ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗುಗೊಳಿಸುವ ಅಂಧ ಮಲ್ಲಪ್ಪನ ಸಾಧನೆ

Last Updated 3 ಡಿಸೆಂಬರ್ 2013, 8:51 IST
ಅಕ್ಷರ ಗಾತ್ರ

ಧಾರವಾಡ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಂಗವಿಕಲ ವಿದ್ಯಾರ್ಥಿಗಳಲ್ಲೇ ರಾಜ್ಯಕ್ಕೆ ಮೊದಲ ಸ್ಥಾನ, ಪಿಯುಸಿಯಲ್ಲಿ ಸಾಮಾನ್ಯ ವಿದ್ಯಾರ್ಥಿಗಳನ್ನೂ ಮೀರಿಸಿ ರಾಜ್ಯಕ್ಕೆ ಮೂರನೇ ಸ್ಥಾನ, ಪದವಿ ಪರೀಕ್ಷೆಯಲ್ಲಿ ಕಾಲೇಜಿಗೇ ಪ್ರಥಮ, ವಿ.ವಿ.ಗೆ ತೃತೀಯ. ಎಂ.ಎ. ಕನ್ನಡ ವಿಭಾಗದಲ್ಲಿ ಐದು ಚಿನ್ನದ ಪದಕಗಳೊಂದಿಗೆ ಉತ್ತೀರ್ಣ, ಎರಡು ಬಾರಿ ನೆಟ್‌, ಜೆಆರ್‌ಎಫ್ ಪರೀಕ್ಷೆಯಲ್ಲಿ ಪಾಸು, ಕೆಎಎಸ್‌ ಪರೀಕ್ಷೆಯಲ್ಲಿ ಮುಖ್ಯ ಪರೀಕ್ಷೆಯನ್ನೂ ಪಾಸು ಮಾಡಿ ಸಂದರ್ಶನದರೆಗೂ ಮುನ್ನಡೆ.

ಇವು ಕಣ್ಣು, ಕೈಕಾಲು ಸರಿ ಇರುವ ಯಾವುದೇ ವ್ಯಕ್ತಿಯ ಸಾಧನೆಗಳಲ್ಲ. ಹುಟ್ಟು ಕುರುಡನಾದ ಮಲ್ಲಪ್ಪ ಬಂಡಿ ಎಂಬ 27ರ ಹರೆಯದ ಉತ್ಸಾಹಿ ಯುವಕನ ಸಾಧನೆ. ಮೂಲತಃ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಹೆರಕಲ್‌ ಎಂಬ ಕೃಷ್ಣಾ ನದಿಗೆ ಕೃಷ್ಣಾರ್ಪಣವಾದ ಊರಿನವ. ಮಲ್ಲಪ್ಪನ ತಂದೆ–ತಾಯಿ ಅನಕ್ಷರಸ್ಥರು. ಅಣ್ಣ ಶಿವಪ್ಪನೂ ಹೆಚ್ಚು ಓದಿದವನಲ್ಲ. ಹಾಗಿದ್ದೂ ಹೆರಕಲ್‌ ಗ್ರಾಮದಿಂದ ಹುಬ್ಬಳ್ಳಿಗೆ ಬಂದು ಅಲ್ಲಿನ ಸಿದ್ಧಾರೂಢ ಅಂಧರ ಶಾಲೆಯಲ್ಲಿ ಪ್ರಾಥಮಿಕ–ಪ್ರೌಢ ಶಿಕ್ಷಣ ಪೂರೈಸಿ ಪಿಯುಸಿ ಹಂತದಿಂದ ಪದವಿ ಹಂತದವರೆಗೂ ಸಂಘರ್ಷದ ಜೀವನವನ್ನು ನಡೆಸುತ್ತಲೇ ಬಂದಿದ್ದಾನೆ. ಅಂಗವಿಕಲರಿಗೆ ಅಷ್ಟೇ ಏಕೆ ಸಾಮಾನ್ಯ ಜನರಿಗೂ ಮಾದರಿಯಾಗುವ ವ್ಯಕ್ತಿತ್ವ ಹೊಂದಿದ ಮಲ್ಲಪ್ಪ ತಮ್ಮ ಸಾಧನೆ, ಅನುಭವ, ಈ ಹಂತಕ್ಕೆ ಬರುವಲ್ಲಿ ಎದುರಿಸಿದ ಅಡ್ಡಿ ಆತಂಕಗಳು, ಸ್ನೇಹಿತರ ಉಪಕಾರ ಎಲ್ಲವನ್ನೂ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

‘ತಂದೆ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಅವರಿವರ ಸಹಾಯ ಪಡೆದು ಶಿಕ್ಷಣ ಪಡೆದೆ. ಸಮಾಜದ ಉಪಕಾರವೂ ಸ್ಮರಣೀಯ. ನಾನು ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದ ವಿವರವನ್ನು ‘ಪ್ರಜಾವಾಣಿ’ ಪ್ರಕಟಿಸಿತು. ಆ ಲೇಖನವನ್ನು ಓದಿದ ಬೆಂಗಳೂರಿನ ಶಿಂಧೆ ಸಹೋದರರು ಒಂದು ಲಕ್ಷ ಬೆಲೆ ಬಾಳುವ ಕಂಪ್ಯೂಟರ್ ಹಾಗೂ ಅಂಧರಿಗೆ ಅನುಕೂಲವಾಗುವ ಹಲವು ಬಗೆಯ ಸಾಫ್ಟ್‌ವೇರ್‌ಗಳನ್ನು ಹಾಕಿಸಿಕೊಟ್ಟರು. ಆದರೆ, ನಾನು ಇನ್ನೂ ಅವರನ್ನು ಭೇಟಿ ಮಾಡುವುದಾಗಿಲ್ಲ’ ಎನ್ನುತ್ತಾರೆ ಮಲ್ಲಪ್ಪ.

ಸಮಾಜ ಹಾಗೂ ಶಿಕ್ಷಣ ಸಂಸ್ಥೆಗಳು ತನ್ನನ್ನು, ಅದರೊಟ್ಟಿಗೆ ಸಮಸ್ತ ಅಂಗವಿಕಲ ಸಮುದಾಯವನ್ನು ಕಾಣುವ ಬಗೆಗೆ ಬೇಸರ ಮಾಡಿಕೊಂಡ ಮಲ್ಲಪ್ಪ, ತಾವು ಪಿಯುಸಿಗೆ ಸೀಟು ಪಡೆಯಬೇಕಾದರೆ ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಸ್ಥಳೀಯ ಆಡಳಿತ ಮಂಡಳಿಯೇ ತಮ್ಮ ನೆರವಿಗೆ ಬರಬೇಕಾಯಿತು. ನನ್ನ ಓದು ಸರಿಯಾಗಿ ಆಗುವುದಿಲ್ಲ ಎಂದು ಕಾಲೇಜಿನ ಮುಖ್ಯಸ್ಥರು ಸೀಟು ನೀಡಲು ನಿರಾಕರಿಸಿದ್ದರು ಎಂಬುದನ್ನೂ ಸ್ಮರಿಸುತ್ತಾರೆ.

ದ್ವಿತೀಯ ಪಿಯುಸಿಯಲ್ಲಿ ಶೇ 89.16ರಷ್ಟು ಅಂಕ ಗಳಿಸಿದ ಬಳಿಕ, ತನಗೆ ಸೀಟು ನೀಡಲು ಮೀನ ಮೇಷ ಎಣಿಸಿದ ಆ ಸಂಸ್ಥೆಯೇ ಬೇಡವೆಂದು ಬೇರೆಡೆ ಹೋಗಲು ನಿರ್ಧರಿಸಿದ್ದೆ. ಆಗ ಸ್ವತಃ ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಕೋರೆ ಅವರೇ ಉಚಿತ ಹಾಸ್ಟೆಲ್‌ ನೀಡುವ ಹಾಗೂ ಶುಲ್ಕದಲ್ಲಿ ರಿಯಾಯಿತಿ  ನೀಡುವ ಭರವಸೆ ನೀಡಿದರು. ಅವರ ಮಾತಿಗೆ ಮನ್ನಣೆ ಕೊಟ್ಟು ಅಲ್ಲಿಯೇ ಪ್ರವೇಶ ಪಡೆದೆ. ವಿ.ವಿ. ಮಟ್ಟದಲ್ಲಿ ಕಾಲೇಜಿನ ಮೂರನೇ ಸ್ಥಾನ ಪಡೆದೆ ಎನ್ನುವಾಗ ಮಲ್ಲಪ್ಪನ ಮುಖದಲ್ಲಿ ಸಂತೃಪ್ತಿಯ ಭಾವ.

ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಐದು ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪೂರೈಸಿದ ಮಲ್ಲಪ್ಪ, ಪ್ರಸ್ತುತ ಡಾ.ಜೆ.ಎಂ.ನಾಗಯ್ಯ ಅವರ ಬಳಿ ‘ಆಧುನಿಕ ಕನ್ನಡ ಖಂಡ ಕಾವ್ಯ’ ಕುರಿತು ಪಿಎಚ್‌.ಡಿ. ಸಂಶೋಧನೆ ಮಾಡುತ್ತಿದ್ದಾರೆ. ಪಿಎಚ್‌.ಡಿ. ಪ್ರೌಢಪ್ರಬಂಧ ಸಲ್ಲಿಕೆಗೆ ಇರುವ ಕನಿಷ್ಟ ಅವಧಿಯಾದ ಮೂರೇ ವರ್ಷದಲ್ಲಿ ಅದನ್ನು ಸಲ್ಲಿಸುವುದಾಗಿ ಹೇಳುತ್ತಿದ್ದಂತೆಯೇ ಈ ಯುವಕನ ಮುಖದಲ್ಲಿ ಉತ್ಸಾಹದ ಬುಗ್ಗೆ ಚಿಮ್ಮುತ್ತದೆ.

ಧೀರೂಬಾಯಿ ಅಂಬಾನಿ ಫೆಲೋಶಿಪ್‌, ಅಂಗವಿಕಲರಿಗೆ ಯುಜಿಸಿ ನೀಡುವ ಫೆಲೋಶಿಪ್‌ ಪಡೆದ ಮಲ್ಲಪ್ಪ ಐಎಎಸ್‌ ಮಾಡುವ ಕನಸನ್ನೂ ಹೊಂದಿದ್ದಾರೆ.

ವಿಧಾನಸೌಧ ನೌಕರಿಗೆ ರಾಜೀನಾಮೆ
ಮಲ್ಲಪ್ಪ ಬಂಡಿ ಆಡಳಿತ ಸುಧಾರಣಾ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ)ನಾಗಿ ವಿಧಾನಸೌಧದಲ್ಲಿ ಕೆಲಸ ಮಾಡಿದ ಸಂಗತಿ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಅಲ್ಲಿ ನಾಲ್ಕು ದಿನ ಕೆಲಸಕ್ಕೆ ಹೋದರೂ ಅಧಿಕಾರಿಗಳು ಯಾವುದೇ ಕೆಲಸವನ್ನು ನೀಡದ್ದರಿಂದ ಬೇಸತ್ತು ರಾಜೀನಾಮೆ ನೀಡಿ ಬಂದ ಸ್ವಾಭಿಮಾನ ಯುವಕನೀತ.

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಡೇಟಾ ಎಂಟ್ರಿ ಆಪರೇಟರ್‌, ಕಾಲ್‌ ಸೆಂಟರ್‌, ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಬಯಸಿ ಬರುವ ಅರ್ಜಿಗಳನ್ನು ವಿಲೇವಾರಿ ಮಾಡುವ, ಕೋರ್ಟ್‌ಗಳಲ್ಲಿ ವಿಚಾರಣೆಗೆ ಬರುವವರನ್ನು ಕರೆಯುವ ಬೇಲಿಫ್‌ ಕೆಲಸವನ್ನು ಅಂಧರು ಮಾಡುತ್ತಾರೆ. ಆದರೆ, ಸರ್ಕಾರ ಹಾಗೂ ಸಮಾಜ ನಮ್ಮಿಂದ ಕೆಲಸ ಮಾಡಿಸಿಕೊಳ್ಳಲು ಬಯಸುವುದೇ ಇಲ್ಲ ಎಂದು ಮಲ್ಲಪ್ಪ ಬೇಸರ ವ್ಯಕ್ತಪಡಿಸುತ್ತಾರೆ.

‘ಪ್ರತಿಯೊಂದಕ್ಕೂ ಕೋರ್ಟ್‌ಗೇ ಹೋಗಬೇಕೇ?’
ಕೋರ್ಟ್‌ನಿಂದಲೇ ನಮ್ಮ ಎಲ್ಲ ಹಕ್ಕು ಪಡೆಯಬೇಕೇ ಎಂಬುದು ಮಲ್ಲಪ್ಪ ಕೇಳುವ ಪ್ರಮುಖ ಪ್ರಶ್ನೆ. ಸರ್ಕಾರಕ್ಕೆ ನಮ್ಮ ಬಗ್ಗೆ ಕಾಳಜಿ ಇದ್ದರೆ ಕ್ಲಾಸ್‌ 1, 2 ಹಂತದಲ್ಲಿ ನಮಗೂ ಅವಕಾಶ ನೀಡಬೇಕಿತ್ತು. ಆದರೆ, ಅದನ್ನೂ ಕೋರ್ಟ್‌ಗೆ ಹೋಗಿಯೇ ಪಡೆಯಬೇಕಾಯಿತು. ಅಮೆರಿಕ ಮತ್ತಿತರ ರಾಷ್ಟ್ರಗಳಲ್ಲಿ ಅಂಗವಿಕಲರು ರಸ್ತೆಯಲ್ಲಿ ಓಡಾಡಲೆಂದೇ ಪ್ರತ್ಯೇಕ ಪಥಗಳನ್ನು ನಿರ್ಮಿಸಿರುತ್ತಾರೆ. ಇಲ್ಲಿ ಅದು ಯಾವಾಗ ಜಾರಿಗೆ ಬರುತ್ತದೋ ಯಾರಿಗೆ ಗೊತ್ತು. ಸರ್ಕಾರಿ ಕಚೇರಿಯಲ್ಲಿ ಅಂಗವಿಕಲರು ತೆರಳಲು ಜಾರು ರಸ್ತೆಗಳನ್ನು ನಿರ್ಮಿಸಿರುತ್ತಾರೆ. ಆದರೆ, ಗಾಲಿ ಕುರ್ಚಿಗಳನ್ನೇ ಇಟ್ಟಿರುವುದಿಲ್ಲ. ಅಂಗವಿಕಲರಿಗೆ ₨ 1 ಸಾವಿರ ಮಾಸಾಶನ ಕೊಟ್ಟರೆ ಸಾಲದು. ಅವರು ನಮ್ಮಂತೆಯೇ ಮನುಷ್ಯರು ಎಂದು ತಿಳಿದುಕೊಂಡು ಬದುಕುವ ಅವಕಾಶ ನೀಡಬೇಕು ಎಂದು ಮನವಿ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT