ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಕನ್ನಡ ನಾಡಿನ ಹೃದಯ

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: `ಬೆಳಗಾವಿ ಕನ್ನಡ ನಾಡಿನ ಹೃದಯ ಭಾಗ. ಹೀಗಾಗಿ ಈ ಭಾಗದಲ್ಲಿ ನಾಡು-ನುಡಿಯ ರಕ್ಷಣೆಗೆ ರಾಜ್ಯ ಸರ್ಕಾರ ಒತ್ತು ನೀಡುವ ಮೂಲಕ ಇದನ್ನು ಸಾರುತ್ತಿದೆ` ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಹೇಳಿದರು.

ಕಿತ್ತೂರಿನಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಕಾಲದ ಕಿತ್ತೂರು ಉತ್ಸವವನ್ನು ಭಾನುವಾರ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, `ರಾಷ್ಟ್ರೀಯ ಹಬ್ಬಗಳನ್ನು ಸಾಂಸ್ಕೃತಿಕ ಉತ್ಸವಗಳನ್ನಾಗಿ ಆಚರಿಸುವ ಮೂಲಕ ಇತಿಹಾಸದ ಪುಟ ತೆರೆದು ಗತ ವೈಭವವನ್ನು ಯುವ ಪೀಳಿಗೆಗೆ ಪರಿಚಯಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ.

ಬೆಳಗಾವಿ ನಮ್ಮದು ಎಂದು ಸಾರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಒಟ್ಟು 280 ಕೋಟಿ ಬಜೆಟ್‌ನಲ್ಲಿ ಬೆಳಗಾವಿ ಜಿಲ್ಲೆಗೇ 42 ಕೋಟಿ ರೂಪಾಯಿ ಅನುದಾನ ನೀಡಿದ್ದೇವೆ` ಎಂದು ಹೇಳಿದರು.

`ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಲೆ- ಸಂಸ್ಕೃತಿಯನ್ನು ಬೆಳೆಸಲು ರಾಜ್ಯ ಸರ್ಕಾರ ಒತ್ತು ನೀಡುತ್ತಿದೆ. ನಮ್ಮ ಸಂಸ್ಕೃತಿ ಮುಂದಿನ ಜನಾಂಗಕ್ಕೆ ಪರಿಚಯವಾಗಬೇಕು ಎಂಬ ಉದ್ದೇಶದಿಂದ ಉತ್ಸವಗಳನ್ನು ಆಚರಿಸಲು 50 ಲಕ್ಷದಿಂದ ಒಂದು ಕೋಟಿ ರೂಪಾಯಿವರೆಗೂ ಅನುದಾನ ನೀಡುತ್ತಿದೆ` ಎಂದು ತಿಳಿಸಿದರು.

ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ, `ಬೆಳಗಾವಿಯಲ್ಲಿ ನಿರ್ಮಿಸಿರುವ ಸುವರ್ಣ ಸೌಧದ ಎದುರು ರಾಣಿ ಚನ್ನಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಮುಂಬೈನ ರೈಲ್ವೆ ನಿಲ್ದಾಣಕ್ಕೆ ಶಿವಾಜಿ ಹೆಸರಿಟ್ಟಂತೆ ಬೆಂಗಳೂರಿನ ರೈಲ್ವೆ ನಿಲ್ದಾಣಕ್ಕೆ ರಾಣಿ ಕಿತ್ತೂರು ಚನ್ನಮ್ಮನ ಹೆಸರನ್ನು ಇಡಬೇಕು` ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, `ಕಳೆದ ಮೂರು ವರ್ಷಗಳಿಂದ ಅದ್ದೂರಿಯಾಗಿ ಕಿತ್ತೂರು ಉತ್ಸವ ಆಚರಿಸಲಾಗುತ್ತಿದೆ. ಮುಂದಿನ ಎರಡು ವರ್ಷಗಳ ಕಾಲ ಇನ್ನೂ ವಿಜೃಂಭಣೆಯಿಂದ ಆಚರಿಸಲಾಗುವುದು` ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸುರೇಶ ಮಾರಿಹಾಳ ವಹಿಸಿದ್ದರು. ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಸಿನಿಮಾ ನಟ ಶಿವಾರಾಜಕುಮಾರ್ ಹಾಗೂ ನಟಿ ಅನು ಪ್ರಭಾಕರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT