ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಅಧಿವೇಶನದತ್ತ ಕರೂರು ರೈತರು...

51 ರೈತ ಮುಖಂಡರ ಬಂಧನ ಬಿಡುಗಡೆ; ಪೊಲೀಸರಿಂದ ಗಣೇಶಮೂರ್ತಿ ವಶ
Last Updated 6 ಡಿಸೆಂಬರ್ 2012, 5:43 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಕರೂರು ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರ ಜವಳಿ ಪಾರ್ಕ್ ನಿರ್ಮಾಣ ಉದ್ದೇಶಕ್ಕಾಗಿ ಭೂಸ್ವಾಧೀನಪಡಿಸಿಕೊಂಡಿದ್ದ ಸಂದರ್ಭದಲ್ಲಿ ರೈತರಿಗೆ ಮತ್ತು ನಿವೇಶನದಾರರಿಗೆ ನೀಡಿದ್ದ ಪರಿಹಾರ ಭರವಸೆಯನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಗಣೇಶಮೂರ್ತಿಯೊಂದಿಗೆ ಬೆಳಗಾವಿ ಅಧಿವೇಶನದಲ್ಲಿ ಧರಣಿ ನಡೆಸಲು ಹೊರಟಿದ್ದ ರೈತರನ್ನು ಪೊಲೀಸರು ಬಂಧಿಸಿ, ಗಣೇಶಮೂರ್ತಿ ವಶಪಡಿಸಿಕೊಂಡ ಘಟನೆ ಬುಧವಾರ ನಡೆಯಿತು.

ಈ ಸಂದರ್ಭದಲ್ಲಿ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಪೊಲೀಸರ ದೌರ್ಜನ್ಯ ಖಂಡಿಸಿದರು. ಬಿಜೆಪಿ ಸರ್ಕಾರ ಪೊಲೀಸರ ಬೆಂಬಲ ಪಡೆದು ಆಡಳಿತ ನಡೆಸುತ್ತಿದೆ ಎಂದು ರೈತರು ಆರೋಪಿಸಿದರು.

ಓಂಕಾರಪ್ಪ, ಪೂಜಾರ್ ಅಂಜನಪ್ಪ, ಪ್ರಭುಗೌಡ, ಮರಡಿ ನಾಗಣ್ಣ, ಮುರುಗೇಂದ್ರಯ್ಯ, ಸೈಯದ್ ನಯಾಜ್, ಗಣೇಶಪ್ಪ, ಪಾರ್ವತಮ್ಮ, ಕಮ್ರುನ್ನಿಸಾ, ಆಫೀಸ್ ಸೇರಿದಂತೆ 50ಕ್ಕೂ ಹೆಚ್ಚು ರೈತರನ್ನು ಬಂಧಿಸಲಾಯಿತು. ನಂತರ ಸಂಜೆ ಬಿಡುಗಡೆಗೊಳಿಸಲಾಯಿತು.

ಕುಸಿದುಬಿದ್ದ ಮಹಿಳೆ: ಪರಿಹಾರಕ್ಕಾಗಿ ನಿರಂತರ ಪ್ರತಿಭಟನೆಯಲ್ಲಿ ತೊಡಗಿದ್ದ 72 ವಯೋಮಾನದ ಮಹಿಳೆ ಶಾಂತಮ್ಮ ಪೊಲೀಸರು ಬಂಧಿಸಿದ ನಂತರ ಮಾನಸಿಕ ಒತ್ತಡಕ್ಕೊಳಗಾಗಿ ಮಧ್ಯಾಹ್ನ 4ರ ವೇಳೆಗೆ ದಿಢೀರನೆ ಕುಸಿದು ಬಿದ್ದರು. ತಕ್ಷಣ ಮಹಿಳೆಯನ್ನು ಚಿಗಟೇರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಚಿಕಿತ್ಸೆಯ ನಂತರ ಶಾಂತಮ್ಮ ಚೇತರಿಸಿಕೊಂಡರು.

ಸಚಿವರ ಕೈ ಬಲಪಡಿಸಲು ಹೋಗುತ್ತೇವೆ: ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು, `ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಅಧಿಕಾರಿಗಳು ನನ್ನ ಮಾತು ಕೇಳುತ್ತಿಲ್ಲ. ರೈತರಿಗೆ ಅನ್ಯಾಯವಾಗುವುದನ್ನು ನಾನು ಬಿಡುವುದಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಈ ಸಮಸ್ಯೆ ಚರ್ಚಿಸುತ್ತೇನೆ' ಎಂದು ಭರವಸೆ ನೀಡಿದ್ದಾರೆ.

ಈಗ ಬಂಧನದಿಂದ ಹೊರಬಂದಿದ್ದೇವೆ. ಬೆಳಗಾವಿಗೆ ಹೇಗೆ ಹೋಗಬೇಕೆಂಬುದನ್ನು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಸಚಿವರ ಕೈ ಬಲಪಡಿಸಲಿಕ್ಕಾದರೂ ನಾವು ಬೆಳಗಾವಿಗೆ ಹೋಗುತ್ತೇವೆ' ಎಂದು ರೈತ ಮುಖಂಡ ತೇಜಸ್ವಿ ಪಟೇಲ್ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT