ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟದ ತಾಯಿ

Last Updated 16 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕನ್ನಡ ನಾಡಿನ ಅಧಿದೇವತೆ ಎಂದೇ ಪ್ರಖ್ಯಾತಿ ಪಡೆದ ಚಾಮುಂಡೇಶ್ವರಿ ಆವಾಸ ಸ್ಥಾನ ಮೈಸೂರಿನ ‘ಚಾಮುಂಡಿ ಬೆಟ್ಟ’ ಈಗ ಅದು ಕೇವಲ ಧಾರ್ಮಿಕ ಸ್ಥಳವಾಗಿ ಉಳಿದಿಲ್ಲ. ಈಗ ಅದು ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಮೈಸೂರಿಗೆ ಬರುವ ಪ್ರವಾಸಿಗರು ಬೆಟ್ಟಕ್ಕೆ ಬಂದು ಚಾಮುಂಡಿ ಅಮ್ಮನ ದರ್ಶನ ಮಾಡುತ್ತಾರೆ.

ಮೈಸೂರು -ಊಟಿ ರಾಷ್ಟ್ರೀಯ ಹೆದ್ದಾರಿಯ ಎಡ ಭಾಗದಲ್ಲಿ ನಿಂತಿರುವ ಚಾಮುಂಡಿಬೆಟ್ಟ ಸಮುದ್ರ ಮಟ್ಟಕ್ಕಿಂತ ಸುಮಾರು 3489 ಅಡಿಗಳ ಎತ್ತರದಲ್ಲಿದೆ.

ಚಾಮುಂಡೇಶ್ವರಿ ಆದಿಶಕ್ತಿ ಸ್ವರೂಪಿಣಿ. ಪ್ರಜಾ ಪೀಡಕನಾಗಿದ್ದ ಮಹಿಷಾಸುರನನ್ನು ಸಂಹರಿಸಿದ್ದರಿಂದ ‘ಮಹಿಷಾಸುರ ಮರ್ದಿನಿ’ ಎಂತಲೂ, ಚಂಡ-ಮುಂಡಾಸುರರನ್ನು ಕೊಂದಿದ್ದರಿಂದ ‘ಚಾಮುಂಡಾಂಬೆ’ ಎಂಬ ಹೆಸರು ಬಂತೆಂದು ಹೇಳಲಾಗಿದೆ. ಚಾಮುಂಡೇಶ್ವರಿ ಮೈಸೂರು (ಯದುಕುಲದ) ಅರಸರ ಕುಲದೇವತೆ.

ಚಾಮುಂಡಿ ಬೆಟ್ಟದೊಳಗೆ ದೊಡ್ಡಬಸವ ಎಂದೇ ಖ್ಯಾತಿ ಪಡೆದ ಮಹಾನಂದಿ, ಮಹಿಷಾಸುರನ ವಿಗ್ರಹ, ಜ್ವಾಲಾಮುಖಿ ತ್ರಿಪುರ ಸುಂದರಿ, ಮಹಾಬಲೇಶ್ವರ ದೇವಸ್ಥಾನಗಳು, ದೇವಿಗಂಗಾ ಕೆರೆ, ಮಾರ್ಕಂಡೇಯ ಆಶ್ರಮ, ನಾಗತೀರ್ಥ (ನಾಗಾಶ್ರಮ), ಕೊಣನ ಅರೆ, ಕುಂತಿಕಲ್ಲು ಗುಡ್ಡ, ಕಿಬ್ಬಿಯ ಪಾದ, ಗ್ರಾಮದೇವತೆ ಮಾರಮ್ಮ, ದಾರಿ ಆಂಜನೇಯ, ಗದ್ದಿಗೆ ಮನೆ ಇತ್ಯಾದಿ ಹಲವು ತಾಣಗಳಿವೆ.

ಚಾಮುಂಡೇಶ್ವರಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾಳೆ ಎಂಬ ಭಾವನೆ ಜನರಲ್ಲಿದೆ. ಅಶ್ವಯುಜ ಮಾಸದ ಶರನ್ನವರಾತ್ರಿ ಉತ್ಸವ ಬೆಟ್ಟದಲ್ಲಿ ನಡೆಯುವ ವಿಶೇಷ. ರಥೋತ್ಸವ ಹಾಗೂ ತೆಪ್ಪೋತ್ಸವಗಳ ಸಂದರ್ಭದಲ್ಲಿ ಅಸಂಖ್ಯಾತ ಜನರು ಭಾಗವಹಿಸುತ್ತಾರೆ. ರಥೋತ್ಸವ ಸಂದರ್ಭದಲ್ಲಿ ಸ್ವತಃ ಮಹಾರಾಜರು ರಥವನ್ನು ಸ್ವಲ್ಪ ದೂರ ಎಳೆಯುತ್ತಾರೆ. ಅಷಾಢ ಮಾಸದ ಶುಕ್ರವಾರಗಳಲ್ಲಿ ವಿಶೇಷ ಪೂಜೆ ಉತ್ಸವಗಳು ನಡೆಯುತ್ತವೆ. ಕಡೆಯ ಆಷಾಢ ಶುಕ್ರವಾರದ ದಿನವಂತೂ ಜನ ಜಾತ್ರೆಯೋಪಾದಿಯಲ್ಲಿ ಸೇರುತ್ತಾರೆ.

ಚಾಮುಂಡಿ ಅಮ್ಮನವರ ಜನ್ಮೋತ್ಸವ, ಶಯನೋತ್ಸವ, ಮುಡಿ ಉತ್ಸವ, ವಸಂತೋತ್ಸವ, ಪ್ರಾಸಾದೋತ್ಸವ, ಫಲ ಪೂರ್ಣಿಮಾ ಉತ್ಸವ, ಶರನ್ನವರಾತ್ರಿ ಉತ್ಸವ, ಕೃತ್ತಿಕೋತ್ಸವ, ಕಠಾರೋತ್ಸವ, ಅಮ್ಮನವರ ಜಾತ್ರೆ, ಮಹಾಬಲೇಶ್ವರ ಗಿರಿಜಾಕಲ್ಯಾಣ ಉತ್ಸವ, ಕನ್ನಾಕನ್ನಡಿ ಉತ್ಸವ, ನವಚಂಡಿ-ಸಪ್ತಚಂಡಿ-ಚಂಡಿಯಾಗ ಪೂಜೆ ಹಾಗೂ ಪುಷ್ಕರಣಿ ಪೂಜೆ ನಡೆಯುತ್ತವೆ.

ಸೇವೆಗಳು:  ದೇವಸ್ಥಾನದಲ್ಲಿ 29ಕ್ಕೂ ಹೆಚ್ಚು ಸೇವೆಗಳು ನಡೆಯುತ್ತವೆ. ಬೆಳ್ಳಿ ರಥೋತ್ಸವ, ನವಚಂಡಿ ಹೋಮ, ಶತಚಂಡಿ ಹೋಮ ಮಾಡಿಸಲು 2001ರೂಪಾಯಿ ದರ ನಿಗದಿಪಡಿಸಲಾಗಿದೆ. ಶತಚಂಡಿ ಹೋಮಕ್ಕೆ ಬೇಕಾದ ಸಾಮಗ್ರಿಗಳ ವಿವರಗಳನ್ನು ಅರ್ಚಕರಿಂದ ಪಡೆದು ತರಬೇಕು. ಕುಂಕುಮ ಅಷ್ಟೋತ್ತರ, ಕುಂಕುಮ ತ್ರಿಶತಿ, ಕುಂಕುಮ ಸಹಸ್ರನಾಮ, ಏಕವಾರ ಅಭಿಷೇಕ, ಏಕದಶವಾರ ಅಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ, ರುದ್ರಾಕ್ಷಿ ಮಂಟಪೋತ್ಸವ, ಪ್ರಾಕಾರೋತ್ಸವ, ದೊಡ್ಡ ಉತ್ಸವ, ಸಿಂಹ ವಾಹನೋತ್ಸವ ಇತ್ಯಾದಿಗಳು ನಡೆಯುತ್ತವೆ. ದೇವಿಗೆ ಹೂವಿನ ಸೀರೆ ಧರಿಸುವ ಸೇವೆಗೆ ಬೇಕಾದ 250 ಮಾರು ವಿವಿಧ ಬಗೆಯ ಹೂಗಳನ್ನು ಭಕ್ತರೇ ತರಬೇಕು. 

ದೊಡ್ಡ ಸಿಂಹವಾಹನೋತ್ಸವ, ಸಪ್ತಪತಿ ಪಾರಾಯಣ, ಕದಳಿ ಸೇವೆಗೆ ವೀಳ್ಯದೆಲೆ ತರಬೇಕು, ಅರಿಶಿನ ಸೇವೆ, ತುಲಾಭಾರ ಕಾಣಿಕೆ ಸೇವೆಗೆ ಅಗತ್ಯ ಸಾಮಗ್ರಿಗಳನ್ನು ಭಕ್ತರೇ ತರಬೇಕು. ಒಂದೆರಡು ದಿನ ಮುಂಚಿತವಾಗಿ ದೇವಸ್ಥಾನದಲ್ಲಿ ಶುಲ್ಕ ಪಾವತಿ ಮಾಡಿ ರಶೀದಿ ಪಡೆಯಬೇಕು ಹಾಗೂ ಸೇವೆ ಸಮಯದಲ್ಲಿ ಹಾಜರಿರಬೇಕು ಎನ್ನುತ್ತಾರೆ ದೇವಾಲಯದ ಪ್ರಧಾನ ಅರ್ಚಕ ಎನ್.ಶಶಿಶೇಖರ ದೀಕ್ಷಿತ್.

ನಿತ್ಯ ಅಭಿಷೇಕದ ವೇಳೆ ಬೆಳಿಗ್ಗೆ 6ರಿಂದ 7.30 ಹಾಗೂ ಸಾಯಂಕಾಲ 6ರಿಂದ ಸಂಜೆ 7.30ಗಂಟೆ. ಮಹಾ ಮಂಗಳಾರತಿ ಬೆಳಿಗ್ಗೆ 9.30 ಮತ್ತು ರಾತ್ರಿ 8.30ಗಂಟೆಗೆ ನಡೆಯುತ್ತದೆ. ನಿತ್ಯ ಬೆಳಿಗ್ಗೆ 7.30ರಿಂದ 2 ಗಂಟೆವರೆಗೆ ಮತ್ತು  3.30ರಿಂದ ಸಂಜೆ 6 ಹಾಗೂ 7.30ರಿಂದ ರಾತ್ರಿ 9ಗಂಟೆವರೆಗೆ ದರ್ಶನಕ್ಕೆ ಅವಕಾಶವಿದೆ. ವಿಶೇಷ ದಿನಗಳ ವೇಳೆಯಲ್ಲಿ ಬದಲಾವಣೆ ಆಗಬಹುದು.

ಬೆಟ್ಟದ ದಾರಿ
 ಮೈಸೂರಿನ ನಗರ ಬಸ್ ನಿಲ್ದಾಣದಿಂದ ಚಾಮುಂಡಿ ಬೆಟ್ಟ 13 ಕಿ.ಮೀ ದೂರವಿದೆ. ಪ್ರತಿ 30 ನಿಮಿಷಕ್ಕೆ ನೇರ ಬಸ್ (ನಂ.201) ಸೌಲಭ್ಯವಿದೆ.

ಬೆಟ್ಟದಲ್ಲಿ ಉಳಿದು ಸೇವೆ ಸಲ್ಲಿಸಲು ಬಯಸುವವರಿಗಾಗಿ 20 ಕೊಠಡಿಗಳ ಅತಿಥಿ ಗೃಹವಿದೆ. ಕೊಠಡಿಯೊಂದರ ದಿನದ ಬಾಡಿಗೆ 300 ರೂ. ದೇವಸ್ಥಾನದ ದಾಸೋಹ ಭವನದಲ್ಲಿ ನಿತ್ಯ ಸುಮಾರು 1500 ಮಂದಿಗೆ ಊಟದ ವ್ಯವಸ್ಥೆ ಇದೆ. ಮಕ್ಕಳ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಮುಂತಾದ ಸಂದರ್ಭಗಳಲ್ಲಿ ಭಕ್ತರು ಅನ್ನ ಸಂತರ್ಪಣೆ ಮಾಡಿಸಬಹುದು. ಅದಕ್ಕೆ ರೂ.15ಸಾವಿರ ರೂಪಾಯಿಗಳನ್ನು ಡಿಡಿ ಅಥವಾ ನಗದು ರೂಪದಲ್ಲಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಗಳ ಹೆಸರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ ಸಂಪರ್ಕಿಸಬೇಕಾದ  ದೂರವಾಣಿ- 0821-2590027.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT