ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಪ್ರವಾಹ ನಿಯಂತ್ರಣ ಕಚೇರಿಗಳಲ್ಲಿ ನಿಯಂತ್ರಕರಿಲ್ಲ

Last Updated 31 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಳಗಾವಿ:  `ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಸಂಕಷ್ಟಕ್ಕೆ ಸಿಲುಕಿದ್ದೇವೆ~ ಎಂದು ಸಹಾಯಕ್ಕಾಗಿ ಜಿಲ್ಲಾಡಳಿತ ಆರಂಭಿಸಿರುವ ನಿಯಂತ್ರಣ ಕೊಠಡಿಯ ಮೊರೆ ಹೋದರೆ ಸಂಕಷ್ಟ ಹೆಚ್ಚಾಗಲಿದೆಯೇ ಹೊರತು ಕಡಿಮೆಯಾಗುವುದಿಲ್ಲ. ಏಕೆಂದರೆ ಜಿಲ್ಲೆಯಲ್ಲಿನ ನಿಯಂತ್ರಣ ಕಚೇರಿಗಳಲ್ಲಿ ನದಿ ನೀರಿನ ಮಟ್ಟದ ಬಗ್ಗೆ ಮಾಹಿತಿ ನೀಡುವವರೇ ಇರಲಿಲ್ಲ!

ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ತಹಶೀಲ್ದಾರ ಕಚೇರಿಗಳಲ್ಲಿ 24 ಗಂಟೆ ಕಾಲ ನಿರ್ವಹಿಸುವ ನಿಯಂತ್ರಣ ಕೊಠಡಿಗಳನ್ನು ಆರಂಭಿಸಲಾಗಿದೆ. ಕೃಷ್ಣಾ ನದಿಯಲ್ಲಿ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಜನತೆಗೆ ಜಿಲ್ಲಾಡಳಿತ ಈ ಸಂಬಂಧ ಎಚ್ಚರಿಕೆಯನ್ನೂ ನೀಡಿದೆ. ಆದರೆ ಈದ್ ಉಲ್ ಫಿತರ್ ರಜೆ ದಿನವಾದ ಬುಧವಾರ ಸಂಜೆ 6.30ರ ಸುಮಾರಿಗೆ ನಿಯಂತ್ರಣ ಕೊಠಡಿಗಳಿಗೆ `ಪ್ರಜಾವಾಣಿ~ ದೂರವಾಣಿ ಕರೆ ಮಾಡಿದಾಗ ಆ ಕಚೇರಿಗಳಲ್ಲಿ ಬಹುತೇಕ ಅಧಿಕಾರಿಗಳು ಕರ್ತವ್ಯದ ಮೇಲೆ ಇರದಿದ್ದದ್ದು ಗೊತ್ತಾಯಿತು.

ಬಹುತೇಕ ನಿಯಂತ್ರಣ ಕೊಠಡಿಗಳಲ್ಲಿ ಸಿಪಾಯಿ, ವಾಚಮನ್‌ಗಳಿದ್ದರು. ಅವರ ಬಳಿ ಸರಿಯಾದ ಮಾಹಿತಿ ಇರಲಿಲ್ಲ. ಕೇಳಿದರೆ ಇನ್ನು ಸ್ವಲ್ಪ ಹೊತ್ತು ಬಿಟ್ಟು ಕರೆ ಮಾಡಿ, ಅಧಿಕಾರಿಗಳು ಬರುತ್ತಾರೆ ಎಂಬ ಉತ್ತರ ದೊರೆಯಿತು.

ಜಿಲ್ಲಾಧಿಕಾರಿ ಕಚೇರಿ ನಿಯಂತ್ರಣ ಕೊಠಡಿಗೆ ಕರೆ ಮಾಡಿದಾಗ ಅಟೆಂಡರ್ ಬಾಂದುರ್ಗೆ ಎಂಬುವವರು ಸಿಕ್ಕರು. ನದಿ ನೀರಿನ ಸ್ಥಿತಿಯ ಬಗೆಗೆ ಮಾಹಿತಿ ಕೇಳಿದಾಗ `ನನಗೆ ಏನು ಗೊತ್ತಿಲ್ಲ. ಸ್ವಲ್ಪ ಸಮಯ ಬಿಟ್ಟು ಕರೆ ಮಾಡಿ~ ಎಂದರು.

ಸ್ವಲ್ಪ ಸಮಯದ ನಂತರ ದೂರವಾಣಿ ಕರೆ ಮಾಡಿದಾಗ ಬೆಳವಡಿ ಎಂಬುವವರಿದ್ದರು. ಅವರಿಗೂ ಮಾಹಿತಿ ಇರಲಿಲ್ಲ. ಸಮಸ್ಯೆ ಇದೆ ಎಂದರೆ ಏನು ಮಾಡುವಿರಿ ಎಂಬ ಪ್ರಶ್ನೆಗೆ `ಕರ್ತವ್ಯದ ಮೇಲಿರುವ ಗೋಣಿ ಎಂಬುವವರು ಮೊಬೈಲ್ ಸಂಖ್ಯೆ ಕೊಟ್ಟಿದ್ದಾರೆ. ಅವರಿಗೆ ಫೋನ್ ಮಾಡಿ ತಿಳಿಸುತ್ತೇವೆ~ ಎಂದು ಫೋನಿಟ್ಟರು.

ಚಿಕ್ಕೋಡಿ ನಿಯಂತ್ರಣ ಕೊಠಡಿಗೆ ಕರೆ ಮಾಡಿದಾಗಲೂ ವಾಚಮನ್ ಡಿ.ಬಿ. ಜಠಾರ ಎಂಬುವವರು ಸಿಕ್ಕರು. ಅವರಿಗೂ ಪ್ರವಾಹದ ಬಗೆಗೆ ಯಾವುದೇ ಮಾಹಿತಿ ಇರಲಿಲ್ಲ. `ಕರ್ತವ್ಯದ ಮೇಲಿರುವ ಬಿ.ಎ. ನೇಸರಿಕರ ಎಂಬುವವರು ಹೊರಗಡೆ ಹೋಗಿದ್ದಾರೆ. ಹತ್ತು ನಿಮಿಷ ಬಿಟ್ಟು ಕರೆ ಮಾಡಿ~ ಎಂದು ತಿಳಿಸಿದರು.

ಅಥಣಿ ನಿಯಂತ್ರಣ ಕೊಠಡಿಯಲ್ಲಿ ಎಸ್.ಎ. ಮರನೂರ ಎಂಬ ಗ್ರಾಮ ಲೆಕ್ಕಿಗರು ಸಿಕ್ಕರು. ಅವರಿಗೆ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿರುವ ಬಗೆಗೆ ಮಾಹಿತಿ ಇತ್ತು. ಆದರೆ ನಿಜವಾಗಿಯೂ ಅದು ಅವರ ಡ್ಯೂಟಿಯಾಗಿರಲಿಲ್ಲ. `ಡ್ಯೂಟಿಯ ಮೇಲಿದ್ದ ಎಸ್.ಎ. ಯತ್ನಟ್ಟಿ ಎಂಬುವವರು ಹೊರಗಡೆ ಹೋಗಿದ್ದಾರೆ. ಸ್ವಲ್ಪ ಸಮಯದಲ್ಲಿ ಬರಬಹುದು. ಅವರನ್ನೇ ಕೇಳಿ~ ಎಂದು ಹೇಳಿದರು.

ಗೋಕಾಕ ನಿಯಂತ್ರಣ ಕೊಠಡಿಯಲ್ಲಿ ಸರ್ವೆ ಕಚೇರಿಯ ಕೊಪ್ಪದ ಎಂಬ ಸಿಪಾಯಿ ಸಿಕ್ಕರು. ಅವರಿಗೂ ಯಾವುದೇ ಮಾಹಿತಿ ಇರಲಿಲ್ಲ. ಜತೆಗೆ `ಡ್ಯೂಟಿ ಮೇಲೆ ಯಾರಿದ್ದಾರೆ ಎಂಬುದು ಗೊತ್ತಿಲ್ಲ~ ಎಂದು ಕೈತೊಳೆದುಕೊಂಡರು. ರಾಯಬಾಗ ನಿಯಂತ್ರಣ ಕೊಠಡಿಗೆ ಮಾಡಿದ ಕರೆಗೆ ಯಾರೂ ಸ್ಪಂದಿಸಲಿಲ್ಲ.

ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಅಧಿಕಾರಿಗಳಿಗೂ ಕೇಂದ್ರ ಸ್ಥಾನದಲ್ಲಿರಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಏಕರೂಪ್ ಕೌರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ ಜಿಲ್ಲೆಯಲ್ಲಿನ ಪರಿಸ್ಥಿತಿ ತದ್ವಿರುದ್ಧವಾಗಿದೆ.

ಅನಾಹುತದ ಬಗೆಗೆ ಮೊದಲ ಮಾಹಿತಿ ನೀಡಬೇಕಾದ ನಿಯಂತ್ರಣ ಕೊಠಡಿಗಳ ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.  ಇನ್ನು ಅವರು ನೀಡುವ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ಏನು ಕ್ರಮಕೈಗೊಳ್ಳುತ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಸಂಕಷ್ಟದಲ್ಲಿರುವವರನ್ನು ಆ ದೇವರೇ ಕಾಪಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT