ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ವಿರುದ್ಧ ವಿವಿಧೆಡೆ ಪ್ರತಿಭಟನೆ

Last Updated 9 ಜನವರಿ 2014, 6:28 IST
ಅಕ್ಷರ ಗಾತ್ರ

ಹಾವೇರಿ: ಅಡುಗೆ ಅನಿಲ ಹಾಗೂ ಆಟೊ ಎಲ್‌ಪಿಜಿ ದರ ಏರಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಕಾರ್ಯಕರ್ತೆಯರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯ ಮಹಿಳಾ ಘಟಕದ ಕರೆಯ ಮೇರೆಗೆ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಕ್ಷದ ಮಹಿಳಾ ಕಾರ್ಯಕರ್ತರು ನಗರದ ಸಿದ್ದಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿದರಲ್ಲದೇ, ಅಲ್ಲಿಯೇ ಒಲೆ ಹೂಡಿ ಕಟ್ಟಿಗೆ ಇಟ್ಟು ಅಡುಗೆ ತಯಾರಿಸುವ ಅಣಕು ಪ್ರದರ್ಶನ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ನಗರದ ಪುರಸಿದ್ದೇಶ್ವರ ದೇವಸ್ಥಾನ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು, ಎಂ.ಜಿ.ರಸ್ತೆ, ಗಾಂಧಿ ವೃತ್ತ, ಜೆ.ಪಿ.ವೃತ್ತದ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿದರು. ಮೆರವಣಿಗೆ ಉದ್ದಕ್ಕೂ ಅಡುಗೆ ಅನಿಲದ ಸಿಲಿಂಡರ್ ಅನ್ನು ಸೈಕಲ್‌ ಮೇಲಿಟ್ಟುಕೊಂಡು ಮೆರವಣಿಗೆ ನಡೆಸಿದರಲ್ಲದೇ. ಅದಕ್ಕೆ ಪೂಜೆ ಸಲ್ಲಿಸುವ ಮೂಲಕ ಇನ್ನೂ ಮುಂದೆ ಇದು ಕೂಡಾ ಪೂಜಾ ವಸ್ತುವಾಗಲಿದೆ ಎಂಬುದನ್ನು ಮಾರ್ಮಿಕವಾಗಿ ತೋರ್ಪಡಿಸಿದರು.

ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಮಂಜುಳಾ ಕರಬಸಮ್ಮನವರ ಮಾತನಾಡಿ, ಅಡುಗೆ ಅನಿಲ ದರದಲ್ಲಿ ರೂ. ೨೨೦ ಏರಿಕೆಯಾಗಿದ್ದು ಹಾಗೂ ಆಟೊ ಗ್ಯಾಸ್ ದರದಲ್ಲಿ ಕೆಜಿಗೆ ರೂ. ೧೧.೩೦ ಏರಿಕೆಯಾಗಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ಅಡುಗೆ ಅನಿಲ ಬಳಸದ ಸ್ಥಿತಿಯನ್ನು ಕೇಂದ್ರ ಸರ್ಕಾರ ತಂದಿಟ್ಟಿದೆ ಎಂದು ಆರೋಪಿಸಿದರು.

ಸಬ್ಸಿಡಿ ಹಣವನ್ನು ನೇರವಾಗಿ ಖಾತೆಗೆ ಸಂದಾಯ ಮಾಡುವ ಉದ್ದೇಶದ ಹಿಂದೆ ಸಾಮಾನ್ಯ ಜನರಿಗೆ ಅರ್ಥವಾಗದಂತೆ ದರ ಹೆಚ್ಚಿಸುವ ಹುನ್ನಾರ ಅಡಗಿದೆ ಎಂಬುದನ್ನು ಕೇಂದ್ರ ಸರ್ಕಾರ ತೋರಿಸಿಕೊಟ್ಟಿದೆ ಎಂದು ಹೇಳಿದರು.

ಮಹಿಳಾ ಮೋರ್ಚಾ ಶಹರ ಘಟಕದ ಅಧ್ಯಕ್ಷೆ ಜ್ಯೋತಿ ಸಾತೇನಹಳ್ಳಿ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಐದು ವರ್ಷದಲ್ಲಿ ಕೇವಲ ಮೂರು ಬಾರಿ ಅಡುಗೆ ಅನಿಲದ ಬೆಲೆ ಹೆಚ್ಚಳ ಮಾಡಿದ್ದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ೩೦ಕ್ಕಿಂತ ಹೆಚ್ಚು ಬಾರಿ ಇಂಧನ ಹಾಗೂ ಅನಿಲ ಬೆಲೆ ಹೆಚ್ಚಳ ಮಾಡಿದೆ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಭೋಜರಾಜ ಕರೂದಿ, ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ಮಳ್ಳೂರ, ವೀರೇಶ ಜಾಲವಾಡಗಿ, ವೆಂಕಟೇಶ ದೈವಜ್ಞ, ಮಾಲತಿ ಪಲ್ಲೇದ, ಸೋಮೇಶ ಕುರ್ಡೇಕರ, ಗೀತಾ ಜುಜಗಾಂವ, ನಜಮುನ್ನಿಸಾ ನದಾಫ್, ಲಲತಾ ಗುಂಡೇನಹಳ್ಳಿ, ಗ್ರಾಮೀಣ ಘಟಕದ ಅಧ್ಯಕ್ಷೆ ನೀಲಮ್ಮ ಭಜಂತ್ರಿ, ಲಕ್ಷ್ಮವ್ವ ಕುರಿ, ಪ್ರೇಮಾ ಹುಲ್ಲೂರ, ಸೌಭಾಗ್ಯ ಹಿರೇಮಠ, ದಿಲ್ಶಾದ್‌ ಪಠಾಣ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.  

ರಾಣೆಬೆನ್ನೂರು ವರದಿ

ರಾಣೆಬೆನ್ನೂರು: ಕೇಂದ್ರ ಸರ್ಕಾರ ದಿನನಿತ್ಯ ಬಳಕೆಯ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ  ಬೆಲೆ ಗಗನಕ್ಕೇರಿಸಿದ್ದನ್ನು ಖಂಡಿಸಿ ಇಲ್ಲಿನ ಬಿಜೆಪಿ ಮಹಿಳಾ ಮೋರ್ಚಾ ಘಟಕದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ, ನಂತರ ತಹಶೀಲ್ದಾರ್‌ ಹನುಮಂತಪ್ಪ ಬಡದಾಳೆ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಭಾರತಿ ಜಂಬಗಿ ಮಾತನಾಡಿ, ಕೇಂದ್ರ ಸರ್ಕಾರ ಏಕಾಏಕಿ ಗ್ಯಾಸ್‌, ಪೆಟ್ರೋಲ್, ಡಿಜೆಲ್‌ಗಳ ದರವನ್ನು ಏರಿಸುತ್ತಿರುವುದು ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷೆ ಮೈತ್ರಾ ಹದಡಿ, ನಗರ ಘಟಕ ಅಧ್ಯಕ್ಷೆ ರೂಪಾ ಬಾಕಳೆ ಅವರು ಮಾತನಾಡಿ, ಅಗತ್ಯ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಬೇಕು ತಪ್ಪಿದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಗೀತಾ ಜಂಬಗಿ, ಗಂಗಮ್ಮ ಹಾವನೂರ, ವಿದ್ಯಾ, ಸರೋಜಾ ಐಗಳ್ಳ, ಗಿರಿಜಮ್ಮ ನಿಡಗುಂದಿ, ಜಯವ್ವ ಹೊನ್ನಳ್ಳಿ, ರತ್ನವ್ವ ಮಾಕನೂರಮಠ, ಜಯಲಕ್ಷ್ಮಿ, ಪೂರ್ಣಿಮಾ ಕುರುವತ್ತಿ, ನೀಲಾಂಬಿಕಾ, ಅನ್ನಪೂರ್ಣ ಕಿಚಡಿ, ಮಂಜುಳಾ ಮಣೇಗಾರ, ವಿಜಯಾ ಮಣೇಗಾರ, ಈರವ್ವ ಮಣೇಗಾರ, ಬಸವರಾಜ ಲಕ್ಷ್ಮೇಶ್ವರ, ಜಿಪಂ ಸದಸ್ಯ ಮಂಜುನಾಥ ಓಲೇಕಾರ, ಕೆ,ಎನ್.ಕೋರಧಾನ್ಯಮಠ, ಸಂಕಪ್ಪ ಮಾರನಾಳ, ವೀರಣ್ಣ ಅಂಗಡಿ, ಪ್ರವೀಣ ಕೋಪರ್ಡೆ  ಉಪಸ್ಥಿತರಿದ್ದರು.

ಹಿರೇಕೆರೂರು ವರದಿ
ಹಿರೇಕೆರೂರ:
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ  ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ವಜ್ಞ ವೃತ್ತದಲ್ಲಿ ತಹಶೀಲ್ದಾರ್ ಶಕುಂತಲಾ ಚೌಗಲಾ ಅವರಿಗೆ ಮನವಿ ಸಲ್ಲಿಸಿದರು.
ಎಲ್‌ಪಿಜಿ ಸಿಲಿಂಡರ್ ಹಾಗೂ ಆಟೊ ಎಲ್‌ಪಿಜಿ ದರವನ್ನು ಹೆಚ್ಚಿಸಿದ ಕೇಂದ್ರ ಸರ್ಕಾರ ಜನ ಸಾಮಾನ್ಯರ ಬದುಕಿಗೆ ಹೊರೆ ಮಾಡಿದೆ.

ಕೂಡಲೇ ಇವುಗಳ ಬೆಲೆಯನ್ನು ಇಳಿಸಬೇಕು. ಅಗತ್ಯ ವಸ್ತುಗಳ ಬೆಲೆ ಇಳಿಸಲು ಕಠಿಣ ಕ್ರಮ ಕೈಗೊಂಡು ಸಾಮಾನ್ಯ ಜನತೆಗೆ ಅನುಕೂಲ ಮಾಡಿಕೊಡಬೇಕು. ದೇಶದಲ್ಲಿ ಹೆಚ್ಚಿದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಆರ್.ಅಂಗಡಿ, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಚಳಗೇರಿ, ಮಹಿಳಾ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷೆ ಗಿರಿಜಮ್ಮ, ಜಿಲ್ಲಾ ಪಂಚಾಯ್ತಿ ಸದಸ್ಯೆ ಬಸಮ್ಮ ಅಬಲೂರ, ಕಂಠಾಧರ ಅಂಗಡಿ, ನಿಂಗಮ್ಮ ಅಂಗಡಿ, ನಾಗಪ್ಪ ಎಡಂಗಳಿ, ಕೊಟ್ರಯ್ಯ ಹಿರೇಮಠ, ಹನುಮಂತಪ್ಪ ಪೂಜಾರ, ಜಯಶೀಲಾ ಬಡಿಗೇರ, ರಂಗಮ್ಮ ಸೊರಟೂರ, ರತ್ನಾ ಪಟ್ಟಣಶೆಟ್ಟಿ, ಕವಿತಾ ಬಡಿಗೇರ ಇತರರು ಹಾಜರಿದ್ದರು.

ಬ್ಯಾಡಗಿ ವರದಿ
ಬ್ಯಾಡಗಿ :
ಕೇಂದ್ರದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಅಡುಗೆ ಅನಿಲ ಮತ್ತು ಆಟೊ ಎಲ್‌ಪಿಜಿ ಬೆಲೆ ಹೆಚ್ಚಿಸಿರುವುದನ್ನು ಖಂಡಿಸಿ ಬಿಜೆಪಿ ತಾಲ್ಲೂಕು ಘಟಕದ ಸದಸ್ಯರು ಮಹಿಳಾ ಮೋರ್ಚಾ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಶಿವಶಂಕರ ನಾಯಕ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಹಿಳಾ ಮೋರ್ಚಾದ ಅಧ್ಯಕ್ಷೆ ಗಿರಿಜಾ ಪಟ್ಟಣಶೆಟ್ಟಿ ಮಾತನಾಡಿ ಹಲವಾರು ಹಗರಣಗಳಲ್ಲಿ ಸಿಲುಕಿರುವ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಅಗತ್ಯವಸ್ತುಗಳ ಬೆಲೆ ಏರಿಸುವ ಮೂಲಕ ಜನ ಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹಾಕಿದೆ ಎಂದು ಆರೋಪಿಸಿದರು. ಪ್ರಧಾನಿ ಮನಮೋಹನ ಸಿಂಗ್ ಒಬ್ಬ ಆರ್ಥಿಕ ತಜ್ಞರಾಗಿದ್ದರೂ ಬೆಲೆ ಏರಿಕೆಯನ್ನು ತಡೆಯುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಸರಳಾ ಕಬ್ಬೂರ ಮಾತನಾಡಿ ಅಡುಗೆ ಅನಿಲ ಮತ್ತು ಆಟೊ ಗ್ಯಾಸ್‌ ಬೆಲೆ ಏರಿಸಿರುವ ಕೇಂದ್ರ ಸರ್ಕಾರಕ್ಕೆ ಜನ ಸಾಮಾನ್ಯರ ನೋವನ್ನೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದರು. ಪ್ರತಿಭಟನೆಯಲ್ಲಿ ಮಧು ಮುಚ್ಚಟ್ಟಿ, ಶಿವಕ್ಕ ಅಂಗಡಿ, ಗುತ್ತೆಮ್ಮ ಮಾಳಗಿ, ತಾಲ್ಲೂಕು ಘಟಕದ ಅಧ್ಯಕ್ಷ ರಾಮಣ್ಣ ಉಕ್ಕುಂದ, ಕಾರ್ಯದರ್ಶಿ ಮಲ್ಲಿಕಾರ್ಜುನ ದೊಡ್ಮನಿ, ಮುಖಂಡರಾದ ಬಿ.ಬಿ.ಬಂಗೇರ, ವೀರಭದ್ರಗೌಡ ಹೊಮ್ಮರಡಿ, ವಿರೇಂದ್ರ ಶೆಟ್ಟರ, ಸುರೇಶ ಅಸಾದಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಅಕ್ಕಿ ಆಲೂರ ವರದಿ
ಅಕ್ಕಿಆಲೂರ:
ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವ ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇಲ್ಲಿ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪತಹಶೀಲ್ದಾರ್‌ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು.

ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಗೀತಾ ಪೂಜಾರ ಮಾತನಾಡಿ,  ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆಡಳಿತದ ಎಲ್ಲ ಕ್ಷೇತ್ರಗಳಲ್ಲಿ ಸಂಪೂರ್ಣ ವಿಫಲಗೊಂಡಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗುತ್ತಿದ್ದರೂ ಅದನ್ನು ನಿಯಂತ್ರಿಸುವಲ್ಲಿ ಗಮನ ನೀಡದೇ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ಕೇಂದ್ರದ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

  ಮಹಿಳಾ ಮೋರ್ಚಾ ಹಾನಗಲ್ಲ ತಾಲ್ಲೂಕು ಘಟಕದ ಅಧ್ಯಕ್ಷೆ ಗೌರಮ್ಮ ಪೂಜಾರ, ಕಾರ್ಯದರ್ಶಿ ಸುಜಾತಾ ಸವಣೂರ ಮಾತನಾಡಿ, ಬೆಲೆ ಏರಿಕೆಯಿಂದ ಬಸವಳಿದಿರುವ ದೇಶದ ಜನಸಾಮಾನ್ಯರು ಕಾಂಗ್ರೆಸ್ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಸುಶಿಲಾ ಹಳ್ಳಿಯವರ, ತಬಸ್ಸುಮ್‌ ಹಕೀಂ, ಸಾವಿತ್ರಮ್ಮ ಗಾಮನಗಟ್ಟಿ, ಲತಾ ಹಳ್ಳಿಯವರ, ಚಂದ್ರಕಾಂತ ಕೂಬಿಹಾಳ, ಪ್ರಕಾಶ ರಸಾಳಕರ, ಯಶೋಧರ ಹದಳಗಿ, ಅನ್ನಕ್ಕ ಚಿಕ್ಕಮಠ, ಗಾಯಿತ್ರಿ ಬೆಟಗೇರಿ, ಪ್ರೇಮಾ ಎಂ.ಬಿ., ಸಾವಿತ್ರಾ ಬಡಿಗೇರ, ರಾಜಣ್ಣ ನೀರಲಗಿ, ಶಶಿಧರ ಕುರ್ಡೇಕರ, ಧರಣೇಂದ್ರಪ್ಪ ಹದಳಗಿ, ಶಿವಣ್ಣ ಪೂಜಾರ, ಮಂಜಣ್ಣ ಕೋಡೇರ, ಕಮಲಮ್ಮ ಪೂಜಾರ, ಕುಮಾರ ಕೋಡೇರ ಸೇರಿದಂತೆ ಇತರರು ಈ ವೇಳೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT