ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ಬೆಲೆಗೆ ಆಗ್ರಹಿಸಿ ವಿವಿಧೆಡೆ ಧರಣಿ

Last Updated 26 ಫೆಬ್ರುವರಿ 2012, 6:05 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ರೈತರು ಸಂಕಷ್ಟದಲ್ಲಿದ್ದರೂ ಬೆಳೆಗಳಿಗೆ ಸಮರ್ಪಕ ಬೆಲೆ ನಿಗದಿ ಪಡಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಒಳಜಗಳವನ್ನು ಸರಿಪಡಿಸುವುದರಲ್ಲಿಯೇ ನಿರತವಾಗಿದೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆಂಪಣ್ಣ ಶನಿವಾರ ಆರೋಪಿಸಿದರು.

ಪಟ್ಟಣದಲ್ಲಿ ತಾಲ್ಲೂಕು ರೈತ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ರೈತರು ಬೆಳೆದ ಅರಿಶಿನ, ಈರುಳ್ಳಿ ಹಾಗೂ ತರಕಾರಿ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದೆ  ಸಂಕಷ್ಟಕ್ಕೀಡಾಗಿದ್ದಾರೆ, ಸರ್ಕಾರ ಕೂಡಲೇ ಅರಿಶಿನಕ್ಕೆ 15 ಸಾವಿರ, ಈರುಳ್ಳಿಗೆ 2 ಸಾವಿರ ಹಾಗೂ ತರಕಾರಿ ಬೆಳೆಗಳಿಗೆ ಸಮರ್ಪಕವಾದ ಬೆಂಬಲ ಬೆಲೆ ನಿಗದಿಪಡಿಸಿ ಪ್ರಕಟಿಸಬೇಕು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಮೂಲಕ ಖರೀದಿಸುವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.

ತಾಲ್ಲೂಕಿನ ಅನೇಕ ಗ್ರಾಮಗಳು ಕಾಡಂಚಿನಲ್ಲಿರುವುದರಿಂದ ಪ್ರಾಣಿಗಳ ಉಪಟಳದಿಂದ ಅನೇಕ ರೈತರ ಬೆಳೆ ನಾಶವಾಗಿದೆ. ಅರಣ್ಯ ಇಲಾಖೆ ಕೂಡಲೇ ಸೂಕ್ತ ಪರಿಹಾರ ಕೊಡಲು ಕ್ರಮಕೈಗೊಳ್ಳಬೇಕು. ಬೇಸಿಗೆ ಸಮೀಪಿಸುತ್ತಿರುವುದರಿಂದ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕ ಹಾಳಾಗಿವೆ. ಕೂಡಲೇ ಅವುಗಳನ್ನು ಬದಲಿಸಬೇಕು. ಚಾಮರಾಜನಗರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರ ಪೀಡಿತವೆಂದು ಘೋಷಿಸಿದ್ದು ರೈತರ ಸಾಲ ಮನ್ನಾ ಮಾಡಬೇಕು. ರೈತರು ಸಾಲವನ್ನು ಕೂಡಲೇ ಮರುಪಾವತಿ ಮಾಡಬೇಕೆಂದು ಬ್ಯಾಂಕ್ ಅಧಿಕಾರಿಗಳು ಹಿಂಸೆ ನೀಡುತ್ತಿದ್ದಾರೆ. ಇದನ್ನು ತಕ್ಷಣವೇ ನಿಲ್ಲಬೇಕೆಂದು ಆಗ್ರಹಿಸಿದರು.

ಪ್ರತಿಭಟನಾಕಾರರು ಸಾರಿಗೆ ಬಸ್ ನಿಲ್ದಾಣದ ಮುಂದೆ ಜಮಾಯಿಸಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಸ್ಥಳಕ್ಕೆ ತಹಶೀಲ್ದಾರ್ ಜಿ.ಎನ್. ಮಂಜುನಾಥ್ ಆಗಮಿಸಿ ರೈತರ ಬೇಡಿಕೆಗಳ ಮನವಿ ಪತ್ರವನ್ನು ಸ್ವೀಕರಿಸಿದರು.

ರೈತ ಸಂಘದ ಮುಖಂಡ ಶಿವಪುರ ಮಹಾದೇವಪ್ಪ, ಕೆ.ಪಿ. ಪುಟ್ಟಣ್ಣಯ್ಯ, ಕೆ.ಎಂ. ಮಹಾದೇವಸ್ವಾಮಿ, ಕುಂದಕೆರೆ ಸಂಪತ್ತು, ಶಿವಕುಮಾರ್, ಶಾಂತಪ್ಪ, ನಾಗರಾಜು, ಮಹಾ ದೇವಪ್ಪ, ಮಂಜು ಹಾಗೂ ಇತರರು ಭಾಗವಹಿಸಿದ್ದರು.

ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
ಯಳಂದೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ತಳೆದಿವೆ. ದೇಶದ ಬೆನ್ನುಲುಬಾಗಿರುವ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ವಿಫಲವಾಗಿವೆ ಎಂದು ಖಂಡಿಸಿ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಸದಸ್ಯರು ಶನಿವಾರ ಪಟ್ಟಣದ ಸ್ಟೇಟ್ ಬ್ಯಾಂಕ್ ವೃತ್ತದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.

ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿಪಡಿಸಿಲ್ಲ. ರಾಜ್ಯ ಸರ್ಕಾರವೇ ಜಯಾ ಭತ್ತದ ಬಿತ್ತನೆ ಬೀಜ ವಿತರಿಸಿದ್ದು ಈಗ ಭತ್ತವನ್ನು ಕೊಳ್ಳಲು ಹಿಂದೇಟು ಹಾಕುತ್ತಿದೆ. ಅರಿಶಿನಕ್ಕೆ ಬೆಂಬಲ ಬೆಲೆ ನೀಡಬೇಕು. ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಕೆಟ್ಟು ಹೋದ ವಿದ್ಯುತ್ ಪರಿವರ್ತ ಕಗಳನ್ನು 24 ಗಂಟೆಯೊಳಗೆ ಸರಿಪಡಿಸಿ ಅಳವಡಿಸಬೇಕೆಂಬ ನಿಯಮವಿದ್ದರೂ ಈ ಕಾರ್ಯ ನಡೆಯುತ್ತಿಲ್ಲ. ರಾಜ್ಯ ಸರ್ಕಾರದಂತೆ ಕೇಂದ್ರವೂ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಬೇಕು. ಕುಲಾಂತರಿ ತಳಿಗಳ ಬೀಜಗಳನ್ನು ನಿಷೇಧಿಸಬೇಕು. ಪ್ರತಿ ಟನ್ ಕಬ್ಬಿಗೆ ವೈಜ್ಞಾನಿಕ ದರವನ್ನು ನಿಗಧಿಪಡಿಸಬೇಕು. ಇದರ ಉಪ ಉತ್ಪನ್ನಗಳ ಲಾಭಾಂಶವನ್ನು ರೈತರಿಗೂ ನೀಡಬೇಕು. ಹೆಚ್ಚುವರಿ ಟಿ.ಸಿ ಅಳವಡಿಸಬೇಕು. ಬಿತ್ತನೆ ಬೀಜ, ರಸಗೊಬ್ಬರಗಳನ್ನು ರೈತರಿಗೆ ಸಕಾಲದಲ್ಲಿ ಒದಗಿಸಬೇಕು. ಜಿಲ್ಲೆಯಲ್ಲಿ ವನ್ಯಜೀವಿ ಕಾಯಿದೆ ಪ್ರಕಾರ 15 ಕಿ.ಮೀ. ಒಳಗೆ ಗಣಿಗಾರಿಕೆ ನಿಷೇಧವಿದ್ದರೂ ಇದು ಅವ್ಯಾಹತವಾಗಿ ನಡೆಯುತ್ತಿರುವುದರಿಂದ ಇದನ್ನೂ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ರಸ್ತೆ ತಡೆ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದಿಂದ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 209ರ ಸ್ಟೇಟ್ ಬ್ಯಾಂಕ್ ವೃತ್ತದಲ್ಲಿ ರಸ್ತೆ ತಡೆ ಹಮ್ಮಿಕೊಳ್ಳ ಲಾಗಿತ್ತು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಪ್ರತಿಭಟನಕಾರರು ದಿಕ್ಕಾರಗಳನ್ನು ಕೂಗಿದರು. ಸ್ಥಳಕ್ಕೆ ಪ್ರಭಾರ ತಹಶೀಲ್ದಾರ್ ನಂಜುಂಡಯ್ಯ ಭೇಟಿ ನೀಡಿದಾಗ ರೈತ ಮುಖಂಡ ಹೊನ್ನೂರು ಪ್ರಕಾಶ್ ರೈತರ ಸ್ಥಿತಿ ಬಗ್ಗೆ ಅರಿವು ಮೂಡಿಸಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ರಸ್ತೆ ತಡೆಯಿಂದ ಅರ್ಧ ಗಂಟೆಗೂ ಹೆಚ್ಚುಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮುಖಂಡರಾದ ಯರಿಯೂರು ರಾಜಣ್ಣ, ಯರಗಂಬಳ್ಳಿ ರಾಜಣ್ಣ, ವೃಷಭೇಂದ್ರ ಇತರರು ಇದ್ದರು. ಸಬ್‌ಇನ್ಸ್‌ಪೆಕ್ಟರ್ ಚಿಕ್ಕರಾಜುಶೆಟ್ಟಿ, ಮಹದೇವನಾಯಕ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಕೆಟ್ಟ ಆರ್ಥಿಕ ನೀತಿಯಿಂದ ರೈತರಿಗೆ ಅನ್ಯಾಯ:ಆರೋಪ
ಕೊಳ್ಳೇಗಾಲ: ದೇಶ ಆಳಿದ ಸರ್ಕಾರ ಮತ್ತು ನಾಯಕರುಗಳು ರೂಪಿಸಿದ ಆರ್ಥಿಕ ನೀತಿಗಳೇ ರೈತರ ಬದುಕು ಶೋಚ ನೀಯವಾಗಲು ಕಾರಣ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪೊನ್ನಾಚಿ ಮಹಾದೇವಸ್ವಾಮಿ ದೂರಿದರು.

ತಾಲ್ಲೂಕಿನ ಹನೂರು ಪಟ್ಟಣದಲ್ಲಿ ಜೆಡಿಎಸ್‌ನ ಹನೂರು ಘಟಕದ ವತಿಯಿಂದ ಶುಕ್ರವಾರ ಅರಿಶಿನ ಬೆಲೆ ನಿಗದಿ ಮತ್ತು ಬೆಂಬಲ ಬೆಲೆಗೆ ಒತ್ತಾಯಿಸಿ ಏರ್ಪಡಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಗಳು ಜಾಗತೀಕರಣ, ಉದಾರೀಕರಣದ ಹೆಸರಿನಲ್ಲಿ ರೈತರು ನಂಬಿರುವ ವ್ಯವಸಾಯ ಕ್ಷೇತ್ರ ಸಂಪೂರ್ಣ ಕಡೆಗಣಿಸಿ, ರೈತರ ಬದುಕನ್ನು ಅಸಹನೀಯ ಸ್ಥಿತಿಗೆ ದೂಡಿದ್ದಾರೆ ಎಂದು ಆರೋಪಿಸಿದರು.
ರೈತ ಆತ್ಮಹತ್ಯೆಯ ಹಾದಿ ಹಿಡಿದ್ದಿದ್ದಾನೆ. ರೈತನ ಬದುಕಿನ ಮೇಲೆ ತೀವ್ರ ಆಘಾತವನ್ನುಂಟು ಮಾಡಿರುವ ಅರಿಶಿನ ಬೆಲೆಕಡಿತವು ತೊಂದರೆಯನ್ನುಂಟು ಮಾಡಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಮೂರ್ತಿ ಮಾತನಾಡಿ, ರೈತರ ಪರಿಸ್ಥಿತಿ ಅವಲೋಕಿಸಿ ಸರ್ಕಾರ ಕೂಡಲೇ ಅರಿಶಿನಕ್ಕೆ ಬೆಲೆ ನಿಗದಿಪಡಿಸಬೇಕು ಮತ್ತು ತಕ್ಷಣ ಅರಿಶಿನಕ್ಕೆ 15 ಸಾವಿರ ರೂಪಾಯಿ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದರು. ಹನೂರು ಪಟ್ಟಣದ ಟಿಎಪಿಸಿಎಂಎಸ್ ಪೆಟ್ರೋಲ್ ಬಂಕ್ ವೃತ್ತದಿಂದ ಪ್ರಾರಂಭಗೊಂಡ ಜಾಥಾ ವಿಶೇಷ ತಹಶೀಲ್ದಾರ್ ಕಚೇರಿ ತನಕ ಸಾಗಿತು. ಶಿರಸ್ತೇದಾರ್ ಬೈರಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆ ಯಲ್ಲಿ ಹನೂರು ಕ್ಷೇತ್ರಾಧ್ಯಕ್ಷ ರಾಜಶೇಖರಮೂರ್ತಿ, ಸಿದ್ದೇಗೌಡ, ರಾಜಣ್ಣ, ಬಸವರಾಜು, ಮೂರ್ತಿ, ರಾಚಪ್ಪ, ವಕ್ತಾರ ಶ್ಯಾಗ್ಯ ಪ್ರಸಾದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT