ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಾಡಿಗೆ ನೀರು ಹರಿಸಿದ ಭಗೀರಥರು

Last Updated 9 ಮೇ 2016, 19:53 IST
ಅಕ್ಷರ ಗಾತ್ರ

ಒಂದು ಕಾಲಕ್ಕೆ ಕ್ಷಾಮದಿಂದ ನಲುಗಿ ಹೋಗಿದ್ದ ಪ್ರದೇಶ ಇಂದು ತುಂಗಭದ್ರಾ ಅಣೆಕಟ್ಟಿನಿಂದಾಗಿ ಸಮೃದ್ಧಿಯ ಬೀಡಾಗಿದೆ. ಲಕ್ಷಾಂತರ ಕೋಟಿ ರೂಪಾಯಿಗಳ ವ್ಯವಹಾರ ಈ ಅಣೆಕಟ್ಟಿನಿಂದಾಗಿ ನಡೆಯುತ್ತಿದೆ. ಇದರ ಹಿಂದಿದೆ ಜನರ ಶಕ್ತಿ. ಬರಡು ಭೂಮಿಗೆ ನೀರು ಹರಿಸಿರುವ ಈ ಭಗೀರಥರ ಕುರಿತು ಇಲ್ಲಿ ದಾಖಲಿಸಿದ್ದಾರೆ ಸಮದ್ ಕೊಟ್ಟೂರು.

ಸುಮಾರು ಒಂದೂವರೆ ಶತಮಾನದ ಹಿಂದಿನ ಮಾತು. 1876–78ರ ಅವಧಿ. ಬಳ್ಳಾರಿ, ರಾಯಚೂರು, ಕರ್ನೂಲು ಸೇರಿದಂತೆ ದಕ್ಷಿಣ ಭಾರತವನ್ನೇ ನಲುಗಿಸಿದ್ದ ಭೀಕರ ಬರಕ್ಕೆ 50ಲಕ್ಷಕ್ಕೂ ಹೆಚ್ಚು ಜನ ಬಲಿಯಾದರು. ಅಲ್ಲಿಯವರೆಗೆ ರಾಗಿ, ಜೋಳ, ಸಜ್ಜೆ ಬೆಳೆಯುತ್ತಿದ್ದ ರೈತರಿಗೆ ಹತ್ತಿ, ಅಫೀಮು, ನೀಲಿಗಿಡ ಬೆಳೆದು ಹೆಚ್ಚು ಹಣ ಗಳಿಸುವಂತೆ ಬ್ರಿಟಿಷ್ ಸರ್ಕಾರ ಪ್ರೋತ್ಸಾಹಿಸತೊಡಗಿತ್ತು. ಇಲ್ಲಿ ಬೆಳೆದ ಹತ್ತಿಯನ್ನು ಇಂಗ್ಲೆಂಡಿನ ಬಟ್ಟೆ ಗಿರಣಿಗಳಿಗೆ, ಕಾಳು ಕಡಿಗಳನ್ನು ಇಂಗ್ಲೆಂಡಿನ ಮಾರುಕಟ್ಟೆಗೆ ಕಳುಹಿಸಿ ರಫ್ತು ಮಾಡತೊಡಗಿದರು.

ಹೀಗಾಗಿ ಪರಂಪರಾಗತವಾಗಿ ಬೆಳೆಯುತ್ತಿದ್ದ ಕಾಳು ಕಡಿಗಳ ಬದಲಾಗಿ ಎಲ್ಲೆಡೆ ಅಫೀಮು, ಎಣ್ಣೆಕಾಳು, ಹತ್ತಿಯನ್ನು ವ್ಯಾಪಕವಾಗಿ ಬೆಳೆಯಲಾರಂಭಿಸಿದರು. ಅಲ್ಲಿಯವರೆಗೆ ಕಾಳು ಬೆಳೆಯುವುದು ಮನೆಯ ಬಳಕೆಗೆ ಎಂಬ ಪರಿಕಲ್ಪನೆಗೆ ಬದಲಾಗಿ, ಕಾಳನ್ನು ಮಾರಿ ಹಣಗಳಿಸಬಹುದು ಎಂಬ ಭಾವನೆ ಇರಲಿಲ್ಲ. ಆದರೆ ಬ್ರಿಟಿಷರು ಆಹಾರ ಧಾನ್ಯಗಳನ್ನು ಮಾರುಕಟ್ಟೆಯ ಸರಕನ್ನಾಗಿ ಮಾಡಿದ ನಂತರ ಜನ ಹಣಕ್ಕಾಗಿ ತಮ್ಮ ಆಹಾರ ಧಾನ್ಯಗಳನ್ನು ಮಾರಿ ಖಾಲಿಮಾಡಿಕೊಂಡರು.

1876ರಲ್ಲಿ ಭೀಕರ ಬರ ಎದುರಾಯಿತು. ಮಳೆ ಅಭಾವದಿಂದ ಬೆಳೆ ನಾಶವಾಯಿತು. ಈ ಭೀಕರ ಬರದ ಸಂದರ್ಭದಲ್ಲೇ ಭಾರತದಿಂದ 3.20ಲಕ್ಷ ಟನ್ ಗೋಧಿಯನ್ನು ಇಂಗ್ಲೆಂಡಿಗೆ ಕಳುಹಿಸಲಾಗಿತ್ತು. ಆದ್ದರಿಂದ ಮನೆಯಲ್ಲಿ ಆಹಾರ ಧಾನ್ಯಗಳ ಕೊರತೆಯುಂಟಾಯಿತು. ಅಂಗಡಿಗಳಲ್ಲೂ ಲಭ್ಯ ಇರಲಿಲ್ಲ. ಜನರ ಜೊತೆ ಜಾನುವಾರುಗಳೂ ಅನ್ನ ನೀರಿಲ್ಲದೇ ಮೂಳೆ ಚಕ್ಕಳಗಳಾಗಿ, ಜೀವಂತ ಅಸ್ಥಿಪಂಜರದಂತಾಗಿ ಪ್ರಾಣ ಬಿಟ್ಟವು.

ಮಲೇರಿಯಾ, ಕಾಲರಾ, ಪ್ಲೇಗು ಮಾರಿ ರೋಗಗಳ ಕಾಟದಿಂದಾಗಿ ಸತ್ತ ಜನರಿಂದ ಊರು ಕೇರಿಗಳು ತುಂಬಿದ್ದವು. ಸತ್ತವರ ಸಂಸ್ಕಾರಕ್ಕೂ ಜನರಿಲ್ಲದೇ, ನರಿ ನಾಯಿ, ರಣಹದ್ದು, ಕಾಗೆಗಳಿಗೆ ಆಹಾರವಾಗಿ ಹೋದರು. ಇಡೀ ದಕ್ಷಿಣ ಭಾರತದಲ್ಲಿ ಸುಮಾರು ಒಂದು ಕೋಟಿಯಷ್ಟು ಜನಸಂಖ್ಯೆ ಬರದಿಂದ ಅಳಿಸಿಹೋಯಿತು. ಬ್ರಿಟಿಷರು ಬರ ಪರಿಹಾರಕ್ಕಾಗಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿದರು, ಸಶಕ್ತರಿಗೆ ಕೂಲಿಗಾಗಿ ಕಾಳು, ದುರ್ಬಲರು, ಮುದುಕರು ಹಾಗೂ ಮಕ್ಕಳಿಗೆ ಉಚಿತ ಗಂಜಿ ಕೇಂದ್ರ ತೆರೆದರು.

ಬಳ್ಳಾರಿ, ರಾಯಚೂರು, ಕರ್ನೂಲು, ಅನಂತಪುರ ಪ್ರಾಂತ್ಯದ ಜನರ ಬರವನ್ನು ಕಾಯಂ ಆಗಿ ಅಳಿಸಿ ಹಾಕಬೇಕೆಂದರೆ ತುಂಗಭದ್ರಾ ನದಿಗೆ ಅಡ್ಡಲಾಗಿ ಒಂದು ಅಣೆಕಟ್ಟನ್ನು ಈಗಿನ ಹೊಸಪೇಟೆಯ ಪಕ್ಕದಲ್ಲಿ ನಿರ್ಮಿಸಬೇಕೆಂದು ಮಾನವೀಯ ಬ್ರಿಟಿಷ್ ನೀರಾವರಿ ತಜ್ಞ ಆರ್ಥರ್ ಕಾಟನ್ ವರದಿ ನೀಡಿದರು. ಬರ ಪರಿಹಾರಕ್ಕಾಗಿ ಸರ್ಕಾರ ಖರ್ಚು ಮಾಡುವ ಹಣದ ಸ್ವಲ್ಪ ಮೊತ್ತದಲ್ಲೇ ಈ ಅಣೆಕಟ್ಟು ಹಾಗೂ ಕಾಲುವೆಗಳನ್ನು ನಿರ್ಮಿಸಿ  ಈ ಭಾಗದ ಶಾಶ್ವತ ಬರವನ್ನು ನೀಗಬಹುದು ಎಂದು ಸಲಹೆ ನೀಡಿದರು.

ಆ ವೇಳೆಗಾಗಲೇ ಜನಾನುರಾಗಿಯಾಗಿದ್ದ ಆರ್ಥರ್ ಕಾಟನ್ ತಮಿಳು ನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದೆಲ್ಲೆಡೆ ಅನೇಕ ಅಣೆಕಟ್ಟುಗಳನ್ನು ನಿರ್ಮಿಸಿ ನೀರಾವರಿ ಒದಗಿಸಿ ಜನರ ಕಣ್ಮಣಿಯಾಗಿದ್ದ. ಆದರೆ ಬ್ರಿಟಿಷ್ ಸರ್ಕಾರ, ಹಣಕಾಸಿನ ಕೊರತೆ ನೆಪದಲ್ಲಿ ಈ ಯೋಜನೆಯನ್ನು ಮುಂದಕ್ಕೆ ಹಾಕಿತು. 1902ರಲ್ಲಿ ಮದ್ರಾಸ್ ಸರ್ಕಾರದ ಮುಖ್ಯ ಎಂಜಿನಿಯರ್ ಆಗಿದ್ದ ಕರ್ನಲ್ ಸ್ಮಾರ್ಟ್ ತುಂಗಭದ್ರಾ ಅಣೆಕಟ್ಟಿನ ನಿರ್ಮಾಣಕ್ಕಾಗಿ ವಿವರವಾದ ವರದಿಯನ್ನು ಸಿದ್ಧಪಡಿಸಿ ಅದೇ ತಾನೇ ರಚಿಸಲಾಗಿದ್ದ ನೀರಾವರಿ ಆಯೋಗಕ್ಕೆ ಸಲ್ಲಿಸಿದರು.

ನಂತರ ಬಂದ ಮಕೆಂಜೀ ಎಂಬ ಮುಖ್ಯ ಎಂಜಿನಿಯರ್ ಹೊಸಪೇಟೆ ಪಕ್ಕದಲ್ಲಿದ್ದ ಮಲ್ಲಾಪುರದಲ್ಲಿ ಎರಡು ಗುಡ್ಡಗಳ ನಡುವೆ ಅಣೆಕಟ್ಟನ್ನು ನಿರ್ಮಿಸಿ ಅಲ್ಲಿಂದ ಈ ಜಿಲ್ಲೆಗಳಿಗೆ ವಿವಿಧ ಕಾಲುವೆಗಳ ಮೂಲಕ ನೀರು ಒದಗಿಸಬೇಕು ಎಂದು ವರದಿ ನೀಡಿದರು. ಆದರೆ, ಹೈದರಾಬಾದ್ ನಿಜಾಮ ಸರ್ಕಾರದ ಅಧಿಕಾರಿಗಳು ನದಿಯ ಮೇಲೆ ತಮಗೂ ಹಕ್ಕಿದೆ ಎಂದು ತಮ್ಮ ಪ್ರದೇಶದಲ್ಲಿಯೇ  ಅಣೆಕಟ್ಟನ್ನು ನಿರ್ಮಿಸಲು ಹಕ್ಕೊತ್ತಾಯ ಮಾಡಿದರು.

ಅತ್ತ ಮುಂಬೈ ಪ್ರಾಂತ್ಯ, ಇತ್ತ ಮೈಸೂರು ರಾಜರ ಸರ್ಕಾರ, ಮೇಲೆ ಹೈದರಾಬಾದ್ ನಿಜಾಮ, ಇನ್ನೊಂದೆಡೆ ಮದ್ರಾಸ್ ಪ್ರಾಂತೀಯ ಸರ್ಕಾರ ಹೀಗೆ ನಾಲ್ಕೂ ಸರ್ಕಾರಗಳು ತಮ್ಮ ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆ ಸಲ್ಲಿಸಿದವು. ಅಣೆಕಟ್ಟಿನ ನಿರ್ಮಾಣ ನೆನೆಗುದಿಗೆ ಬಿತ್ತು. 1940ರಲ್ಲಿ ಮದ್ರಾಸ್ ಸರ್ಕಾರ ಮತ್ತೆ ಯೋಜನೆ ಕೈಗೆತ್ತಿಕೊಂಡಿತು. ಆಗಿನ ಮುಖ್ಯ ಎಂಜಿನಿಯರ್ ತಿರುಮಲೆ ಅಯ್ಯಂಗಾರ್ ನೇತೃತ್ವದಲ್ಲಿ ಒಂದು ವಸ್ತುನಿಷ್ಠ ಕಾರ್ಯಯೋಜನಾ ವರದಿ ತಯಾರಿಸಲು ನೇಮಿಸಲಾಯಿತು.

ನಿಜಾಮರ ಸರ್ಕಾರ ಸಿ.ಸಿ.ದಲಾಲ್ ಎಂಬ ಎಂಜಿನಿಯರ್‌ರನ್ನು ನೇಮಿಸಿ ಪ್ರತ್ಯೇಕ ವರದಿ ಸಿದ್ಧಪಡಿಸಿ ಸಲ್ಲಿಸಿತು. ಆದರೆ ಎರಡೂ ವರದಿಗಳನ್ನು ಅಳೆದು ತೂಗಿ ನೋಡಿದ ಬ್ರಿಟಿಷ್ ಸರ್ಕಾರ, 1942ರಲ್ಲಿ ತಿರುಮಲೆ ಅಯ್ಯಂಗಾರ್ ನೀಡಿದ ವರದಿಯೇ ಅತ್ಯಂತ ಪ್ರಶಸ್ತವಾದುದು ಎಂದಿತು. ಇಲ್ಲವಾದಲ್ಲಿ ಈ ಅಣೆಕಟ್ಟು ಕರ್ನೂಲು ಅಥವಾ ಇನ್ನೆಲ್ಲೋ ನಿರ್ಮಾಣವಾಗುತ್ತಿತ್ತೇನೋ. ಹೀಗೆ ಈಗಿನ ಹೊಸಪೇಟೆ ಹತ್ತಿರ ಆಗ ಇದ್ದ ಮಲ್ಲಾಪುರದ ಬಳಿ 133 ಟಿಎಂಸಿ ಸಂಗ್ರಹ ಸಾಮರ್ಥ್ಯದ ಅಣೆಕಟ್ಟು ನಿರ್ಮಾಣ ಆರಂಭವಾಯಿತು.

28ನೇ ಫೆಬ್ರುವರಿ 1945ರಂದು ಇಂದಿನ ಮುನಿರಾಬಾದ್ ಬಳಿ ಹೈದರಾಬಾದ್ ನಿಜಾಮ, ಇತ್ತ ಹೊಸಪೇಟೆಯ ಕಡೆ ಮದ್ರಾಸ್ ಪ್ರಾತೀಯ ಸರ್ಕಾರದ ಗವರ್ನರ್ ಆಗಿದ್ದ ಸರ್ ಆರ್ಥರ್ ಹೋಪ್ ಅಡಿಗಲ್ಲನ್ನು ಹಾಕಿ ಯೋಜನೆಯನ್ನು ಉದ್ಘಾಟಿಸಿದರು. ತಿರುಮಲೆ ಅಯ್ಯಂಗಾರ್ ನೇತೃತ್ವದಲ್ಲಿ ನಿರ್ಮಾಣ ಕಾರ್ಯ ಭರದಿಂದ ಆರಂಭವಾಯಿತು. ಆದರೆ ನಿರ್ಮಾಣ ವಸ್ತುಗಳ ಬಳಕೆಯ ವಿವಾದ, ನಿಜಾಮರ ಆಳ್ವಿಕೆಯ ಅಂತ್ಯ, ದೇಶಕ್ಕೆ ದೊರೆತ ಸ್ವಾತಂತ್ರ್ಯ, ಬದಲಾದ ಆಡಳಿತ ಮುಂತಾದ ಕಾರಣಗಳಿಂದ ಯೋಜನೆ ಕುಂಟುತ್ತಾ ಸಾಗಿತು.

ಸರ್ ಎಂ.ವಿಶ್ವೇಶ್ವರಯ್ಯ ನೇತೃತ್ವದ ಎಂಜಿನಿಯರ್‌ಗಳ ಮಂಡಳಿಯ ಮೇಲ್ವಿಚಾರಣೆಯಲ್ಲಿ ಪುನಃ ನಿರ್ಮಾಣ ಕಾರ್ಯ ಭರದಿಂದ ಸಾಗಿತು. 90 ಗ್ರಾಮಗಳು ಮುಳುಗಡೆಯಾಗಿ ಸುಮಾರು 55 ಸಾವಿರ ಜನರನ್ನು ಸ್ಥಳಾಂತರಿಸಲಾಯಿತು. 1953ರಲ್ಲಿ ಮೊದಲ ಬಾರಿಗೆ ಕಾಲುವೆಯಲ್ಲಿ ನೀರು ಹರಿಯಿತು. ನೂರಾರು ಕಿಲೋ ಮೀಟರ್ ಉದ್ದದ ಮೂರು ಕಾಲುವೆಗಳ ನಿರ್ಮಾಣವೂ ಮುಂದುವರೆದು 1960ರ ವೇಳೆಗೆ ಸಂಪೂರ್ಣಗೊಂಡಿತು. ಈಗಿನ ಹಾಗೆ ಅತ್ಯಾಧುನಿಕ ಯಂತ್ರಗಳು ಇಲ್ಲದೇ 340 ಕಿ.ಮೀ ಉದ್ದದ ಕಾಲುವೆಗಳ ನಿರ್ಮಾಣಕ್ಕೆ  ಮಾನವ ಶಕ್ತಿ ಬಳಕೆಯಾಯಿತು!

ಕಲ್ಲು ಗುಡ್ಡಗಳಲ್ಲಿ ಕಿಲೋಮೀಟರ್‌ಗಟ್ಟಲೇ ಸುರಂಗವನ್ನು ಕೊರೆದು ಕಾಲುವೆ ನಿರ್ಮಿಸಿದ್ದು ನೋಡಿದರೆ ವಿಸ್ಮಯವಾಗುತ್ತದೆ. ಇಂತಹ ಸವಾಲುಗಳನ್ನು ಎದುರಿಸಿ ಅಣೆಕಟ್ಟನ್ನು ನಿರ್ಮಿಸಿದ ತಿರುಮಲೆ ಅಯ್ಯಂಗಾರ್ ಆಧುನಿಕ ಭಗೀರಥನೇ ಸರಿ. ಇವರ ಶ್ರಮದಿಂದಾಗಿ ಬರಡು ಬೆಂಗಾಡಾಗಿದ್ದ ಬಳ್ಳಾರಿ, ರಾಯಚೂರು, ಅನಂತಪುರ, ಕರ್ನೂಲು, ಮೆಹಬೂಬ್‌ನಗರದ  ಸುಮಾರು 16 ಲಕ್ಷ ಎಕರೆ ಜಮೀನಿನಲ್ಲಿ ಭತ್ತ, ಕಬ್ಬು, ಬಾಳೆ ಬೆಳೆಯಲಾಗುತ್ತಿದೆ. ಗಂಗಾವತಿ-ಸಿಂಧನೂರಿನ ಪ್ರದೇಶವನ್ನು ಭತ್ತದ ಕಣಜವೆಂದೇ ಗುರುತಿಸಲಾಗುತ್ತಿದೆ.

ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶ ಐದು ಜಿಲ್ಲೆಗಳ ಒಂದು ಕೋಟಿಗೂ ಅಧಿಕ ಜನರು ತುಂಗಭದ್ರಾ ಅಣೆಕಟ್ಟಿನ ನೀರನ್ನು ಬಳಸುತ್ತಿದ್ದಾರೆ. ಅನೇಕ ಸಕ್ಕರೆ ಕಾರ್ಖಾನೆಗಳು, ಅಕ್ಕಿಯ ಗಿರಣಿಗಳು, ವಿವಿಧ ಕೈಗಾರಿಕೋದ್ಯಮಗಳು ಈ ಜಿಲ್ಲೆಗಳಲ್ಲಿ ನೆಲೆಯೂರಿವೆ. ಮೀನುಗಾರಿಕೆ ಒಂದು ದೊಡ್ಡ ಉದ್ಯಮವಾಗಿದೆ. ಇಡೀ ಈ ಭಾಗದ ಸಾಮಾಜಿಕ-ಆರ್ಥಿಕ ಅಭಿವೃದ್ಥಿ ಸುಧಾರಿಸಿದೆ. ಈ ಸಮೃದ್ಧಿಗೆ ಕಾರಣಕರ್ತರಾದ ತಿರುಮಲೆ ಅಯ್ಯಂಗಾರರ ಪ್ರತಿಮೆಯನ್ನು ಕೆಲ ರೈತರು ಸೇರಿ ಅಣೆಕಟ್ಟಿನ ಬಲದಂಡೆಯಲ್ಲಿ ನಿರ್ಮಿಸಿದ್ದಾರೆ. ಟಿ.ಬಿ.ಡ್ಯಾಮ್ ಜನವಸತಿ ಪ್ರದೇಶದಲ್ಲಿ ನಿರ್ಮಿಸಿದ ಸಮುದಾಯ ಭವನಕ್ಕೆ ತಿರುಮಲೆ ಅಯ್ಯಂಗಾರ್ ಹಾಲ್ ಎಂದು ಹೆಸರಿಸಲಾಗಿದೆ.

ಜೀವ ವೈವಿಧ್ಯದ  ಆಗರ
ಅಣೆಕಟ್ಟು ನಿರ್ಮಾಣವಾಗುವುದಕ್ಕಿಂತ ಮುಂಚೆ ಬಳ್ಳಾರಿ, ರಾಯಚೂರು ಪ್ರದೇಶ ಒಂದು ಮಳೆಯಾಧಾರಿತ ಹುಲ್ಲುಗಾವಲಾಗಿತ್ತು. ಇದು ಕೃಷ್ಣಮೃಗ, ಚಿಂಕಾರಾ ಎಂಬ ಜಿಂಕೆಗಳ ಬೀಡಾಗಿತ್ತು. ಇವುಗಳನ್ನು ಬೇಟೆಯಾಡಲು ಸಂಡೂರು ಕಾಡಿನಿಂದ ಹುಲಿಗಳು, ಚಿರತೆಗಳು ಬರುತ್ತಿದ್ದವು. ಆದರೆ ಯಾವಾಗ ಶುಷ್ಕ ಹುಲ್ಲುಗಾವಲುಗಳೆಲ್ಲಾ ನೀರು ತುಂಬಿಕೊಂಡು ಭತ್ತದ ಗದ್ದೆಗಳಾದವೋ, ಆಗ ಜಿಂಕೆಗಳು ಹಾಗೂ ಚಿರತೆಗಳು ಕಣ್ಮರೆಯಾದವು. 

ಆದರೆ 378 ಚದರ ಕಿಲೋಮೀಟರ್ ಪ್ರದೇಶದಲ್ಲಿ ಸಂಗ್ರಹಗೊಂಡ ಅಪಾರ ಜಲರಾಶಿ ದೇಶ-ವಿದೇಶಗಳ ಹಕ್ಕಿಗಳನ್ನು ಸೆಳೆಯಿತು. ಚಳಿಗಾಲದಲ್ಲಿ ಉತ್ತರ ಭೂಗೋಳದಿಂದ ವಲಸೆ  ಬರುವ ನೂರಾರು ಪ್ರಭೇದದ ಹಕ್ಕಿಗಳಿಗೆ ಈ ಅಣೆಕಟ್ಟು ಸುರಕ್ಷಿತ ಆಶ್ರಯ ನೀಡಿದೆ. ಕೆಸರು ದಂಡೆಯಲ್ಲಿ ದೊರಕುವ ಕಪ್ಪೆಚಿಪ್ಪು, ಹುಳು ಹುಪ್ಪಟೆ,  ಏಡಿ, ಮೀನು ಮುಂತಾದ ಸಮೃದ್ಧವಾದ ಆಹಾರ ದೊರಕುತ್ತಿವೆ. ಹೀಗಾಗಿ ಈ ಜಲಾಶಯದ ಹಿನ್ನೀರಿನ ಪ್ರದೇಶವನ್ನು ಒಂದು ‘ಪ್ರಮುಖ ಹಕ್ಕಿಗಳ ನೆಲೆ’ ಎಂದು ಅಂತರರಾಷ್ಟ್ರೀಯ ಪಕ್ಷಿಗಳ ಸಂರಕ್ಷಣಾ ಸಂಸ್ಥೆಗಳು ಗುರುತಿಸಿ ಮಾನ್ಯತೆ ನೀಡಿವೆ.

ಅಣೆಕಟ್ಟು ಎದುರಿಸುತ್ತಿರುವ ಅಪಾಯಗಳು
ಈ ವರ್ಷ ಪಶ್ಚಿಮ ಘಟ್ಟಗಳಲ್ಲೇ ಅತಿಕಡಿಮೆ ಮಳೆಯಾದ ಕಾರಣ ಅಣೆಕಟ್ಟಿಗೆ ನೀರಿನ ಹರಿವು ಕಡಿಮೆಯಾಗಿದೆ. ಕಳೆದ ವರ್ಷಕ್ಕಿಂತ 10 ಟಿ.ಎಂ.ಸಿ ನೀರು ಕೊರತೆ ಇರುವ ಕಾರಣ ಈ ವರ್ಷ ಬೇಸಿಗೆ ಬೆಳೆ ನಿಷೇಧಿಸಿದೆ. ಇದರಿಂದ ಭತ್ತದ ಇಳುವರಿ ಕಡಿಮೆಯಾಗಿ ಬೆಲೆಯೇರಿಕೆ ಆಗುವ ಸಾಧ್ಯತೆ ಇದೆ. ಇನ್ನು ಜಲಾನಯನ ಪ್ರದೇಶದಲ್ಲಿನ ಕೃಷಿ ಚಟುವಟಿಕೆ, ಅರಣ್ಯ ನಾಶ, ಅವೈಜ್ಞಾನಿಕ ಕೃಷಿ ಚಟುವಟಿಕೆ, ಅಪಾರ ರಸಗೊಬ್ಬರಗಳ ಬಳಕೆ, ದ್ರವ ಹಾಗೂ ಘನತ್ಯಾಜ್ಯವನ್ನು ನದಿಗೆ ಹರಿಸುವುದು, ಕೈಗಾರಿಕಾ ತ್ಯಾಜ್ಯಗಳ ವಿಲೇವಾರಿ ಮುಂತಾದ ಕಾರಣಗಳಿಂದ ಜಲಾಶಯದಲ್ಲಿ ಹೂಳು ಹೆಚ್ಚುತ್ತಿದೆ.

133 ಟಿ.ಎಂ.ಸಿ. ಸಾಮರ್ಥ್ಯದ ಜಲಾಶಯದಲ್ಲಿ ಇಂದು 30 ಟಿ.ಎಂ.ಸಿಯಷ್ಟು ಹೂಳು ತುಂಬಿದೆ ಎಂದು ಹೇಳಲಾಗುತ್ತಿದೆ. ಅನೇಕ ರಾಜಕಾರಣಿ-ಗುತ್ತಿಗೆದಾರರು ಹೂಳು ತೆಗೆಯುವ ನೂರಾರು ಕೋಟಿಯ ಯೋಜನೆಗಾಗಿ ಪ್ರಸ್ತಾವನೆ ಸಲ್ಲಿಸುತ್ತಿದ್ದಾರೆ. ಅದರ ಬದಲಾಗಿ ಹೂಳು ತುಂಬಲು ಕಾರಣವಾಗುತ್ತಿರುವ ಚಟುವಟಿಕೆಗಳನ್ನು ಪ್ರತಿಬಂಧಿಸುವುದು ಪ್ರಸ್ತುತ. ಜಲಾಶಯದ ಹಿನ್ನೀರು ಸರಿದಂತೆಲ್ಲಾ ತೆರೆದುಕೊಳ್ಳುವ ಕೆಸರಿನಲ್ಲಿ ಕೆಲವು ರೈತರು ಉದ್ದು, ಅಲಸಂದಿ ಮುಂತಾದ ಬೆಳೆಯನ್ನು ಬೆಳೆಯುತ್ತಿದ್ದರು.

ಆದರೆ ಇತ್ತೀಚಿಗೆ ಹಿನ್ನೀರಿನ ಅನೇಕ ಭಾಗದಲ್ಲಿ ಕಿಲೋಮೀಟರ್‌ಗಟ್ಟಲೆ ವಿದ್ಯುತ್‌ ಕಂಬಗಳನ್ನು ಹಾಕಿ, ಬೋರ್‌ವೆಲ್ ಕೊರೆದು ಸಾವಿರಾರು ಎಕರೆ ಪ್ರದೇಶದಲ್ಲಿ ಶೇಂಗಾ, ಮೆಕ್ಕೆಜೋಳ ಮುಂತಾದ ಬೆಳೆಯನ್ನು ಬೆಳೆಯುತ್ತಿದ್ದಾರೆ. ಒಂದು ದೃಷ್ಟಿಯಿಂದ ಇದು ನಿರಪಾಯಕಾರಿ ಹಾಗೂ ರೈತರಿಗೆ ಲಾಭ ತಂದುಕೊಡುವ ಮಾರ್ಗ ಎಂದು ಅನಿಸುತ್ತದೆ. ಆದರೆ ಇದು ಹೂಳು ತುಂಬಲು ಕಾರಣವಾಗುತ್ತಿದೆ ಎನ್ನುವುದನ್ನು ಬಹುತೇಕ ಜನ ಯೋಚಿಸುವುದಿಲ್ಲ. ಲಕ್ಷಾಂತರ ಹಕ್ಕಿಗಳು ಮೊಟ್ಟೆ ಇಟ್ಟು ಮರಿಮಾಡುವ ಸ್ಥಳದಲ್ಲಿ ಏಕಾಏಕಿ ಕೃಷಿ ಚಟುವಟಿಕೆ ಹೆಚ್ಚಾಗುತ್ತಿದೆ. ಇದರಿಂದ ಅಪರೂಪದ ಹಕ್ಕಿಗಳ ಸಂತಾನೋತ್ಪತ್ತಿಗೆ ಕುತ್ತು ಬಂದಿದೆ.

ಜನಪ್ರಿಯ ಪ್ರವಾಸಿ ತಾಣ 
ತುಂಗಭದ್ರಾ ಅಣೆಕಟ್ಟು, ಕಾಲುವೆಗಳು ಹಾಗೂ ನೀರಿನ ಸರಬರಾಜು ಉಸ್ತುವಾರಿಯ ಸಲುವಾಗಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶ ಸರ್ಕಾರಗಳ ಜಂಟಿ  ರಚಿಸಲಾಗಿದೆ. ಅಣೆಕಟ್ಟಿನ ಬಲದಂಡೆಯಲ್ಲಿ ವೈಕುಂಠ ಪ್ರವಾಸಿ ಮಂದಿರ, ಎಡದಂಡೆಯಲ್ಲಿ ಕೈಲಾಸ ಪ್ರವಾಸಿ ಮಂದಿರಗಳು ಅತ್ಯಂತ ರಮಣೀಯವಾಗಿವೆ. ಅಣೆಕಟ್ಟಿನ ಕೆಳಗೆ ಸುಂದರ ಉದ್ಯಾನ, ಸಂಗೀತ ಕಾರಂಜಿ, ಮತ್ಸಾಗಾರ, ಜಿಂಕೆವನ, ದೋಣಿವಿಹಾರ, ಜಪಾನ್ ಮಾದರಿಯ ಉದ್ಯಾನ, ಚಕ್ರವನ, ನಂದನವನ, ಮುನಿರಾಬಾದ್‌ನಲ್ಲಿ ಪಂಪಾವನ ಹೀಗೆ ಅನೇಕ ಉದ್ಯಾನವನಗಳು ರಜಾದಿನಗಳಲ್ಲಿ ಅಪಾರ ಸಂಖ್ಯೆಯ ಪ್ರವಾಸಿಗಳನ್ನು ಆಕರ್ಷಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT