ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟಗೇರಿ ಠಾಣೆ ಉದ್ಘಾಟನೆಗೆ ಸಜ್ಜು

Last Updated 16 ಜುಲೈ 2012, 9:35 IST
ಅಕ್ಷರ ಗಾತ್ರ

ಗದಗ: ನಗರದ ಬೆಟಗೇರಿ ಬಸ್ ನಿಲ್ದಾಣ ಬಳಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ಠಾಣೆಯ  ಕಟ್ಟಡ ಉದ್ಘಾಟನೆಗೆ ಸಜ್ಜುಗೊಂಡಿದೆ.

ಮೂರು ತಿಂಗಳ ಹಿಂದೆಯೇ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೂ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನ ಹರಿಸದೇ ಇರುವುದರಿಂದ ಸಾರ್ವಜನಿಕರ ಉಪಯೋಗಕ್ಕಾಗಿ ಸಿದ್ದವಾಗಿರುವ ಕಟ್ಟಡಕ್ಕೆ ಬೀಗ ಹಾಕಲಾಗಿದೆ.

ಬೆಟಗೇರಿ ಹಾಗೂ ಸುತ್ತಲಿನ ಪ್ರದೇಶಗಳ ಜನರ ಹಿತ ದೃಷ್ಟಿಯಿಂದ ಪೊಲೀಸ್ ಠಾಣೆ ಮಂಜೂರಾಗಿತ್ತು. ಅದೇ ಸ್ಥಳದಲ್ಲಿ ಹಳೆ ಕಟ್ಟಡವೂ ಇತ್ತು. ಅದು ಶಿಥಿಲಗೊಂಡಿದ್ದರಿಂದ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿತು. ಅದರಂತೆ ಕಾಮಗಾರಿ ಮುಗಿದು ಮೂರು ತಿಂಗಳಾದರೂ ಉದ್ಘಾಟನೆಯಾಗದಿರುವುದು ಬೆಟಗೇರಿ ನಗರದ ಜನತೆಗೆ ಬೇಸರ ಉಂಟು ಮಾಡಿದೆ.

ಸರ್ಕಾರ ನೀಡಿದ ರೂ. 25 ಲಕ್ಷಕ್ಕೂ ಹೆಚ್ಚು ಅನುದಾನದಲ್ಲಿ ಕಟ್ಟಡ ನಿರ್ಮಾಣ ಜವಾಬ್ದಾರಿಯನ್ನು ಪೊಲೀಸ್ ಗೃಹ ಮಂಡಳಿ ವಹಿಸಿಕೊಂಡಿತ್ತು.  ಎಲ್ಲ ಕೆಲಸ ಪೂರ್ಣಗೊಂಡು ಸಣ್ಣ ಪುಟ್ಟ ಕೆಲಸ ಮಾತ್ರ ಬಾಕಿ ಉಳಿದಿತ್ತು. ಅದು ಸಹ ಪೂರ್ಣಗೊಂಡು ಮೂರು ತಿಂಗಳು ಕಳೆದಿದ್ದರೂ ಉದ್ಘಾಟನೆ ಭಾಗ್ಯ ಇನ್ನೂ ಕಂಡಿಲ್ಲ.

ಪೊಲೀಸ್ ಠಾಣೆ ಉದ್ಘಾಟನೆ ವಿಳಂಬಕ್ಕೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಘಟನೆಗಳೇ ಕಾರಣ ಎಂದು ಹೇಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರ ಕಳೆದುಕೊಂಡರು. ಠಾಣೆ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು ಎಂಬ  ಗೊಂದಲದಲ್ಲಿ ಇಲಾಖೆಯೂ ಇತ್ತು. ಈಗ ಜಿಲ್ಲೆಗೆ ಉಸ್ತುವಾರಿ ಸಚಿವರು ಬಂದಿದ್ದಾರೆ. ಶೀಘ್ರ ಉದ್ಘಾಟನೆಯಾಗಿ ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕು ಎಂಬುದು ಜನತೆಯ ಆಶಯ.

ಜುಲೈ 26ಕ್ಕೆ ಮುಹೂರ್ತ
`ಬೆಟಗೇರಿ ಜನತೆಯ ಅನುಕೂಲಕ್ಕಾಗಿ ಹೊಸ ಠಾಣೆ ನಿರ್ಮಿಸಲಾಗಿದೆ. ಕಾಮಗಾರಿ ಪೂರ್ಣಗೊಂಡು ಮೂರು ತಿಂಗಳು ಕಳೆದರೂ ಹಲವು ಕಾರಣಗಳಿಂದ ಠಾಣೆ ಉದ್ಘಾಟನೆಯಾಗಿಲ್ಲ. ಜುಲೈ 26ರಂದು ಠಾಣೆ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗಿದೆ. ಶಿಷ್ಟಾಚಾರದ ಪ್ರಕಾರ ಎಲ್ಲರನ್ನು ಆಹ್ವಾನಿಸಲಾಗುವುದು.
 
ಗೃಹ ಸಚಿವರಿಗೂ ವಿಷಯ ತಿಳಿಸಲಾಗುವುದು. ಐಜಿಪಿ, ಸ್ಥಳೀಯ ಶಾಸಕರು ಮತ್ತು ಸಚಿವರನ್ನು ಸಹ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು.  ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರವೇ ಠಾಣೆಯನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸ ಲಾಗುವುದು~ ಎಂದು ಪೊಲೀಸ್ ಇಲಾಖೆ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT