ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಹುಡುಗರ ಫಾರ್ಮುಲಾ ಕಾರು

Last Updated 21 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ರಸ್ತೆಯೋ ಬರೀ ಟ್ರಾಫಿಕ್. ಬಸವನ ಹುಳದ ವೇಗದಲ್ಲಿ ಮುಂದೆ ಸಾಗಬೇಕು. ಇನ್ನು ನಗರದಿಂದ ಹೊರಗೆ ಹೋದೆವೋ ಮುಗಿದೇ ಹೋಯಿತು. ಗುಂಡಿಗಳ ಮಧ್ಯೆ ರಸ್ತೆ ಹುಡುಕುವುದೇ ಸಾಹಸ. ವಾಹನ ಸವಾರರ ಈ ಗೊಣಗಾಟ ಎಲ್ಲರ ಅನುಭವಕ್ಕೂ ಬಂದಿರುವಂತದ್ದೇ. ದುಬಾರಿ ಬೆಲೆಯ ಕಾರುಗಳು ನಮ್ಮ ರಸ್ತೆಗಳಲ್ಲಿ ಒಂದೇ ತಿಂಗಳಿನಲ್ಲಿ ತಮ್ಮ ಸ್ವರೂಪವನ್ನೇ ಕಳೆದುಕೊಳ್ಳುತ್ತವೆ. ಹೀಗಿರುವಾಗ ‘ರಸ್ತೆಗಳಲ್ಲದ ರಸ್ತೆ’ಗಳಿಗಾಗಿಯೇ  ಕಾರು ಮಾರುಕಟ್ಟೆಗೆ ಬಂದರೆ?

ಎಲ್ಲಿ ಅಂತ ಕಾರು ಕೊಳ್ಳಲು ಹೊರಟೀರಾ? ಸ್ವಲ್ಪ ತಡೆಯಿರಿ. ಈ ಕಾರು ಮಾರುಕಟ್ಟೆಗೆ ಬಂದಿಲ್ಲ! ಆದರೆ ಮುಂಬರುವ ದಿನಗಳಲ್ಲಿ ಈ ರೀತಿಯ ಕಾರನ್ನು ತಯಾರಿಸಲು ಉತ್ಸುಕರಾಗಿರುವುದು ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಬಿಐಟಿ) ವಿದ್ಯಾರ್ಥಿಗಳು. ಇದರ ಮೊದಲ ಹಂತವಾಗಿ ರೇಸ್ ಮಾದರಿಯ ‘ಟೀಮ್ ಸ್ಟ್ರಾಟೋಸ್-ಜಿ’ ಎಂಬ ಹೆಸರಿನ ಫಾರ್ಮುಲಾ ಕಾರ್ ಮಾದರಿಯನ್ನು ಕಾಲೇಜಿನ 18 ವಿದ್ಯಾರ್ಥಿಗಳ ತಂಡ ಈಗಾಗಲೇ ಯಶಸ್ವಿಯಾಗಿ ಸಿದ್ಧಪಡಿಸಿದೆ.

ಸೊಸೈಟಿ ಆಫ್ ಆಟೊಮೊಬೈಲ್ ಆಂಡ್ ಎಂಜಿನಿಯರಿಂಗ್ (ಎಸ್‌ಎಇ) ಇಂದೋರ್‌ನ ಪಿತಂಪುರದಲ್ಲಿ ಆಯೋಜಿಸಿದ ‘ಬಾಜಾ ಇಂಡಿಯಾ-2011’ ಸ್ಪರ್ಧೆಯಲ್ಲಿ ವಿಶ್ವದ 80 ವಿವಿಧ ವಿಶ್ವವಿದ್ಯಾನಿಲಯಗಳ ತಂಡಗಳಿಗೆ ಪೈಪೋಟಿ ನೀಡುವ ಸಲುವಾಗಿ ಈ ಕಾರನ್ನು ವಿದ್ಯಾರ್ಥಿ ತಂಡ ಪ್ರದರ್ಶಿಸಿದೆ.

ಮಣ್ಣು, ಕಲ್ಲು, ನೀರು ತುಂಬಿರುವ ಹಾದಿ ಈ ಕಾರಿಗೆ ಲೆಕ್ಕವೇ ಅಲ್ಲ. ‘ರಸ್ತೆಯಲ್ಲದಂತಹ ರಸ್ತೆಯಲ್ಲಿ’ ಓಡಲೆಂದೇ ಇದನ್ನು ತಯಾರಿಸಲಾಗಿದೆ. ಬೆಟ್ಟಗುಡ್ಡ, ಕಲ್ಲುಮಣ್ಣಿನ ರಸ್ತೆಯಲ್ಲೂ ಸಲೀಸಾಗಿ ಓಡಾಡುತ್ತದೆ. 350 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದ್ದು, ಲೀಟರ್ ಪೆಟ್ರೋಲ್‌ಗೆ 60 ಕಿ.ಮೀ ಮೈಲೇಜ್ ನೀಡುತ್ತದೆ. ಇದನ್ನು ತಯಾರಿಸಲು ಎಂಟು ತಿಂಗಳು ಹಿಡಿದಿದ್ದು, ಇದಕ್ಕೆ ತಗುಲಿದ್ದು 2.20 ಲಕ್ಷ ರೂಪಾಯಿ. ಈ ಸಂಪೂರ್ಣ ವೆಚ್ಚವನ್ನು ಕಾಲೇಜಿನ ಒಡೆತನ ಹೊಂದಿರುವ ಒಕ್ಕಲಿಗರ ಸಂಘವೇ ಭರಿಸಿದೆ.

ಮಹೀಂದ್ರಾ ಕಂಪೆನಿ ಸ್ಪರ್ಧೆಯಲ್ಲಿ ಈ ಕಾರಿನ ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಇದರ ವಿನ್ಯಾಸ ಮತ್ತು ಸಾಮರ್ಥ್ಯ ಟಾಟಾ ಕಂಪೆನಿಯನ್ನೂ ಸೆಳೆದಿದೆ. ಯಾವುದಾದರೂ ಕಂಪೆನಿ ಮುಂದೆ ಬಂದು ಇದರ ಲೋಪಗಳನ್ನು ಸರಿಪಡಿಸಿ ಅಭಿವೃದ್ಧಿಪಡಿಸಲು ಆಸಕ್ತಿ ತೋರಿಸಿದರೆ ಈ ಕಾರು ಜನರಿಗೆ ಲಭ್ಯವಾಗುವಂತೆ ಮಾರ್ಪಾಟು ಮಾಡಲು ಸಿದ್ಧರಿರುವುದಾಗಿ ಹೇಳುತ್ತಾರೆ ಕಾಲೇಜಿನ ಆಟೊಮೊಬೈಲ್ ವಿಭಾಗದ ಮುಖ್ಯಸ್ಥ ಡಾ. ಎಂ.ವೆಂಕಟ ರೆಡ್ಡಿ.

ಬಿಐಟಿ ಮೆಕ್ಯಾನಿಕಲ್ ವಿದ್ಯಾರ್ಥಿಗಳದ್ದು ಇದು ಮೊದಲ ಪ್ರಯತ್ನವೇನಲ್ಲ. ಕಳೆದ ವರ್ಷ ಇಂಥದೇ ಸ್ಪರ್ಧೆಗೆ ಸಿದ್ಧಪಡಿಸಿದ್ದ ‘ಬಾಷ್ ಸ್ಟ್ರಾಟೋಸ್’ ಫಾರ್ಮುಲಾ ಕಾರು ಅತ್ಯುತ್ತಮ ವಿನ್ಯಾಸ ಪ್ರಶಸ್ತಿ ಪಡೆದಿತ್ತು. ಅಂಗವಿಕಲರಿಗಾಗಿ ಸೋಲಾರ್ ಕಾರನ್ನು ತಯಾರಿಸಿದ ಕೀರ್ತಿಯೂ ಈ ತಂಡದ್ದು. ಇದರ ಜೊತೆಗೆ ಮುಂದಿನ ದಿನಗಳಲ್ಲಿ 600 ಸಿಸಿ ಎಂಜಿನ್ ಸಾಮರ್ಥ್ಯದ ಎಲೆಕ್ಟ್ರಿಕ್ ಕಾರನ್ನು ತಯಾರಿಸುವ ಗುರಿ ಹೊಂದಿದ್ದು, ಇದಕ್ಕೆ ತಗಲುವ ಅಂದಾಜು 16 ಲಕ್ಷ ರೂಪಾಯಿ ವೆಚ್ಚವನ್ನು ಒಕ್ಕಲಿಗರ ಸಂಘವೇ ಭರಿಸುವುದಾಗಿ ತಿಳಿಸಿದೆ ಎನ್ನುತ್ತಾರೆ ವಿದ್ಯಾರ್ಥಿ ವರುಣ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT