ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಪಾಲಿಕೆ: ಕನ್ನಡ ಸದಸ್ಯೆ ಪತಿಗೆ ಮಸಿ

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಳಗಾವಿ: ಮಹಾನಗರಪಾಲಿಕೆ ಉಪಚುನಾವಣೆಯಲ್ಲಿ ಕನ್ನಡಪರವಾದ ಸರ್ವಭಾಷಿಕ ಸಮವಿಚಾರ ವೇದಿಕೆಯನ್ನು ಬೆಂಬಲಿಸಿದ್ದ ಪಾಲಿಕೆ ಸದಸ್ಯೆ ಜಯಶ್ರೀ ಪಿಸೆ ಅವರ ಮನೆ ಮೇಲೆ ದಾಳಿ ಮಾಡಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಕರ್ತರು, ಅವರ ಪತಿ ವಿಲಾಸ ಪಿಸೆ ಅವರ ಮುಖಕ್ಕೆ ಕಪ್ಪು ಮಸಿ ಹಚ್ಚಿದ ಘಟನೆ ಭಾನುವಾರ ನಡೆದಿದೆ.

ಶಾಸ್ತ್ರಿನಗರಲ್ಲಿರುವ ಪಿಸೆ ಅವರ ಮನೆಗೆ ನುಗ್ಗಿರುವ ಕಾರ್ಯಕರ್ತರು, ಅವರ ಮೇಲೆ ಹಲ್ಲೆ ನಡೆಸಿ, ಅವರ ಪತಿಯ ಮುಖಕ್ಕೆ ಮಸಿ ಬಳಿದಿದ್ದಾರೆ. ಮನೆಯಲ್ಲಿ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಪರಾರಿಯಾಗಿದ್ದಾರೆ.

ಪಾಲಿಕೆ ಸದಸ್ಯರ ಮನೆ ಮೇಲೆ ದಾಳಿ ನಡೆಸುವುದಾಗಿ ಎಂಇಎಸ್ ಕಾರ್ಯಕರ್ತರು ಘೋಷಿಸಿದ್ದರೂ, ಅದನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಜನರು ದೂರಿದರು. ಕನ್ನಡಪರ ಗುಂಪು ಬೆಂಬಲಿಸಿದ್ದಕ್ಕಾಗಿ ಮಾಜಿ ಉಪಮೇಯರ್ ಧನರಾಜ ಗವಳಿ ಅವರ ಮನೆಗೂ ಎಂಇಎಸ್ ಕಾರ್ಯಕರ್ತರು ನುಗ್ಗಿ ಗಲಾಟೆ ಮಾಡಿದ್ದಾರೆ.

ಆ ವೇಳೆ ಧನರಾಜ ಗವಳಿ ಅವರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಸುತ್ತಲಿನ ಜನರು ಗವಳಿ ಅವರು ಬಂದ ಮೇಲೆ ವಿಚಾರಿಸುವಂತೆ ಹೇಳಿದ್ದಾರೆ. ಇದನ್ನು ಕಿವಿ ಮೇಲೆ ಹಾಕಿಕೊಳ್ಳದೇ ಕಾರ್ಯಕರ್ತರು ಮನೆಯೊಳಗೆ ನುಗ್ಗಲು ಯತ್ನಿಸಿದಾಗ ಜನರು ಬೆದರಿಸಿ ಓಡಿಸಿದ್ದಾರೆ.

ಉಪಮೇಯರ್ ಚುನಾವಣೆಯಲ್ಲಿ ಕನ್ನಡಪರ ಗುಂಪು ಬೆಂಬಲಿಸಿದ್ದ ಶುಭಾಂಗಿ ಚಿತ್ರಗಾರ, ಶಶಿಕಲಾ ಸುರೇಕರ ಅವರ ಮನೆ ಮುಂದೆಯೂ ಶುಕ್ರವಾರ ಪ್ರತಿಭಟಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT