ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಕೆ ಗಿಡ: ನೂರಾರು ಎಕರೆ ತಿರಸ್ಕೃತ

Last Updated 16 ಜನವರಿ 2012, 10:35 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಕೃಷಿ ವಿಶ್ವವಿದ್ಯಾಲಯವು 2010-11ರಲ್ಲಿ ಬಿಡುಗಡೆ ಮಾಡಿದ `ತೊಗರಿ-ಟಿಎಸ್-3ಆರ್~ ಬೀಜದ ಬೀಜೋತ್ಪಾದನೆಗೆ ರಾಜ್ಯ ಬೀಜ ನಿಗಮ ಮತ್ತು ಕೃಷಿ ವಿವಿ ಬೀಜ ಘಟಕದ ಮೂಲಕ ರೈತರ ಹೊಲ ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಕೈಗೊಂಡಿದೆ. ಆದರೆ  ಈ ವರ್ಷ ಬೀಜೋತ್ಪಾದನೆ ಕ್ಷೇತ್ರದಲ್ಲಿ ಬೆರಕೆಯ ಪ್ರಮಾಣ ಕಂಡು ಬಂದ ಹಿನ್ನೆಲೆಯ ಬಹುಪಾಲು ಕ್ಷೇತ್ರ ತಿರಸ್ಕೃರಿಸಲ್ಪಟ್ಟಿದ್ದು, ರೈತರಿಗೆ ಅನ್ಯಾಯವಾಗಿದೆ ಎಂದು ಹೈದರಾಬಾದ್ ಕರ್ನಾಟಕ ಬೀಜೋತ್ಪಾದಕರ ಸಂಘದ ರಾಯಚೂರು ಘಟಕದ ಅಧ್ಯಕ್ಷ ಎಸ್.ಎಂ ಸಿದ್ಧಾರೆಡ್ಡಿ ಹೇಳಿದ್ದಾರೆ.

ಈ ಬಗ್ಗೆ ರಾಜ್ಯ ಬೀಜ ನಿಗಮದ ಪ್ರಧಾನ ಕಾರ್ಯದರ್ಶಿ ಡಾ.ಸಂದೀಪ ದವೆ ಅವರಿಗೆ ಪತ್ರ ಬರೆದು ಬೀಜೋತ್ಪಾದಕರ ಸಮಸ್ಯೆ ವಿವರಿಸಿದ್ದಾರೆ.

ರಾಯಚೂರು ಕೃಷಿ ವಿವಿಯ ಗುಲ್ಬರ್ಗ ಸಂಶೋಧನಾ ಕೇಂದ್ರವು ತೊಗರಿ-ಟಿಎಸ್-3ಆರ್ ಹೊಸ ತಳಿ ಬಿಡುಗೆ ಮಾಡಿತು. 2010-11ನೇ ಸಾಲಿನಲ್ಲಿ ಈ ತಳಿಯ ಬೀಜ ಉತ್ತಮ ಇಳುವರಿ ಕೊಟ್ಟಿತ್ತು. ಈ ಜನಪ್ರಿಯ ಮತ್ತು ಯಶಸ್ಸಿನ ಹಿನ್ನೆಲೆಯಲ್ಲಿ ರಾಯಚೂರು ಕೃಷಿ ವಿವಿಯು ಕರ್ನಾಟಕ ರಾಜ್ಯ ಬೀಜ ನಿಗಮ ಮತ್ತು ರಾಯಚೂರು, ಗುಲ್ಬರ್ಗ ಜಿಲ್ಲೆಯಲ್ಲಿ ರೈತರ ಹೊಲದಲ್ಲಿ ಮತ್ತು ಕೃಷಿ ವಿವಿ ಸಂಶೋಧನಾ ಕೇಂದ್ರಗಳಲ್ಲಿ ಬೀಜೋತ್ಪಾನೆ ಕೈಗೊಂಡಿತ್ತು ಎಂದು ತಿಳಿಸಿದ್ದಾರೆ.

ಗುಲ್ಬರ್ಗ ಜಿಲ್ಲೆಯಲ್ಲಿ ತೊಗರಿ ಟಿಎಸ್-3ಆರ್ ಬೀಜೋತ್ಪಾದನೆಗೆ ತೆಗೆದುಕೊಂಡ ಕ್ಷೇತ್ರದಲ್ಲಿ ಬೆರಕೆಯ ಪ್ರಮಾಣ 15ರಿಂದ 20ರಷ್ಟಿದೆ ಎಂಬ ಕಾರಣ ನೀಡಿ ತಿರಸ್ಕರಿಸಿದೆ. ಅದೇ ರೀತಿ ರಾಯಚೂರು ಜಿಲ್ಲೆಯಲ್ಲಿ ಕೇವಲ ಮೂರು ರೈತರ ಕ್ಷೇತ್ರದಲ್ಲಿ ಸುಮಾರು 24 ಎಕರೆಯಲ್ಲಿ ಮಾತ್ರ ಪ್ರಮಾಣೀಕರಿಸಲಾಗಿದೆ. ಉಳಿದ ಕ್ಷೇತ್ರದಲ್ಲಿ ಬೆರಕೆಯ ಪ್ರಮಾಣ ಹೆಚ್ಚಾಗಿದೆ. ರೈತರು ಈ ಬೆರಕೆಯ ಗಿಡ ಕಿತ್ತಲು ಹಿಂಜರಿದ ಕಾರಣ ಈ ಜಿಲ್ಲೆಯಲ್ಲಿಯೂ  ಸಹ ಹೆಚ್ಚಿನ ಕ್ಷೇತ್ರ ತಿರಸ್ಕರಿಸ್ಪಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕೃಷಿ ವಿವಿ ಕುಲಪತಿಗಳು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಮತ್ತು ಕರ್ನಾಟಕ ಬೀಜ ನಿಗಮದ ಅಧಿಕಾರಿಗಳ ಜೊತೆ ಚರ್ಚಿಸಲಾಯಿತು. ರೈತರ ಮನವೊಲಿಸಿ ಬೆರಕೆಯ ಗಿಡ ಕಿತ್ತು ಹಾಕಿಸುವುದಾಗಿ ಭರವಸೆ ಕೊಡಲಾಯಿತು. ಆದರೆ, ಸಂಬಂಧಪಟ್ಟ ಆಡಳಿತ ವರ್ಗ ಸ್ಪಂದಿಸಲಿಲ್ಲ. ಬರಗಾಲ ಇದ್ದುದರಿಂದ ರೈತರೂ ಬೆರಕೆಯ ಗಿಡ ಕಿತ್ತು ಹಾಕಲು ಮುಂದಾಗಲಿಲ್ಲ. ಹೀಗಾಗಿ ಕರ್ನಾಟಕ ಬೀಜ ನಿಗಮವು ಬೆರಕೆಯ ಗಿಡ ಕಿತ್ತು ಹಾಕಿದ ಪ್ರದೇಶ ಮಾತ್ರ ಪ್ರಮಾಣೀಕರಿಸಿ ಇನ್ನುಳಿದ ಕ್ಷೇತ್ರ ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೇ ಕೃಷಿ ವಿವಿಯ ಧಡೇಸುಗೂರು, ಸಿರಗುಪ್ಪ, ರದ್ದೆವಾಡಗಿ ಸಂಶೋಧನಾ ಕೇಂದ್ರಗಳಲ್ಲಿ ತೆಗೆದುಕೊಂಡ ಬೀಜೋತ್ಪಾದನೆ ಕ್ಷೇತ್ರವೂ ತಿರಸ್ಕರಿಸಲ್ಪಟ್ಟಿದೆ ಎಂದು ಹೇಳಿದ್ದಾರೆ. ಇದರಿಂದ ಬೀಜೋತ್ಪಾದನೆ ಮುಂದೆ ಬಂದ ರೈತ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.

ತೊಗರಿ ಬೀಜದ ತಾಕುಗಳಲ್ಲಿ ಬೆರಕೆ ಗಿಡ ಕೀಳುವುದರಿಂದ ಎಕರೆಗೆ 1 ಕ್ವಿಂಟಲ್ ಇಳುವರಿ ಕಡಿಮೆ ಆಗುವುದು. ಬೆರಕೆ ಗಿಡ ತೆಗೆದು ಹಾಕಲು ಎಕರೆಗೆ 2000 ಖರ್ಚು ಮಾಡಬೇಕು. ರೈತರು ಹೆಚ್ಚು ಸಮಯ ಮತ್ತು ಶ್ರಮ ವ್ಯಯ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಎಲ್ಲ ಕಾರಣದಿಂದ ರೈತರಿಗೆ ಅನ್ಯಾಯ ಆಗುವುದನ್ನು ತಡೆಯಲು ಪ್ರಮಾಣೀಕರಿಸಿದ ತೊಗರಿ ಟಿಎಸ್-3ಆರ್ ತಳಿಗೆ ಪ್ರತಿ ಕ್ವಿಂಟಲ್ ಬೀಜಕ್ಕೆ 10 ಸಾವಿರ ನಿಗದಿಪಡಿಸಬೇಕು, ಬೀಜೋತ್ಪಾದನೆಗೆ ತೆಗೆದುಕೊಂಡ ರೈತರು ಮೂಲ ಬೀಜಕ್ಕೆ ಮತ್ತು ನಿರೀಕ್ಷಣಾ ಶುಲ್ಕಕ್ಕಾಗಿ ಹಣ ಖರ್ಚು ಮಾಡಿದ್ದು, ಬೀಜೋತ್ಪಾನೆ ಸಂಸ್ಥೆಗಳೇ ರೈತರಿಗೆ ಸೂಕ್ತ ಪರಿಹಾರ ದೊರಕಿಸಬೇಕು. ಕಳಪೆ ಮೂಲ ಬೀಜ ವಿತರಿಸಿದ ಸಂಸ್ಥೆಗಳ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತಿನ ಮತ್ತು ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕೃಷಿ ವಿವಿಯು ಕಳಪೆ ಗುಣಮಟ್ಟದ ಬೀಜ ವಿತರಿಸಂತೆ ಬಿಗಿ ಕ್ರಮ ಕೈಗೊಳ್ಳಬೇಕು. ಸೂಕ್ತ ನಿಯಮಗಳನ್ನು ರಚಿಸಬೇಕು. ಮುಂಬರುವ ದಿನಗಳಲ್ಲಿ ಉತ್ತಮ ಗುಣಮಟ್ಟದ ಬೀಜ ಉತ್ಪಾದಿಸಲು ಪ್ರೋತ್ಸಾಹಿಸುವಂಥ ವಾತಾವರಣ ರೂಪಿಸಬೇಕು ಎಂದು ರಾಜ್ಯ ಬೀಜ ನಿಗಮದ ಪ್ರಧಾನ ಕಾರ್ಯದರ್ಶಿ ಡಾ.ಸಂದೀಪ ದವೆ ಅವರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT