ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆದರಿಕೆ ಪ್ರಕರಣ:ಕ್ಯಾಮೆರಾದಲ್ಲಿ ಆರೋಪಿಗಳ ಚಿತ್ರ ಸೆರೆ

Last Updated 25 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಆಯುಕ್ತರ ಜಾಗೃತ ಕೋಶದ (ಟಿವಿಸಿಸಿ) ಮುಖ್ಯ ಎಂಜಿನಿಯರ್ ಎನ್. ದೇವರಾಜು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದ ಆರೇಳು ಮಂದಿಯನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.

ಟಿವಿಸಿಸಿ ಕಚೇರಿಯ ಹೊರಗಿನ ಸಿಸಿಟಿವಿ ಕ್ಯಾಮೆರಾಗೆ ಸೆರೆಸಿಕ್ಕಿರುವ ಆರೋಪಿಗಳು ತಮಗೆ ಬೆದರಿಕೆ ಹಾಕಿರುವವರೇ ಆಗಿದ್ದಾರೆ ಎಂಬುದನ್ನು ದೇವರಾಜು ಶುಕ್ರವಾರ ದೃಢಪಡಿಸಿದ್ದು, ಆರೇಳು ಮಂದಿ ಯುವಕರ ತಂಡದ ದೃಶ್ಯಾವಳಿಯನ್ನು ಸಿ.ಡಿ. ರೂಪದಲ್ಲಿ ವಿಶೇಷ ಆಯುಕ್ತರಿಗೆ ಸಲ್ಲಿಸಿ ಪ್ರಕರಣದ ತನಿಖೆಯನ್ನು ಬಿಎಂಟಿಎಫ್‌ಗೆ ಒಪ್ಪಿಸುವಂತೆ ಕೋರಿದ್ದಾರೆ.

`ಒಂದು ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಿದಲ್ಲಿ ನನಗೆ ಬೆದರಿಕೆ ಹಾಕಿದ ಮೂವರನ್ನು ಗುರುತಿಸಲು ಸಿದ್ಧ~ ಎಂದು ದೇವರಾಜು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.ಯಲಹಂಕ ವ್ಯಾಪ್ತಿಯ ಬೈರತಿ, ಬಾಗಲೂರು ಹಾಗೂ ಬಿಳಿಶಿವಾಲೆಯಲ್ಲಿ ಕೈಗೊಳ್ಳುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿಯ ಅಭಿವೃದ್ಧಿ ಹಕ್ಕುಗಳ ಹಸ್ತಾಂತರ (ಟಿಡಿಆರ್) ಪ್ರಕ್ರಿಯೆಗೆ ಸಂಬಂಧಿಸಿದ 3 ಕಡತಗಳನ್ನು ಪರಿಶೀಲಿಸಿದ ನಂತರ ತಮಗೆ ಅನುಕೂಲವಾಗುವ ರೀತಿಯಲ್ಲಿ ವರದಿ ಸಲ್ಲಿಸಬೇಕು ಎಂದು ಈ ಅನಾಮಧೇಯ ವ್ಯಕ್ತಿಗಳು ಇದೇ ತಿಂಗಳ 21ರಂದು ಟಿವಿಸಿಸಿ ಕಚೇರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮುಖ್ಯ ಎಂಜಿನಿಯರ್‌ಗೆ ಬೆದರಿಕೆ ಹಾಕಿದ್ದರು. ತಪ್ಪಿದಲ್ಲಿ ಟಿವಿಸಿಸಿ ಕಚೇರಿಗೆ ಬೆಂಕಿಯಿಡುವುದಾಗಿ ಬೆದರಿಕೆ ಹಾಕಿದ್ದರು.

`ನನಗೆ ಬೆದರಿಕೆ ಹಾಕಿದ ಯುವಕರು 25ರಿಂದ 30 ವರ್ಷ ವಯಸ್ಸಿನೊಳಗಿದ್ದಾರೆ. ಅವರು ಯಾರು ಎಂಬುದು ನನಗೆ ಗೊತ್ತಿಲ್ಲ. ಆರೇಳು ಮಂದಿಯಲ್ಲಿ ಮೂವರು ಬೆದರಿಕೆ ಹಾಕಿದರೆ, ಇನ್ನು ಮೂವರು ಅವರಿಗೆ ಬೆಂಬಲ ಕೊಡುವ ರೀತಿಯಲ್ಲಿ ಸುಮ್ಮನೆ ನಿಂತಿದ್ದರು. ಅನಾಮಧೇಯ ಯುವಕರು ಮೌಖಿಕವಾಗಿ ನನ್ನನ್ನು ಪ್ರಶ್ನಿಸಿದರೇ ಹೊರತು ಅವರ ಬಳಿ ಯಾವುದೇ ದಾಖಲೆ ಇರಲಿಲ್ಲ~ ಎಂದು ದೇವರಾಜು ತಿಳಿಸಿದರು.

ಬೈರತಿ, ಬಾಗಲೂರು ಹಾಗೂ ಬಿಳಿಶಿವಾಲೆಯಲ್ಲಿ ಕೈಗೊಳ್ಳುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿಗೆ ಸಂಬಂಧಿಸಿದ ಅಭಿವೃದ್ಧಿ ಹಕ್ಕುಗಳ ಹಸ್ತಾಂತರದ ಮೂರು ಕಡತಗಳನ್ನು ಪರಿಶೀಲಿಸಿರುವುದರಿಂದ ಮೇಲ್ನೋಟಕ್ಕೆ ಸಾಕಷ್ಟು ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಸ್ವಾಧೀನಪಡಿಸಿಕೊಂಡಿರುವ ಜಾಗ ಹಾಗೂ ಪರಿಹಾರದ ವಿವರಗಳನ್ನು ಕಡತದಲ್ಲಿ ಸರಿಯಾಗಿ ನಮೂದಿಸಿಲ್ಲ. ಅಲ್ಲದೆ, ಭಾರಿ ವ್ಯತ್ಯಾಸ ಹಾಗೂ ಲೋಪಗಳಿವೆ. ಇದರಿಂದ ಕೋಟ್ಯಂತರ ಅವ್ಯವಹಾರ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದರು.

ಈ ನಡುವೆ, ಅವ್ಯವಹಾರಕ್ಕೆ ಸಂಬಂಧಿಸಿದ ಕಾಮಗಾರಿಗಳ ಕಡತಗಳನ್ನೆಲ್ಲ ತನಿಖೆಗಾಗಿ ಟಿವಿಸಿಸಿಗೆ ಒಪ್ಪಿಸುತ್ತಿರುವುದರಿಂದ ಆಯುಕ್ತರು ಹಾಗೂ ವಿಶೇಷ ಆಯುಕ್ತರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡುವ ಉದ್ದೇಶದಿಂದಲೂ ಗುತ್ತಿಗೆದಾರರು ಟಿಡಿಆರ್ ಫಲಾನುಭವಿಗಳ ಹೆಸರಿನಲ್ಲಿ ಕೆಲವರನ್ನು ಟಿವಿಸಿಸಿ ಕಚೇರಿಗೆ ಕಳಿಸಿ ಬೆದರಿಕೆ ಹಾಕಿಸಿರಬಹುದು ಎಂದು ಪಾಲಿಕೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

               ರಕ್ಷಣೆ ನೀಡಲು ಸಿದ್ಧ: ಕೆ.ಆರ್. ನಿರಂಜನ್
`ಟಿವಿಸಿಸಿ ಮುಖ್ಯ ಎಂಜಿನಿಯರ್ ಎನ್. ದೇವರಾಜು ಪೊಲೀಸರ ರಕ್ಷಣೆ ಬಯಸಿದಲ್ಲಿ ಒದಗಿಸಲು ಸಿದ್ಧ~ ಎಂದು ಪಾಲಿಕೆ ವಿಶೇಷ ಆಯುಕ್ತ ಕೆ.ಆರ್. ನಿರಂಜನ್ ಭರವಸೆ ನೀಡಿದರು.

`ಸ್ಥಳ ಪರಿಶೀಲನೆ ನಡೆಸಲು ತೆರಳುವ ಸಂದರ್ಭದಲ್ಲಿ ಬಿಎಂಟಿಎಫ್ ಪೊಲೀಸರ ರಕ್ಷಣೆ ನೀಡಲಾಗುವುದು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಸಿಕ್ಕ ಆರೋಪಿಗಳ ದೃಶ್ಯಾವಳಿಗಳನ್ನು ವೀಕ್ಷಿಸಿದ ನಂತರ ಈ ಪ್ರಕರಣದ ತನಿಖೆಯನ್ನು ಬಿಎಂಟಿಎಫ್‌ಗೆ ವಹಿಸುವ ಬಗ್ಗೆ ಪರಿಶೀಲಿಸಲಾಗುವುದು~ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

`ಟಿವಿಸಿಸಿ ಮುಖ್ಯ ಎಂಜಿನಿಯರ್‌ಗೆ ಬೆದರಿಕೆ ಹಾಕಿದವರಲ್ಲಿ ರಸ್ತೆ ವಿಸ್ತರಣೆಗೆ ಜಾಗ ನೀಡಿದ ಮಾಲೀಕರು ಹಾಗೂ ಮಧ್ಯವರ್ತಿಗಳು ಕೂಡ ಇದ್ದರೂ ತಳ್ಳಿ ಹಾಕುವಂತಿಲ್ಲ. ಆದರೂ, ಇದೊಂದು ಅತ್ಯಂತ ಗಂಭೀರ ಪ್ರಕರಣವಾಗಿರುವುದರಿಂದ ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT