ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟವು ನಿನ್ನದೆ ಬಯಲೂ ನಿನ್ನದೇ...

Last Updated 16 ಜೂನ್ 2011, 19:30 IST
ಅಕ್ಷರ ಗಾತ್ರ

`ಶಿವರಾಮ ಕಾರಂತರ ಅಭಿಮಾನಿಗಳಿಂದ ಬಯ್ಯಿಸಿಕೊಳ್ಳುವ ಅಳುಕಿತ್ತು. ಆ ಅಳುಕು ಈಗ ಮಾಯವಾಗಿದೆ~.

`ಬೆಟ್ಟದ ಜೀವ~ ಚಿತ್ರ ತೆರೆಕಾಣುತ್ತಿರುವ ಸಂದರ್ಭದಲ್ಲಿ ನಿರ್ದೇಶಕ ಪಿ.ಶೇಷಾದ್ರಿ ಅವರ ಮನಸ್ಸಿನಲ್ಲಿರುವ ನೆಮ್ಮದಿಯಿದು. ಯಾಕೆಂದರೆ, ಈ ಬೆಟ್ಟದ ದಾರಿ ಅವರಿಗೆ ಅಷ್ಟು ಸಲೀಸಾಗಿರಲಿಲ್ಲ.

ಕಾರಂತರ `ಬೆಟ್ಟದ ಜೀವ~ ಹಲವು ವರ್ಷಗಳಿಂದ ಚರ್ಚೆಯಾಗುತ್ತಲೇ ಇರುವ ಕಾದಂಬರಿ. ಹಲವು ನಿರ್ದೇಶಕರು ಹಂಬಲಿಸಿ, ಕೈಬಿಟ್ಟಿದ್ದ ಕನಸಿದು.

ಕಾದಂಬರಿಯಲ್ಲಿರುವ ಬದುಕು, ಹಸಿರು, ನೀರು, ಗಾಳಿ, ತೋಟ- ಇವೆಲ್ಲವನ್ನು ದೃಶ್ಯಗಳಾಗಿಸುವುದು ಹೇಗೆ? ಕಾರಂತರ ಸಾಲುಗಳನ್ನು ಜೀವಂತಗೊಳಿಸುವುದು ಹೇಗೆ? ಈ ಸವಾಲು ನಿರ್ದೇಶಕರನ್ನು ಕಂಗೆಡಿಸುವಂತಹದ್ದು.

`ಇದು ಸಿನಿಮಾಕ್ಕೆ ಒಗ್ಗುವಂತಹದ್ದಲ್ಲ~ ಎಂದು ಬೆಟ್ಟದಂಥ ಕಾಸರವಳ್ಳಿಯವರೇ ಉದ್ಘರಿಸಿದ್ದರು. ಕಲಾತ್ಮಕ ಸಿನಿಮಾ ಎಂದರೆ `ಇದೋ ನಾನು~ ಎನ್ನುತ್ತಿದ್ದ ಛಾಯಾಗ್ರಾಹಕ ರಾಮಚಂದ್ರ ಐತಾಳರೂ, `ಇದು ಗಗನಕುಸುಮ~ ಎಂದುಬಿಟ್ಟಿದ್ದರು. ಆದರೂ ಶೇಷಾದ್ರಿ `ಬೆಟ್ಟದ ಜೀವ~ ಕೈಗೆತ್ತಿಕೊಂಡಿದ್ದರು.

ಕಾರಂತರ ಕಾದಂಬರಿಯನ್ನು ಸಿನಿಮಾ ಮಾಡಹೊರಟ ಶೇಷಾದ್ರಿ ಅವರಿಗೊಂದು ನಂಬಿಕೆಯಿತ್ತು. ಪರಿಣಾಮಕಾರಿ ಶಬ್ದ ಮತ್ತು ಸಶಕ್ತ ಛಾಯಾಗ್ರಹಣದ ಮೂಲಕ `ಬೆಟ್ಟದ ಜೀವ~ವನ್ನು ಕಟ್ಟಿಕೊಡಬಹುದೆನ್ನುವ- ಪ್ರೇಕ್ಷಕನಿಗೆ ತಾನು ಕಾಡಿನ ನಡುವೆ ಕೂತಿದ್ದೇನೆ ಎನ್ನುವ ಭಾವ ಉಂಟುಮಾಡುವ- ನಂಬಿಕೆಯದು. ಆ ನಂಬಿಕೆ ಈಗ ನಿಜವಾಗಿದೆ. `ಇನ್ನೊಮ್ಮೆ ಯೋಚಿಸಿ~ ಎಂದಿದ್ದ ಕಾಸರವಳ್ಳಿ ಅವರೇ ಸಿನಿಮಾ ನೋಡಿ ಅಚ್ಚರಿಗೊಂಡಿದ್ದಾರೆ.

ಕೃತಿಯನ್ನು ಆಕೃತಿಗಿಳಿಸುವುದು ಕೂಡ ಸುಲಭವಾಗಿರಲಿಲ್ಲ. ಚಿತ್ರೀಕರಣ ನಡೆದದ್ದು ಕುಕ್ಕೆಯ ಆಸುಪಾಸಿನ ಐವತ್ತು ಕಿ.ಮೀ. ಪರಿಸರದಲ್ಲಿ. ಬಿಸಿಲೆ ಘಾಟ್, ಕುಮಾರಪರ್ವತ, ಕುಮಾರಧಾರಾ ನದಿ ಎಲ್ಲವನ್ನೂ ಸಿನಿಮಾದ ಭಾಗವನ್ನಾಗಿಸಿಕೊಂಡಿದ್ದಾಯಿತು.

ಒಮ್ಮೆ ಹೀಗಾಯಿತು-
ಕುಮಾರಧಾರಾ ನದಿಯಲ್ಲಿ ದತ್ತಣ್ಣ ಮುಳುಗೇಳುವ ಸನ್ನಿವೇಶ. ಚಿತ್ರೀಕರಣಕ್ಕೆ ಮೊದಲು ನೀರಿನ ಆಳ ನೋಡಿ, `ಎಲ್ಲವೂ ಸರಿಯಾಗಿದೆ~ ಎಂದು ಖಚಿತಪಡಿಸಿಕೊಂಡಾಗಿತ್ತು.

ನೀರಿನ ಹರಿವು ತೆಳುವಾಗಿರುವಂತೆ ಮೇಲ್ನೋಟಕ್ಕೆ ಕಾಣುತ್ತಿತ್ತು. ದತ್ತಣ್ಣ ಕೂಡ ಎರಡು ಮೂರು ಸಲೀಸಾಗಿ ಮುಳುಗಿ ಎದ್ದರು. ಆದರೆ, ಮತ್ತೊಂದು ಮುಳುಗು ಅವರ ಆಯ ತಪ್ಪಿಸಿತ್ತು. ಪ್ರವಾಹ ಅವರನ್ನು ಒಂದಷ್ಟು ದೂರಕ್ಕೆ ಕೊಚ್ಚಿಕೊಂಡು ಹೋಯಿತು.
 
ಮುಂದೆ, ಮಡುವಿನ ರೀತಿಯ ರಚನೆಯೊಂದರ ಬಳಿ ಅವರ ಕಾಲಿಗೆ ಯಾವುದೋ ಆಯ ದೊರೆತು, ನಿಂತುಕೊಂಡರು. ಇದೆಲ್ಲವನ್ನೂ ದಂಡೆಯ ಮೇಲಿನ ಚಿತ್ರತಂಡ ಅಸಹಾಯಕವಾಗಿ ವೀಕ್ಷಿಸಬೇಕಾಯಿತು. ಪ್ರಮಾದದಿಂದ ಪಾರಾಗಿ ದಂಡೆಗೆ ಬಂದ ದತ್ತಣ್ಣ ಕೇಳಿದ್ದು-

`ಯಾರಾದ್ರೂ ಒಂದು ಸಿಗರೇಟ್ ಕೊಡ್ರಪ್ಪ~.
ಆಘಾತದಿಂದ ಹೊರಬಂದ ನಂತರ ಚಿತ್ರತಂಡದ ಸದಸ್ಯರೊಬ್ಬರು ತಮಾಷೆ ಮಾಡಿದರಂತೆ- `ಹೆಚ್ಚೂಕಮ್ಮಿ ಆಗಿದ್ದರೆ ಈ ಪ್ರದೇಶ ಕೂಡ ಪ್ರೇಕ್ಷಣೀಯವಾಗುತ್ತಿತ್ತು.

ಸುಬ್ರಹ್ಮಣ್ಯನ ನೋಡಲು ಬಂದವರು ದತ್ತಣ್ಣನ ನೆನಪಿಗಾಗಿ ಇಲ್ಲಿಗೆ ಬರುತ್ತಿದ್ದರು~.
`ಬೆಟ್ಟದ ಜೀವ~ ಚಿತ್ರತಂಡ ಎದುರಿಸಿದ ಇನ್ನೊಂದು ಸಮಸ್ಯೆ ಇಂಬಳಗಳದ್ದು. ಇವುಗಳಿಂದ ಕಚ್ಚಿಸಿಕೊಂಡ ಬಗ್ಗೆ ಶೇಷಾದ್ರಿ ಹೇಳುವುದು- `ಈ ಚಿತ್ರಕ್ಕೆ ನಾವು ಬೆವರು ಮಾತ್ರವಲ್ಲ, ರಕ್ತವನ್ನೂ ಹರಿಸಿದ್ದೇವೆ~.

ನಿರ್ದೇಶಕರಾಗಿ ಶೇಷಾದ್ರಿ ಅವರಿಗೆ `ಬೆಟ್ಟದ ಜೀವ~ ಖುಷಿ ಕೊಟ್ಟಿದೆ. ತಾಂತ್ರಿಕವಾಗಿ ಚಿತ್ರ ಉತ್ತಮವಾಗಿ ಮೂಡಿಬರುವಂತೆ ಅವರು ಎಚ್ಚರವಹಿಸಿದ್ದಾರೆ. `ಡಿಟಿಎಸ್~ ತಂತ್ರಜ್ಞಾನ ಬಳಕೆಯಾಗಿರುವ ಕನ್ನಡದ ಮೊದಲ ಕಲಾತ್ಮಕ ಚಿತ್ರವಿದು.
`ಪರಿಸರ ವಿಭಾಗ~ದಲ್ಲಿ ರಾಷ್ಟ್ರಪ್ರಶಸ್ತಿ ಸಂದಿರುವ `ಬೆಟ್ಟದ ಜೀವ~ ಚಿತ್ರ ಇಂದು (ಜೂನ್ 17) ತೆರೆಕಾಣುತ್ತಿದೆ.

ಸದ್ಯಕ್ಕೆ ಬೆಂಗಳೂರಿನಲ್ಲಷ್ಟೇ ತೆರೆಕಾಣುತ್ತಿರುವ ಚಿತ್ರ, ನಂತರದ ಹಂತಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಲಿದೆ.

`ಈ ಚಿತ್ರ ಸೂತ್ರಬದ್ಧವಾದುದಲ್ಲ. ಗಣಿತದ ಲೆಕ್ಕಾಚಾರಕ್ಕೆ ಹೊಂದುವಂತಹದ್ದಲ್ಲ, ಇದೊಂದು ಸಂಭವ~ ಎಂದು `ಬೆಟ್ಟದ ಜೀವ~ವನ್ನು ಶೇಷಾದ್ರಿ ವಿಶ್ಲೇಷಿಸುತ್ತಾರೆ. ಹೌದು, ಇಂಥ ಸಂಭವಗಳೇ ಕನ್ನಡ ಚಿತ್ರರಂಗದ ಘಮವನ್ನು ನಾಡಿನಾಚೆಗೂ ಪಸರಿಸಿರುವುದು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT