ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನು ನೋವು ಕಾರಣ ಹಲವು

Last Updated 26 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ತಲೆನೋವಿನಂತೆ ಅತಿ ಸಾಮಾನ್ಯವಾಗಿ ಕಂಡುಬರುವ ಮತ್ತೊಂದು ತೊಂದರೆ ಎಂದರೆ ಬೆನ್ನು ನೋವು. ಕುತ್ತಿಗೆಯ ಹಿಂಬದಿಯೂ ಬೆನ್ನ ಭಾಗವೇ ಆದರೂ, ಹೆಚ್ಚಾಗಿ ಬೆನ್ನು ನೋವು ಎನ್ನುವಾಗ ಕೆಳ ಬೆನ್ನು ಅಥವಾ ಸೊಂಟದ ಭಾಗವನ್ನು ಉದ್ದೇಶಿಸಿ ಹೇಳುತ್ತೇವೆ. ಕೆಳ ಬೆನ್ನು/ ನಡು ಅಥವಾ ಸೊಂಟದ ಬೇನೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುವ ಯತ್ನ ಇಲ್ಲಿದೆ.

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಮ್ಮೆಯಾದರೂ ಬೆನ್ನು ನೋವು ಕಂಡುಬರುತ್ತದೆ. ಇಂತಹವರ ಸಂಖ್ಯೆ ಈಗೀಗ ಹೆಚ್ಚುತ್ತಿದೆ. ಏರುತ್ತಿರುವ ಬೊಜ್ಜು ಮತ್ತು ದೇಹಕ್ಕೆ ವ್ಯಾಯಾಮ ನೀಡದೆ ಗಂಟೆಗಟ್ಟಲೆ ಕುಳಿತೇ ಕೆಲಸ ಮಾಡುವುದು ಇದಕ್ಕೆ ಕಾರಣ. ಇವುಗಳಿಂದ ಬೆನ್ನು ಹುರಿಯ ಸಹಜ ರಚನೆಯಲ್ಲಿ ವ್ಯತ್ಯಾಸ ತೋರಿ, ನೋವುಂಟಾಗುವ ಸಂಭವ ಹೆಚ್ಚು.

ಕೆಳ ಬೆನ್ನು ನೋವು ಸಾಮಾನ್ಯವಾಗಿ ಆಟವಾಡುವಾಗ, ಬೊಜ್ಜಿದ್ದವರಲ್ಲಿ, ನಿಷ್ಕ್ರಿಯರಾಗಿದ್ದಾಗ, ಒತ್ತಡ ಅಥವಾ ಆರ್ತ್ರೈಟಿಸ್‌ನಿಂದ ಬರುತ್ತದೆ. ಸಾಮಾನ್ಯವಾಗಿ ಒಂದು ಅಥವಾ ಕೆಲವು ವಾರಗಳಲ್ಲಿ ನೋವು ಗುಣ ಹೊಂದುತ್ತದೆ. ಆಗಲೂ ಸರಿಯಾಗದಿದ್ದರೆ ವೈದ್ಯರ ಸಲಹೆ ಮತ್ತು ಕೆಲ ಪರೀಕ್ಷೆಗಳ ಅಗತ್ಯ ಇರುತ್ತದೆ. ಕಶೇರುವಿನಲ್ಲಿ 30ಕ್ಕೂ ಹೆಚ್ಚು ಬೆನ್ನು ಮೂಳೆಗಳು ಒಂದರ ಮೇಲೊಂದು ಕುಳಿತು ನಮ್ಮ ದೇಹದ ಭಾರವನ್ನು ಹೊರಲು ಸಹಾಯ ಮಾಡುತ್ತಿರುತ್ತವೆ. ಅವುಗಳ ಮಧ್ಯೆ ಡಿಸ್ಕ್ ಎಂಬ ಮೆತ್ತನೆಯ ವಸ್ತು ಇರುತ್ತದೆ. ಇದು ಬೆನ್ನು ಬಗ್ಗಿ ಏಳುವಾಗ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ. ಈ ಕಶೇರುವಿನ ಮಧ್ಯೆ ಮೆದುಳಿನಿಂದ ಹೊರಟ ದೇಹದ ನರಮಂಡಲದ ಅತಿ ಮುಖ್ಯ ಅಂಗವಾದ ಬೆನ್ನು ಹುರಿ (ಸ್ಪೈನಲ್ ಕಾರ್ಡ್) ಇರುತ್ತದೆ. ನೋವು ಕಡಿಮೆಯಾಗದಿದ್ದರೆ ಈ ಅಂಗಕ್ಕೇನಾದರೂ ತೊಂದರೆ ಅಥವಾ ಒತ್ತಡ ಬೀಳುತ್ತಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕಾಗುತ್ತದೆ.

ನಮಗೆ ವಯಸ್ಸಾದಂತೆ ಮೂಳೆ ಸವೆಯ ತೊಡಗುತ್ತದೆ. ಅದನ್ನು ಹಿಡಿದಿಡುವ ಪೇಶಿಗಳು ದುರ್ಬಲಗೊಳ್ಳುತ್ತವೆ. ಡಿಸ್ಕ್‌ನಲ್ಲಿರುವ ನೀರಿನಂಶ ಕಮ್ಮಿಯಾಗುತ್ತದೆ ಹಾಗೂ ಅದರ ಆಕಾರ ಚಿಕ್ಕದಾಗಬಹುದು. ಅದರ ಹತ್ತಿಯಂತಹ ಗುಣ ಕಡಿಮೆಯಾಗುತ್ತದೆ. ಹೆಚ್ಚಾಗಿ ಮುಂದೆ ಬಗ್ಗಿ ಏನಾದರೂ ಭಾರ ಎತ್ತಿದರೆ ಅಥವಾ ದೂರವಿರುವ ವಸ್ತುವನ್ನು ಬಾಗಿ ಎಳೆದು ತೆಗೆಯುವಾಗ ಬೆನ್ನ ಮೇಲೆ ಒತ್ತಡ ಹೆಚ್ಚಾಗಿ ಮಾಂಸ ಪೇಶಿಗಳಲ್ಲಿ ಬಿಗಿತ ಬರುತ್ತದೆ. ಬೊಜ್ಜು, ಗರ್ಭಾವಸ್ಥೆ, ಧೂಮಪಾನ, ಋತು ನಿವೃತ್ತಿ ಸಮಯದಲ್ಲಾಗುವ ಮೂಳೆ ಸವಕಲು, ಮಾನಸಿಕ ಒತ್ತಡ, ಬೆನ್ನನ್ನು ವಕ್ರವಾಗಿ ಇಟ್ಟುಕೊಳ್ಳುವುದು ಇತ್ಯಾದಿಗಳಿಂದ ತೊಂದರೆ ಹೆಚ್ಚುತ್ತದೆ.

ಈ ನೋವಿನೊಂದಿಗೆ, ಜ್ವರ ಅಥವಾ ಮಲಮೂತ್ರ ವಿಸರ್ಜನೆಯ ಅನಿಯಂತ್ರತೆ, ಕೆಮ್ಮಿದಾಗ ಹೆಚ್ಚುವ ನೋವು, ಕಾಲುಗಳ ಬಲಹೀನತೆ ಮುಂತಾದವು ಕಂಡು ಬಂದರೆ ತುರ್ತಾಗಿ ವೈದ್ಯರನ್ನು ಕಾಣಬೇಕು. ಇವು ಗಂಭೀರ ಕಾರಣಗಳಿಂದ ಉಂಟಾಗುತ್ತವೆ. ಅಗತ್ಯವಿದ್ದಲ್ಲಿ ಎಕ್ಸ್‌ರೇ, ಎಂ.ಆರ್. ಐ., ರಕ್ತ ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ.

ಚಿಕಿತ್ಸೆ ಹೀಗೆ
ಶೇ 95ರಷ್ಟು ಸಂದರ್ಭಗಳಲ್ಲಿ ಬೆನ್ನು ನೋವು ಕೇವಲ ವಿಶ್ರಾಂತಿ ಮತ್ತು ಕೆಲ ಔಷಧಿಗಳ ಸಹಾಯದಿಂದ ಸರಿ ಹೋಗುತ್ತದೆ. ವಿಶ್ರಾಂತಿ ಎಂದರೆ ಕುಳಿತು ಟಿ.ವಿ. ನೋಡುವುದಲ್ಲ. ಮುಖ್ಯವಾಗಿ ಮುಂದೆ ಬಗ್ಗಿ ಭಾರ ಎತ್ತಬಾರದು. ದಿನದ ಹೆಚ್ಚಿನ ಭಾಗ ಅಂಗಾತ ಮಲಗಿರಬೇಕು. ಡಿಸ್ಕ್ ತೊಂದರೆಗಳಿದ್ದಲ್ಲಿ ಅಭ್ಯಂಗ, ಕಟಿವಸ್ತಿ ಮತ್ತು ಔಷಧಿಗಳು ಸಹಾಯಕ. ಮೂರು ವಾರ ಕಳೆದರೂ ಬೆನ್ನು ನೋವು ಕಡಿಮೆಯಾಗದಿದ್ದರೆ ಅಥವಾ ಕಾಲು ಜೋಮು ಹಿಡಿಯುತ್ತಿದ್ದರೆ ಹೆಚ್ಚಿನ ಪರೀಕ್ಷೆ ಹಾಗೂ ಚಿಕಿತ್ಸೆಯ ಅಗತ್ಯ ಇರುತ್ತದೆ.

ಬೆನ್ನು ನೋವಿನಲ್ಲಿ ಅತಿ ಮುಖ್ಯವಾದ ಪಾತ್ರ ವ್ಯಾಯಾಮದ್ದು. ಹೆಚ್ಚಿನವರು ನೋವು ಗುಣವಾದ ಮೇಲೆ ಸ್ವಲ್ಪ ದಿವಸದಲ್ಲೇ ವ್ಯಾಯಾಮವನ್ನು ಮರೆತುಬಿಡುತ್ತಾರೆ. ಇದರಿಂದ ಪುನಃ ಪುನಃ ಬಳಲುವ ಸಾಧ್ಯತೆ ಹೆಚ್ಚು. ಹಾಗಾಗಿ ವ್ಯಾಯಾಮವನ್ನು ಸುತಾರಾಂ ಬಿಡಬಾರದು. ಮುಖ್ಯವಾಗಿ ಕೆಳ ಬೆನ್ನಿಗೆ ಸಹಕಾರಿಯಾದ ಐದು ವ್ಯಾಯಾಮಗಳನ್ನು (ಬಾಕ್ಸ್‌ನಲ್ಲಿ ಕೊಡಲಾಗಿದೆ) ಮಾಡಬೇಕು.

ಹಾಗೆಯೇ ಎಂದೂ ಬೆನ್ನು ಬಗ್ಗಿಸಿ ಭಾರವನ್ನು ಎತ್ತಬಾರದು. ಭಾರ ಎತ್ತುವ ಸಂದರ್ಭದಲ್ಲಿ ಕುಳಿತು (ಮಂಡಿಯನ್ನು ಮಡಚಿ) ಎತ್ತಬೇಕು.

ಮುಖ್ಯ ಕಾರಣ
1. ಮೂಳೆಯ ಸವೆತ
2. ಬೆನ್ನುಹುರಿಯ ಮೇಲೆ ಅತಿ ಒತ್ತಡ
3. ರುಮಟೋಯಿಡ್ ಮುಂತಾದ ಸಂಧಿವಾತಗಳು
4. ಬೆನ್ನು ಮೂಳೆಗಳ ಮಧ್ಯೆ ಇರುವ ಡಿಸ್ಕ್‌ಗಳ ತೊಂದರೆ
5. ಬೆನ್ನುಹುರಿಯ (ಸ್ಪೈನಲ್ ಕಾರ್ಡ್) ತೊಂದರೆ
6. ಬೆನ್ನು ಹುರಿ ಇರುವ ಸುರಂಗ ಚಿಕ್ಕದಾಗುವಿಕೆ
7. ಮಾಂಸಪೇಶಿಗಳ ಬಿಗಿತದಂತಹ ತೊಂದರೆ
8. ವಯೋ ಸಹಜ ವಾತ (ಆರ್ತ್ರೈಟಿಸ್)

ನೆನಪಿಡಿ...
1. ಕೂರುವಾಗ, ನಿಲ್ಲುವಾಗ, ಮಲಗುವಾಗ ದೇಹವನ್ನು ನೇರವಾಗಿ ಸರಿಯಾಗಿ ಇಟ್ಟುಕೊಳ್ಳಬೇಕು.
2. ಅತಿ ಮೆತ್ತಗಿನ ಹಾಸಿಗೆ ಬೇಡ.
3. ಆದಷ್ಟೂ ಅತಿ ಎತ್ತರದ ಚಪ್ಪಲಿಗಳನ್ನು ಧರಿಸದಿರಿ.
4. ಸೊಂಟದ ಹತ್ತಿರ ಬೊಜ್ಜು ಸೇರದಂತೆ ಜಾಗರೂಕರಾಗಿರಿ. ಊಟದಲ್ಲಿ ಸಮತೋಲನ ಕಾಪಾಡಿ. ನಿಯಮಿತ ವ್ಯಾಯಾಮದಲ್ಲಿ ತೊಡಗಿಕೊಳ್ಳಿ.
5. ಮೂಳೆ ಸವಕಲಾಗದಂತೆ ಕ್ಯಾಲ್ಷಿಯಂ, ವಿಟಮಿನ್ `ಡಿ' ಮುಂತಾದುವುಗಳ ಪ್ರಮಾಣ ಗಮನದಲ್ಲಿರಲಿ.

ವ್ಯಾಯಾಮ ಮಾಡಿ ನೋವಿಂದ ಪಾರಾಗಿ
1. ಅಂಗಾತ ಮಲಗಿ ಒಂದೊಂದಾಗಿ ಕಾಲನ್ನು ನೇರವಾಗಿ (ಮಂಡಿ ಮಡಚದೆ) ಒಂದು ಅಡಿಯಷ್ಟು ಎತ್ತಿ ಹತ್ತು ಸಲ ಎಣಿಸಿ ಕೆಳಗಿಡಬೇಕು.

2. ಕಾಲುಗಳೆರಡನ್ನೂ ಮಡಚಿ ಬೆನ್ನು ಮತ್ತು ನಿತಂಬವನ್ನು ಎತ್ತಿ ಹಿಡಿದು ಹತ್ತು ಎಣಿಸಬೇಕು.

3. ಎರಡೂ ಕಾಲನ್ನು ಮಡಚಿ ಕೈಯ್ಯಲ್ಲಿ ಹಿಡಿದು ಮಂಡಿಗೆ ಮೂಗು ತಾಗಿಸಲು ಯತ್ನಿಸಬೇಕು.

4. ಬೋರಲು ಮಲಗಿ, ಮೊದಲನೆಯ ವ್ಯಾಯಾಮದಂತೆ ಕಾಲನ್ನು ನೇರವಾಗಿ ಒಂದು ಅಡಿ ಮೇಲೆತ್ತಿ ಹಿಡಿದು ಬಿಡಬೇಕು.

5. ದೇಹದ ಮುಂಭಾಗವನ್ನು ಎತ್ತಿ ಮೇಲಕ್ಕೆ ನೋಡಬೇಕು.

ಈ ವ್ಯಾಯಾಮಗಳನ್ನು ನಿರಂತರವಾಗಿ ಮಾಡಿದಲ್ಲಿ ಕೆಳ ಬೆನ್ನು ನೋವನ್ನು ಹತೋಟಿಗೆ ತರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT