ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ; ಸರ್ಕಾರವೇ ಪರಿಹಾರ ನೀಡಲಿ

Last Updated 21 ಫೆಬ್ರುವರಿ 2012, 9:35 IST
ಅಕ್ಷರ ಗಾತ್ರ

ಬೀರೂರು:ಜನಸಾಮಾನ್ಯರು ಇಂದು ಜೀವನ ನಡೆಸುವುದೇ ದುಸ್ತರವಾಗಿದ್ದು, ಇದಕ್ಕೆ ಕಾರಣವಾಗಿರುವ ಕಾರ್ಪೊರೇಟ್ ಸಂಸ್ಥೆಗಳನ್ನು ಸರ್ಕಾರಗಳು ಓಲೈಸುತ್ತಿರುವುದು ದುರದೃಷ್ಟಕರ ವಿಷಯ. ಜನರ ಸಮಸ್ಯೆಗಳಿಗೆ ಸರ್ಕಾ ರವೇ ಪರಿಹಾರ ಒದಗಿಸಬೇಕು ಎಂದು ಎಸ್‌ಯುಸಿಐ (ಸೊಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯ) ಸದಸ್ಯ ವಿಜಯಕುಮಾರ್ ಒತ್ತಾಯಿಸಿದರು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ  ಭಾನುವಾರ ಹಮ್ಮಿಕೊಂಡಿದ್ದ ಬೀದಿ ನಾಟಕ ಪ್ರದರ್ಶನದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಉದಾರೀಕರಣದ ಪರಿ ಣಾಮವಾಗಿ ಯುವಕರ ನೈತಿಕತೆಯ ಮೇಲೆ ಅಶ್ಲೀಲ ಚಿತ್ರಗಳು, ಸಾಹಿತ್ಯ ಮತ್ತು ಜಾಹೀರಾತುಗಳ ಮೂಲಕ ಅವ್ಯಾಹತ ದಾಳಿ ನಡೆದಿದ್ದು, ಯುವಜನರ ಬೆನ್ನೆಲುಬು ಮುರಿಯುವ ಮೂಲಕ ದೇಸೀತನಕ್ಕೆ ಧಕ್ಕೆ ಉಂಟಾ ಗುತ್ತಿದೆ  ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

 ಇನ್ನು ಬಹುರಾಷ್ಟ್ರೀಯ ಕಂಪೆನಿಗಳ ಹಿಡಿತಕ್ಕೆ ಸಿಕ್ಕಿ ನಲುಗುತ್ತಿರುವ ರೈತ ಗೊಬ್ಬರ, ಬೀಜ,ಕೃಷಿ ಯಂತ್ರೋಪಕರಣಗಳು ಮತ್ತು ಮಾರುಕಟ್ಟೆ ಸೇರಿದಂತೆ ಇಡೀ ಭಾರತೀಯ ಕೃಷಿ ಪದ್ಧತಿಯನ್ನೇ ಇವರಿಗೆ ಒತ್ತೆ ಇಟ್ಟಂತೆ ಆಗಿದೆ ಎಂದರು.

 ದೇಶದ ಬಡ ರೈತರ ಬದುಕು ಹಸನಾಗಿಸಬೇಕಾದ ಸರ್ಕಾರಗಳು ವಿದೇಶಿ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ರೈತರಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ನಿಲ್ಲಿಸಿ ಧನವಂತರಿಗೆ ವಿಶೇಷ ಪ್ಯಾಕೇಜ್ ಘೋಷಿಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ ಎಂದರು.

ಈ ಎಲ್ಲ ದುರಂತಗಳಿಂದ ಜನರನ್ನು ರಕ್ಷಿಸಲು ಸರ್ಕಾರಗಳು ರೈತರ ಆತ್ಮಹತ್ಯೆಗೆ ತಡೆ,ಆಹಾರಧಾನ್ಯಗಳ ಬೆಲೆ ನಿಯಂತ್ರಣ ಮತ್ತು ಸ್ವಾಮ್ಯ, ರೈತರ ಸಾಲ ಮನ್ನಾ, ಭ್ರಷ್ಟಾಚಾರಕ್ಕೆ ಶಿಕ್ಷೆ, ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳ ಖಾಸಗೀಕರಣ ಮತ್ತು ವ್ಯಾಪಾರೀಕರಣಕ್ಕೆ ತಡೆ, ಮಹಿಳೆಯರ ಮೇಲಿನ ದೌರ್ಜನ್ಯ, ಮಹಿಳೆ ಮತ್ತು ಮಕ್ಕಳ ಮಾರಾಟದಂತಹ ಹೀನಕೃತ್ಯಗಳ ವಿರುದ್ಧ ಕಠಿಣಕ್ರಮ, ಉದ್ಯೋಗ ಮೂಲ ಹಕ್ಕಾಗಿ ಘೋಷಣೆ, ಜನಸಾಮಾನ್ಯರಿಗೆ ಸಾಮಾಜಿಕ ಭದ್ರತೆಗೆ ಒತ್ತಾಯಿಸಿ  ಮಾ. 14ರಂದು ಸಮಿತಿಯ ವತಿಯಿಂದ ಸಂಸತ್‌ನ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

  ಆತ್ಮಹತ್ಯೆಗೆ ಶರಣಾದ ಗುಲ್ಬರ್ಗಾದ ರೈತ ಸುಬ್ಬಣ್ಣಯ್ಯ ಅವರನ್ನು ಕುರಿತು ಡಾ.ಮಂಜುನಾಥ್ ರಚಿಸಿದ `ಮಣ್ಣಾದ ಮಣ್ಣಿನ ಮಕ್ಕಳು~ ಬೀದಿನಾಟಕ ಪ್ರದರ್ಶಿಸಲಾಯಿತು ಮತ್ತು ಪಾರ್ಲಿಮೆಂಟ್ ಚಲೋ ಅಂಗವಾಗಿ ಸಾರ್ವಜನಿಕರಿಂದ ಸಹಿ ಸಂಗ್ರಹಿಸಲಾ ಯಿತು. ಕಾರ್ಯಕ್ರಮದಲ್ಲಿ ವಿವೇಕ್,ಗುರುಪ್ರಸಾದ್,ರವಿಕುಮಾರ್, ವೇಣುಗೋಪಾಲ್, ರಂಗನಾಥ್,ಈರಣ್ಣ, ವಿನಾಯಕ್, ಬೀರೂರಿನ ಸಾಮಾಜಿಕ ಸೇವಾ ಸಂಘದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಾಲ್ಗೊಂಡರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT