ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಳು ಚೀಪುವುದು ಸಮಸ್ಯೆಯೇ?

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನಮ್ಮ ಆತ್ಮೀಯರ ಮದುವೆಯ ಆರತಕ್ಷತೆ ಇತ್ತು.  ತುಂಬ ಜನ ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು, ಅಧಿಕಾರಿಗಳು ಬಂದಿದ್ದರು.  ಅಲ್ಲಿ  ನನ್ನ ಜೊತೆ ಹಲವರಿದ್ದರು.  ನನ್ನ ಸ್ನೇಹಿತನ ಅಕ್ಕನ ಮಗನೂ ಬಂದಿದ್ದನು, ವಯಸ್ಸು 6 ವರ್ಷವಿದ್ದೀತು. ಸ್ನೇಹಿತನ ಅಕ್ಕ  `ಪುಟ್ಟ; ಡಾಕ್ಟರ್ ಮಾಮನಿಗೆ  ಹಾಯ್ ಹೇಳು~ ಎಂದರು.  ಆ ಮಗು `ಹಲೋ ಮಾಮ~ ಎಂದಿತು. ಆಗ ಆ ಮಗು ನನ್ನ ಜೊತೆ ಮಾತನಾಡುವಾಗಷ್ಟೆ ಬಾಯಿಂದ ಬೆರಳು ತೆಗೆಯುತ್ತಿತ್ತು. ಪುನಃ ಸರಕ್ಕೆಂದು ಬಾಯೊಳಗೆ ಬೆರಳು ಇಟ್ಟುಕೊಳ್ಳುತ್ತಿತ್ತು. ಆ ಮಗುವಿನ ತಾಯಿಗೆ ಈ ಬಗ್ಗೆ ವಿಚಾರಿಸಿದೆ. ಆಗ ಆಕೆ `ನೋಡಿ ಡಾಕ್ಟ್ರೆ ಎಷ್ಟ್ ಸಾರಿ ಹೇಳಿದ್ರೂ ಬೆರಳ್ ಚೀಪ್ತಾನೆ ಇರ‌್ತಾನೆ. ಎಷ್ಟೇ ಹೇಳಿದ್ರು ಕೇಳಲ್ಲ.  ಜನರೆಲ್ಲ ಹೋಗಿದ್ ಕಡೆಯೆಲ್ಲ ಕೇಳ್ತಾರೆ. ಇವ್‌ನೇನು ಚಿಕ್‌ಮಗುನಾ~ ಎಂದರು. ನನಗಾಗ ಸಮಸ್ಯೆಯ ಅರಿವಾಯಿತು. ಇಂತಹ ಮಕ್ಕಳು ತಾಯಂದಿರಿಗೆ ಸಮಸ್ಯೆಯಾಗುವ ಮುನ್ನವೇ ಮಗುವಿನ ಪೋಷಕರು ಜಾಗ್ರತೆ ವಹಿಸಬೇಕು.

ಬೆರಳು ಚೀಪುವುದು ರೋಗವಲ್ಲ. ರೋಗದ ಲಕ್ಷಣವೂ ಅಲ್ಲ.  ಆದರೆ ಇದೊಂದು ಚಟ.  ನೂರಾರು ಜನರ ಮಧ್ಯೆ ಬೆರೆಯುವಾಗ, ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಸಹಜವಾಗಿಯೇ ಬೆರಳು ಚೀಪುವ ಮಕ್ಕಳಿಂದ ಅವರ ತಂದೆ  ತಾಯಿಗಳು ಮುಜುಗರ ಪಡಬೇಕಾಗುತ್ತದೆ. ಅದರಲ್ಲೂ ತೀರ ಸಣ್ಣ ಮಕ್ಕಳು ಬೆರಳು ಚೀಪುವುದನ್ನು ಸಾಮಾನ್ಯ ಸಂಗತಿ ಎಂತಲೇ ಭಾವಿಸಲಾಗುತ್ತದೆ. ಆದರೆ 4 ವರ್ಷ, 6, 8 ವರ್ಷದ ಮಕ್ಕಳು ಬೆರಳು ಚೀಪುವುದನ್ನು ಕಾಣುತ್ತೇವೆ. ಅದುವೇ ಸಮಸ್ಯೆ. ಹಾಗಾದರೆ ಬೆರಳು ಚೀಪುವುದು ಸಮಸ್ಯೆಯೇ? ಖಂಡಿತ ಹೌದು. ಏಕೆಂದರೆ ಸಮಸ್ಯೆ ಸಣ್ಣದಾದರೂ ಆಗುವ ತೊಂದರೆ, ಪರಿಣಾಮಗಳು ದೀರ್ಘ.

ಸಾಮಾನ್ಯವಾಗಿ ಶೇ.80ರಷ್ಟು ಮಕ್ಕಳು ಬೆರಳು ಚೀಪಿಯೇ ಬೆಳೆಯುತ್ತಾರೆ. ಆದರೆ ಶೇ 20-30ರಷ್ಟು ಮಕ್ಕಳು ಇದನ್ನು ನಿರ್ದಿಷ್ಟ ಸಮಯದ ನಂತರವೂ ಮುಂದುವರೆಸುತ್ತಾರೆ. ಇದೊಂದು ಸರ್ವೇಸಾಮಾನ್ಯವಾದ ಸಂಗತಿಯಾದರೂ ಬಿಟ್ಟು ಬಿಡುವ ಹಾಗೂ ಇರುವುದಿಲ್ಲ. ಎರಡರಿಂದ ಎರಡೂವರೆ ವರ್ಷ ವಯಸ್ಸಿನವರೆಗೂ ಮಗು ಬೆರಳು ಚೀಪುವುದು ಸಾಮಾನ್ಯ. ಆದರೆ ಅದರ ನಂತರವೂ ಮುಂದುವರೆದಲ್ಲಿ ತೊಂದರೆ ಇರುತ್ತದೆ. ಏಕೆಂದರೆ ಈ ಸಮಯದಲ್ಲಿ ಮಗುವಿನ ಎಲ್ಲಾ ಹಾಲು ಹಲ್ಲುಗಳು ಮೂಡಿರುತ್ತವೆ. ಜೊತೆಗೆ ವಯಸ್ಕರ ಖಾಯಂ ಪ್ರೌಢ ಹಲ್ಲುಗಳ ಬೆಳವಣಿಗೆ ಶುರುವಾಗಿರುತ್ತದೆ. ಈ ರೀತಿ ಆಗಾಗ ಬಾಯಿಯಲ್ಲಿ ಬೆರಳಿಡುತ್ತಿದ್ದರೆ ಆ ಹಲ್ಲುಗಳ ಬೆಳವಣಿಗೆಗೆ ತೊಡಕುಂಟಾಗುತ್ತದೆ. ಜೊತೆಗೆ ಅವುಗಳ ಸ್ಥಾನದಲ್ಲಿ ವ್ಯತ್ಯಾಸವುಂಟಾಗಿ ವಕ್ರವಾಗಿ ಮೂಡಲು ಶುರುವಾಗುತ್ತದೆ. ಇದನ್ನು ಪೋಷಕರು ನಿರ್ಲಕ್ಷಿಸದೆ ಗಮನ ಹರಿಸಬೇಕು ಮತ್ತು ದಿನದಲ್ಲಿ ಎಷ್ಟು ಹೊತ್ತು ಬೆರಳು ಚೀಪುತ್ತಾನೆ ಎಂಬುದನ್ನು ತಿಳಿಯಬೇಕು.  ಎಷ್ಟೋ ಮಕ್ಕಳಿಗೆ ಇದು ಎಷ್ಟು ರೂಢಿಯಾಗಿರುತ್ತದೆಂದರೆ ತಾವು ಮಲಗಿದ್ದಾಗ ಕೂಡ ಬಾಯಿಯಲ್ಲಿ ಬೆರಳಿಟ್ಟುಕೊಂಡು ಮಲಗಿರುತ್ತಾರೆ.

ವೈಜ್ಞಾನಿಕ ಹಿನ್ನೆಲೆ
ಮಕ್ಕಳು ಹುಟ್ಟಿನಿಂದ ಕೈ ಬೆರಳುಗಳನ್ನು ಆಡಿಸುತ್ತಿರುತ್ತಾರೆ. ಆರೆಂಟು ತಿಂಗಳು ಆಗುವವರೆಗೂ ಕೈ ಕಾಲುಗಳನ್ನು ಬಿಟ್ಟು ದೇಹದ ಇತರ ಭಾಗವಾಗಲಿ, ಮೈಯಾಗಲಿ ಆಡಿಸಲು, ಅಲುಗಾಡಿಸಲು ಆಗದು.  ಕೆಲ ಮಕ್ಕಳು ತೆವಳುವ ಮುಂಚೆ, ಮಲಗಿದ್ದಲ್ಲೇ ಕಾಲು ಬೆರಳು ಚೀಪುತ್ತವೆ. ಒಮ್ಮೆ ಮಕ್ಕಳು ತಮ್ಮ ಓಡಾಟ ಪ್ರಾರಂಭಿಸಿದ ಮೇಲೆ ಕಾಲು ಬೆರಳುಗಳನ್ನು ಚೀಪುವುದನ್ನು ಬಿಟ್ಟು ಕೈ ಬೆರಳಿನತ್ತ ತಮ್ಮ ಗಮನ ಕೇಂದ್ರೀಕರಿಸುತ್ತವೆ.  ಜೊತೆಗೆ ಕೈಗೆ ಸುಲಭವಾಗಿ ಸಿಗುವ ವಸ್ತುಗಳತ್ತ ಗಮನಹರಿಸಿ ಅವುಗಳನ್ನು ಬಾಯೊಳಗೆ ಇಡುತ್ತಿರುತ್ತವೆ.  ಆ ವಸ್ತುಗಳಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂದು ತಿಳಿಯದ, ತಿಳಿದಿರದ ಮಗುವಿನತ್ತ ಪೋಷಕರ ಸತತ ಗಮನವಿರಲೇಬೇಕಾಗುತ್ತದೆ.  ಕೆಲವೊಮ್ಮೆ/ ಯಾವಾಗ ಮಗುವಿಗೆ ಕೈಗೆ ಏನೊಂದು ವಸ್ತು ಸಿಗುವುದಿಲ್ಲವೋ ಆಗ ಅವು ತಮ್ಮ ಕೈ ಬೆರಳಿನತ್ತ ಗಮನ ಕೇಂದ್ರೀಕರಿಸಿ, ಅವನ್ನು ಬಾಯೊಳಗೆ ಇಡಲು ಪ್ರಾರಂಭಿಸುತ್ತವೆ. ಎರಡೂವರೆ ವರ್ಷದ ನಂತರವೂ ಈ ಸಮಸ್ಯೆ ಮುಂದುವರೆದಲ್ಲಿ ವೈದ್ಯರಲ್ಲಿ ಕರೆದೊಯ್ಯಬೇಕು.
 

ಮಗುವು ಬಾಯಲ್ಲಿ ಬೆರಳಿಡಲು ಕಾರಣಗಳು:
* ಪೋಷಕರ ಗಮನದ ತೀವ್ರ ಕೊರತೆ (ಮಗುವಿನೆಡೆಗೆ)
* ಇಷ್ಟಪಟ್ಟ ಆಹಾರ ( ಉದಾ: ಚಾಕೊಲೇಟ್, ಐಸ್‌ಕ್ರೀಂ) ಸಿಗದಿದ್ದಾಗ, ಸತತ ಲಲಾರಸ ಸ್ರವಿಕೆ ತಡೆಯಲು ಆಗದೇ ಬೆರಳನ್ನೆ ಬಾಯಲ್ಲಿ ಇಡಲು ಪ್ರಾರಂಭಿಸುತ್ತದೆ.
* ಚಟವಾಗಿ ಪರಿವರ್ತನೆಯಾದಾಗ.
* ಇಷ್ಟವಿಲ್ಲದ ಆಹಾರ ಬಲವಂತವಾಗಿ ಆಗಾಗ ತಿನ್ನುತ್ತಿದ್ದರೆ.
* ತನ್ನನ್ನು ಯಾರೂ ಗಮನಿಸುತ್ತಿಲ್ಲವೆಂದು ಮಗು ತಿಳಿದಿದ್ದರೆ ಮತ್ತು ಇತರರ ಗಮನ ತನ್ನೆಡೆ ಸದಾ ಇರಲೆಂದು ಬಯಸುವ ಮಗು.
* ಪೋಷಕರ ಪ್ರೀತಿಯಿಂದ ಮಗು ವಂಚಿತವಾದಾಗ, ಸದಾ ಜಗಳವಾಡುವ ತಂದೆ   ತಾಯಿ, ಕೆಲಸದ ನಿಮಿತ್ತ ಹೊರಹೋಗುವ ಪೋಷಕರು, ಏಕಾಂಗಿತನ ಕಾಡಿದಾಗ.

  ಎರಡೂವರೆ ವರ್ಷದ ನಂತರ ಪರಿಣಾಮ
* ಮೇಲಿನ ಮುಂದವಡೆಯ ಮೇಲೆ ಚೀಪುವ ಬೆರಳಿನಿಂದ ಸತತ ಒತ್ತಡ ಉಂಟಾಗಿ ಮುಖ್ಯವಾಗಿ ಮುಂಭಾಗದ ಬಾಚಿಹಲ್ಲುಗಳು ಮುಂದೆ ಚಾಚಿಕೊಂಡು ಉಬ್ಬು ಹಲ್ಲುಗಳಾಗಿ ಮಾರ್ಪಾಡಾಗುತ್ತವೆ.
* ಹಲ್ಲುಗಳ ಜೋಡಣೆ ಸರಿಯಾದ ರೀತಿಯಲ್ಲಿ ಆಗದೆ ಜಾಗಗಳುಂಟಾಗುತ್ತವೆ.
* ವಸಡಿನ ಊತ, ಬಾವು, ಸಮಸ್ಯೆ ಕಾಡುತ್ತವೆ.
* ಚೀಪುವ ಬೆರಳಿನ ಉಗುರಿನ ಕೊಳೆ, ಗಾರೆ ... ಎಲ್ಲವೂ ಬಾಯೊಳಗೆ ಸೇರುತ್ತದೆ.
* ಚೀಪುವ ಬೆರಳಿನ ಆಕಾರದಲ್ಲಿ ವ್ಯತ್ಯಾಸ ಉಂಟಾಗಿ, ಅದರ ಬೆಳವಣಿಗೆ ಕುಂಠಿತವಾಗುತ್ತದೆ.
* ಸರಿಯಾಗಿ ಊಟ ಮಾಡಲಾಗುವುದಿಲ್ಲ.
* ಜೊಲ್ಲಿನ ತೇವಾಂಶದಲ್ಲಿ ನೆನೆದ ಬೆರಳು ಮತ್ತು ಬಾಯಿಯಿಂದ ದುರ್ವಾಸನೆ ಬರುತ್ತಿರುತ್ತದೆ.
* ಮುಂಭಾಗದ ಹಲ್ಲುಗಳ ಮೂಡುವಿಕೆ ವಕ್ರವಾಗಿ, ಜಾಗವಾಗುವುದರಿಂದ ಮಾತಿನಲ್ಲಿ ಸ್ಪಷ್ಟತೆ ಇರುವುದಿಲ್ಲ.

ಬೆರಳು ಚೀಪುವುದು ಬಿಡಿಸುವ ಬಗೆ
*
ಮುಖ್ಯವಾಗಿ ಮಗುವಿಗೆ ಸರಿಯಾದ ಸಮಯಕ್ಕೆ ಆಹಾರ ನೀಡಬೇಕು.
* ಮಗು ಪೋಷಕರ ಪ್ರೀತಿಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಕಾರಣ ತಿಳಿದು ಅದನ್ನು ಸರಿಪಡಿಸಬೇಕು.
* ಸಮಸ್ಯೆ ತೀವ್ರತೆ ವಯಸ್ಸಾದಂತೆ ಹೆಚ್ಚುತ್ತದೆ.  ಆದ್ದರಿಂದ ಮೊದಲೇ ಗುರುತಿಸಬೇಕು.
* ಮಗು ಸ್ವಲ್ಪಮಟ್ಟಿಗೆ ಅರ್ಥ ಮಾಡಿಕೊಳ್ಳುವಂತಿದ್ದರೆ ಬೆರಳು ಚೀಪುವುದರಿಂದಾಗುವ ತೊಂದರೆಗಳನ್ನು ವಿವರಿಸಿ ಅರ್ಥಮಾಡಿಸಿ. ವೈದ್ಯರ ಸಲಹೆ ಇದಕ್ಕೆ ಸಹಕಾರಿ.
* ಮಗುವಿಗೆ ನೆನಪಾಗುವಂತೆ ಅದರ ಬೆರಳಿಗೆ ನೇಲ್‌ಪಾಲಿಶ್ (ಉಗುರುಬಣ್ಣ) ಹಚ್ಚಿರಿ.
* ಸಮಸ್ಯೆ ಗಂಭೀರವಾಗಿದ್ದರೆ ಒಂದೇ ಸಲಕ್ಕೆ, ಒಂದೇ ದಿನಕ್ಕೆ ಬಿಡಲಾಗುವುದಿಲ್ಲ.  ಹಂತ - ಹಂತವಾಗಿ ಕಡಿಮೆ ಮಾಡಬೇಕಾಗಿರುವುದರಿಂದ ತಾಳ್ಮೆ, ಸಹನೆ ಅಗತ್ಯ.
* ಚಟ ಬಿಡುವುದಕ್ಕಾಗಿ ಮಗುವನ್ನು ಪೀಡಿಸದಿರಿ, ಹೊಡೆದು ಹಿಂಸಿಸದಿರಿ.  ಅವಮಾನ ಮಾಡದಿರಿ.
* ಚಟ ಬಿಡುವಂತೆ ಪ್ರೇರೇಪಿಸಿ, ಒಂದು ದಿನ ಕಡಿಮೆ ಸಾರಿ ಬಾಯೊಳಗೆ ಬೆರಳಿಟ್ಟರೆ ಬಹುಮಾನ ಕೊಡುವುದಾಗಿ ಮಗುವಿಗೆ ಹೇಳಿರಿ. ಅದರಂತೆ ನಡೆದುಕೊಳ್ಳಿರಿ.
* ಮಗುವಿಗೆ ಬೆರಳು ಚೀಪುವುದನ್ನು ಬಿಡಬೇಕೆನಿಸಿದರೂ ಕೆಲವೊಮ್ಮೆ ಬಿಡಲಾಗುವುದಿಲ್ಲ.  ಆಗ ವೈದ್ಯರಿಂದ ಚಟ ಬಿಡಿಸುವ ಕ್ಲಿಪ್ (ಹ್ಯಾಬಿಟ್ ಬ್ರೇಕಿಂಗ್ ಅಪ್ಲಯನ್ಸ್.) ಮಾಡಿಸಿಕೊಂಡು ಬಳಸಬೇಕು.  ಇದರಲ್ಲಿ ಮುಳ್ಳಿನಾಕಾರದ ತಂತಿ ಇದ್ದು ಬಾಯೊಳಗೆ ಬೆರಳು ಇಟ್ಟೊಡನೆ ಚುಚ್ಚಿ ನಿಧಾನವಾಗಿ ಚಟ ಬಿಡಿಸುತ್ತದೆ.
* ಮಗುವಿಗೆ ನೆನಪಾಗುವಂತೆ ಬೆರಳಿಗೆ ಬ್ಯಾಂಡೇಜ್/ಹ್ಯಾಂಡಿಪ್ಲಾಸ್ಟ್ ಹಾಕಬೇಕು.
* ಮಗುವಿಗೆ ಏಕಾಂಗಿತನ ಕಾಡದಂತೆ ಕಾಳಜಿ ವಹಿಸಿ.
(ಲೇಖಕರ ಮೊಬೈಲ್ : 9342466936)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT