ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಡ್‌ಶೀಟ್‌ಗಾಗಿ ರೋಗಿಗಳ ಪರದಾಟ

Last Updated 18 ಫೆಬ್ರುವರಿ 2011, 9:10 IST
ಅಕ್ಷರ ಗಾತ್ರ

ಯಾದಗಿರಿ: ನೂರು ಹಾಸಿಗೆಯ ಆಸ್ಪತ್ರೆ ಇದೆ. ಹಾಸಿಗೆಗೆ ಒಂದರಂತೆ ಬೆಡ್ ಶೀಟ್‌ಗಳು ಇಲ್ಲ. ಒಡೆದು ಹೋದ ಕಿಟಕಿಗಳು, ಎಲ್ಲೆಂದರಲ್ಲಿ ಉಗುಳಿದ ಕಲೆಗಳು. ರೋಗಿಗಳನ್ನು ವಾಸಿ ಮಾಡ ಬೇಕಾದ ಆಸ್ಪತ್ರೆಯೇ ಅನಾರೋಗ್ಯ ಪೀಡಿತವಾಗಿದೆ. ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳು ನೀಡುವ ದೂರುಗಳಿವು. ಆದರೆ ಕೇಳಿಸಿಕೊಳ್ಳುವ ಕಿವಿಗಳಿದ್ದರೂ, ಅದಕ್ಕೆ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ಮಾತ್ರ ವಿಪರ್ಯಾಸದ ಸಂಗತಿ. ನಿತ್ಯ ಈ ಆಸ್ಪತ್ರೆಗೆ ನೂರಾರು ರೋಗಿಗಳು ಬರುತ್ತಲೇ ಇದ್ದಾರೆ. ಆದರೆ ರೋಗಿಗಳನ್ನು ಮಲಗಿಸುವ ಮಂಚಗಳನ್ನು ನೋಡಿದರಂತೂ ಮಲಗುವುದಿರಲಿ, ಕುಳಿತುಕೊಳ್ಳಲು ಮನಸ್ಸು ಬರುವುದಿಲ್ಲ.

ಗುರುವಾರ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಸಂಬಂಧಿಕರು ಆ ಕೋಣೆ, ಈ ಕೋಣೆ ಅಲೆದಾಡಿ ಸುಸ್ತಾದರು. ಮಂಚದ ಮೇಲೆ ಒಂದು ಬೆಡ್‌ಶೀಟ್ ಹಾಕಿ ಎಂದು ಗೋಗರೆದರೂ,ಪ್ರಯೋಜನ ಮಾತ್ರ ಆಗಲಿಲ್ಲ. “ಬೆಡ್‌ಶೀಟ್ ಇಟ್ಟಿರೋ ಕಪಾಟ್ ಕೀ ಎಲ್ಲೋ ಕಳದೈತಿ. ಹಿಂಗಾಗಿ ಹುಡಕ್ಲಾ ಕತ್ತಾರ ತಡಕೋರಿ. ಸಿಕ್ಕ ಕೂಡಲೇ ಬೆಡ್‌ಶೀಟ್ ಹಾಕ್ತೇವಿ” ಎನ್ನುವ ಉತ್ತರ ಆಸ್ಪತ್ರೆಯ ಸಿಬ್ಬಂದಿಗಳಿಂದ ಬರುತ್ತಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಒಳಗಾದ ಹತ್ತಾರು ಮಹಿಳೆಯರನ್ನು ವಾರ್ಡ್‌ಗಳಲ್ಲಿ ಭರ್ತಿ ಮಾಡಲಾಗಿದೆ.

ಆದರೆ ಈ ಮಹಿಳೆಯರು ಮಾತ್ರ ಬೆಡ್‌ಶೀಟ್‌ಗಳಿಲ್ಲದ ಬೆಡ್‌ಗಳ ಮೇಲೆ ಮಲಗುವುದು ಅನಿವಾರ್ಯವಾಗಿದೆ. ಇದರಿಂದ ರೋಸಿ ಹೋದ ರೋಗಿಗಳ ಸಂಬಂಧಿಕರು, ಆಸ್ಪತ್ರೆಯ ಸಿಬ್ಬಂದಿಗೆ ಹಿಡಿಶಾಪ ಹಾಕಿದ್ದೇ ಹಾಕಿದ್ದು. “ಮೂರ ದಿನಾ ಆತರಿ, ಇಲ್ಲಿ ಎಡ್ಮಿಟ್ ಆಗಿ. ಬೆಡ್‌ಶೀಟ್ ಹಾಕ್ರಿ ಅಂದ್ರ ಯಾರೂ ಕೇಳವಾಲ್ರು. ಕಿಡಕಿ ಗಾಜು ಒಡದಾವ್ರಿ. ರಾತ್ರಿ ಆತು ಅಂದ್ರ ಸೊಳ್ಳಿ ಕಾಟ ಸುರು ಆಗತೈತಿ. ಮಕ್ಕಳು ಮರಿ ಕರಕೊಂಡ ಹೆಂಗ ಇರಬೇಕ್ರಿ ಇಲ್ಲೇ” ಎಂದು ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯೊಬ್ಬರ ಪತಿ ಚಂದ್ರಕಾಂತ. ಇದೇ ರೀತಿ ಇನ್ನೂ ಹಲವಾರು ಸಂಬಂಧಿಕರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದುದು ಸಾಮಾನ್ಯವಾಗಿತ್ತು.

ನೂರು ಬೆಡ್‌ಶೀಟ್‌ಗಳೂ ಇಲ್ಲ:
ಆಸ್ಪತ್ರೆಯಲ್ಲಿ ಬೆಡ್‌ಶೀಟ್‌ಗಳೇ ಕಾಣುತ್ತಿಲ್ಲ ಏಕೆ ಎಂಬ ಪ್ರಶ್ನೆಗೆ ಸಿಬ್ಬಂದಿಗಳು ನೀಡಿದ ಉತ್ತರ ಒಂದು ರೀತಿಯಲ್ಲಿ ಆಶ್ಚರ್ಯಕರವಾಗಿದೆ. 100 ಹಾಸಿಗೆ ಈ ಆಸ್ಪತ್ರೆಯಲ್ಲಿ ನೂರು ಬೆಡ್‌ಶೀಟ್‌ಗಳೂ ಇಲ್ಲ ಎಂಬ ಮಾಹಿತಿಯನ್ನು ಸಿಬ್ಬಂದಿಗಳೇ ನೊಂದು ನೀಡುತ್ತಾರೆ. “ನೋಡ್ರಿ, ನಾವೂ ಬ್ಯಾರೆ ಕಡೆ ಹಾಸ್ಪಿಟಲ್‌ದಾಗ ಕೆಲಸ ಮಾಡೇ ಬಂದೇವಿ. 100 ಹಾಸಿಗೆ ಹಾಸ್ಪಿಟಲ್‌ದಾಗ 100 ಬೆಡ್‌ಶೀಟ್ ತೊಳೆದುಕ್ಕ ಹೋದ್ರ, 100 ಬೆಡ್‌ಶೀಟು ಹಾಸಿಗಿ ಮ್ಯಾಲ ಇರಬೇಕ್ರಿ. ಎಮರ್ಜೆನ್ಸಿ ಕೇಸ್ ಬಂದ್ರ ಅಂತ 100 ಬೆಡ್‌ಶೀಟ್ ಎಕ್ಸ್‌ಟ್ರಾ ಇಡಬೇಕು.

ಆದ್ರ, ಇಲ್ಲಿ ಹಾಸ್ಪಿಟಲ್ ನೋಡಿದ್ರ ಭಾಳ ಕೆಟ್ಟ ಅನಸತೈತಿ. 100 ಬೆಡ್‌ಶೀಟು ಇಲ್ರಿ. ಇನ್ನೇನ ಹೇಳೋನು ಹೇಳ್ರಿ” ಎಂದು ಹೆಸರು ಹೇಳಲು ಇಚ್ಚಿಸದ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಅಲವತ್ತು ಕೊಂಡರು. ಜಿಲ್ಲಾ ಆಸ್ಪತ್ರೆಯ ಸ್ವಚ್ಛತೆ, ಬೆಡ್‌ಶೀಟ್‌ಗಳ ಉಸ್ತುವಾರಿ ಸೇರಿದಂತೆ ಆಸ್ಪತ್ರೆಯ ವ್ಯವಸ್ಥೆಯನ್ನು ಗುತ್ತಿಗೆದಾರರಿಗೆ ನೀಡಲಾಗಿದೆ. ಆದರೆ ಗುತ್ತಿಗೆದಾರರು ಮಾತ್ರ ಇದಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬೆಡ್‌ಶೀಟ್‌ಗಳು ಇಲ್ಲದಿದ್ದರೂ, ರೋಗಿಗಳು ಮಲಗಿಕೊಂಡು ಹೋಗು ತ್ತಾರೆ ಎನ್ನುವ ತಾತ್ಸಾರ ಮಾಡು ತ್ತಿದ್ದಾರೆ ಎಂದು ರೋಗಿಗಳ ಸಂಬಂಧಿ ಕರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಬೆಡ್‌ಶೀಟ್‌ಗಳನ್ನು ತೊಳೆಯುವ ಸಿಬ್ಬಂದಿಗಳನ್ನು ಕೇಳಿದರೆ, ಗುತ್ತಿಗೆ ದಾರರು ಸರಿಯಾಗಿ ವೇತನ ನೀಡುವುದಿಲ್ಲ ಎಂದು ದೂರುತ್ತಾರೆ. ಹೀಗಾಗಿ ನಾವಾದರೂ ಏನು ಮಾಡಲು ಸಾಧ್ಯ ಎಂಬ ಪ್ರಶ್ನೆಯನ್ನು ಆಸ್ಪತ್ರೆಯಲ್ಲಿ ಕೆಲಸ ಮಾಡುವವರೇ ಮುಂದಿಡುತ್ತಾರೆ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಸ್ಪತ್ರೆಯ ಅವ್ಯವಸ್ಥೆ ಯನ್ನು ಕಣ್ಣಾರೆ ಕಂಡಿದ್ದಾರೆ. ರಸ್ತೆ ಯಂತಹ ಕೆಲಸಗಳು ಸ್ವಲ್ಪ ತಡ ವಾದರೂ ನಡೆದೀತು, ಜೀವದ ಪ್ರಶ್ನೆ ಇರುವ ಆಸ್ಪತ್ರೆಗಳ ಅಭಿವೃದ್ಧಿಗೆ ಆದಷ್ಟು ಬೇಗನೇ ಕ್ರಮ ಕೈಗೊಳ್ಳ ಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT