ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಕುಸಿತ; ಕಲ್ಪವೃಕ್ಷಕ್ಕೆ ಕೊಡಲಿ ಪೆಟ್ಟು!

Last Updated 21 ಡಿಸೆಂಬರ್ 2012, 7:56 IST
ಅಕ್ಷರ ಗಾತ್ರ

ಅರಸೀಕೆರೆ: ಕಲ್ಪತರು ನಾಡು ಎಂದೇ ಹೆಸರು ಪಡೆದಿದ್ದ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ತೆಂಗು. ಆದರೆ ತೆಂಗು ಬೆಳೆಗಾರ ನುಸಿಪೀಡೆ, ಬೆಂಕಿ ರೋಗ, ಕೃಷಿ ಕಾರ್ಮಿಕರ ಕೊರತೆ, ತೆಂಗಿನ ಕಾಯಿ ಹಾಗೂ ಕೊಬ್ಬರಿ ಬೆಲೆ ಕುಸಿತ ಮುಂತಾದ ಸಮಸ್ಯೆಗಳಿಂದ ಕುಗ್ಗಿ ಹೋಗಿದ್ದಾನೆ.

ಸತತ ನಷ್ಟ ಅನುಭವಿಸಿರುವ ರೈತರು ತೆಂಗಿನ ಮರಗಳನ್ನು ಕಡಿದು ಹಾಕಿ ಈ ಬೆಳೆಗೇ ವಿದಾಯ ಹೇಳುತ್ತಿದ್ದಾರೆ.ಒಂದು ಕಾಲದಲ್ಲಿ ರಾಜಾಶ್ರಯ ಪಡೆದು ಸಮೃದ್ಧಿಯಾಗಿ ಬೆಳೆದು ತೆಂಗು ಇತ್ತೀಚೆಗೆ ತನ್ನ ಮೆರುಗು ಕಳೆದುಕೊಳ್ಳುತ್ತಿದೆ.

ವರ್ಷದಿಂದ ವರ್ಷಕ್ಕೆ ತೆಂಗಿನ ಉತ್ಪಾದನೆ ಇಳಿಮುಖವಾಗುತ್ತಿದ್ದು, ಬೆಳೆಯ ವಿಸ್ತೀರ್ಣವೂ ಕುಗ್ಗುತ್ತಿದೆ. ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೈಜ್ಞಾನಿಕ ಬೆಲೆ ನೀಡದೆ ಇರುವುದರಿಂದ ರೈತರ ಬದುಕು ಮುಳ್ಳಿನ ಮೇಲಿನ ನಡಿಗೆಯಾಗಿದೆ. ರೈತರು ಈಗ ಪರ್ಯಾಯ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ.

ಬರಗಾಲದ ಬರೆ
ಧಾರಣೆ ಕುಸಿತ, ನುಸಿಪೀಡೆ, ಕಪ್ಪುಹುಳುಗಳ ಬಾಧೆ ಮುಂತಾದ ರೋಗಗಳಿಂದ ಕಂಗಾಲಾಗಿರುವ ತೆಂಗು ಬೆಳೆಗಾರರಿಗೆ ಬರಗಾಲ ಬಂದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಳೆಯ ಅಭಾವದಿಂದ ಕೊಳವೆ ಬಾವಿಗಳು ಬರಿದಾಗುತ್ತಿವೆ.

ಭೂಮಿಯಲ್ಲಿ ತೇವಾಂಶವಿಲ್ಲದೆ ತೆಂಗಿನ ಮರಗಳು ಒಣಗಿ ಹೋಗುತ್ತಿವೆ. ಕೂಲಿ ದರ ಗಗನಕ್ಕೇರಿದೆ, ಈ ಎ್ಲ್ಲಲ ಕಾರಣಗಳಿಂದ ಬೆಳೆಗಾರರು ತೆಂಗು ಬೆಳೆಯಿಂದ ವಿಮುಖರಾಗುತ್ತಿದ್ದಾರೆ.

ತಾಲ್ಲೂಕಿನಲ್ಲಿ ಸುಮಾರು 26,845 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಪ್ರತಿ ಹೆಕ್ಟೇರ್‌ಗೆ 120 ರಿಂದ 124 ತೆಂಗಿನ ಸಸಿಗಳಂತೆ ಒಟ್ಟು 33 ಲಕ್ಷಕ್ಕೂ ಅಧಿಕ ತೆಂಗಿನ ಮರಗಳಿವೆ ಎಂದು ತೋಟಗಾರಿಕಾ ಇಲಾಖೆಯ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ತೆಂಗು ಬೆಳೆ ಅಭಿವೃದ್ಧಿಗೆ ಮಾಡಿದ ಸಾಲ ತೀರಿಸಲಾಗದೇ ಬಹಳಷ್ಟು ರೈತರು ತೆಂಗಿನ ಮರಗಳನ್ನು ಕಡಿದು ಹಾಕಿ ದಾಳಿಂಬೆ ಬೆಳೆಯತ್ತ ಮುಖ ಮಾಡಿದ್ದಾರೆ.

ಏಳೆಂಟು ವರ್ಷಗಳ ಹಿಂದೆ ಕುಸಿತದ ಹಾದಿಯಲ್ಲಿದ್ದ ಕೊಬ್ಬರಿ ಮಾರುಕಟ್ಟೆ 2007-08ನೇ ಸಾಲಿನಲ್ಲಿ ಚೇತರಿಕೆ ಕಂಡಿತ್ತು. ಪ್ರತಿ ಕ್ವಿಂಟಲ್ ಕೊಬ್ಬರಿ ಧಾರಣೆ 7500 ರೂಪಾಯಿಯಿಂದ 8200 ರೂಪಾಯಿವರೆಗೆ ಏರಿಕೆಯಾಗಿ ತೆಂಗು ಬೆಳೆಗಾರರ ಸಂತಸಕ್ಕೆ ಎಡೆಯಿಲ್ಲದಂತಾಗಿ ಇನ್ನೇನು ತೆಂಗು ಬೆಳೆಗಾರರನ್ನು ಯಾರೂ ಹಿಡಿಯಲಾರರು ಎಂಬಂತಾಗಿತ್ತು.

ಈಗ ಕಾಯಿ ಜತೆಗೆ, ಕೊಬ್ಬರಿ ಮತ್ತು ತೆಂಗಿನ ಎಣ್ಣೆ ಧಾರಣೆಯೂ ಕುಸಿದಿದೆ. ಹಿಂದೆಲ್ಲಾ ತೆಂಗಿನ ಬೆಲೆ ಕುಸಿದಾಗ ರೈತರು ಬೇಸಿಗೆಯವರೆಗೆ ಕಾದು ಕೊಬ್ಬರಿ ಮಾಡಿ ಮಾರಾಟ ಮಾಡಿ ಆಗಿರುವ ನಷ್ಟವನ್ನು ತುಂಬಿಕೊಳ್ಳುತ್ತಿದ್ದರು. ಆದರೆ ಈ ಬಾರೀ ಬೆಲೆ ಕುಸಿತ ಕಲ್ಪವೃಕ್ಷಕ್ಕೆ ಕೊಡಲಿ ಪೆಟ್ಟು ಕೊಟ್ಟಿದೆ.

ಅಧಿಕ ಉತ್ಪಾದನೆ ಮತ್ತು ಕಡಿಮೆ ಬಳಕೆಯೇ ಈಗಿನ ಬೆಲೆ ಕುಸಿತಕ್ಕೆ ಕಾರಣವಾಗಿದೆ ಎನ್ನುತ್ತಾರೆ ಡಿ.ಎಂ.ಕುರ್ಕೆಯ ಎಂ.ಜಿ. ಲೋಕೇಶ್. ಕಳೆದ ಹಂಗಾಮಿನಲ್ಲಿ ಭಾರಿ ಬೆಳೆ ಬಂದಿದ್ದು, 40 ದಿನಗಳಿಗೊಮ್ಮೆ ಕೊಯ್ಲು ಆಗುತ್ತಿತ್ತು, ಇದು ಸಮಸ್ಯೆಯಾಗಿತ್ತು ಎಂದು ವ್ಯಾಖ್ಯಾನಿಸುತ್ತಾರೆ. 

ಕೃಷಿ ಉತ್ಪನ್ನ ಮಾರುಕಟ್ಟೆಗೆ ಭಾರಿ ಪ್ರಮಾಣದಲ್ಲಿ ಕೊಬ್ಬರಿ ಬಂದಿಳಿಯುತ್ತಿರುವುದರಿಂದ ಸಹಜವಾಗಿಯೇ ಖರೀದಿದಾರರು ಅಗ್ಗದ ದರಕ್ಕೆ ಖರೀದಿಗಿಳಿದಿದ್ದಾರೆ. ದಲ್ಲಾಳಿಗಳು ಮಾರುಕಟ್ಟೆಯ ಮೇಲೆ ಬಿಗಿ ಹಿಡಿತ ಹೊಂದಿದ್ದಾರೆ ಎಂಬುದು ತೆಂಗು ಬೆಳೆಗಾರರ ಆರೋಪವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT