ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ದೀಪಾವಳಿ... ಮೋಡ ಕವಿಯದಿರಲಿ

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಭಾರತೀಯ ಹಬ್ಬಗಳ ಸಾಲಿನಲ್ಲಿ ದೀಪಾವಳಿಗೆ ಅಗ್ರ ಸ್ಥಾನವಿದೆ. ಇದೊಂದು ಸಡಗರ ಸಂಭ್ರಮದ ಹಬ್ಬ ಬಡವ-ಬಲ್ಲಿದರೆಲ್ಲರೂ ಉಂಡುಟ್ಟು ಸಂಭ್ರಮಿಸುವ ದೀಪಾವಳಿ. ಕೆಲವು ಸಲ ನಮ್ಮ ದಿವ್ಯ ನಿರ್ಲಕ್ಷ್ಯದಿಂದ ಆತಂಕದ, ಅವಘಡಗಳ ಸರಮಾಲೆಯಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ.

ಹೌದು, ಪಟಾಕಿ ಮತ್ತು ಸುಡುಮದ್ದಿನ ಅವಾಂತರಗಳಿಗೆ ಲೆಕ್ಕವೇ ಇಲ್ಲ. ಪ್ರತಿವರ್ಷ ಇಂತಹ ಅಹಿತಕರ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ದೊಡ್ಡ ದೊಡ್ಡ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ಮೂರು ದಿನಗಳ ಕಾಲವಾದರೂ ವಿವಿಧ ರೀತಿಯ ಸುಡುಮದ್ದನ್ನು ಸಿಡಿಸುವ ಹಾಗೂ ಪಟಾಕಿ ಹಾರಿಸುವ ಪದ್ಧತಿ ಇದೆ.

ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಸಿಡಿಮದ್ದಿನ ಅನಾಹುತಗಳೇನೂ ಕಡಿಮೆ ಆಗುತ್ತಿಲ್ಲ. ಹರುಷದ ಹೊನಲು ಹರಿಸಬೇಕಾದ ಬೆಳಕಿನ ಹಬ್ಬದಲ್ಲಿ ಕೆಲವು ಸಲ ಸೂತಕದ ಛಾಯೆ ಆವರಿಸಿ ಬಿಡುತ್ತದೆ.

ಸಾಮಾನ್ಯವಾಗಿ ಕೈಯಲ್ಲಿ ಪಟಾಕಿ ಹಿಡಿದು ಸಿಡಿಸುವಾಗ ಅನಾಹುತ ಉಂಟಾಗುತ್ತದೆ. ಪಟಾಕಿ, ಅಟಂಬಾಂಬ್, ರಾಕೆಟ್ ಇತ್ಯಾದಿ ಹಾರಿಸುವಾಗ ಮೈ-ಕೈ ಸುಟ್ಟುಕೊಳ್ಳುವ ಪ್ರಕರಣಗಳು ಸಂಭವಿಸುತ್ತವೆ. ರಸ್ತೆಯಲ್ಲಿ ಸಿಡಿದ ಪಟಾಕಿಯಿಂದ ಗಾಬರಿಗೆ ಒಳಗಾಗಿ ದ್ವಿಚಕ್ರ ಸವಾರಿಗಳು ಬಿದ್ದು ಆಘಾತಕ್ಕೆ ಈಡಾಗುವುದು ಮಾಮೂಲು.

ಈ ತರಹದ ಅನಾಹುತಗಳಲ್ಲದೇ ಪಟಾಕಿ ಸಿಡಿಮದ್ದಿನಿಂದ ಕಣ್ಣಿನ ಆಘಾತ, ಗಾಯ, ತೊಂದರೆಗಳು ಸಂಭವಿಸುತ್ತವೆ. ಕೆಲವು ಸಲ ದೃಷ್ಟಿಯನ್ನೇ ಕಳೆದುಕೊಳ್ಳುವ ಆಘಾತಗಳು ಸಂಭವಿಸುತ್ತವೆ. ಇದರ ಒಟ್ಟು ಪರಿಣಾಮವೇ ಸಂಭ್ರಮಿಸಬೇಕಾದ ಬೆಳಕಿನ ದೀಪಾವಳಿ ಹಬ್ಬ ಕೆಲವರ ಅದರಲ್ಲೂ ಮಕ್ಕಳ ಪಾಲಿಗೆ ಕಾರ್ಗತ್ತಲೆಯ ಕೂಪವಾಗಿ ಮಾರ್ಪಡುತ್ತದೆ. ಇಷ್ಟಕ್ಕೆಲ್ಲ ಕುಟುಂಬದ ಹಿರಿಯರ ಬೇಜವಾಬ್ದಾರಿತನ, ನಿರ್ಲಕ್ಷ್ಯವೇ ಕಾರಣ.

ಕಣ್ಣು ಇಂದ್ರಿಯಗಳ ರಾಜ
ಮಾನವನ ದೇಹದ ಅತಿ ಸೂಕ್ಷ್ಮ ಅಂಗ, ಇಂದ್ರಿಯಗಳ ರಾಜ ಕಣ್ಣು. ಕಣ್ಣು ಪಂಚೆಂದ್ರಿಯಗಳಲ್ಲಿ ಅತೀ ಮುಖ್ಯವಾದದ್ದು, ಹೊರ ಜಗತ್ತಿನ ವಿಸ್ತಾರವನ್ನು ವಿಜೃಂಭಿಸಿ ತೋರಿಸುವುದು ಕಣ್ಣು. ನಾವು ಶೇಕಡಾ 80ರಷ್ಟು ಪಾಲು ಜ್ಞಾನವನ್ನು ಕಣ್ಣುಗಳಿಂದ ಪಡೆದುಕೊಳ್ಳುತ್ತೇವೆ.

ಇಷ್ಟೊಂದು ಮಹತ್ವವುಳ್ಳ ಸೂಕ್ಷ್ಮವಾದ ದೇಹದ ಅಂಗ ಅನೇಕ ಅಪಘಾತಗಳಿಗೆ ಒಳಗಾಗುವುದು ಸಹಜ. ಅಪಘಾತದ ತೀವ್ರತೆ ಹೆಚ್ಚಿದ್ದಲ್ಲಿ ಕಣ್ಣು ತನ್ನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತದೆ. ನಮ್ಮ ಕಣ್ಣಿನ ರಕ್ಷಣಾ ಕ್ರಮ ಗರ್ಭದಿಂದ ಗೋರಿಯವರೆಗೆ ಅವ್ಯಾಹತವಾಗಿರಬೇಕು. ಇಂಥ ರಕ್ಷಣಾ ಕ್ರಮಗಳಿಂದ ಕುರುಡುತನ ತಡೆಗಟ್ಟಬಹುದು.

ದೀಪಾವಳಿಯ ಅಪಘಾತಗಳು
ಮದ್ದು ಗುಂಡುಗಳಿಂದಾಗಿ ನಾನಾ ರೂಪದಲ್ಲಿ ಕಣ್ಣಿಗೆ ಹಾನಿ ಸಂಭವಿಸಬಹುದು. ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯವಾಗುವುದು, ಮದ್ದುಗುಂಡು ಸಿಡಿಯುವಾಗಿನ ಶಾಖ, ಮದ್ದಿನಲ್ಲಿನ ರಾಸಾಯನಿಕಗಳು ಕಣ್ಣಿಗೆ ತಾಗುವುದು, ಸಿಡಿಯುವ ಪಟಾಕಿಗೆ ಮುಚ್ಚಿಟ್ಟ ಡಬ್ಬಿ ಅಥವಾ ಗರಟೆಯಂಥ ವಸ್ತುಗಳು ಸಿಡಿಯುವುದು- ಹೀಗೆ ನಾನಾ ಮಾರ್ಗಗಳ ಮೂಲಕ ಕಣ್ಣಿಗೆ ತೊಂದರೆ ಉಂಟಾಗಬಹುದು.

ಶಾಖ ಹಾಗೂ ಸಿಡಿಯುವ ರಭಸದಿಂದ ಸಂಭವಿಸುವ ಕಣ್ಣಿನ ತೊಂದರೆಗಳು ಅಂಧತ್ವಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚು. ಇಲ್ಲಿ ಪಟಾಕಿ ಹಚ್ಚುವವರಿಗಿಂತ ಅದನ್ನು ನೋಡುತ್ತಿರುವವರು ತೊಂದರೆಗೆ ಒಳಗಾಗುವುದು ಹೆಚ್ಚು.

ಪಟಾಕಿ ಹಚ್ಚುವವರು ಅದರ ಬಗ್ಗೆ ಸ್ವಲ್ಪವಾದರೂ ಜಾಗೃತಿಯಿಂದ ಇರುತ್ತಾರೆ. ನೋಡಲು ನಿಂತವರು ನಿರ್ಲಕ್ಷ್ಯದಿಂದ ಮೈಮರೆತಿರುವುದೇ ಜಾಸ್ತಿ. ಈ ರೀತಿ ನಿರ್ಲಕ್ಷ್ಯ ಬಿಟ್ಟು ಸಿಡಿಮದ್ದು ಪ್ರದರ್ಶನ ನೋಡುವವರೂ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ.

ಹೂವಿನ ಕುಂಡದ ಸ್ಫೋಟ, ಯದ್ವಾತದ್ವಾ ಹಾರಿ ಮುನ್ನುಗ್ಗುವ ರಾಕೆಟ್‌ಗಳು, ಭಾರಿ ಸದ್ದು ಮಾಡುವ ಬಾಂಬ್‌ನಂಥ ಸ್ಫೋಟಕಗಳು, ಮಲ್ಟಿಸೌಂಡ್ ಸಿಡಿಮದ್ದುಗಳು ಕಣ್ಣಿಗೆ ಹಾನಿ ಉಂಟುಮಾಡುವುದು ಹೆಚ್ಚು.

ಹಾಗಾಗಿ ಇವುಗಳಿಂದ ಆದಷ್ಟು ದೂರವಿರುವುದು, ಹೆಚ್ಚಿನ ಮುಂಜಾಗ್ರತೆ ತೆಗೆದುಕೊಳ್ಳುವುದು ತೀರಾ ಅಗತ್ಯವಾಗಿದೆ. ಪ್ರತಿ ವರ್ಷ ಹೊಸ ಹೊಸ ರೀತಿಯ ಸಿಡಿಮದ್ದುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ.

ಅವು ಸಿಡಿಯುವ ರೂಪ. ಹಚ್ಚುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಹೀಗೆ ಯಾವುದರ ಬಗ್ಗೆಯೂ ಆ ಸಿಡಿಮದ್ದಿನ ಪೊಟ್ಟಣದ ಮೇಲೆ ಬರೆದಿರುವುದಿಲ್ಲ. ಅದನ್ನು ಮಾರುವ ಅಂಗಡಿಯವರೆಗೂ ಅವುಗಳ ಬಗ್ಗೆ ಮಾಹಿತಿ ಇರುತ್ತದೆ ಎನ್ನಲಾಗುವುದು. ಇಂಥ ನೂತನ ಸಿಡಿಮದ್ದು ಸಿಡಿಸುವಾಗ ಆದಷ್ಟು ಎಚ್ಚರಿಕೆ ತೆಗೆದುಕೊಳ್ಳಬೇಕು.

ಪಾಲಿಸಬೇಕಾದ ಮುನ್ನೆಚ್ಚರಿಕೆ
-ಯಾವುದೇ ಸಿಡಿಮದ್ದು ಖರೀದಿಸುವಾಗ, ಸಂಗ್ರಹಿಸಿಡುವಾಗ ಅವರ ಸ್ವಭಾವ ಮತ್ತು ಬಳಸುವ ರೀತಿ ಇತ್ಯಾದಿ ಮಾಹಿತಿಗಳನ್ನು ತಿಳಿದಿರಬೇಕು.

-ರಾಕೆಟ್, ಮಲ್ಟಿಸೌಂಡ್‌ಗಳನ್ನು ಹಚ್ಚುವಾಗ ತೀರಾ ಜಾಗ್ರತೆ ಇರಲಿ.

- ಪಟಾಕಿ ಹೂವಿನಕುಂಡ ಇಂಥವುಗಳನ್ನು ಹಚ್ಚುವಾಗ ಪ್ಲಾಸ್ಟಿಕ್ ಕನ್ನಡಕ ಧರಿಸುವುದು ಹೆಚ್ಚು ಸುರಕ್ಷಿತ.

- ಸಿಡಿಮದ್ದಿನ ರಾಸಾಯನಿಕ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸಿ.

-ಸಿಡಿಮದ್ದುಗಳನ್ನು ಮುಟ್ಟಿದ ಕೈಯಿಂದ ಕಣ್ಣು ಮುಟ್ಟಿಕೊಳ್ಳಬೇಡಿರಿ.

-ಪಟಾಕಿ ಸಿಡಿಸುವಾಗ ಹತ್ತಿಬಟ್ಟೆ, ಕಾಲಿಗೆ ಪಾದರಕ್ಷೆ ಧರಿಸಿ.

-ದ್ವಿಚಕ್ರ ವಾಹನ ಚಾಲಕರು ಜಾಗೃತಿ ವಹಿಸುವುದು ಅಗತ್ಯ

ಪ್ರಥಮ ಚಿಕಿತ್ಸೆ
ಕಣ್ಣಿಗೆ ಸಿಡಿಮದ್ದು ಅಥವಾ ಅದರ ರಾಸಾಯನಿಕ ವಸ್ತು ಬಿದ್ದರೆ ಹರಿಯುವ ನೀರಿನಲ್ಲಿ ಕಣ್ಣನ್ನು ಸ್ವಚ್ಛವಾಗಿ ತೊಳೆಯಿರಿ. ಸುಟ್ಟ ಗಾಯವಾದರೆ ಅದನ್ನು ಮೊದಲು ತೊಳೆದು ಸ್ವಚ್ಛಗೊಳಿಸಿರಿ.

ನಂತರ ಸಮೀಪದ ವೈದ್ಯರನ್ನು ಭೇಟಿ ಮಾಡಿರಿ. ಪಟಾಕಿ ಸಿಡಿಯುವ ರಭಸದಿಂದ ಕಣ್ಣಿಗೆ ಗಾಯವಾದರೆ, ರಕ್ತ ಬಂದರೆ ತೊಳೆಯಬೇಡಿ. ಕೂಡಲೇ ಕಣ್ಣಿನ ಆಸ್ಪತ್ರೆಗೆ ಭೇಟಿ ಕೊಡಿ. ದೀಪಾವಳಿ ಹರುಷದ ಹೊನಲಾಗಲಿ. ಬೆಳಕು ನೀಡಬೇಕಾದ ಹಬ್ಬ ಬಾಳನ್ನು ಕತ್ತಲಿಗೆ ನೂಕದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT