷತ್ ತೀರ್ಮಾನಿಸಿದೆ. ‘ಈ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ಮತ್ತು ಅಧ್ಯಯನ ನಡೆಸಿರುವ ವಿಜ್ಞಾನಿಗಳನ್ನು ಈ ವಿಚಾರಸಂಕಿರಣಕ್ಕೆ ಆಹ್ವಾನಿಸಲಾಗುವುದು’ ಎಂದರು.

ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಮದನ ಗೋಪಾಲ್ ಮಾತನಾಡಿ, ‘ವಿ.ವಿ.ಗಳಿಗೆ ಆರ್ಥಿಕ ಅನುದಾನ ನೀಡುವ ಕುರಿತಂತೆ ನಿಯಮಾವಳಿಗಳನ್ನು ರೂಪಿಸುವಂತೆ ರಾಜ್ಯ ಜ್ಞಾನ ಆಯೋಗ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ಗೆ ಮನವಿ ಮಾಡಿದೆ. ಅವರು ಆರು ತಿಂಗಳಲ್ಲಿ ಈ ಕುರಿತ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಸಭೆಯ ಆರಂಭಕ್ಕೂ ಮುನ್ನ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಅವರು ಪರಿಷತ್‌ನ ನೂತನ ವೆಬ್‌ಸೈಟ್ www.ks-hec.co.in  ಗೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT