ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ನಡುವೆ ಕುಗ್ಗದ ಹಬ್ಬದ ಸಂಭ್ರಮ

ಸಂಕ್ರಾಂತಿಯಂದು ಹೊರ ಸಂಚಾರದತ್ತ ಜನರ ಚಿತ್ತ
Last Updated 14 ಜನವರಿ 2013, 5:52 IST
ಅಕ್ಷರ ಗಾತ್ರ

ದಾವಣಗೆರೆ: ತರಕಾರಿ, ಬೇಳೆ-ಕಾಳು ಸೇರಿದಂತೆ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಭಾನುವಾರ ನಾಗರಿಕರು ಸಂಭ್ರಮದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರು. 

ಭಾನುವಾರ ನಗರದ ಮಾರುಕಟ್ಟೆಗಳಲ್ಲಿ `ಸಂಕ್ರಾಂತಿ' ಹಬ್ಬಕ್ಕೆ ಬೇಕಾದ ಸಾಮಾನುಗಳನ್ನು ಕೊಳ್ಳುವುದರಲ್ಲಿ ನಾಗರಿಕರು ಬ್ಯುಸಿಯಾಗಿದ್ದ ದೃಶ್ಯ ಕಂಡುಬಂತು. ಮಾರುಕಟ್ಟೆಯಲ್ಲಿ ಗ್ರಾಹಕರು ಹೂವು, ಹಣ್ಣು-ಹಂಪಲು ಮತ್ತು ಎಳ್ಳುಬೀರಲು ಬೇಕಾದ ಪದಾರ್ಥಗಳನ್ನು ಚೌಕಾಸಿ ಮಾಡಿ ಖರೀದಿಸಿದರು.

ತರಕಾರಿ ಬೆಲೆ ಗಗನಕ್ಕೆ...
ಅವರೇಕಾಯಿ 1ಕೆಜಿಗೆ ರೂ 40, ಸೌತೇಕಾಯಿ 1 ಕೆಜಿಗೆರೂ 30ರಿಂದ 40, ಜವಳೀಕಾಯಿ ಕೆಜಿರೂ 40, ಬಟಾಣಿ ಕೆಜಿರೂ 50 ... ಹೀಗೆ ಯಾವ ತರಕಾರಿ ಕೇಳಿದರೂ ಕೆಜಿಗೆರೂ  30ರಿಂದ 40 ಹೇಳ್ತಾರೆ. ಎಲ್ಲವೂ ನೆಪಮಾತ್ರಕ್ಕೆ ಎಂಬಂತೆ ತಲಾ ಕಾಲು ಕೆಜಿ ಖರೀದಿಸಿದ್ದೇನೆ. ತರಕಾರಿ ಬೆಲೆ ಜಾಸ್ತಿ ಆಯ್ತು ಅಂತ ಹಬ್ಬ ಮಾಡೋದು ಬಿಡೋಕ್ಕಾಗುತ್ತಾ? ಅಂತ ಪ್ರಶ್ನಿಸುತ್ತಾರೆ ಗೃಹಿಣಿ ಶಕುಂತಲಾ.

ಸಂಭ್ರಮಕ್ಕೆ ಇಲ್ಲ ಧಕ್ಕೆ
ಇನ್ನು ಹಬ್ಬಕ್ಕೆ ಮುಖ್ಯವಾಗಿ ಬೇಕಾದ ರೆಡಿಮೇಡ್ ಸಕ್ಕರೆ ಅಚ್ಚು 1 ಕೆಜಿಗೆರೂ 100-120, ಸಿದ್ಧಗೊಂಡ ಎಳ್ಳು-ಬೆಲ್ಲ ಮಿಶ್ರಣ ಕೆಜಿಗೆರೂ 140, ಬಿಡಿ ಬಿಳಿ ಸಕ್ಕರೆ ಹರಳು 100ಗ್ರಾಂಗೆರೂ 10, ಕುಸುರೆಳ್ಳು, ಜೀರಿಗೆ ಪೆಪ್ಪರ್‌ಮೆಂಟು... ಹೀಗೆ ಎಳ್ಳು ಬೀರಲು ಬೇಕಾದ ಸಾಮಾನುಗಳೆಲ್ಲಾ ಕೆಜಿಗೆ ರೂ 100ರ ಗಡಿ ದಾಟಿವೆ. ಆದರೂ, ನಗರವಾಸಿಗಳ ಹಬ್ಬದ ಸಂಭ್ರಮಕ್ಕೆ ಇದು ಧಕ್ಕೆ ತಂದಿಲ್ಲ. ಹಳ್ಳಿಗರಿಗಿಂತ ಸಿಟಿಯವರೇ ಹೆಚ್ಚಿನ ಸಂಖ್ಯೆಯಲ್ಲಿ ಸಿದ್ಧಗೊಂಡ ಎಳ್ಳುಬೆಲ್ಲ ಮಿಶ್ರಣ ಖರೀದಿಸುತ್ತಿದ್ದಾರೆ ಎನ್ನುತ್ತಾರೆ ಮಾರಾಟಗಾರ ಶಿವನಗೌಡ ಟಿ. ಪಾಟೀಲ್.

ಹೊರ ಸಂಚಾರದತ್ತ: ಈ ಬಾರಿ ಟಿವಿ ಸ್ಟೇಷನ್, ತುಂಗಭದ್ರಾ ನದಿ ದಂಡೆಯಲ್ಲಿ ಅಷ್ಟಾಗಿ ನೀರಿಲ್ಲ. ಪ್ರತಿಬಾರಿಯೂ ಹೊರಸಂಚಾರಕ್ಕೆ ತೆರಳಿ, ಕುಟುಂಬ ಸಮೇತ ರೊಟ್ಟಿಬುತ್ತಿ ಊಟ ಮಾಡುವುದು ವಾಡಿಕೆ. ಈ ಬಾರಿ ಕೊಂಡಜ್ಜಿ, ಹರಿಹರ, ಆನಗೋಡು ಅಥವಾ ಯಾವುದಾದರೂ ಪಾರ್ಕ್‌ಗೆ ಹೋಗೋಣ ಅಂತ ಪ್ಲಾನ್ ಮಾಡಿಕೊಂಡಿದ್ದೇನೆ. ನೋಡ್ಬೇಕು ಯಾವುದು ಅನುಕೂಲ ಆಗುತ್ತೋ ಅಲ್ಲಿಗೆ ಹೋಗ್ತೀವಿ ಅಂತಾರೆ ಕಾಲೋಜೊಂದರ ಸಿಬ್ಬಂದಿ ಡಿ. ಜಲಂಧರ್.

ರೆಡ್ಡಿ ಕ್ಯಾಂಪ್‌ನಲ್ಲಿ `ಕಿಚ್ಚು' ಸಂಭ್ರಮ
ಹಿಂದೆ ಗ್ರಾಮೀಣ ಭಾಗದಲ್ಲಿ  ದನ-ಕರುಗಳಿಗೆ ರೋಗ ಬಾರದಂತೆ ತಡೆಯಲು `ಕಿಚ್ಚು' ಹಾಯಿಸುತ್ತಿದ್ದರು. ಆದರೆ, ಈಗ ಅಷ್ಟಾಗಿ ಇದನ್ನು ರೈತರು ಆಚರಿಸುತ್ತಿಲ್ಲ. ಈ ಭಾಗದಲ್ಲಿ ಆಂಧ್ರದಿಂದ ಬಂದ ರೆಡ್ಡಿ ಕ್ಯಾಂಪುಗಳಲ್ಲಿ `ಕಿಚ್ಚು' ಹಾಯಿಸುವ ಪದ್ಧತಿ ಇದೆ. ಉಳಿದಂತೆ ಪುಣ್ಯಕ್ಷೇತ್ರಗಳಾದ ಭೈರನಪಾದ, ಉಕ್ಕಡಗಾತ್ರಿ, ತೀರ್ಥರಾಮೇಶ್ವರಕ್ಕೆ ತೆರಳಿ ಗಂಗೆಪೂಜೆ ಮಾಡಿ, ಎಳ್ಳುಹಚ್ಚಿದ ರೊಟ್ಟಿ ಊಟ ಮಾಡ್ತಾರೆ. ಕೆಲವರು ಎತ್ತುಗಳಿಗೆ ಅಲಂಕಾರ ಮಾಡಿ ಸಂಭ್ರಮಪಡುತ್ತಾರೆ ಎನ್ನುತ್ತಾರೆ ಹರಿಹರ ತಾಲ್ಲೂಕು ವಾಸನ ಗ್ರಾಮದ ರೈತ ಓಂಕಾರಪ್ಪ.ಒಟ್ಟಿನಲ್ಲಿ ಬೆಲೆ ಏರಿಕೆಯ ನಡುವೆಯೂ ಜಿಲ್ಲೆಯ ಜನರು ಸಂಕ್ರಾಂತಿ ಹಬ್ಬಕ್ಕೆ ಸಜ್ಜಾಗಿದ್ದಾರೆ.

ಸಂಕ್ರಾಂತಿ ಶುಭಾಶಯಗಳು
`ಎಳ್ಳುಬೆಲ್ಲ ಸವಿಯೋಣ-ಒಳ್ಳೆಯ ಮಾತನಾಡೋಣ' ಎಂಬ ಸಂದೇಶ ಸಾರುವ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ  ಎಲ್ಲರ ಬಾಳು ಸುಖ-ಶಾಂತಿ, ಸಮೃದ್ಧಿಯಿಂದ ಕೂಡಿರಲಿ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT