ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ನಿಯಂತ್ರಣಕ್ಕೆ ಸಿಐಟಿಯು ಆಗ್ರಹ

Last Updated 14 ಡಿಸೆಂಬರ್ 2013, 5:33 IST
ಅಕ್ಷರ ಗಾತ್ರ

ಕಾರವಾರ: ಬೆಲೆ ಏರಿಕೆ ನಿಯಂತ್ರಣ, ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದತಿ, ಬೆಲೆ ಏರಿಕೆಗೆ ತಕ್ಕ ಕನಿಷ್ಠ ಕೂಲಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸದಸ್ಯರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಸಮಾವೇಶಗೊಂಡ ನೂರಾರು ಸದಸ್ಯರು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ಖಾಸಗೀಕರಣ ಮುಂತಾದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಘೋಷಣೆ ಕೂಗಿದರು.

‘ಕೇಂದ್ರ ಕಾರ್ಮಿಕ ಸಂಘಟನೆಗಳು ದೇಶದ ಕಾರ್ಮಿಕರ ಹಾಗೂ ಜನ ಸಾಮಾನ್ಯರ ಹಿತದೃಷ್ಟಿಯಿಂದ ದುಡಿಯುವ ಜನರ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ನಿರಂತರ ಹೋರಾಟಗಳನ್ನು ನಡೆಸುತ್ತಾ ಬಂದಿವೆ. ಆದರೆ, ಸರ್ಕಾರಗಳು ಬೆಲೆ ಏರಿಕೆ ನಿಯಂತ್ರಿಸಲು ಯಾವುದೇ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಲು ಕಾಳಜಿ ವಹಿಸುತ್ತಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

‘ವರ್ಷವಿಡೀ ನಿರಂತರವಾಗಿ ಮಾಡಬೇಕಾದ ಕಾಯಂ ಕೆಲಸಗಳನ್ನು ಗುತ್ತಿಗೆ ಪದ್ಧತಿಯಲ್ಲಿ ನಿರ್ವಹಿಸುವ ಮೂಲಕ ಕಾರ್ಮಿಕರನ್ನು ತೀವ್ರ ಶೋಷಣೆಗೆ ಗುರಿ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಡಿಯಲ್ಲಿ ಗುತ್ತಿಗೆ ಪದ್ಧತಿಯಲ್ಲಿ ದುಡಿಯುವ ಕಾರ್ಮಿಕರನ್ನು ಒಳಗೊಂಡು ಸಾರ್ವಜನಿಕ ಕ್ಷೇತ್ರದ ಹಾಗೂ ಖಾಸಗಿ ರಂಗದ ಕೈಗಾರಿಕೆಗಳಲ್ಲಿಯೂ ಕನಿಷ್ಠ ವೇತನ, ಭವಿಷ್ಯನಿಧಿ, ಇಎಸ್ಐ, ಬೋನಸ್ ಮತ್ತು ಗ್ರಾಚ್ಯುಟಿ ಸೌಲಭ್ಯಗಳನ್ನು ಜಾರಿಗೊಳಿಸದೆ ನಿರಾಕರಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಭಾರತ ರಾಷ್ಟ್ರೀಯ ಕಾರ್ಮಿಕರ ಸಮ್ಮೇಳನದ ಶಿಫಾರಸ್ಸಿನಂತೆ ಕೂಡಲೇ ಅಂಗನವಾಡಿ, ಆಶಾ, ಬಿಸಿಯೂಟ ಹಾಗೂ ಇತರೇ ಯೋಜನಾ ಕೆಲಸಗಾರರನ್ನು ಕಾರ್ಮಿಕರು ಎಂಬ ಶಬ್ದದ ವ್ಯಾಪ್ತಿಗೆ ತರಬೇಕು. ಕಾರ್ಮಿಕರಿಗೆ ನೀಡಲಾಗುವ ಎಲ್ಲಾ ಸೌಲಭ್ಯಗಳನ್ನು ಅವರಿಗೂ ನೀಡಬೇಕು’ ಎಂದು ಒತ್ತಾಯಿಸಿದರು.

ಮನವಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರಧಾನ ಮಂತ್ರಿಗೆ ಬರೆದ ಮನವಿ ಪತ್ರವನ್ನು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಇಮ್‌ಕೋಂಗ್ಲಾ ಜಮೀರ್‌ ಅವರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಮುನಾ ಗಾಂವಕರ್‌, ಉಪಾಧ್ಯಕ್ಷ ಕಲ್ಪನಾ ನಾಯ್ಕ, ತಾಲ್ಲೂಕು ಕಾರ್ಯದರ್ಶಿ ಮೋಹಿನಿ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT