ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಹಬ್ಬದ ಮೇಲೆ ಬರದ ಛಾಯೆ

Last Updated 28 ಅಕ್ಟೋಬರ್ 2011, 8:50 IST
ಅಕ್ಷರ ಗಾತ್ರ

ಹಿರಿಯೂರು: ಈ ಬಾರಿಯ ದೀಪಾವಳಿ ಮೇಲೆ ಬರಗಾಲದ ಛಾಯೆ ಬಿದ್ದಿದ್ದು, ಬೆಳ್ಳಿ-ಬಂಗಾರದ ಅಂಗಡಿಗಳನ್ನು ಹೊರತುಪಡಿಸಿದರೆ ಇತರೆ ಕಡೆಗಳಲ್ಲಿ ಹಬ್ಬದ ಸಂಭ್ರಮವಿರಲಿಲ್ಲ. 
 
ಪೂಜೆಗೆ ಬಂಧುಗಳು-ಸ್ನೇಹಿತರನ್ನು ಆಹ್ವಾನಿಸುವುದು, ಪಟಾಕಿಗಳ ಸಿಡಿತ, ಹೊಸಬಟ್ಟೆಗಳ ಧರಿಸುವಿಕೆ ಎಲ್ಲದರಲ್ಲೂ ಕೊರತೆ ಎದ್ದು ಕಾಣುತ್ತಿತ್ತು.

ಪ್ರತಿವರ್ಷ ನಗರದ ನೆಹರು ಮೈದಾನದಲ್ಲಿ ಪಟಾಕಿ ಮಾರಾಟ ಮಾಡುವ ಆರೇಳು ಮಳಿಗೆಗಳನ್ನು ತೆರೆಯಲಾಗುತ್ತಿತ್ತು. ಸುರಕ್ಷಿತತೆಯ ಹಿನ್ನೆಲೆಯಲ್ಲಿ ಮೈದಾನದಲ್ಲಿ ಪಟಾಕಿ ಮಾರಾಟ ಮಾಡುವ ವ್ಯವಸ್ಥೆ ಜಾರಿಗೆ ಬಂದ ಮೇಲೆ ಮೈದಾನದಲ್ಲಿ ಒಂದೇ ಒಂದು ಮಳಿಗೆ ತೆರೆದದ್ದು ಇದೇ ಪ್ರಥಮ ಬಾರಿ. ಅದರಲ್ಲೂ ವ್ಯಾಪಾರ ಅಷ್ಟಕ್ಕಷ್ಟೆ.

ಐದಾರು ಮಳಿಗೆಗಳು ಇದ್ದಾಗ ಆಗುತ್ತಿದ್ದ ವ್ಯಾಪಾರದ ಅರ್ಧದಷ್ಟೂ ಈ ಬಾರಿ ಆಗಿಲ್ಲ. ಪಟಾಕಿ ದುಬಾರಿಯಾಗಿರುವುದು, ತಾಲ್ಲೂಕಿನಲ್ಲಿ ಬರಗಾಲ ಕಾಣಿಸಿಕೊಂಡಿರುವುದು ಇದಕ್ಕೆ ಕಾರಣ ಎನ್ನುವುದು ವರ್ತಕರ ಅನಿಸಿಕೆ.

ಹಬ್ಬ ಮೂರ‌್ನಾಲ್ಕು ದಿನ ಇದೆ ಎನ್ನುವಾಗ ಸಿದ್ಧ ಉಡುಪುಗಳ ಅಂಗಡಿಗಳಿಗೆ ಭಾರೀ ಬೇಡಿಕೆ ಇರುತ್ತಿತ್ತು. ಅಂಗಡಿಗಳ ಬಾಗಿಲು ಹಾಕಿಕೊಂಡು ವಹಿವಾಟು ನಡೆಸುವಷ್ಟು ಭರಾಟೆ ಇದ್ದದ್ದುಂಟು.

ಆದರೆ, ಈ ಬಾರಿ ಅಂಗಡಿಗಳಲ್ಲಿ ಖರೀದಿಸುವವರೇ ಇರಲಿಲ್ಲ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 25ರಷ್ಟು ಮಾತ್ರ ವ್ಯಾಪಾರ ಆಗಿದೆ. ಅಂಗಡಿಗಳ ಬಾಡಿಗೆ ದುಬಾರಿಯಾಗಿದೆ. ಕೆಲಸಗಾರರಿಗೆ ಕೂಲಿ, ಬಂಡವಾಳದ ಮೇಲಿನ ಬಡ್ಡಿ, ಇವನ್ನೆಲ್ಲ ಲೆಕ್ಕ ಹಾಕಿದರೆ ವ್ಯಾಪಾರ ಮಾಡುವುದು ಕಷ್ಟ.

ದೀಪಾವಳಿಯಲ್ಲಿ ರೈತರಿಗಿಂತ ಹೆಚ್ಚಾಗಿ ಮಳೆ-ಬೆಳೆಯಾಗಲಿ ಎಂದು ನಾವೇ ಕೇಳುವಂತಾಗಿದೆ ಎಂದು ಪ್ರಧಾನ ರಸ್ತೆಯ ವರ್ತಕರೊಬ್ಬರು `ಪ್ರಜಾವಾಣಿ~ ಗೆ ತಿಳಿಸಿದರು.

ಹೆಚ್ಚಿದ ಬಂಗಾರದ ಬೇಡಿಕೆ: ಬೇರೆ ಎಲ್ಲಾ ರೀತಿಯ ವರ್ತಕರಿಗೆ ಬರಗಾಲದ ಛಾಯೆ ಪ್ರಭಾವ ಬೀರಿದ್ದರೆ, ಬೆಳ್ಳಿ-ಬಂಗಾರದ ವರ್ತಕರಿಗೆ ಮಾತ್ರ ಆ ಬಿಸಿ ತಟ್ಟಿಲ್ಲ. ದಿನೇದಿನೇ ಬೆಳ್ಳಿ-ಬಂಗಾರದ ದರ ಹೆಚ್ಚುತ್ತಿದ್ದರೂ ಕೊಳ್ಳುವ ಪ್ರಮಾಣ ಕಡಿಮೆಯಾಗಿಲ್ಲ. ಹೀಗಾಗಿ,  ನಗರದಲ್ಲಿ ಬೇರೆ ಎಲ್ಲ ಅಂಗಡಿಗಳಿಗಿಂತ ಬೆಳ್ಳಿ- ಬಂಗಾರದ ಅಂಗಡಿಗಳ ಸಂಖ್ಯೆ ಹೆಚ್ಚುತ್ತಿದೆ.

ಅಲ್ಲದೇ, ಈ ಅಂಗಡಿಗಳವರು ಕೊಡುವ ಬಾಡಿಗೆ ದರವೂ ಹೆಚ್ಚಿದೆ. ಆರೇಳು ತಿಂಗಳಿಂದೀಚೆಗೆ ಬೇರೆ ವ್ಯಾಪಾರಿಗಳಿಗೆ ಪ್ರಧಾನ ರಸ್ತೆಯಲ್ಲಿ ಅಂಗಡಿ ಮಳಿಗೆಗಳು ಬಾಡಿಗೆಗೆ ಸಿಗುವುದೇ ಕಷ್ಟವಾಗಿದೆ.

ನಿರೀಕ್ಷೆ: ಗ್ರಾಮಾಂತರ ಪ್ರದೇಶದಲ್ಲಿ ಮುಂದಿನ ಅಮಾವಾಸ್ಯೆವರೆಗೆ ದೀಪಾವಳಿ ಆಚರಿಸುತ್ತಾರೆ. ಆಗ ವ್ಯಾಪಾರ ಹೆಚ್ಚಬಹುದು ಎಂಬ ನಿರೀಕ್ಷೆಯಲ್ಲಿ ಬಟ್ಟೆ, ಪಟಾಕಿ, ಟಿವಿ ಮತ್ತಿತರೆ ಮಾರಾಟಗಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT