ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಪಾಲಿಕೆ ವಿಸರ್ಜಿಸಿ

Last Updated 18 ನವೆಂಬರ್ 2011, 9:35 IST
ಅಕ್ಷರ ಗಾತ್ರ

ಯಾದಗಿರಿ: ಕನ್ನಡ ವಿರೋಧಿ ನೀತಿಯನ್ನು ಅನುಸರಿಸಿರುವ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಸದಸ್ಯತ್ವ ರದ್ದುಪಡಿಸಬೇಕು. ಬೆಳಗಾವಿ ಮಹಾನಗರ ಪಾಲಿಕೆಯನ್ನು ವಿಸರ್ಜಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಉತ್ತರ ಕರ್ನಾಟಕ ಘಟಕದ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಹೆಚ್ಚುವರಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಗಡಿ ಭಾಗದಲ್ಲಿರುವ ಬೆಳಗಾವಿಯಲ್ಲಿ ಎಂಇಎಸ್ ಹಾಗೂ ಶಿವಸೇನೆಯಂತಹ ಸಂಘಟನೆಗಳು ಕನ್ನಡ ವಿರೋಧಿ ಕೃತ್ಯಗಳನ್ನು ಎಸಗುತ್ತಿದ್ದು, ಅವುಗಳನ್ನು ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಸಂವಿಧಾನದ 371 ನೇ ಕಲಂಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆದಿದ್ದು, ಇದನ್ನು ಕೂಡಲೇ ಕೈಬಿಡಬೇಕು. ಹೈದರಾಬಾದ್ ಕರ್ನಾಟಕ ಭಾಗದಲ್ಲಿರುವ 113 ಶಾಲೆಗಳನ್ನು ಮುಚ್ಚದೇ ಅವುಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕೇಂದ್ರವಾದ ಯಾದಗಿರಿಯಲ್ಲಿ ರಸ್ತೆ ವಿಸ್ತಾರ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು. ಶಾಸ್ತ್ರಿವೃತ್ತದಲ್ಲಿ ಪ್ರತಿಮೆ ಸ್ಥಾಪಿಸುವ ಮೂಲಕ ಒಳ್ಳೆಯ ವೃತ್ತವನ್ನಾಗಿ ಅಭಿವೃದ್ಧಿಪಡಿಸಬೇಕು. ಹೈದರಾಬಾದ್ ಕರ್ನಾಟಕ ಪ್ರದೇಶದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಬೇಕು.

ಗುಲ್ಬರ್ಗದಿಂದ ಬೆಂಗಳೂರಿಗೆ ಇಂಟರ್‌ಸಿಟಿ ರೈಲು ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕರವೇ ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಗದ್ದುಗೆ ನೇತೃತ್ವದಲ್ಲಿ ಪದಾಧಿಕಾರಿಗಳಾದ ಬಿ.ಸಿ. ಪಾಟೀಲ ತಡಿಬಿಡಿ, ಶರಣು ಇಟಗಿ, ದೇವು ಪಾಟೀಲ, ರವಿ ತಳಬಿಡಿ, ನಾಗರಾಜ ಸ್ವಾದಿ, ಮಂಜುನಾಥ ನಾಲ್ವಾರ, ಬಾಪುಗೌಡ ಗುಳ್ಯಾಳ, ಅರವಿಂದ ನಾಟೇಕಾರ, ಕುಮಾರ, ಮಲ್ಲಪ್ಪ ತಳಬಿಡಿ, ಉಮಾರಥಿ ಹುಂಡೇಕಲ್, ಸುಪ್ರೀತ್ ಮಾಳಿಕೇರಿ, ಚಂದ್ರು ತಡಿಬಿಡಿ, ಹೈಯ್ಯಾಳಪ್ಪ ರಾಂಪೂರ, ಶೇರಅಲಿ ಯರಗೋಳ ಮುಂತಾದವರು ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT