ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಸರಣಿ ಸ್ಫೋಟ ಪ್ರಕರಣ:ಕೋರ್ಟ್ ದೋಷಾರೋಪ ಪ್ರಕಟ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕೊಚ್ಚಿ (ಪಿಟಿಐ): 2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಆರೋಪಿಯೂ ಆಗಿರುವ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಾರ್ಯಕರ್ತ ಟಿ. ನಜೀರ್ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗಾಗಿ ಕೇರಳದ ಅನೇಕ ಯುವಕರನ್ನು ನೇಮಿಸಿಕೊಂಡ `ಕಾಶ್ಮೀರ ನೇಮಕಾತಿ~ ಪ್ರಕರಣದಲ್ಲಿ ಆರೋಪಿಗಳಾಗಿರುವ ಇತರ 17 ಮಂದಿಯ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ವಿಶೇಷ ನ್ಯಾಯಾಲಯ ಗುರುವಾರ ಇಲ್ಲಿ ದೋಷಾರೋಪ ಹೊರಿಸಿದೆ.

ಈ ದೋಷಾರೋಪವನ್ನು ಪ್ರಕಟಿಸಿದ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್. ವಿಜಯಕುಮಾರ್, ಯಾವ ದಿನಾಂಕದಿಂದ ವಿಚಾರಣೆ ಆರಂಭವಾಗಬೇಕು ಎಂಬುದನ್ನು ನಿರ್ಧರಿಸಲು ಪ್ರಕರಣವನ್ನು ಫೆಬ್ರುವರಿ 18ಕ್ಕೆ ಮುಂದೂಡಿದರು.

ನ್ಯಾಯಾಲಯದಲ್ಲಿ ನಜೀರ್, ಶಫಾಸ್ ಹಾಗೂ ಇತರ ಆರೋಪಿಗಳು ಹಾಜರಿದ್ದರಿಂದ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು.

ಆರೋಪಿಗಳ ವಿರುದ್ಧ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ,  ಶಸ್ತ್ರಾಸ್ತ್ರ ಹೊಂದಿದ ಹಾಗೂ ವಿಧ್ವಂಸಕ ಕೃತ್ಯಗಳನ್ನು ನಡೆಸಿದ ದೋಷಾರೋಪಗಳನ್ನು ಹೊರಿಸಲಾಗಿದೆ. ಕಾಶ್ಮೀರದಲ್ಲಿ ಹತರಾದ ನಾಲ್ವರು ಕೇರಳಿಯನ್ನರು ಸೇರಿದಂತೆ ಒಟ್ಟು 24 ಮಂದಿ ಈ ಪ್ರಕರಣದ ಆರೋಪಿಗಳಾಗಿದ್ದಾರೆ. 2006ರಲ್ಲಿ ನೇಮಕಗೊಂಡ ಯುವಕರಿಗೆ ಭಾರತದ ವಿರುದ್ಧ ಯುದ್ಧ ನಡೆಸಲಿಕ್ಕಾಗಿ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ಎಲ್‌ಇಟಿ ಮತ್ತು ಕೇರಳಿಯನ್ನರ ನಡುವಿನ ಪ್ರಮುಖ ಕೊಂಡಿಯಾದ ಪಾಕಿಸ್ತಾನಿ ಉಗ್ರ ವಾಲಿ ಎಂಬಾತನು ಮತ್ತೊಬ್ಬ ಆರೋಪಿಯೊಂದಿಗೆ ತಲೆಮರೆಸಿಕೊಂಡಿದ್ದಾನೆ.

ಕೇರಳದ ಉತ್ತರ ಜಿಲ್ಲೆಗಳಿಂದ ನೇಮಕವಾಗಿರುವ ಫಯಾಸ್, ಮೊಹಮ್ಮದ್ ಯಾಸೀನ್, ಅಬ್ದುಲ್ ರಹೀಂ ಹಾಗೂ ಫಯೀಸ್ ಎಂಬ ನಾಲ್ವರು ಯುವಕರು 2008ರಲ್ಲಿ ಕಾಶ್ಮೀರದಲ್ಲಿ ಭದ್ರತಾಪಡೆಗಳೊಂದಿಗೆ ನಡೆದ ಕಾಳಗದಲ್ಲಿ ಮೃತಪಟ್ಟಿದ್ದಾರೆ. ಈ ಪ್ರಕರಣದಲ್ಲಿ ಸುಮಾರು 400 ಸಾಕ್ಷಿಗಳಿದ್ದು, ಇವರಲ್ಲಿ ಬಹುತೇಕರು ದೆಹಲಿ ಮತ್ತು ಕಾಶ್ಮೀರದವರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT