ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿ.ವಿ: ಸ್ನಾತಕೋತ್ತರ ಪರೀಕ್ಷೆ ಫಲಿತಾಂಶಕ್ಕೆ ವಿದ್ಯಾರ್ಥಿಗಳ ಪರದಾಟ

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪರೀಕ್ಷೆ ಫಲಿತಾಂಶ ಪ್ರಕಟಣೆ ವಿಳಂಬವಾಗುತ್ತಿದ್ದು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪರೀಕ್ಷೆ ಮುಗಿದ ನಂತರ ಐದಾರು ತಿಂಗಳು ಕಳೆದರೂ ಫಲಿತಾಂಶ ಪ್ರಕಟವಾಗುತ್ತಿಲ್ಲ. ಸ್ನಾತಕೋತ್ತರ ಪದವಿ ಮುಗಿಸಿ ಉದ್ಯೋಗಕ್ಕೆ ಹೋಗುವ ಮತ್ತು ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳು ಸಕಾಲಕ್ಕೆ ಫಲಿತಾಂಶ ಸಿಗದೆ ಪರದಾಡುವಂತಾಗಿದೆ.

ಆಂತರಿಕ ಮತ್ತು ಬಾಹ್ಯ ಮೌಲ್ಯಮಾಪನ ಮಾಡುತ್ತಿರುವುದು ಈ ವಿಳಂಬಕ್ಕೆ ಕಾರಣವಾಗಿದೆ. ಮೌಲ್ಯಮಾಪನ ಕಟ್ಟುನಿಟ್ಟಾಗಿರಬೇಕು ಎಂಬ ಕಾರಣಕ್ಕೆ ವಿ.ವಿ ಯ ಪ್ರಾಧ್ಯಾಪಕರಿಂದ ಮತ್ತು ಹೊರಗಿನ ವಿಶ್ವವಿದ್ಯಾಲಯ ಪ್ರಾಧ್ಯಾಪಕರಿಂದ ಎರಡನೇ ಬಾರಿ ಮೌಲ್ಯಮಾಪನ ಮಾಡಿಸಲಾಗುತ್ತದೆ.

ಈ ಪದ್ಧತಿಯನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಆದರೆ ಹೊರಗಿನ ವಿಶ್ವವಿದ್ಯಾಲಯದಿಂದ ಪ್ರಾಧ್ಯಾಪಕರಿಂದ ಮೌಲ್ಯಮಾಪನ ಮಾಡಿಸುವುದು ಕಷ್ಟಸಾಧ್ಯವಾಗಿದೆ. ಹೊರಗಿನ ವಿ.ವಿ ಯ ಸಿಬ್ಬಂದಿ ಸಕಾಲಕ್ಕೆ ಲಭ್ಯವಾಗುತ್ತಿಲ್ಲ. ಅಲ್ಲದೆ ಆಂತರಿಕ ಮತ್ತು ಬಾಹ್ಯ ಮೌಲ್ಯಮಾಪನದಲ್ಲಿ ಹದಿನೈದು ಅಂಕಗಳ ಅಂತರ ಕಂಡುಬಂದರೆ ಮೂರನೇ ಮೌಲ್ಯಮಾಪನ ಮಾಡಿಸಬೇಕಾಗಿದೆ. ಅವರು ನೀಡುವ ಅಂಕದ ಆಧಾರದ ಮೇಲೆ ವಿದ್ಯಾರ್ಥಿಯ ಅಂಕ ನಿರ್ಧಾರವಾಗುತ್ತದೆ.

ಕುಲಪತಿಗಳ ನಿರ್ಧಾರಕ್ಕೆ ವಿರೋಧ: ಡಿ.25ರಂದು ಜ್ಞಾನಜ್ಯೋತಿ ಆವರಣದಲ್ಲಿ ವಿದ್ಯಾವಿಷಯಕ ಪರಿಷತ್ತಿನ ಸಭೆ ನಡೆಯಿತು. ವಿ.ವಿ ಕುಲಪತಿ ಡಾ.ಎನ್. ಪ್ರಭುದೇವ್ ಸಭೆಯಲ್ಲಿ ಫಲಿತಾಂಶ ವಿಳಂಬವಾಗುತ್ತಿರುವ ಅಂಶವನ್ನು ಪ್ರಸ್ತಾಪಿಸಿ, ವಿಳಂಬವನ್ನು ತಡೆಯಲು ಒಂದೇ ಮೌಲ್ಯಮಾಪನ ಪದ್ಧತಿ ಜಾರಿಗೆ ತರುವುದು ಸೂಕ್ತ ಎಂದರು. ಆದರೆ ಪರಿಷತ್‌ನ ಸದಸ್ಯರು ಈ ನಿರ್ಧಾರವನ್ನು ವಿರೋಧಿಸಿದ್ದರಿಂದ ಎರಡು ಮೌಲ್ಯಮಾಪನ ಪ್ರಕ್ರಿಯೆಯೇ ಇರಲಿ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಈ ಬಗ್ಗೆ `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ಪ್ರಭುದೇವ್, `ಸಕಾಲದಲ್ಲಿ ಫಲಿತಾಂಶ ಪ್ರಕಟವಾದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇಲ್ಲಿನ ಸಿಬ್ಬಂದಿಯಿಂದ ಸಕಾಲಕ್ಕೆ ಮೌಲ್ಯಮಾಪನ ಮಾಡಿಸಬಹುದು. ಆದರೆ ಹೊರಗಿನ ವಿಶ್ವವಿದ್ಯಾಲಯದ ಸಿಬ್ಬಂದಿ ಸೇವೆ ಪಡೆಯುವುದು ಕಷ್ಟವಾಗಿದೆ. ವೈಯಕ್ತಿಕ ಸಂಪರ್ಕ ಇರುವವರನ್ನು ನಮಗೆ ಬೇಕಾದಾಗ ಕರೆಸಿಕೊಳ್ಳಬಹುದು. ಆದರೆ ಎಲ್ಲರೂ ನಮ್ಮ ಸಮಯಕ್ಕೆ ಬರುವುದಿಲ್ಲ. ಅಂಕಗಳು ವ್ಯತ್ಯಾಸವಾದಾಗ ಮೂರನೇ ಬಾರಿಗೆ ಮೌಲ್ಯಮಾಪನ ಮಾಡಬೇಕಿರುವುದರಿಂದ ಸಹಜವಾಗಿಯೇ ಫಲಿತಾಂಶ ಪ್ರಕಟಣೆ ವಿಳಂಬವಾಗುತ್ತಿದೆ~ ಎಂದರು.

ಎರಡು ಮೌಲ್ಯಮಾಪನದ ನಂತರವೂ ಸಮಯಕ್ಕೆ ಸರಿಯಾಗಿ ಫಲಿತಾಂಶ ನೀಡಲು ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಹೊರಗಿನ ಮೌಲ್ಯಮಾಪಕರು ನಮ್ಮ ನಿಯಂತ್ರಣದಲ್ಲಿ ಇಲ್ಲದ ಕಾರಣ ಫಲಿತಾಂಶ ಪ್ರಕಟಣೆಯನ್ನು ಸಕಾಲಕ್ಕೆ ಮಾಡುವುದು ಕಷ್ಟ~ ಎಂದರು.

ಆಡಳಿತ ವೈಫಲ್ಯ: `ಎರಡೆರಡು ಮೌಲ್ಯಮಾಪನ ಫಲಿತಾಂಶ ಪ್ರಕಟಣೆ ವಿಳಂಬಕ್ಕೆ ಒಂದು ಕಾರಣವಾದರೆ ಆಡಳಿತದ ಮೇಲೆ ಹಿಡಿತ ಇಲ್ಲದಿರುವುದು ಮುಖ್ಯ ಕಾರಣವಾಗಿದೆ. ಸಿಬ್ಬಂದಿ ಮೇಲೆ ಹಿಡಿತವಿಲ್ಲದ ಕಾರಣ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡಿಸಲು ಕುಲಪತಿಗಳಿಗೆ ಸಾಧ್ಯವಾಗುತ್ತಿಲ್ಲ~ ಸಿಂಡಿಕೇಟ್ ಸದಸ್ಯ ಬಿ.ವಿ. ಆಚಾರ್ಯ ದೂರುತ್ತಾರೆ.

ಸುಧಾರಣೆ ಅಗತ್ಯ: `ಆಂತರಿಕ ಮೌಲ್ಯಮಾಪನ ಒಂದೇ ಇದ್ದಾಗ ಬಹಳ ಸಮಸ್ಯೆಯಾಗುತ್ತಿತ್ತು. ನ್ಯಾಯಯುತವಾಗಿ ಮೌಲ್ಯಮಾಪನ ಮಾಡಿದರೂ `ನಿಮಗೆ ಬೇಕಾದವರಿಗೆ ಹೆಚ್ಚಿನ ಅಂಕ ನೀಡಿದ್ದೀರಾ~ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದರು. ಇನ್ನೂ ಕೆಲವರು ರ್ಯಾಂಕ್ ಕೊಡಿಸಿ ಎಂದು ಒತ್ತಡ ಹೇರುತ್ತಿದ್ದರು. ರ‌್ಯಾಂಕ್ ನೀಡಲಿಲ್ಲ ಎಂಬ ಕಾರಣಕ್ಕೆ ಕೆಲ ಕನ್ನಡ, ಇಂಗ್ಲಿಷ್ ವಿಭಾಗದ ಮುಖ್ಯಸ್ಥರ ಮೇಲೆ ಹಲ್ಲೆ ನಡೆಸಿದ ಘಟನೆ ಕೆಲ ವರ್ಷಗಳ ಹಿಂದೆ ವಿ.ವಿಯಲ್ಲಿ ನಡೆದಿತ್ತು. ಆದ್ದರಿಂದಲೇ ಬಾಹ್ಯ ಮೌಲ್ಯಮಾಪನ ಪದ್ಧತಿ ಜಾರಿಗೆ ತರಲಾಗಿದೆ~ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರೊಬ್ಬರು ಹೇಳುತ್ತಾರೆ.

`ಎರಡು ಮೌಲ್ಯಮಾಪನ ಪದ್ಧತಿ ಪಾರದರ್ಶಕವಾಗಿದೆ. ಆದರೆ ಈ ಪದ್ಧತಿಯನ್ನು ಮುಂದುವರೆಸಿಕೊಂಡು ಫಲಿತಾಂಶ ಸಹ ವಿಳಂಬ ಆಗದಂತೆ ನೋಡಿಕೊಳ್ಳಬೇಕಾಗಿದೆ. ಮೌಲ್ಯಮಾಪನಕ್ಕೆ ಕಸ್ಟೋಡಿಯನ್ ನೇಮಕವನ್ನು ಪರೀಕ್ಷೆಗೂ ಮೊದಲೇ ನೇಮಿಸಬೇಕು. ವಿಷಯವೊಂದರ ಪರೀಕ್ಷೆ ಮುಗಿದ ದಿನವೇ ಆ ಉತ್ತರ ಪತ್ರಿಕೆಗೆ ಕೋಡ್ ನೀಡಬೇಕು. ಹೀಗಾದಾಗ ಎಲ್ಲ ವಿಷಯಗಳ ಪರೀಕ್ಷೆ ಮುಗಿದೊಡನೆ ಮೌಲ್ಯಮಾಪನ ಆರಂಭಿಸಬಹುದು. ಇದರಿಂದ ಬೇಗ ಫಲಿತಾಂಶ ಪ್ರಕಟಿಸಬಹುದು. ಎಲ್ಲದಕ್ಕೂ ಇಚ್ಛಾಶಕ್ತಿ ಅಗತ್ಯ~ ಎಂದು ಅವರು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT