ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನುಹುರಿ ಅಂಗವಿಕಲರಿಗೆ ಸಿಗದ ನೆರವು!

ರಾಜ್ಯದಲ್ಲಿ ಆರೋಗ್ಯ ರಕ್ಷಾ ಸಮಿತಿಗಳು ನಿಷ್ಕ್ರಿಯ
Last Updated 6 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳ `ಆರೋಗ್ಯ ರಕ್ಷಾ ಸಮಿತಿಗಳು' ನಿಷ್ಕ್ರಿಯಗೊಂಡಿರುವ ಕಾರಣ ಬೆನ್ನುಹುರಿ ಅಂಗವಿಕಲರಿಗೆ ಚಿಕಿತ್ಸೆ ಮತ್ತು ಪರಿಕರಗಳ  ನೆರವು ದೊರೆಯದಂತಾಗಿದೆ.

ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಎಂಬ ಖಾಸಗಿ ಸಂಸ್ಥೆ ನಡೆಸಿರುವ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 11 ಸಾವಿರ ಬೆನ್ನುಹುರಿ ಅಂಗವಿಕಲರಿದ್ದಾರೆ. ಬೆನ್ನುಹುರಿ ಅಪಘಾತದ ನಂತರ ವ್ಯಕ್ತಿ ಎರಡೂ ಕಾಲುಗಳು ಬಲಹೀನವಾಗುತ್ತವೆ. ಕ್ರಮೇಣ ಎರಡೂ ಕೈಗಳು ಸಾಮರ್ಥ್ಯ ಕಳೆದುಕೊಳ್ಳುತ್ತವೆ. ಇದಲ್ಲದೇ ವ್ಯಕ್ತಿ ಮಲ- ಮೂತ್ರ ಹತೋಟಿ ಶಕ್ತಿ ಕಳೆದುಕೊಳ್ಳುತ್ತಾನೆ. ಅಂತಿಮವಾಗಿ ಸ್ಪರ್ಶಜ್ಞಾನವೂ ಪೂರ್ಣವಾಗಿ ಸ್ಥಗಿತವಾಗುತ್ತದೆ. ಇದರಿಂದಾಗಿ ರೋಗಿಗಳು ಜೀವಂತ ಶವವಾಗಿ ಪರಾವಲಂಬಿಯಾಗಿ ಮಾನಸಿಕ ಖಿನ್ನತೆಯಿಂದ ನರಳುತ್ತಾರೆ.

ಇಂತಹವರಿಗೆ ಚಿಕಿತ್ಸೆ, ಪೂರಕ ಪರಿಕರ ಕಲ್ಪಿಸುವ ಜವಾಬ್ದಾರಿ ನಿಭಾಯಿಸಲು ಸರ್ಕಾರ ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ರಕ್ಷಾ ಸಮಿತಿಗಳನ್ನು ರಚಿಸಿದೆ. ಪ್ರತಿ ವರ್ಷ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆ (ಎನ್‌ಆರ್‌ಎಚ್‌ಎಂ) ಅನುದಾನದಲ್ಲಿ ಶೇ 3ರಷ್ಟನ್ನು ಈ ಸಮಿತಿಗಳಿಗೆ ಮೀಸಲಿಡುತ್ತಾ ಬಂದಿದೆ. ಒಂದು ಸಮಿತಿಗೆ ವಾರ್ಷಿಕ 2 ಲಕ್ಷ ರೂಪಾಯಿ ನೀಡಲಾಗುತ್ತದೆ. ಆಸ್ಪತ್ರೆ ನಿರ್ವಹಣಾ ವೆಚ್ಚ ಸೇರಿದಂತೆ ಬೆನ್ನುಹುರಿ ಅಂಗವಿಕಲರಿಗೆ ಚಿಕಿತ್ಸೆ, ಪರಿಕರ ನೆರವು ನೀಡುವ ಹೊಣೆ ಆರೋಗ್ಯ ರಕ್ಷಾ ಸಮಿತಿಯದ್ದಾಗಿದೆ. ಆದರೆ, ಸಮಿತಿಗಳು ಕೋರಂ ಕೊರತೆಯಿಂದಾಗಿ ಸಭೆಗಳನ್ನೇ ನಡೆಸದೇ ನಿಷ್ಕ್ರಿಯಗೊಂಡಿವೆ. ಹೀಗಾಗಿ ಬೆನ್ನುಹುರಿ ಅಂಗವಿಕಲರಿಗೆ ಚಿಕಿತ್ಸೆ, ಆರೈಕೆ ಮಾಡುವವರಿಲ್ಲದೇ ಅನಾಥರಾಗುತ್ತಿದ್ದಾರೆ ಎಂಬುದಾಗಿ ಇಲಾಖೆ ಮೂಲಗಳು `ಪ್ರಜಾವಾಣಿ' ಮಾಹಿತಿ ನೀಡಿವೆ.

`ನೀರಿನ ಅಥವಾ ಗಾಳಿ ಹಾಸಿಗೆ, ಗಾಳಿ ದಿಂಬು, ಗಾಲಿ ಕುರ್ಚಿ, ಕಮೋಡ್, ಕೈಚೀಲ, ಸೋಂಕು ನಿರೋಧಕ ಔಷಧಿ ಹಾಗೂ ದ್ರಾವಣ, ಅನೆಸ್ತೆಟಿಕ್ ಜೆಲ್ಲಿ, ರೋಗ ನಿರೋಧಕ ಮಾತ್ರೆಗಳು ಹಾಗೂ ಅವಶ್ಯಕತೆಗೆ ತಕ್ಕಂತೆ ಇತರ ಪರಿಕರ ಸೌಲಭ್ಯ ಕಲ್ಪಿಸಲು ಜಿಲ್ಲಾ ಆರೋಗ್ಯ ಇಲಾಖೆಗೆ ಸರ್ಕಾರ ಸೂಚಿಸಿದೆ.

ಇದರ ಜತೆಗೆ ಜಿಲ್ಲಾಸ್ಪತ್ರೆಗಳಲ್ಲಿ ಅವರಿಗೆ ದೈಹಿಕ ವ್ಯಾಯಾಮ ಮತ್ತು ಆಪ್ತಸಮಾಲೋಚನೆ ನಡೆಸುವ ಮೂಲಕ ಪುನಶ್ಚೇತನ ಕಾರ್ಯ ಮಾಡಬೇಕು.

ಒಂದು ವೇಳೆ ಸಮಿತಿಯ ಹಣ ಕೊರತೆಯಾದರೆ `ಕರ್ನಾಟಕ ಡ್ರಗ್ಸ್ ಅಂಡ್ ಲಾಜಿಸ್ಟಿಕ್ ವೇರ್‌ಹೌಸ್ ಸೊಸೈಟಿ'ಯಿಂದ ಪೂರೈಕೆಯಾಗುತ್ತಿರುವ ಔಷಧಿ, ಪರಿಕರ ಉಪಯೋಗಿಸುವಂತೆಯೂ ಸರ್ಕಾರ ಆದೇಶಿಸಿದೆ. ಆದರೆ, ಸಮಿತಿಗಳ ನಿರ್ಲಕ್ಷ್ಯದಿಂದಾಗಿ ಈ ಸೌಲಭ್ಯಗಳು ಮರೀಚಿಕೆಯಾಗಿವೆ' ಎನ್ನುತ್ತಾರೆ ಬೆನ್ನುಹುರಿ ಅಂಗವಿಕಲರಾದ ನಗರದ ನಿಟ್ಟುವಳ್ಳಿಯ ದಿವ್ಯವಾಣಿ, ಪರಸಪ್ಪ, ಶಂಕ್ರನಾಯ್ಕ.



ಬೆನ್ನುಹುರಿ ಚಿಕಿತ್ಸಾ ಘಟಕ
ಬೆನ್ನುಹುರಿ ಅಂಗವಿಕಲರಿಗೆ ಕೇವಲ ಚಿಕಿತ್ಸೆ ನೀಡಿದರೆ ಸಾಲದು. ಅವರ ಸಮಸ್ತ ಪುನಶ್ಚೇತನ ಆಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಬೆಂಗಳೂರಿನಲ್ಲಿ `ಬೆನ್ನುಹುರಿ ಚಿಕಿತ್ಸಾ ಕೇಂದ್ರ' ಸ್ಥಾಪನೆಗೆ ಯೋಜನೆ ರೂಪಿಸಿದ್ದು, ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದೆ. ಕೇಂದ್ರ ಆರಂಭವಾದರೆ ರಾಜ್ಯದಲ್ಲಿನ ಅಂಗವಿಕಲರಿಗೆ ಅನುಕೂಲವಾಗಲಿದೆ. `ಆರೋಗ್ಯ ಕ್ಷಾ ಸಮಿತಿ' ನಿಷ್ಕ್ರಿಯತೆ ಗಮನಕ್ಕೆ ಬಂದಿದೆ. ಇದರಲ್ಲಿ ಸ್ಥಳೀಯರು ಪದಾಧಿಕಾರಿಗಳಾಗಿರುವುದರಿಂದ ಕೋರಂ ಸಮಸ್ಯೆಯಿಂದಾಗಿ ಅವು ನಿಷ್ಕ್ರಿಯಗೊಂಡಿವೆ. ಆದರೆ, ಅದು ತಪ್ಪು. ಸಮಿತಿಗಳು ಚುರುಕಾಗುವಂತೆ ಕ್ರಮಕೈಗೊಳ್ಳುತ್ತೇನೆ.
- ಡಾ.ವಿ.ಬಿ. ಪಾಟೀಲ್, ಆಯುಕ್ತರು, ಆರೋಗ್ಯ ಇಲಾಖೆ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT