ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಳೊತ್ತು

ಕಥೆ
Last Updated 13 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕಲ್‌ಕೋಟೆ ಮಾರಪ್ಪನ ಹೆಬ್ಬೆರಳು ಹಾರಿಬಂದು ಟೇಬಲ್ಲಿನ ಮಧ್ಯೆ ತನ್ನ ತಾನೆ ಸ್ಥಾಪಿಸಿಕೊಂಡಿತ್ತು. ಎದುರಿಗೆ ನಿಂತಿದ್ದ ಪಂಚಾಯತಿ ಪ್ರೆಸಿಡೆಂಟು ಗುರುಬಸಪ್ಪ ತನ್ನ ಬಿಳಿ ಪೆನ್ನಿನಿಂದ ಅದನ್ನು ಟೇಬಲ್ಲಿನ ಹೊರಗೆ ಸರಿಸುವ ಯತ್ನ ನಡೆಸಿದ್ದ. ಗಾರೆಕೆಲಸ ಮಾಡುತ್ತ ಸಿಮೆಂಟು, ಮರಳು ಕಲಸುತ್ತ ತೂತು ಬಿದ್ದ ಬೆರಳಾಗಿದ್ದರೂ ಅದರ ಉಕ್ಕಿನಂಥಾ ಉಗುರು ಚೂಪಾಗಿತ್ತು. ಆದರೂ ನನ್ನ ಗಮನ ಇದ್ದದ್ದು ಒಂದೇ ಸಮನೆ ರಕ್ತ ಸುರಿಸುತ್ತಿದ್ದ ಮಾರಪ್ಪ ಎತ್ತಿಹಿಡಿದ ಎಡಗೈಯಲ್ಲಿ ಹೆಬ್ಬೆರಳಿನ ನಿರ್ಗಮನದಿಂದ ಮೊಂಡಾದ ಜಾಗದ ಕಡೆ.

ಕಚೇರಿ ಹೊರಗೆ ಗಂಟಲು ಹರಿದುಕೊಳ್ಳುವ ದನಿ ಕೇಳಿದೊಡನೆ ಅದು ಹನುಮಕ್ಕನದೆಂದು ಊಹಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. ಒಳಗೆ ಬಂದವಳ ಕೆದರಿದ ತಲೆಯಿಂದ ವ್ಯಗ್ರ ಮುಖದಮೇಲೆ ಒಂದೇ ಸಮನೆ ಇಳಿಯುತ್ತಿದ್ದ ಬೆವರು ಆಕೆಯ ಧಾವಂತವನ್ನು ವಿವರಿಸುತ್ತಿತ್ತು. ಮಾಸಿದ ಕಾಟನ್ ಸೀರೆಯ ಸೆರಗನ್ನು ಬೀಸುತ್ತ ಎಡಗೈ ಮುಷ್ಠಿಯಲ್ಲಿ ಹಿಡಿದ ಅರಿಶಿಣಪುಡಿಯನ್ನು ಮಾರಪ್ಪನ ಬೆರಳಿಲ್ಲದ ಬೆರಳ ಮೇಲೆ ಒತ್ತಿಹಿಡಿಯುತ್ತ ನನ್ನೆಡೆಗೆ ಕೆಂಡ ಉಗುಳುತ್ತಿದ್ದಳು. ಘಟನೆಯಿಂದಾದ ಗಾಬರಿ, ನೋವಿಗಿಂತ ತನ್ನೆಲ್ಲ ಕೆಲಸಗಳನ್ನು ಬದಿಗೊತ್ತಿ ಬರುವಂತಾಗಿದ್ದರ ಬಗ್ಗೆ ಬೇಸರ ಹುಟ್ಟಿ ಗಂಡನನ್ನು ಬೈಯತೊಡಗಿದಳು. “ಯಪ್ಪ, ಮಾರಿ ಮ್ಯಾಲಿನ ಮೀಸಿ ಉದುರಂಗಾದ್ರು ನಿನ್ ಸಿಟ್ಟು ಇನ್ನೂ ತಣೀಲಿಲ್ಲ. ಹಿಂಗ ನನ್ನ ಚಿಂತೀಗ ಹಚ್ಚಬ್ಯಾಡ, ಒಂದೇ ಏಟಿಗೆ ಕೊಂದ್‌ಬುಡು''. ಆಕೆ ಮತ್ತೇನು ಹೇಳುವುದರಲ್ಲಿದ್ದಳು. “ನಾನ್ಯೇನ್ ಮಾಡ್ಲಬೇ..?'' ಎಂದು ಬಾಯಿ ತೆರೆದವನು ಮಾತು ನಿಲ್ಲಿಸಿ ಕೋಪದ ಕೈಯಳತೆಗೆ ನಿಲುಕುವ ಜಿಗುಪ್ಸೆ ಹೊದ್ದು ಪಂಚಾಯತಿ ಕಚೇರಿ ಹೊರ ನಡೆದಿದ್ದ ಮಾರಪ್ಪ. ಅಲ್ಲಿ ಆತ ಹಚ್ಚಿದ ಗಣೇಶ ಬೀಡಿಯ ಘಮ ಕಚೇರಿ ಒಳಗೆ ನಿಂತವರ ಮೂಗಿನೊಳಗೆ ನುಸುಳಿ ತಮ್ಮ ತಮ್ಮ ಜೇಬಿನಲ್ಲಿದ್ದ ಬೀಡಿ ಪೊಟ್ಟಣ ನೆನಪಿಸುತ್ತಿತ್ತು.

ಗುರುಬಸಪ್ಪ ಆವೇಶಪೂರಿತ ಮಾರಪ್ಪನ ಕೈಯಲ್ಲಿದ್ದ ರಕ್ತಸಿಕ್ತ ಕುಡುಗೋಲನ್ನು ಕಿತ್ತುಕೊಂಡು ಕಚೇರಿಯಲ್ಲಿದ್ದ ಬೆಂಚಿನ ಕೆಳಗೆ ಇಟ್ಟು ಮಾರಪ್ಪನ ಬೆರಳನ್ನು ತನ್ನೊಳಗಿಟ್ಟುಕೊಂಡಿದ್ದ ಹಾಳೆಯ ಉಂಡೆಯನ್ನು ಕೈಯಲ್ಲಿ ಹಿಡಿದು ನೋಡುತ್ತ ನಿಂತಿದ್ದ. ಬೀಡಿಯ ಹೊಗೆಗೆ ಮಾರಪ್ಪನ ಮೆದುಳು ಗರಿಬಿಚ್ಚಿದ ನವಿಲಿನಂತಾಗಿತ್ತೇನೋ. ಹನುಮಕ್ಕನ ಬೈಗುಳಗಳನ್ನು ಬದಿಗೆ ತಳ್ಳಿ ಆತ ಪುಂಖಾನುಪುಂಖವಾಗಿ ಮಾತನಾಡುತ್ತಿರುವುದು ಅಸ್ಪಷ್ಟವಾಗಿ ಕೇಳುತ್ತಿತ್ತು.

ಗರಬಡಿದವನಂತಾಗಿದ್ದ ಗುರುಬಸಪ್ಪ, “ಇವನ ಬೆರಳ ಸರಿಯಿಲ್ಲಂತ ಯಾಕಂದ್ಯೋ? ಈಗ ಅವ ಹೋಗಿ ಡಂಗುರ ಸಾರಿ ನಮ್ಮಿಬ್ರ ಮ್ಯಾಲ ಹಳ್ಳೀನೇ ಎತ್ತಿಕಟ್ತಾನ ನೋಡು'' ಎಂದು ಹೊರನಡೆದ. ಅಷ್ಟರಲ್ಲಿ ಮತ್ತೆ ಒಳಗೆ ಬಂದ ಮಾರಪ್ಪನ ಕಣ್ಣು ಗಿರಿಗಿಟ್ಟಲೆಯಾಗಿದ್ದವು. ಗುರುಬಸಪ್ಪನ ಕೈಲಿದ್ದ ಪೇಪರ್ ಉಂಡೆಯನ್ನು ಕಸಿದು ಅದರೊಳಗಿದ್ದ ತನ್ನ ಬೆರಳನ್ನು ನನ್ನ ಮುಂದಿಟ್ಟು, “ಸರ್ಕಾರಕ್ಕ ಇದನ್ನ ಪೋಸ್ಟ್ ಮಾಡು. ಅದ್ಯಾವ್ ಸೂಳ್ಯಾಮಗ ಇದನ್ನ ನನ್ನ ಬೆರಳಲ್ಲ ಅಂತಾನೋ ನೋಡೇಬಿಡ್ತೀನಿ'' ಎನ್ನುತ್ತ ಬಾಗಿಲ ಬಳಿಯಿದ್ದ ಬೆಂಚಿನ ಕೆಳಗಿನ ಕತ್ತಲೆಯೊಳಗೆ ಕೈಹಾಕಿ ಗುರುಬಸಪ್ಪ ಅಡಗಿಸಿಟ್ಟಿದ್ದ ತನ್ನ ಕುಡುಗೋಲು ಸಿಗಿದವನೇ ಅಲ್ಲಿಂದ ಹೊರನಡೆದಿದ್ದ.

ಸರ್ಕಾರವೆಂದರೆ ಒಬ್ಬ ವ್ಯಕ್ತಿ ಎಂದು ಮಾರಪ್ಪ ತಿಳಿದಂತಿತ್ತು. ಅದು ಯಾರಿಗೂ ಕಾಣದ ಆದರೆ ಎಲ್ಲರೊಳಗಿರುವ ಅಗೋಚರ ವ್ಯವಸ್ಥೆ ಎಂದು ಆತನಿಗೆ ಹೇಳುವ ಶಕ್ತಿ ನನ್ನಲ್ಲಿರಲಿಲ್ಲ. ಟೇಬಲ್ಲಿನ ಮೇಲಿದ್ದ ರಕ್ತದ ಸುಳಿಯಲ್ಲಿ ಸಿಲುಕಿದ್ದೆ ನಾನು. ಮಾರಪ್ಪನ ರಕ್ತ ಊರಿನ ಯಾವ ಯಾವ ಮೂಲೆಗೆ ಹರಿಯುವುದೋ, ನನ್ನನ್ನೆಲ್ಲಿ ಆಹುತಿ ತೆಗೆದುಕೊಳ್ಳುವುದೋ ಎಂಬ ಯೋಚನೆಗಳು ಎದ್ದು ಒತ್ತರಿಸಿ ಬರುತ್ತಿದ್ದ ಮೂತ್ರವನ್ನು ತಡೆದು ಕೂತಿದ್ದೆ. ಕಸ ಬಳಿಯದೆ ದಿನಗಳು ಉರುಳಿದ್ದರಿಂದ ನೆಲದ ಮೇಲೆ ಒಂದಿಂಚು ದಪ್ಪದ ದೂಳಿನ ಚಾಪೆ ಹಾಸಿದಂತಿತ್ತು. ಬಾಣ, ಮದ್ದನೂರ ಮತ್ತು ಕಲ್‌ಕೋಟೆ ಹಳ್ಳಿಗಳಿಗೆ ಒಂದೇ ಗ್ರಾಮ ಪಂಚಾಯತಿ. ಅದಕ್ಕೆ ಕಲ್‌ಕೋಟೆಯಲ್ಲಿದ್ದ ಲಡಾಸು ಮನೆಯೊಂದಕ್ಕೆ ಆಫೀಸು ಎಂದು ಅಸ್ತಿತ್ವ ದಾನ ಮಾಡಲಾಗಿತ್ತು. ಹೀಗಾಗಿ ಈ ಊರಿನ ನಾವೆಲ್ಲ ಉಳಿದೆರಡು ಹಳ್ಳಿಗಳಿಗಿಂತ ಒಂದು ಕೈ ಮೇಲೆ ಎಂದು ಬೀಗುತ್ತಿದ್ದೆವು. ನಮ್ಮ ಈ ಅರ್ಥವಿಲ್ಲದ ಅಭಿಮಾನದ ಫಲವಾಗೋ ಅಥವಾ ಸುತ್ತ ಇದ್ದ ಹಳ್ಳಿಗಳಿಗೆ ಕೇಂದ್ರವಾಗಿದ್ದರಿಂದಲೋ ಅಥವಾ ಹತ್ತಿರವೇ ಇದ್ದ ನಗರಕ್ಕೆ ಓಡಾಡುವುದು ಸುಲಭವೆಂದೋ, ಕೂಲಿ ಯೋಜನೆಯಲ್ಲಿ ಕೈ ಸವೆಸಿದ ರೈತರಿಗೆ ಪಗಾರ ಕೊಡಲು ಸರ್ಕಾರ ಮೈಕ್ರೋ ಬ್ಯಾಂಕೊಂದನ್ನು ಇಲ್ಲಿ ಸ್ಥಾಪಿಸಿತ್ತು.

ಇಂಥ ಬ್ಯಾಂಕಿನಲ್ಲಿ ಕರೆಂಟಿದ್ದರೆ, ಇಂಟರ್‌ನೆಟ್ ಇರುತ್ತಿರಲಿಲ್ಲ, ಎರಡೂ ಬರುವಷ್ಟರಲ್ಲಿ ಕಚೇರಿ ಸಮಯ ಮುಗಿದು ನಾನು ಪಟ್ಟಣ ಸೇರಿರುತ್ತಿದ್ದೆ. ಹೀಗಿರಲು ಆಕಸ್ಮಾತ್ ಎರಡೂ ಒಟ್ಟಿಗೆ ಬಂದಲ್ಲಿ ಹಣ ಪಡೆಯಲು ಒಂದು ದೊಡ್ಡ ಕ್ಯೂ ಇರುತ್ತಿತ್ತು. ತಾಸೆರಡು ತಾಸು ಸಾಲಿನಲ್ಲಿ ನಿಂತು ಹಣ ಸಿಗದೆ ಬೇಸರ ಮಾಡಿಕೊಂಡಿದ್ದ ಮಾರಪ್ಪನಿಗೆ “ನಿನ್ನ ಬೆರಳು ಸರಿಯಿಲ್ಲ'' ಎಂದು ನಾನು ಹೇಳಿದ್ದೇ ತಪ್ಪಾಗಿಹೋಗಿತ್ತು. ಆ ಮಾತಿನ ಹಿಂದಿದ್ದ ಸಿಟ್ಟಿಗೆ ಹಾಸ್ಯ ಬೆರೆಸಿ ಸಲುಗೆಯ ಪಾಲಿಶ್ ಕೊಟ್ಟಿದ್ದರೂ ತಾಳ್ಮೆ ಕಳೆದುಕೊಂಡಿದ್ದ ಆತ ಅವನ್ನೆಲ್ಲ ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮಾರಪ್ಪನ ಬೆರಳನ್ನು ಗುರುತಿಸದೇ, ಕಂಪ್ಯೂಟರ್ ಅದನ್ನು `ಇನ್‌ವ್ಯಾಲಿಡ್ ಮ್ಯಾಚ್' ಎಂದು ಪದೇ ಪದೇ ಹೇಳುತ್ತಿತ್ತು. ಸರ್ಕಾರ ಬಿಡುಗಡೆ ಮಾಡಿದ್ದ ಹಣ ನಿನಗೆ ಬೇಕೆಂದರೆ ನಿನ್ನ ಬೆರಳಚ್ಚನ್ನು ಕಂಪ್ಯೂಟರ್ ಗುರುತಿಸಬೇಕು ಎಂದು ಮಾರಪ್ಪನಿಗೆ ಹೇಳಿದ್ದೆ. ಆದರೆ ಇನ್‌ವ್ಯಾಲಿಡ್ ಎಂದು ಆ ಯಂತ್ರ ಕೂಗಿಕೊಳ್ಳುತ್ತಿದ್ದರೂ ಅದನ್ನು ಲೆಕ್ಕಿಸದೆ ಮತ್ತೆ ಪ್ರಯತ್ತಿಸುತ್ತಿದ್ದ ಮಾರಪ್ಪ. ಹತ್ತರಲ್ಲಿ ನಾಲ್ಕು ಜನರ ಬೆರಳನ್ನು ಈ ಯಂತ್ರ ಗುರುತಿಸದೆ ನಾನು ಪೇಚಿಗೆ ಸಿಲುಕಿದ್ದೆ. ಮಾರಪ್ಪ ಕೊನೆ ಪ್ರಯತ್ನವೆಂಬಂತೆ ತನ್ನ ಪಕ್ಕ ನಿಂತ ಮೊಮ್ಮಗನ ಬಾಯೊಳಗೆ ಹೆಬ್ಬೆರಳು ಇರಿಸಿ ನಂತರ ಅದನ್ನು ತನ್ನ ಮಾಸಿದ ಲುಂಗಿಗೆ ಉಜ್ಜುತ್ತ ಮತ್ತೆ ಪ್ರಯತ್ನ ಮುಂದುವರೆಸಿದ್ದ. ಆತನ ಹಿಂದೆ ರೈಲುಗಾಡಿಯಂತೆ ಬೆಳೆಯುತ್ತಿದ್ದ ಸಾಲನ್ನು ನೋಡಿ ತಾಳ್ಮೆ ಕಳೆದುಕೊಂಡ ನಾನು ಅವನ ಬೆರಳು ಏಕೆ ಸರಿಯಿಲ್ಲವೆಂದು ಹೇಳಿ ಪರಿಹಾರ ವಿವರಿಸುತ್ತಿದ್ದೆ: “ಅದಕ್ಕ ರಾತ್ರಿ ಮಲಗೋ ಮುಂದ ವ್ಯಾಸಲೀನ್ ಮುಲಾಮು ಹಚ್ಚು, ಕ್ರ್ಯಾಕ್ ಕ್ರೀಮ್ ಹಚ್ಚು'' ಎಂದು ನಾನು ಕಂಪ್ಯೂಟರ್ ಪರದೆ ನೋಡುತ್ತ ಹೇಳುವಷ್ಟರಲ್ಲಿ ನನ್ನ ಟೇಬಲ್ ಮೇಲೆ ರೆಕ್ಕೆ ಕಳೆದುಕೊಂಡ ಹಕ್ಕಿಯಂತೆ ಬಂದು ಬಿದ್ದದ್ದು ಮಾರಪ್ಪನ ಬೆರಳು.

ಕುಡುಗೋಲಿನ ಮೇಲೆ ಅದ್ಯಾವ ಪರಿ ಕಸುವು ಹಾಕಿದ್ದನೆಂದರೆ ಬೆಂಚಿನ ಮೇಲೆ ಬ್ಯಾಲೆನ್ಸ್ ಮಾಡಿಟ್ಟುಕೊಂಡು ಕಡಿದ ಬೆರಳು ಸಿಡಿದೆದ್ದು ಬಂದು ನನ್ನ ಟೇಬಲ್ಲಿನ ಮೇಲೆ ಬಿದ್ದಿತ್ತು. ಏನಾಯಿತು ಎಂದು ತಿಳಿಯಲು ನನಗೆ ಸ್ವಲ್ಪ ಸಮಯ ಹಿಡಿಯಿತು. ಮಾಡಿದ ಕೆಲಸಕ್ಕೆ ಸಂಬಳ ಪಡೆಯಲು ಭಿಕ್ಷೆ ಬೇಡುವವರಂತೆ ನಿಲ್ಲುವ ಸರದಿ ಹಳ್ಳಿಯ ರೈತರದ್ದು ಆಗಿತ್ತಾದರೂ, ಸಂಬಳ ಪಡೆಯದೆ ನಾಲ್ಕು ತಿಂಗಳಿಂದ ಕೆಲಸ ಮಾಡುತ್ತಿದ್ದ ನನಗೆ ಅವರ ಮೇಲೆ ಕನಿಕರವಿರಲಿಲ್ಲ. ಆದರೆ ಮಾರಪ್ಪ ಸುರಿಸಿದ್ದ ರಕ್ತ ಆ ಸಾಲಿಗೆ ಕಿಡಿ ಹಚ್ಚಿಹೋಗಿತ್ತು. ಕೂಲಿಗಳಾಗಿ ಮಾರ್ಪಟ್ಟಿದ್ದ ರೈತರ ಕಣ್ಣುಗಳು ಚೌತಿಗೆ ಹಚ್ಚುವ ಪಟಾಕಿಗಳಂತೆ ಸಿಡಿಯುತ್ತಿದ್ದವು. ಎಲ್ಲರೂ ಸೇರಿ ನನ್ನನ್ನು ಮೂಲೆಗೆ ತಳ್ಳುತ್ತಿರುವರೇನೋ ಎಂಬ ಭಯಕ್ಕೆ ನಾನು ಕುರ್ಚಿಯಲ್ಲಿ ಮುದುಡತೊಡಗಿದ್ದೆ.

ಹೊರಗೆ ಏನೋ ಗದ್ದಲ. ಹೊಸ್ತಿಲಿನಿಂದ ಟೇಬಲ್ಲಿನವರೆಗೆ ನಿಂತ ಸಾಲಿನಲ್ಲಿ ಪಿಸು ಪಿಸು. ಏನಾಗಿರಬಹುದು ಎಂದು ಊಹಿಸುತ್ತ, ಕೇಳಲು ಬಾಯಿ ತೆರೆಯುವಷ್ಟರಲ್ಲಿ ನಿರ್ವಿಣ್ಣನಾಗಿದ್ದ ಗುರುಬಸಪ್ಪ ಒಳಬಂದ. ಸಾವಿರ ಸಿಡಿಲು ಬಡಿಸಿಕೊಂಡಂತಾಗಿದ್ದ ಆತನ ಮುಖ ಗಾಬರಿಗೆ ಬಿಳಿಚಿಹೋಗಿತ್ತು. ಆತ ಹೇಳಿದ ಪ್ರಕಾರ: ಮಾರಪ್ಪ ಮನೆಗೆ ಹೋದವನೇ ಹೆಂಡತಿ, ಗಂಡನನ್ನು ಬಿಟ್ಟು ಬಂದಿದ್ದ ಮಗಳು ಮತ್ತು ಮೊಮ್ಮಗನನ್ನು ಕಡಿದು ಕೊಂದಿದ್ದ. ನಂತರ ತನ್ನ ಕುತ್ತಿಗೆಯನ್ನು ತಾನೇ ಕತ್ತರಿಸಿಕೊಂಡಿದ್ದ. ಮಾರಪ್ಪನ ಮನೆಯಲ್ಲಿ ಸೆಗಣಿ ಸಾರಿಸಿದ ನೆಲ ಈಗ ಹೇಗಿರಬಹುದೆಂದು ಊಹಿಸಲು ಹೋಗಿ ತತ್ತರಿಸಿದೆ. ಗುರುಬಸಪ್ಪನಿಗೆ ಮಾರಪ್ಪ ಹರಿಸಿದ ರಕ್ತ ಬಂಡಾಯದ ಬೆಂಕಿಗೆ ತುಪ್ಪವಾಗುತ್ತದಲ್ಲ ಎಂಬ ದುಗುಡ. ನಾನು ಏನೋ ಒಂದು ನೆಪಹೇಳಿ ಎಲ್ಲರನ್ನೂ ಸಾಗಹಾಕಿ, ಕಚೇರಿಗೆ ಬೀಗ ಜಡಿದು ಸೈಕಲ್ ಹತ್ತಿದವನೇ ಮನೆಯ ದಾರಿ ಹಿಡಿದೆ.

ವರ್ಷಕ್ಕೆ ನೂರು ದಿನ ಸಿಗುವ ದುಡಿಮೆ ಹೊಟ್ಟೆಯ ಬೆಂಕಿ ನಂದಿಸುತ್ತದೆ ಎಂದು ಮೊದಮೊದಲಿಗೆ ಮಾರಪ್ಪ ಸುಖಿಸಿದ್ದ. ಈ ಹೊಸ ಯೋಜನೆಯ ಫಲದಿಂದ ನನಗೆ ಮತ್ತು ಮಾರಪ್ಪನಿಗೆ ಒಂದೇ ದಿನ ಕೆಲಸ ಸಿಕ್ಕಿತ್ತು. ಉತ್ತರ ಕರ್ನಾಟಕದ ಹೊಟ್ಟೆಗಿಲ್ಲದ ಜಿಲ್ಲೆಯಿಂದ ಹೋಗಿ ಬೆಂಗಳೂರಿನಲ್ಲಿ ಡಿಗ್ರಿ ಮುಗಿಸಿಕೊಂಡವನಾಗಿದ್ದರೂ ಕೆಲಸ ಯಾವುದೂ ಸಿಗದೆ ಅಲೆದಾಡಿ ಬಡೇಸಾಬಿಯ ರಿಕ್ಷಾದಂತಾಗಿದ್ದೆ. ಕೊನೆಗೂ ಸಿಕ್ಕ ಸಣ್ಣ ಕೆಲಸ ಸಂಬಳ ತರುತ್ತಿರಲಿಲ್ಲ.

ಇತ್ತ ಪಾಳೇಗಾರ ಮನೆತನದಿಂದ ಬಂದಿದ್ದ ಮಾರಪ್ಪ ಇರುವ ಹೊಲವನ್ನು ಉಳುವುದಾಗದೆ ಕೈಚೆಲ್ಲಿ ಕುಳಿತಿದ್ದ. ಭೂಮಿತಾಯಿಯ ಅವಕೃಪೆಗೆ ಪಾತ್ರನಾದವನು ಅವನೊಬ್ಬನೇ ಅಲ್ಲ ಎಂಬುದು ತಿಳಿದದ್ದು ಸರ್ಕಾರ ಹೊರಡಿಸಿದ ಹೊಸ ಯೋಜನೆಯಿಂದ. ಹಾಗೆ ನೋಡಿದರೆ ಅದು ಕಲ್‌ಕೋಟೆಗೆ ಮಾತ್ರ ಸೀಮಿತವಾದ ಸಮಸ್ಯೆಯಾಗಿರಲಿಲ್ಲ. ದೇಶದ ಗ್ರಾಮಗಳು ಕಂಗಾಲಾಗಿರುವುದನ್ನು ದಿನಪತ್ರಿಕೆಗಳು ಹೊತ್ತು ತರುತ್ತಿದ್ದ ರೈತರ ಆತ್ಮಹತ್ಯೆಯ ಸುದ್ದಿಗಳು ಹೇಳುತ್ತಿದ್ದವು.

ಹೈಬ್ರಿಡ್ ತಳಿಯ ಬೀಜಗಳನ್ನು ಎಗ್ಗಿಲದೆ ಬಿತ್ತಿ ಹತ್ತಾರು ವರ್ಷ ಉಂಡು ತುಂಡಾಡಿದ ರೈತರಿಗೆ ಭೂಮಿತಾಯಿ ಬಂಜೆಯಾಗುತ್ತಿರುವುದು ತಿಳಿಯುವುದರೊಳಗಾಗಿ ತಾವು ಹಾಕಿದ ಸಸಿಗಳಿಗೆ ಎಂದೂ ಕಾಣದಂಥ ರೋಗಗಳು ಹುಟ್ಟಿಕೊಂಡಿದ್ದವು. ಸಾಲಗಾರರ ಕಾಟ, ಬ್ಯಾಂಕಿನವರ ಕ್ರೌರ್ಯ ಮತ್ತು ಖಾಲಿ ಹೊಟ್ಟೆಯ ಸಂಕಟಗಳಿಗೆ ಸೋತು ನೇಣುಕುಡಿಕೆಗೋ, ಬಾವಿಗೋ ಶರಣಾಗುತ್ತಿದ್ದ ಅನ್ನದಾತರು ಪ್ರತಿಪಕ್ಷಗಳಿಗೆ ಮದ್ದುಗುಂಡುಗಳಾದಾಗ ಸರ್ಕಾರ ಸಾಲ ಮನ್ನಾ - ಸಾವು ಮನ್ನಾ ಎಂಬ ಸರ್ಕಸ್ ಮಾಡಿ, ಕೊನೆಗೆ ರೈತರಿಗೆ ಉದ್ಯೋಗ ಖಾತ್ರಿ ಎಂದು ಅವರನ್ನು ಕೂಲಿಗೆ ಹಚ್ಚಿತ್ತು. ರೊಟ್ಟಿ ಕೇಳಿದವರ ಬಾಯಿಗೆ ಪಾಯಸ ಮೆತ್ತಿದಂತಾಗಿತ್ತು ರೈತರ ಸ್ಥಿತಿ.

ಸರ್ಕಾರದ ಯೋಜನೆಗಳ ತಲೆಬುಡ ತಿಳಿಯದಿದ್ದರೂ ಅವು ತಮ್ಮ ಹೊಟ್ಟೆಗೆ ತುಂಡು ರೊಟ್ಟಿಯಾದರೂ ನೀಡುತ್ತವೆ ಎಂಬ ಆಸೆಯ ಮೇಲೆ ಬಿತ್ತಲಾಗದ ಹೊಲವನ್ನು ಮರೆತು ರೈತರು ಕೂಲಿಗಳಾಗಿದ್ದರು. ಆದರೆ ಸರ್ಕಾರ ನೀಡಿದ್ದ ಹನ್ನೆರಡಂಕಿಯ ನಂಬರ್ ತಮ್ಮ ಜೀವನಕ್ಕೆ ಹೇಗೆ ಆಧಾರವಾಗುತ್ತದೆ ಎಂಬುದು ಅವರ ಬುದ್ಧಿ ಸಾಮರ್ಥ್ಯಕ್ಕೆ ಮೀರಿದ ಸಂಗತಿಯಾಗಿತ್ತು. ಈಗ ಸಂಬಳ ಪಡೆಯಲು ಅವಶ್ಯಕವಾದ ಬೆರಳಚ್ಚು ತಮ್ಮ ಸವೆದು ಹೋದ ಬೆರಳುಗಳಿಂದ ಮೂಡದಿದ್ದುದು ಅವರಿಗೆ ಸಿಟ್ಟು ತರಿಸಿತ್ತು. ಹತ್ತರಲ್ಲಿ ನಾಲ್ಕು ಜನರ ಬೆರಳನ್ನು ಈ ಯಂತ್ರ ಗುರುತಿಸದೆ ನಾನು ಪೇಚಿಗೆ ಸಿಲುಕಿದ್ದೆ. “ಮುಕ್ಳಿ ಹರಿಯಂಗ್ ಗೇಯ್ದಾಗ ಇವೆಲ್ಲ ಕೇಳ್ದಿರೋರ್ ಈಗ್ಯಾಕ್ ಹಿಂಗ್ ಮಾಡ್ತಾರ?'' ಎಂದು ಹಲವರು ತಮ್ಮ ಹತಾಶೆ ತೋಡಿಕೊಂಡಿದ್ದರು.

ಗುರುಬಸಪ್ಪ ಪಂಚಾಯತಿ ಪ್ರೆಸಿಡೆಂಟಾಗುವಷ್ಟರಲ್ಲಿ ಕೆಲಸಕ್ಕಾಗಿ ಎರಡು ವರ್ಷ ಅಲೆದು ನನ್ನ ಕಾಲಿನ ಚಪ್ಪಲಿ ಸವೆದು ಹೋಗಿತ್ತು. ಅಷ್ಟೊತ್ತಿಗಾಗಲೇ ಸಂಬಳ ಪಡೆಯಲು ಸರ್ಕಾರ ಪೋಸ್ಟಾಫೀಸಿನಲ್ಲಿ ಪಾಸ್‌ಬುಕ್ ಹಿಡಿದು ನಿಲ್ಲುತ್ತಿದ್ದ ರೈತರನ್ನು ಮೈಕ್ರೋಬ್ಯಾಂಕ್‌ಗಳ ಮುಂದೆ ಸಾಲು ನಿಲ್ಲಲು ಸೂಚಿಸಿತ್ತು. ಈ ಪುಟ್ಟಬ್ಯಾಂಕ್‌ಗಳನ್ನು ನಡೆಸುವ ಜವಾಬ್ದಾರಿಯನ್ನು ಪ್ರೈವೇಟ್ ಕಂಪೆನಿಗಳಿಗೆ ಕೊಡಲಾಗಿತ್ತು. ಹೀಗೆ ನಮ್ಮೂರಿನ ಮೈಕ್ರೋಬ್ಯಾಂಕ್ ಶಾಖೆಯ ಕಂಪೆನಿಯ ಮ್ಯಾನೇಜರ್‌ನೊಂದಿಗೆ ಗುರುಬಸಪ್ಪನ ಮಾಡಿಕೊಂಡ ಒಪ್ಪಂದದ ಮೇರೆಗೆ ಆ ಶಾಖೆಯ ದೇಖರೇಕಿಯನ್ನು ನೋಡಿಕೊಳ್ಳುವ ಕೆಲಸ ನನಗೆ ಕೊಡಲಾಯಿತು. ಇಂಥ ಪಂಚಾಯತಿ ಪ್ರೆಸಿಡೆಂಟು ಮೇಲ್ನೋಟಕ್ಕೆ ಶುಭ್ರನಾದರೂ ಆತ ತೆರೆಯ ಹಿಂದೆ ನಿಂತು ಸರ್ಕಾರಿ ಯೋಜನೆಗಳ ಸೂತ್ರಧಾರ ಎಂಬುದು ಎಲ್ಲರಿಗೂ ತಿಳಿದಿತ್ತು. ಪ್ರತಿದಿನ ಆತ ತೊಡುತ್ತಿದ್ದ ಬಿಳಿ ಪಂಚೆ, ಅಂಗಿಗಳು ಗುರುಬಸಪ್ಪನಿಗೆ ಹಲ್ಕಟ್ ಕೆಲಸಗಳನ್ನು ಗರ್ವದಿಂದ ಮಾಡಲು ಸಹಕರಿಸುತ್ತಿದ್ದವು.

ಯಾವ ರೈತನಿಗೆ ಎಷ್ಟು ಹಣ ಸಂದಾಯವಾಗಬೇಕು ಎಂಬುದು ಆತ ನಿರ್ಧರಿಸುತ್ತಿದ್ದುದು ತನಗೆ ಬರುತ್ತಿದ್ದ ಮಾಮೂಲು ಸಂದಾಯವಾದ ನಂತರವೇ. ಯೋಜನೆಯಡಿಯಲ್ಲಿ ಕಾಂಟ್ರಾಕ್ಟು ಪಡೆದ ಧರ್ಮಣ್ಣನಿಗೆ ಹಾಗೂ ಪಟ್ಟಣದಿಂದ ಆಗಾಗ ಬಂದಿಳಿಯುತ್ತಿದ್ದ ಅಧಿಕಾರಿಗಳಿಗೆ ಎಲ್ಲವನ್ನೂ ಒದಗಿಸಿ ಅವರ ಮನಸ್ಸನ್ನು ಗೆಲ್ಲುತ್ತಿದ್ದ ಗುರುಬಸಪ್ಪನನ್ನು ಎದುರುಹಾಕಿಕೊಳ್ಳುವ ಧೈರ್ಯ ಯಾರೂ ಮಾಡುತ್ತಿರಲಿಲ್ಲ. ಕೆಲವು ಸೋಮಾರಿ ರೈತರು ಕೆಲಸಕ್ಕೆ ಬಾರದಿದ್ದರೂ ಗುರುಬಸಪ್ಪನ ಸ್ನೇಹದ ದೆಸೆಯಿಂದ ಯೋಜನೆಯ ಫಲಾನುಭವಿಗಳಾಗಿದ್ದರು. ಇವರು ಪಡೆಯುತ್ತಿದ್ದ ಪುಗಸಟ್ಟೆ ಹಣದಲ್ಲಿ ಅರ್ಧ ಗುರುಬಸಪ್ಪನಿಗೇ ಸೇರುತ್ತಿತ್ತು.

ಅನ್ನವಿಲ್ಲದಿದ್ದರೂ ಅಭಿಮಾನಕ್ಕೆ ಎಂದೂ ಕಡಿಮೆಯಿಲ್ಲದ ಹಳ್ಳಿಯ ಜನರ ಅಸಹಾಯಕತೆಯೇ ಪುಡಿ ರಾಜಕಾರಣಿಗಳ ಅನ್ನವಾಗಿತ್ತು. ಅವರು ಎಲ್ಲ ತಿಂದು ಎಸೆದ ಚಿಲ್ಲರೆಗೆ ಕಾಯುತ್ತ ನಿಂತ ನನ್ನಂತಹವರು ಸಿಕ್ಕಿಬೀಳುತ್ತಿದ್ದುದು ಮಾಮೂಲಾಗಿತ್ತು. ಆದರೆ ಮಾರಪ್ಪನ ಸಾವು ಹಟಾತ್ ಬಂದದ್ದು.... ಸೈಕಲ್ ತುಳಿಯುತ್ತಿದ್ದ ನನ್ನ ತಲೆಯಲ್ಲಿ ನೂರಾರು ಯೋಚನೆಗಳು.

ದುರ್ಗಮ್ಮನ ದೇವಸ್ಥಾನದ ಮುಂದೆ ಸಾಗುತ್ತಿದ್ದ ನನ್ನನ್ನು ಯಾರೋ ಕರೆದಂತಾಗಿ ತಿರುಗಿನೋಡಿದರೆ, ಗುರಿಕಾರ ಶರಣಪ್ಪ. ಗಾಬರಿಗೆ ಏದುಸಿರು ಬಿಡುತ್ತ, “ಸಣ್ ಧಣ್ಯಾರ, ಅಪೀಸ್‌ಗೆ ಬೆಂಕಿ ಹಚ್ಯಾರಂತ. ಸಿಟ್ಟಿನ್ಯಾಗ ಏನ್ ನಡೀತೈತಿ ಗೊತ್ತಾಗಂಗಿಲ್ಲ, ನೀವ್ ಲಗೂನ ಮನೀಗ್ ಹೊಂಡ್ರಿ'' ಎಂದವನೇ ನಾಪತ್ತೆಯಾದ. ನನಗೆ ಅಷ್ಟೊತ್ತಿಗಾಗಲೇ ಜೀವದ ಮೇಲಿನ ಭಯ ಕಡಿಮೆಯಾಗಿತ್ತು. ಆದರೆ ಊರಜನ ತಮ್ಮ ಕಣ್ಣುಗಳಿಂದ ಎಸೆಯುತ್ತಿದ್ದ ಈಟಿಗಳು ನನ್ನನ್ನು ಚುಚ್ಚಿ ಕೊಲ್ಲುತ್ತಿದ್ದವು.

ಇತ್ತೀಚಿನ ದಿನಗಳಲ್ಲಿ ಮಾರಪ್ಪನಿಗೆ ತನ್ನ ಮನೆತನದ ಪಾಳೇಗಾರಿಕೆ ಬಗ್ಗೆ ಇದ್ದ ಕಥೆಗಳೂ ಮರೆತುಹೋಗಿದ್ದವು. ಊರ ಮಧ್ಯದ ಗುಡ್ಡದ ಸುತ್ತ ಉದುರಿಬೀಳುತ್ತ ಸಾಗಿದ್ದ ಕೋಟೆ, ಗುಡ್ಡ ಏರಿ ಹೋದರೆ ಕಾಣುವ ಆರಂಕಣದ ಮನೆಯ ಅವಶೇಷಗಳು ಅವನಿಗೆ ತನ್ನ ಪೂರ್ವಜರ ನೆನಪನ್ನು ತರುತ್ತಿರಲಿಲ್ಲ. ಗುಡ್ಡದ ತುದಿಗೆ ಇದ್ದ ಊರದೇವತೆ ತಾಯಮ್ಮನ ದೇವಸ್ಥಾನ ಮಾತ್ರ ಕೊಂಚ ನೆಮ್ಮದಿ ತರುತ್ತಿದ್ದುದರಿಂದ ಗುಡಿಯ ಮುಂದಿದ್ದ ಕಲ್ಲು ಬೆಂಚಿನ ಮೇಲೆ ಕುಳಿತು ಬೀಡಿ ಸುಡುವದು ಅವನ ಜೀವ ಉಳಿಸಿತ್ತು. ಅಲ್ಲಿ ತನ್ನಂತೆ ದಿಕ್ಕು ತೋಚದೆ ಕುಳಿತವರಿಗೆ, `ನಾನ್ನೂರು ವರ್ಷ ಅನ್ನ ಕೊಟ್ಟಾಕಿ ನಮ್ಮವ್ವ ಪಸಕ್ಕನ ನಮ್ಮ ಹೊಟ್ಯಾಗ ಕಲ್ಲು ಹಾಕಿಬಿಟ್ಲು' ಎಂದು ತನ್ನ ವಂಶದವರಿಗೆ ಅನ್ನಕೊಟ್ಟ ಭೂಮಿಯ ಕಥೆ ಹೇಳುತ್ತಿದ್ದ.

ಬದುಕಿದ್ದಷ್ಟು ದಿನ ಕಲ್‌ಕೋಟೆ ಹನುಮಪ್ಪ ವಿಜಯನಗರದ ಅರಸರಿಂದ ತನ್ನ ವಂಶದವರು ಪಡೆದ ಪಾಳೇಗಾರಿಕೆ, ನಂತರದ ದಿನಗಳಲ್ಲಿ ಆವರಿಸಿಕೊಂಡ ಕ್ಷಾಮ, ಹೊಟ್ಟೆ ಹಿಡಿದುಕೊಂಡೇ ಸತ್ತ ಜನ, ಪಾಳೇಗಾರಿಕೆ ಬಿಟ್ಟು ತುಂಡುಭೂಮಿಯಲ್ಲಿ ಜೋಳ, ನವಣಕ್ಕಿ ಬೆಳೆಯಲು ನಿಂತ ತನ್ನ ತಾತಂದಿರು, ಬೇರು ತಿಂದು ಬದುಕುಳಿದ ಜನ- ಎಲ್ಲದರ ಕತೆಯನ್ನು ತನ್ನ ಒಬ್ಬನೇ ಮಗ ಮಾರಪ್ಪನ ಕಿವಿಗೆ ಸುರಿಯುತ್ತಿದ್ದ. ಇದರಿಂದ ತನ್ನ ಮೂಲದ ಬಗ್ಗೆ ತಿಳಿದಿದ್ದ ಮಾರಪ್ಪ ವರ್ತಮಾನದಲ್ಲಿ ಕತ್ತಿಯ ಅಲುಗಿನ ಮೇಲೆ ನಡೆಯುವಾಗ ಸಿಟ್ಟಾಗುತ್ತಿದ್ದ. ಬೆಳೆ ಕೈಕೊಡಲು ಆರಂಭಿಸಿದ ಮೊದಲೈದು ವರ್ಷ ಸಣ್ಣಗೆ ಕುಸಿದಿದ್ದ. ಆರನೇ ವರ್ಷ ಭೂಮಿ ಕೈಚೆಲ್ಲಿದಾಗ ಕೆಂಡವಾದ. ಏಳನೇ ಏಟಿಗೆ ಹೆಗಲ ಮೇಲಿದ್ದ ಟವೆಲ್ಲನ್ನು ತೆಗೆದೊಗೆದು ಅರ್ಧ ಭೂಮಿ ಮಾರಿ, ಬಂದ ಹಣದಲ್ಲಿ ಇದ್ದೊಬ್ಬ ಮಗನನ್ನು ಓದಲೆಂದು ಪಟ್ಟಣಕ್ಕೆ ಕಳುಹಿಸಿಬಿಟ್ಟ. ಕಾಲೇಜು ಮುಗಿಸಿದ ಮಗ ಕೆಲಸ ಹಿಡಿದ ಮೇಲೆ ತಿಂಗಳಿಗಿಷ್ಟು ಎಂದು ಹಣ ಕಳುಹಿಸುತ್ತಿದ್ದನಾದರೂ ಕ್ರಮೇಣ ದೂರವಾಗಿದ್ದ. ನಂತರದ ದಿಗಳಲ್ಲಿ ಮಾರಪ್ಪ ಊರಿನ ಜನಕ್ಕೆ ಶಾಲೆಯಲ್ಲಿ ಓದುತ್ತಿರುವ ಮಕ್ಕಳನ್ನು ಬಿಡಿಸಿ ಹೊಲ ಉಳಲು ಕಲಿಸಿ ಎಂಬಂಥ ಸ್ಲೋಗನ್ನುಗಳನ್ನು ಹಾರಿಬಿಡಲು ಶುರುಮಾಡಿದ್ದ.

ಅಪ್ಪನ ಇಳಿವಯಸ್ಸು ಜಾತಿಯೆಂಬ ಕಾಣದ ಗೆರೆಯನ್ನು ಅಳಿಸಿ ಮಾರಪ್ಪನನ್ನು ನಮ್ಮ ಮನೆಯೊಳಗೆ ಬರಮಾಡಿಕೊಂಡಿತ್ತು. ಹಾಗೆ ನೋಡಿದರೆ ಮಾರಪ್ಪನಿರಲಿ, ಹಳ್ಳಿಯಲ್ಲಿದ್ದ ಯಾರೂ ನಮ್ಮ ಮನೆಗೆ ಅಪರಿಚಿತರಾಗಿರಲಿಲ್ಲ. ನನ್ನಜ್ಜನ ಕಾಲದಲ್ಲಿ ಹೊಸ್ತಿಲು ದಾಟದ ಮಾರಪ್ಪ, ಇತ್ತೀಚೆಗೆ ಅಪ್ಪನೊಂದಿಗೆ ಪಡಸಾಲೆಯಲ್ಲಿ ಕುಳಿತು ಸಾಂಗೋಪಾಂಗವಾಗಿ ಮಾತು ನಡೆಸುತ್ತಿದ್ದ. ಹಳ್ಳಿ ಬಿಟ್ಟು ಬರಲೊಲ್ಲದ ಅಪ್ಪ, ನಗರ ಜೀವನಕ್ಕೆ ಮಾರುಹೋಗಿದ್ದ ಹೆಂಡತಿ ಮಧ್ಯೆ ನನ್ನ ಇಷ್ಟಾರ್ಥಗಳು ಕಳೆದುಹೋಗಿದ್ದರೂ ಹೆಣ್ಣಿನ ಹಟದ ಮುಂದೆ ಸೋತು ಕಲ್‌ಕೋಟೆಯಿಂದ ಎಂಟು ಕಿಲೋಮೀಟರ್ ದೂರವಿರುವ ಪಟ್ಟಣದಲ್ಲಿ ನಾನು ಮನೆಮಾಡಬೇಕಾಗಿ ಬಂದಿತ್ತು. ಹೀಗಿರಲು ಒಂಟಿಯಾಗಿ ಉಳಿದ ಅಪ್ಪನಿಗೆ ಮಾರಪ್ಪ ಸ್ನೇಹಿತನಾಗಿದ್ದ. ಹಳ್ಳಿಯಲ್ಲಿ ಪ್ರತಿದಿನ ಕೆಲಸ ಮುಗಿಸಿ ಅಪ್ಪನ ಜತೆ ಕುಳಿತು ಹರಟಿದ ಮೇಲೆ ಸೈಕಲ್ ಚಕ್ರ ನಗರದ ಕಡೆಗೆ ಉರುಳುತ್ತಿತ್ತು.

ಅಪ್ಪನ ಮೌನ ಆತನಿಗೆ ಎಲ್ಲ ತಿಳಿದಿದೆ ಎಂದು ಸಾರಿ ಹೇಳುತ್ತಿತ್ತು. ಪಡಸಾಲೆಗೆ ಕಾಲಿಟ್ಟ ನನ್ನತ್ತ ಆತ ತಿರುಗಿ ಸಹ ನೋಡಲಿಲ್ಲ. ಕೈಕಾಲು ತೊಳೆದವನೇ ಅಡುಗೆ ಮನೆಗೆ ನುಗ್ಗಿ ಚಹಾ ಮಾಡಿ ತಂದಿಟ್ಟೆ. ಆದರೆ ಅದನ್ನು ಕುಡಿಯುವ ಮನಸ್ಸು ಆತನಿಗೆ ಇದ್ದಂತಿರಲಿಲ್ಲ. ಕುಡಿ ಎಂದು ಹೇಳುವ ಧೈರ್ಯ ನನ್ನಲ್ಲಿರಲಿಲ್ಲ. ಏನೋ ಹೇಳಲು ಬಾಯಿ ತೆರೆದಾತ ನನ್ನ ಮುಖ ನೋಡಿದ ಮೇಲೆ ಸುಮ್ಮನೆ ಕುಳಿತ. ಅಲ್ಲಿ ಆವರಿಸಿದ ಮೌನದಲ್ಲಿ ನಮ್ಮಿಬ್ಬರ ಮಧ್ಯೆ ಯಾವುದೇ ಮಾತುಕತೆಗಳು ನಡೆಯುವ ಲಕ್ಷಣ ತೋರಲಿಲ್ಲ. ಕತ್ತಲಾದ ನಂತರ ಸೈಕಲ್ ಹತ್ತಿ ಪೇಟೆಗೆ ಹೊರಡುವ ಸಾಹಸ ಇಂದು ಮಾಡಬಾರದೆಂದು ನಿರ್ಧರಿಸಿ ಚಪ್ಪಲಿ ಮೆಟ್ಟಿದವನೇ ಹೊರನಡೆದಿದ್ದೆ.

ಯಾಕೋ ಒಂದೇ ಸಮನೆ ಹೊಡೆದುಕೊಳ್ಳುತ್ತಿದ್ದ ಎದೆಯ ಕೂಗು, ಹಾದಿಯಲ್ಲಿ ಸಿಕ್ಕವರ ಕಣ್ಣಲ್ಲಿ ಏನಿದೆ ಎಂಬ ಹುಡುಕಾಟ, ದಾರಿಯ ಮಗ್ಗುಲಲ್ಲಿ ಬೆಳೆದ ಎಕ್ಕದ ಗಿಡಗಳ ಮರೆಯಿಂದ ಯಾರಾದರೂ ಜಿಗಿದು ಕುಡುಗೋಲು ಬೀಸಿದರೆ ಎಂಬ ಭಯ... ಕಲ್‌ಕೋಟೆ ದಾಟಿ ಪಟ್ಟಣ ಸೇರುವಷ್ಟರಲ್ಲಿ ಜೀವ ಹೋಗಿ ಬಂದಂತಾಗಿತ್ತು. ಮನೆಯ ಒಳಗಡೆ ಕಾಲಿಡುತ್ತಿದ್ದಂತೆ, “ಇವತ್ತೂ ಮರ‌್ತೀರೇನು?'' ಎಂಬ ಧ್ವನಿ ನನಗೆ ಇನ್ನೂ ಗೊತ್ತಿರದ ಅಪರಾಧವನ್ನು ನೆನಪಿಸುತ್ತಿತ್ತು.

ಮಾರ್ಕೆಟ್ಟಿಗೆ ಹೊರಡಲು ಸಿದ್ಧಳಾಗಿ ನಿಂತಿದ್ದ ಹೆಂಡತಿ ನನ್ನ ಮುಖದ ಛಾಯೆ ನೋಡಿ ಇನ್ನುಳಿದ ಕಂಪ್ಲೆಂಟನ್ನು ಗಂಟಲಿನಿಂದೊಳಕ್ಕೆ ದೂಡುವ ಯತ್ನ ನಡೆಸಿದ್ದಳು. ಆಗ ತಾನೆ ಕೈಕಾಲು, ಮುಖ ತೊಳೆದು ಕುಂಕುಮ ಹಚ್ಚಿಕೊಂಡು ಬಂದ ಮಗನ ಕಣ್ಣಲ್ಲಿದ್ದ ಆಸೆ ನೊಡಿದ ಮೇಲೆ ನನ್ನ ಅಪರಾಧ ತಿಳಿಯಿತು. ಸರ‌್ರನೆ ಹೊರನಡೆದವನೇ ಎರಡು ರಸ್ತೆ ಅಚೆ ಇದ್ದ ಬೇಕರಿಯಲ್ಲಿ ಚಾಕೊಲೇಟೊಂದನ್ನು ಕೊಂಡುತಂದೆ. ಮಗನ ಕೈಗೆ ಅದನ್ನು ಕೊಟ್ಟು ಹೆಂಡತಿಗೆ ಮಾರಪ್ಪನ ಅಂತ್ಯವನ್ನು ಹೇಳಿ ಮುಗಿಸುವಷ್ಟರಲ್ಲಿ ಮೈಯೊಳಗಿನ ಕಸುವು ಆರಿಹೋಗಿತ್ತು.

ಹೋದ ಜೀವಗಳ ಕುರಿತು ಕನಿಕರ ತೋರಿದಳಾದರೂ ಆಕೆಗೆ ಮಾರಪ್ಪನ ಸಾವಿನ ಸುತ್ತ ಇದ್ದ ರಾಜಕೀಯ ಕಿರಿಕಿರಿ ಉಂಟುಮಾಡಿತ್ತು. “ಮ್ಯಾಲ ಕುಂತವ್ರ ಕೋಟಿ ಕೋಟಿ ನುಂಗಿರ‌್ತಾರ, ಮಂದಿಗೇನು, ನೀವು ಹೆಂಗಿದ್ರೂ ನಿಮ್ಮನ್ನೇ ಅಂತಾರ ನೋಡ್ರಿ. ನಾಕು ತಿಂಗಳಿಂದ ಪಗಾರ ಇಲ್ಲಾಂದ್ರ ಹೆಂಗ್ ಬದುಕೋದು? ಬೇರೆ ಏನಾರ ಕೆಲಸ ಹಿಡೀರಿ'' ಎಂಬ ಆಕೆಯ ಉಪದೇಶ ನನ್ನನ್ನು ಮತ್ತೂ ಚಿಂತೆಗೆ ದೂಡಿದ್ದು ಆಕೆಗೆ ತಿಳಿಯಿತೇನೋ. ಕುರ್ಚಿಯಲ್ಲಿ ಕೈಚೆಲ್ಲಿ ಕುಳಿತಿದ್ದ ನನ್ನ ಹೆಗಲನ್ನು ನೆವರಿಸುತ್ತ ನನ್ನನ್ನು ಸಮಾಧಾನ ಮಾಡಲೆತ್ನಿಸುತ್ತಿದ್ದಳು. ಮಾರಪ್ಪನಂಥವರ ರಕ್ತ ಹರಿಸದೇ ಬದುಕುವುದು ನನಗೆ ಸಾಧ್ಯವಿಲ್ಲವೇ? ನಾಳೆ ಕಲ್ಕೋಟೆ ಜನರ ಮುಂದೆ ಹೇಗೆ ಹೋಗಲಿ? ಎಂಬಂತಹ ಪ್ರಶ್ನೆಗಳು ಬದುಕನ್ನು ಒಮ್ಮೆಗೇ ಭಾರವನ್ನಾಗಿಸಿದವು. ಇನ್ನು ಇಲ್ಲಿರುವುದು ಅಸಾಧ್ಯ ಎನ್ನಿಸಿ ಎದ್ದು ಹೊರನೆಡೆದೆ.

ಅವಳ ಕೈ ನನ್ನ ಹೆಗಲಿನಿಂದ ಜಾರಿ ಕುರ್ಚಿಯ ಬೆನ್ನಿನ ಮೇಲೆ ನಿಂತದ್ದು ನನ್ನ ಗಮನಕ್ಕೆ ಬಂದರೂ ಹಿಂತಿರುಗಿ ನೋಡುವ ಧೈರ್ಯವಿಲ್ಲದೇ ಹೊಸ್ತಿಲು ದಾಟಿದ್ದೆ. ಓಣಿಯ ತುದಿಯಲ್ಲಿದ್ದ ಅಂಗಡಿ ಎದುರಿನ ಕಾಯಿನ್ ಬಾಕ್ಸಿನ ಬಾಯಿಗೆ ಒಂದು ರೂಪಾಯಿ ನಾಣ್ಯ ಹಾಕಿ ಗುರುಬಸಪ್ಪನಿಗೆ ಫೋನಾಯಿಸಿದ್ದೆ. `ಪೋಲೀಸ್ನೋರ್ ಬಗ್ಗೆ ನೀ ಚಿಂತಿ ಮಾಡ್ಯಾಡ' ಎಂದು ಮಾತು ಶುರುಮಾಡಿದ ಆತ ನಂತರ ತೀರಾ ಸಹಜವಾಗಿ ಎಂಬಂತೆ ಮಾರಪ್ಪನ ಅಕೌಂಟಿನಲ್ಲಿ ಉಳಿದಿರುವ ಹಣ ಎಷ್ಟು ಎಂದು ಕೇಳಿದ್ದ. ನನ್ನಲ್ಲಿದ್ದ ಐದಾರು ರೂಪಾಯಿಗಳನ್ನು ಬಲಿಕೊಟ್ಟು ಫೋನಿಟ್ಟ ಮೇಲೆ ಮಾರಪ್ಪನ ಅಕೌಂಟು ನನ್ನ ನೆನಪಿಗೆ ಬಂತು: ಕಚೇರಿಯ ಬೀಗ ಗುರುಬಸಪ್ಪನ ಬಳಿಯಿದೆ, ಕಂಪ್ಯೂಟರ್ ಬಳಸಲು ಆತನ ಮಗನಿಗೆ ತಿಳಿದಿದೆ, ಎಲ್ಲಕ್ಕಿಂತ ಮುಖ್ಯವಾಗಿ ಮಾರಪ್ಪನ ದೇಹ ಮಣ್ಣೊಳಗೆ ಸೇರಿದರೂ ಕೊನೆತನಕ ಅವನಿಗೆ ಅರ್ಥವಾಗದೆಯೇ ಉಳಿದ, ಅವನ ಕೂಲಿ-ಸಂಬಳಕ್ಕೆ ಆಧಾರವಾಗಿದ್ದ ಸಾಲುದ್ದದ ನಂಬರ್ ಮತ್ತು ಕತ್ತರಿಸಿ ಒಗೆದ ಬೆರಳು ಇನ್ನೂ ಗುರುಬಸಪ್ಪನ ಬಳಿಯಿದೆ. ಇದ್ದಷ್ಟು ಹೊತ್ತು ಮಾರಪ್ಪನ ಕುರುಹಾಗಲು ನಿರಾಕರಿಸಿದ ಬೆರಳು ಆತ ಸತ್ತ ಮೇಲೆ ಅವನ ಅಸ್ತಿತ್ವವನ್ನೇ ಅಳಿಸಿಹಾಕಬಲ್ಲದು. ಅದೇ ಗುರುಬಸಪ್ಪನ ಚಾಲಾಕಿತನ. ಮಾರಪ್ಪ ಬೆವರು ಸುರಿಸಿ ಸಂಪಾದಿಸಿದ ಹಣ ಆತನ ರಕ್ತದ ಕುರುಹುಗಳನ್ನಳಿಸುವ ಉದ್ದೇಶಕ್ಕಾಗಿ ಪೋಲೀಸರ ಕೈಸೇರುವುದರಲ್ಲಿತ್ತು. ಏಕೋ ವಾಕರಿಕೆ ಉಬ್ಬರಿಸಿ ಬಂದಂತಾಗಿ ರಸ್ತೆಯ ಬದಿ ಬಾಗಿ ಮೂಗು ಹಿಡಿದು ನಿಂತೆ, ವಾಂತಿ ಬರಲಿಲ್ಲ.

ಓಣಿಯ ಬದಿಯಲ್ಲಿ ಆಟವಾಡುತ್ತಿದ್ದ ಮಗ ನನ್ನನ್ನು ನೋಡಿದವನೇ ಓಡಿಬಂದ. ತಲೆ ತುಂಬ ದೂಳು ತುಂಬಿಕೊಂಡಿದ್ದ ಅವನ ಕೈ ನಾನು ತಂದುಕೊಟ್ಟ ಕ್ಯಾಡ್ಬರೀಸ್ ಚಾಕಲೇಟಿನ ಕವರನ್ನು ಬಾಯಿಗೆ ಸಾಗಿಸುತ್ತಿತ್ತು. ಅವನ ಬಾಯ ತುದಿಯಿಂದ ಮಾರಪ್ಪನ ರಕ್ತ ಜಿನುಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT