ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನುಹುರಿಯಲ್ಲಿದೆ ಮೈಗ್ರೇನ್ ಮೂಲ

Last Updated 10 ಜೂನ್ 2011, 19:30 IST
ಅಕ್ಷರ ಗಾತ್ರ

ಆಧುನಿಕ ಬದುಕಿನ ಬಗೆ, ಬವಣೆಗಳೇ ಹಾಗೆ. ಎಲ್ಲೆಲ್ಲೂ ಜೀವನಶೈಲಿಯ ಅವಿಭಾಜ್ಯ ಅಂಗವೇ ಆಗಿಹೋಗಿರುವ ವೇಗ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರಿಗಿಂತ ಮುಂದಿರಲು ವಿಶ್ರಾಂತಿ ಉಪೇಕ್ಷಿಸಿದ ನಿರಂತರ ದುಡಿಮೆ. ಅದರಿಂದ ಉದ್ಭವಿಸುವ ಒತ್ತಡ, ಅನಿಯಮಿತ ಆಹಾರ ಸೇವನೆ ಹಾಗೂ ಅನಾರೋಗ್ಯಕರ ಜಂಕ್‌ಫುಡ್ ಸೇವನೆ, ಖಾಸಗಿ ಬದುಕಿನಲ್ಲಿ  ಹೊಂದಾಣಿಕೆ ಇಲ್ಲದಿರುವಿಕೆ ಇವುಗಳು ಬಳುವಳಿಯಾಗಿ ಕರುಣಿಸಿರುವ ಅನೇಕ ಮನೋದೈಹಿಕ ಸಮಸ್ಯೆಗಳಲ್ಲಿ ಅದು ಪ್ರಮುಖ ಸ್ಥಾನದಲ್ಲಿದೆ.

ಅದು ಮೈಗ್ರೇನ್ - ಅರೆ ತಲೆಶೂಲೆ...!

ತಲೆ ಇರುವವರೆಗೂ ತಲೆನೋವು ತಪ್ಪದು, ಮೂಗಿರುವವರೆಗೂ ನೆಗಡಿ ತಪ್ಪದು ಎಂಬ ಮಾತೊಂದಿದೆ. ಅಂತೆಯೇ ತಲೆ ಇರುವವರೆಗೆ ತಲೆನೋವು ತಪ್ಪಿದ್ದಲ್ಲ ಎಂಬ ಮಾತೂ ಅಷ್ಟೇ ನಿಜ. ಆದರೆ, ಎಲ್ಲ ತಲೆಶೂಲೆಗಳೂ ಮೈಗ್ರೇನ್ ಅಲ್ಲ ಎಂಬುದು ಅವಶ್ಯ ಗಮನಿಸಬೇಕಾದ ಅಂಶ. ಏಕೆಂದರೆ ತಲೆನೋವು, ತಲೆ ಸಿಡಿತಗಳು ಎಲ್ಲರನ್ನೂ ಒಂದಿಲ್ಲೊಂದು ಸಮಯದಲ್ಲಿ ಕಾಡುವ ಸಾಮಾನ್ಯ ಸಮಸ್ಯೆಗಳು. ಚಿಂತೆ, ಒತ್ತಡ, ಮಿತಿಮೀರಿದ ಕೆಲಸ, ಶಬ್ದಮಾಲಿನ್ಯಗಳಿಂದಾಗಿ ತಲೆಶೂಲೆ ಉಂಟಾದರೂ, ಆ ಕಾರಣಗಳು ಮತ್ತು ಸನ್ನಿವೇಶಗಳು ದೂರವಾದೊಡನೆ ತಲೆನೋವು ಹೊರಟುಹೋಗುತ್ತದೆ. ಆದರೆ ಮೈಗ್ರೇನ್ ಮಾತ್ರ ಅರೆಗಳಿಗೆ ಇದ್ದು ಹೋಗುವ ಅತಿಥಿಯಂತಿರದೆ ಅಲ್ಲೇ ಉಳಿದು ಉಪಟಳ ನೀಡುವ ನೆಂಟನಂತೆ. ಅದು ಕಂಗೆಡಿಸಿ ಕಾಡುತ್ತದೆ. ಏಕಾಗ್ರತೆಯನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ.

ಮೈಗ್ರೇನ್ ಲಕ್ಷಣಗಳು: ಸಾಮಾನ್ಯ ತಲೆಶೂಲೆಗಳಿಗಿಂತ ತುಸು ಭಿನ್ನವಾಗಿ, ತಲೆಯ ಒಂದು ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅತಿ ಬಿಸಿಲು ಮತ್ತು ಶಬ್ದ ಹೆಚ್ಚಾದಾಗ ಉಲ್ಬಣಿಸುವ ನೋವು. ಕೆಲವೊಮ್ಮೆ ಹೊಟ್ಟೆ ತೊಳಸಿದಂತಾಗಿ ವಾಂತಿಯಾಗಿ, ರೋಗಿಯು ಶಬ್ದ, ಸೆಖೆ, ಕೆಲಸ, ಒತ್ತಡ ಎಲ್ಲದರಿಂದಲೂ ದೂರವಿರಲು ಬಯಸುತ್ತಾನೆ.

ಏಕೆಂದರೆ, ಮೈಗ್ರೇನ್ ಆಕ್ರಮಣ ಮಾಡಿದಾಗ ವ್ಯಕ್ತಿಯ ಉತ್ಸಾಹ, ಕ್ರಿಯಾಶೀಲತೆಗಳು ಚದುರಿಹೋಗಿ, ವ್ಯಕ್ತಿಯು ಯಾವುದೇ ಕೆಲಸದತ್ತ ಚಿತ್ತ ಕೇಂದ್ರೀಕರಿಸಿ ತೊಡಗಿಸಿಕೊಳ್ಳುವ ವ್ಯವಧಾನ ಕಳೆದುಕೊಂಡು ವ್ಯಗ್ರನೂ, ಚಂಚಲ ಚಿತ್ತನೂ ಆಗುತ್ತಾನೆ. ತಲೆನೋವು ಬಂದಾಕ್ಷಣ ಅಂಗಡಿಯಲ್ಲಿ ದೊರಕುವ ಮಾತ್ರೆ ನುಂಗಿ ನೀರು ಕುಡಿದರಾಯ್ತು ಎಂಬ ಧೋರಣೆ ಸರಿಯಲ್ಲ. ನೋವು ನಿವಾರಕ ಮಾತ್ರೆಗಳಿಂದ ಕೇವಲ ತಾತ್ಕಾಲಿಕ ಉಪಶಮನ ಸಾಧ್ಯವೇ ವಿನಃ ಅವು ರೋಗದ ಮೂಲಕ್ಕೆ ತಲುಪುವುದಿಲ್ಲ.

ಈ ದಿನಗಳಲ್ಲಿ ಮೈಗ್ರೇನ್‌ನಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಸಾಫ್ಟ್‌ವೇರ್ ಮತ್ತು ಕಾರ್ಪೋರೆಟ್ ವಲಯದ ಉದ್ದಿಮೆಗಳಲ್ಲಿನ ತೀವ್ರ ಸ್ಪರ್ಧೆಯ ಒತ್ತಡದ ಬದುಕಿನ ಉದ್ಯೋಗಿಗಳನ್ನು ಪ್ರಮುಖವಾಗಿ ಕಾಡುತ್ತಿದೆ ಎಂಬುದು ಇತ್ತೀಚಿನ ಸಮೀಕ್ಷೆಗಳಿಂದ ಕಂಡುಬರುತ್ತದೆ. ಅದರಲ್ಲಿಯೂ, ಪುರುಷರಿಗಿಂತ ಮಹಿಳೆಯರು ಮೈಗ್ರೇನ್‌ನಿಂದ ಬಳಲುವುದು ಹೆಚ್ಚು. ಋತುಚಕ್ರಕ್ಕೆ ಸಂಬಂಧಿಸಿದ ತೊಂದರೆಗಳು ಮತ್ತು ವೈಪರೀತ್ಯಗಳು ಮಹಿಳೆಯರಲ್ಲಿ ಅರೆತಲೆಶೂಲೆಯ ಹೆಚ್ಚಳಕ್ಕೆ ಕಾರಣವಾಗುತ್ತವೆ. ಇದು ಮಾತ್ರವಲ್ಲದೇ ಅಹಿತಕರ ಅಡ್ಡಪರಿಣಾಮಗಳನ್ನು ಉಂಟು ಮಾಡುವ ಔಷಧಗಳ ಸೇವನೆಯೂ ಮೈಗ್ರೇನ್‌ಗೆ ಕಾರಣವಾಗುತ್ತವೆ. ಈ ವಿಷಯವು ಅಮೆರಿಕದಲ್ಲಿರುವ ನ್ಯಾಷನಲ್ ಹೆಡ್‌ಏಕ್ ಫೌಂಡೇಷನ್ ಸಂಸ್ಥೆಯ ಮೂಲಕ ನಡೆಸಲಾದ ಇಂಟರಾಕ್ಟೀವ್ ಆನ್‌ಲೈನ್ ಸಮೀಕ್ಷೆಯಿಂದ ವಿದಿತವಾಗಿದೆ.

ಸ್ಪೈನಲ್ ಹೀಲಿಂಗ್: ವಿವಿಧ ಚಿಕಿತ್ಸಾ ಪದ್ಧತಿಗಳಲ್ಲಿ ವಿವಿಧ ಔಷಧೀಯ ಉಪಚಾರಗಳಿದ್ದರೂ ಹೋಮಿಯೋಪಥಿ ವೈದ್ಯ ಪದ್ಧತಿಯಲ್ಲಿ ಸ್ಪೈನಲ್ ಹೀಲಿಂಗ್  ಎಂದು ಕರೆಯಲ್ಪಡುವ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯುಂಟು. ಇದರಲ್ಲಿ ವೈದ್ಯರು ಮೈಗ್ರೇನ್‌ಪೀಡಿತ ವ್ಯಕ್ತಿಯ ಬೆನ್ನುಹುರಿಯ ನಿರ್ದಿಷ್ಟ ಭಾಗಗಳ ಮೇಲೆ ಒತ್ತಡ ಹಾಕುತ್ತಾರೆ. ಇದರಿಂದ ನೋವು ಕ್ರಮೇಣ ಕರಗಿ ಆರಾಮ ಉಂಟಾಗುತ್ತದೆ. ಈ ಬಗೆಯ ಒತ್ತಡದಿಂದ ನರಮಂಡಲದ ಹಲವು ಭಾಗಗಳಲ್ಲಿ ಶೇಖರಿತವಾಗಿರುವ ನಕಾರಾತ್ಮಕ ನೆನಪುಗಳು ಬಿಡುಗಡೆ ಹೊಂದಿ, ನೋವು ತಾನೇತಾನಾಗಿ ಮಾಯವಾಗುತ್ತದೆ.

(ಲೇಖಕರ ಮೊಬೈಲ್:  9632921289)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT