ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಡಗಿನ ನೃತ್ಯ, ಮಧುರ ಸಂಗೀತ

Last Updated 2 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಪ್ರಿಯದರ್ಶಿನಿ ಗೋವಿಂದ್ ಅವರಿಗೆ ನೃತ್ಯ ಕ್ಷೇತ್ರದಲ್ಲಿ ಒಂದು ಗೌರವಾನ್ವಿತ ಸ್ಥಾನವಿದೆ. ಅವರು ಇಂದಿರಾನಗರ ಸಂಗೀತ ಸಭೆ ಆಯೋಜಿಸಿದ್ದ ಅಂತರ್ರಾಷ್ಟ್ರೀಯ ಸಂಗೀತ ಸಮ್ಮೇಳನದಲ್ಲಿ ನೀಡಿದ ಕಾರ್ಯಕ್ರಮದಲ್ಲಿ ಈ ಖ್ಯಾತಿಯನ್ನು ಉಳಿಸಿಕೊಳ್ಳುವ ರೀತಿಯಲ್ಲಿ ನರ್ತಿಸಿದರು. ಪ್ರಾರಂಭದ ಪುಷ್ಪಾಂಜಲಿಯಿಂದಲೇ ಚುರುಕು ನಡೆಯಿಂದ ಗಮನ ಸೆಳೆಯುತ್ತಾ, ಕೌತ್ವಂಗೆ ಸರಿದು, ನಾಟಕುರಂಜಿ ವರ್ಣವನ್ನು ಪ್ರಧಾನವಾಗಿ ಆಯ್ದರು. ‘ಪರಕೀಯ ನಾಯಕ’ನ ಪದದ ನಂತರ ಪ್ರಸಿದ್ಧ ‘ನೀಮಾಟ’ ಹಾಗೂ ತಿಲ್ಲಾನ ಮಾಡಿ, ‘ವಂದೇ ಮಾತರಂ’ನೊಂದಿಗೆ ಮುಕ್ತಾಯ ಮಾಡಿದರು. ಚುರುಕಿನ ಲಯ, ಬೆಡಗು, ಹಿತಮಿತ ‘ಜರ್ಕ್’, ಆಕರ್ಷಕ ಭಂಗಿಗಳಿಂದ ಅವರ ನೃತ್ಯ ಮೆಚ್ಚುಗೆ ಗಳಿಸಿತು.

ವೇಣುವಾದನ
ಅದಕ್ಕೂ ಮೊದಲು ಕೊಳಲು ನುಡಿಸಿದ ಎ. ಚಂದನ್‌ಕುಮಾರ್ ಕೇಳುಗರಿಗೆ ಪರಿಚಿತರೇ. ಅವರು ಮೋಹನ ರಾಗವನ್ನು ಕ್ರಮವಾಗಿ ವಿಸ್ತರಿಸಿದರು. ಉದ್ದದ ಕೊಳಲು (ಬಾನ್ಸುರಿ) ಹಿಡಿದು, ಮುದ್ರಸ್ಥಾಯಿಯಲ್ಲಿ ನುಡಿಸಿದ ಸಂಗತಿಗಳು ಮಾರ್ದವತೆಯಿಂದ ಮನ ತುಂಬಿದವು. ಆದರೆ ತಾನವನ್ನು ನಿಧಾನವಾಗಿ ಪ್ರಾರಂಭಿಸಿ, ಕ್ರಮವಾಗಿ ದ್ರುತಕ್ಕೆ ಸರಿದಿದ್ದರೆ ಚೆನ್ನಿತ್ತು. ಹಾಗೆಯೇ ಸ್ವರ ಪ್ರಸ್ತಾರದಲ್ಲೂ ಅಷ್ಟು ಬೇಗ ರಾಗಮಾಲಿಕೆಗೆ ಹೋಗುವ ಬದಲು, ಮೂಲ ರಾಗದಲ್ಲೆೀ ಇನ್ನೂ ಕೆಲ ಸಂಗತಿಗಳನ್ನು ಹಾಕಿದ್ದರೆ, ಔಚಿತ್ಯಪೂರ್ಣವಾಗಿರುತ್ತಿತ್ತು. ಆದರೂ ಮಧುರ ನಾದ, ತಾಜಾ ಸಂಗತಿಗಳಿಂದ ಚಂದನ್‌ಕುಮಾರ್ ಸಂತೋಷಗೊಳಿಸಿದರು. ಚಾರುಲತಾ ರಾಮಾನುಜಂ, ಎಚ್.ಎಸ್. ಸುಧೀಂದ್ರ ಹಾಗೂ ಎಂ. ಗುರುರಾಜ್ ದಕ್ಷವಾಗಿ ಪಕ್ಕವಾದ್ಯ ನುಡಿಸಿ, ಕಛೇರಿಯ ಯಶಸ್ಸಿನಲ್ಲಿ ಪಾಲು ಪಡೆದರು.

ಭಾವಗೀತೆ ಭಾವುಕರು: ಗೌರಿಸುಂದರ್ ಅವರು ಸಂಪಾದಿಸಿರುವ ‘ಭಾವಗೀತೆ ಭಾವುಕರು’ ಹಾಗೂ ಎಂ.ಎ. ಸಿಂಗಮ್ಮ ಮತ್ತು ಎಂ.ಡಿ. ವೇದವಲ್ಲಿ ಅವರು ಸಂಪಾದಿಸಿರುವ ‘ಭಗವದ್‌ಗೀತೆ’ ಎರಡೂ ಪುಸ್ತಕಗಳನ್ನು ಸುಂದರ ಪ್ರಕಾಶನದವರು ಕಳೆದ ವಾರ ಲೋಕಾರ್ಪಣೆ ಮಾಡಿದರು. ಆಗ ನಡೆದ ಸಂಗೀತ ಸಮಾರಾಧನೆಯಲ್ಲಿ ನಾಡಿನ ಹೆಸರಾಂತ ಸುಗಮ ಸಂಗೀತ ಕಲಾವಿದರು ಪಾಲ್ಗೊಂಡು ಹಿಂದಿನ ಗಣ್ಯ ಕಲಾವಿದರು ಪ್ರಚುರಗೊಳಿಸಿದ ಗೀತೆಗಳನ್ನು ಆಯ್ದುದು ವಿಶೇಷ.

ಅಮೀರಬಾಯಿ ಕರ್ನಾಟಕಿ ಪ್ರಚುರಗೊಳಿಸಿದ ‘ಪ್ರಿಯ ಮಧುವನದಲಿ ಕೂಡಾಡುವ ಬಾ’ ಗೀತೆಯನ್ನು ಬಿ.ಕೆ. ಸುಮಿತ್ರಾ ಆಯ್ದರು. ಪಿ. ಕಾಳಿಂಗರಾಯರು ಜನಪ್ರಿಯಗೊಳಿಸಿದ ಗೋಪಾಲಕೃಷ್ಣ ಅಡಿಗರ ‘ಅಳುವ ಕಡಲೊಳು ತೇಲಿ ಬರುತಲಿದೆ’ಯನ್ನು ಶಿವಮೊಗ್ಗ ಸುಬ್ಬಣ್ಣ ಹಾಡಿದರು. ಕಸ್ತೂರಿ ಶಂಕರ್ ಅವರು ‘ಬಣ್ಣದ ಚಿತ್ರ ಬರ್ಕೊಂಡು ಬಂದ’ (ದೊಡ್ಡರಂಗೇಗೌಡ), ನಾರಾಯಣರಾವ್ ಮಾನೆ ‘ಬಾರೆ ಉಷಾ’ (ಬೇಂದ್ರೆ), ಡಾ. ಕುಲಕರ್ಣಿ ‘ನಾ ಸಂತೆಗೆ ಹೋಗಿವ್ನಿ’ (ಆನಂದಕಂದ), ಬಾನಂದೂರು ಕೆಂಪಯ್ಯ ‘ಅಣ್ಣ ಬರಲಿಲ್ಲ ಯಾಕೊ ಕರಿಯಾಕ’ (ಆನಂದಕಂದ), ಎಂ.ಕೆ. ಜಯಶ್ರೀ ‘ಮೊದಲ ತಾಯ ಹಾಲ ಕುಡಿದು’ (ಬಿಎಂಶ್ರೀ) ಮಧುರವಾಗಿ ಹಾಡಿದರು. ಕೀಬೋರ್ಡ್‌ನಲ್ಲಿ ರಾಜೀವ್ ಜೋಯಿಸ್, ಕೊಳಲಿನಲ್ಲಿ ವಸಂತಕುಮಾರ್, ತಬಲದಲ್ಲಿ ಆರ್. ಲೋಕೇಶ್ ಮತ್ತು ರಿದಂ ಪ್ಯಾಡ್‌ನಲ್ಲಿ ವಾದಿ ಜಮಾವಣೆ ತುಂಬಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT