ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ

Last Updated 24 ಫೆಬ್ರುವರಿ 2011, 10:20 IST
ಅಕ್ಷರ ಗಾತ್ರ

ಬೈಲಹೊಂಗಲ: ಮಹಾಜನ ವರದಿಯನ್ನು ಒಪ್ಪಿಕೊಂಡು, ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ ಎಂಬುದನ್ನು ನೆಪಿಟ್ಟುಕೊಂಡು ಮಹಾರಾಷ್ಟ್ರದ ಸರ್ಕಾರದ ಜೊತೆ ಮಾತುಕತೆಗೆ ಸಿದ್ಧರಿದ್ದೇವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹೇಳಿದರು.ವಿಶ್ವ ಕನ್ನಡ ಸಮ್ಮೇಳನದ ವಾತಾವರಣ ನಿರ್ಮಾಣಕ್ಕಾಗಿ ಬುಧವಾರ ಪಟ್ಟಣಕ್ಕೆ ಆಗಮಿಸಿದ ನುಡಿತೇರು ಜಾಗೃತಿ ಜಾಥಾ ಅಂಗವಾಗಿ ಚನ್ನಮ್ಮಾಜಿ ಸಮಾಧಿ ಬಳಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಳಗಾವಿಯಲ್ಲಿ ಕನ್ನಡ ಹಾಗೂ ಮರಾಠಿ ಭಾಷಿಕರಲ್ಲಿ ಸಾಮರಸ್ಯವಿದ್ದು, ರಾಜಕೀಯ ಮುಖಂಡರ ತಮ್ಮ ಸ್ವಾರ್ಥಕ್ಕಾಗಿ ಕನ್ನಡ-ಮರಾಠಿ ಭಾಷಿಕರ ನಡುವಿನ ಬಾಂಧವ್ಯವನ್ನು ಕದಡುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದರು. ಮರಾಠಿ, ತೆಲುಗು, ತಮಿಳು ಸೇರಿದಂತೆ ದೇಶದ ಭಾಷೆಗಳು ನಮಗೆ ಚಿಕ್ಕಮ್ಮ. ಆದರೆ ಕನ್ನಡ ನಮ್ಮನ್ನು ಹೆತ್ತ ತಾಯಿ ಎಂಬುದನ್ನು ನೆನಪಿಟ್ಟುಕೊಂಡು, ನಿರಭಿಮಾನ ದುರಭಿಮಾನ ಬಿಟ್ಟು ಸ್ವಾಭಿಮಾನಿ ಕನ್ನಡಿಗರಾಗಬೇಕಾದ ಅಗತ್ಯವಿದೆ ಎಂದರು.

ಬೈಲಹೊಂಗಲ ಭಾಗದ ಜನರ ಗಟ್ಟಿತನದಿಂದಲೇ ಅನ್ಯಭಾಷಿಕರು ಬೆಳಗಾವಿ ವಿಷಯದಲ್ಲಿ ಅನಾವಶ್ಯಕವಾಗಿ ಕ್ಯಾತೆ ತೆಗೆಯುವುದಕ್ಕೆ ಕಡಿವಾಣ ಬಿದ್ದಿದೆ ಎಂದರು. ಕನ್ನಡ ನೆಲ, ಜಲ, ಭಾಷೆ ಕುರಿತು ಅನ್ಯಾಯವಾದಾಗ ಪಕ್ಷಾತೀತವಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಮೆರವಣಿಗೆಯನ್ನು ಸ್ವಾಗತಿಸಿದ ಶಾಸಕ ಜಗದೀಶ ಮೆಟಗುಡ್ಡ, ವಿಶ್ವ ಕನ್ನಡ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ದೂರದರ್ಶನ ಕಲಾವಿದ ಸಿ.ಕೆ.ಮೆಕ್ಕೇದ,  ಸಮ್ಮೇಳನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಕನ್ನಡ ತಾಯಿಯ ಸೇವೆ ಮಾಡಲು ಮುಂದಾಗಬೇಕು ಎಂದರು.

ಕನ್ನಡದ ಕುಲದೇವಿ ಕಾಪಾಡು ತಾಯೇ ಹಾಡು ಕೇಳುಗರ ಗಮನ ಸೆಳೆಯಿತು. ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ, ನಿರ್ದೇಶಕ ಬಿ.ಸುರೇಶ ಮಾತನಾಡಿದರು. ಕನ್ನಡ ಪ್ರಾಧಿಕಾರ ಸದಸ್ಯ ಸಿದ್ದನಗೌಡ ಪಾಟೀಲ, ಉಪವಿಭಾಗಾಧಿಕಾರಿ ವಿ.ಬಿ.ದಾಮಣ್ಣವರ, ಚಲನಚಿತ್ರ ನಾಯಕ ನಟ ಶಿವರಂಜನ ಬೋಳಣ್ಣವರ, ಪತ್ರಕರ್ತ ಈಶ್ವರ ಹೋಟಿ, ಪುರಸಭೆ ಅಧ್ಯಕ್ಷೆ ಸರಸ್ವತಿ ಕಟ್ಟಿಮನಿ, ಮುಖ್ಯಾಧಿಕಾರಿ ಅರುಣ ರಾಣೆ, ತಹಸೀಲ್ದಾರ ಪಿ.ಎನ್.ಲೋಕೇಶ, ಕಸಾಪ ಮಾಜಿ ಅಧ್ಯಕ್ಷರಾದ ಮೋಹನ ಪಾಟೀಲ, ಪ್ರೊ.ಸಿ.ವಿ.ಜ್ಯೋತಿ, ತಾಲ್ಲೂಕು ಅಧ್ಯಕ್ಷ ಎಸ್.ಆರ್.ಕಮ್ಮಾರ, ಪ್ರತಿಭಾ ಪರಿಷತ್ ಜಿಲ್ಲಾ ಅಧ್ಯಕ್ಷ ಶೇಖರ ಹಲಸಗಿ, ಲೇಖಕಿಯರ ಸಂಘದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ಶ್ರೀಮತಿ ಚಂದ್ರು ಸೇರಿದಂತೆ ವಿವಿಧ ಗಣ್ಯರು ವೇದಿಕೆಯಲ್ಲಿದ್ದರು.

ಮಕ್ಕಳ ಸಾಹಿತಿ ಚನ್ನಬಸಪ್ಪ ಹೊಸಮನಿ (ಸತ್ಯಾರ್ಥಿ) ಸ್ವರಚಿತ ಕವನ ಮಂಡಿಸಿದರು. ಎಂಕೆಸಿಆರ್ ಪ್ರೌಢಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಪಟ್ಟಣದ ಹೊರವಲಯದಲ್ಲಿ ಕನ್ನಡನುಡಿತೇರಿಗೆ ಅದ್ದೂರಿಯಾಗಿ ಸ್ವಾಗತ ನೀಡಲಾಯಿತು. ಕರವೇ ಸಂಚಾಲಕ ಮಹಾಂತೇಶ ತುರಮರಿ, ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಪ್ರಭಾಕರ ಭಜಂತ್ರಿ, ಪ್ರಾಥಮಿಕ, ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಜನಪದ ಕಲಾ ತಂಡಗಳು, ಕುಂಭ ಹೊತ್ತ ಮಹಿಳೆಯರು ತಂಡ ಮೆರವಣಿಗೆಗೆ ಹೆಚ್ಚಿನ ಮೆರುಗು ನೀಡಿದ್ದರು. ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಹೂಮಳೆ ಸುರಿಸಿ ಸ್ವಾಗತ ನೀಡಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT