ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಭದ್ರಗೊಳಿಸಬೇಕೇ? ನಿಪ್ಪಾಣಿಯನ್ನು ಜಿಲ್ಲೆ ಮಾಡಿ

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯನ್ನು ಒಂದು ತಾಲ್ಲೂಕನ್ನಾಗಿ ಮಾಡಲು ಮುಖ್ಯಮಂತ್ರಿ ಜಗದೀಶ ಶೆಟ್ಟರ ತಮ್ಮ ಒಲವನ್ನು ವ್ಯಕ್ತಪಡಿಸಿದ ಸಂಗತಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಇದು, ಮೇಲುನೋಟಕ್ಕೆ ಅತ್ಯಂತ ಸೂಕ್ತ ಸಂಗತಿ ಎಂಬಂತೆ ಕಾಣುತ್ತದೆ. ನಿಪ್ಪಾಣಿಗೆ ತಾಲ್ಲೂಕು ಆಗುವುದಕ್ಕಿಂತಲೂ ಹೆಚ್ಚಿನ ಅರ್ಹತೆಗಳು ಇವೆ. ಅನೇಕರಿಗೆ ಗೊತ್ತಿದೆಯೋ ಇಲ್ಲವೋ, ಅದು ಬೆಳಗಾವಿ ಜಿಲ್ಲೆಯಲ್ಲಿ, ಬೆಳಗಾವಿ ನಂತರದ ಬಹುದೊಡ್ಡ ನಗರ. ನಮ್ಮ ರಾಜ್ಯದ ಎಷ್ಟೋ ಜಿಲ್ಲಾ ನಗರಗಳಿಗಿಂತಲೂ ಅದು ಹೆಚ್ಚು ದೊಡ್ಡ ನಗರವಾಗಿದೆ.

ಗಾತ್ರದಲ್ಲಿ. ಶ್ರೀಮಂತಿಕೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ದೊಡ್ಡ ನಗರವಾಗಿದ್ದರೂ, ಅದು ಆ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಳ್ಳಿ.
ಆ ನಗರ ಒಂದು ತಾಲ್ಲೂಕು ಆಗಲೇಬೇಕೆಂದು ಯಾರಿಗಾದರೂ ಅನಿಸುತ್ತದೆ. ಆದರೆ ಅದು ನಮ್ಮ ರಾಜ್ಯದ ಇನ್ನುಳಿದ ನಗರಗಳಂತೆ ಅಲ್ಲ. ಆ ನಗರದ ಮೇಲೆ ನಮ್ಮ ರಾಜ್ಯದ ಸಮಗ್ರತೆ ಅವಲಂಬಿಸಿದೆ.

ನಿಪ್ಪಾಣಿಗೆ ಇರುವ ಮಹತ್ವ ನಮ್ಮ ರಾಜ್ಯದ ಬೇರೆ ಯಾವ ನಗರಕ್ಕೂ ಇಲ್ಲ.
ಆ ನಗರದ ಮಹತ್ವವನ್ನು ಕರ್ನಾಟಕ ಸರ್ಕಾರವೂ, ಕರ್ನಾಟಕದ ರಾಜಕೀಯ ಪಕ್ಷಗಳೂ, ಕರ್ನಾಟಕದ ಹಿತಚಿಂತಕರೂ ಗಂಭೀರವಾಗಿ ಪರಿಗಣಿಸಬೇಕು.

ಕರ್ನಾಟಕ ರಾಜ್ಯದಲ್ಲಿ ಒಂದು ಜಿಲ್ಲೆ ಆಗುವ ಭಾಗ್ಯವನ್ನು ಅದು ತನ್ನ ಹಣೆಯಲ್ಲಿ ಬರೆದುಕೊಂಡು ಬಂದಿದೆ.
ಅದು, ಜಿಲ್ಲೆ ಆಗುವುದಿದ್ದರೆ ಮಾತ್ರ ತಾಲ್ಲೂಕು ಆಗಬೇಕು. ಅದನ್ನು ಜಿಲ್ಲೆಯನ್ನಾಗಿ ಮಾಡದೇ, ಕೇವಲ ತಾಲ್ಲೂಕನ್ನಾಗಿ ಮಾಡಿದರೆ ನಾವು ನಮ್ಮ ರಾಜ್ಯಕ್ಕೆ ಗಂಡಾಂತರವನ್ನು ಆಮಂತ್ರಿಸಿ ಕರೆದುಕೊಂಡಂತೆ ಆಗುತ್ತದೆ.

ಇದನ್ನು ನಮ್ಮ ರಾಜ್ಯದವರೂ ಅರಿಯರು. ಬೆಳಗಾವಿ ಜಿಲ್ಲೆಯ ಯಾವ ರಾಜಕಾರಣಿಯೂ ಅರಿಯನು ಅವರಿಗೆ ಸಮೀಪದಲ್ಲಿ ಇರುವುದು ಕಾಣುವುದಲ್ಲದೆ, ದೂರದಲ್ಲಿ ಇರುವುದು ಕಾಣುವುದಿಲ್ಲ.

ಬೆಳಗಾವಿ ಜಿಲ್ಲೆಯು ಇಂದು ನಮ್ಮ ರಾಜ್ಯದಲ್ಲಿಯೇ ದೊಡ್ಡ ಜಿಲ್ಲೆಯಾಗಿದೆ. ಅದು, ಹದಿನೆಂಟು ಜನ ಶಾಸಕರನ್ನು ನಮ್ಮ ವಿಧಾನಸಭೆಗೆ ಕಳಿಸುತ್ತದೆ.

ನಿಪ್ಪಾಣಿಯ ಬಗೆಗೆ ನಾವು ಏನೇ ತೀರ್ಮಾನ ಕೈಕೊಂಡರೂ ಅದರ ಪರಿಣಾಮ ಬೆಳಗಾವಿಯ ಮೇಲೆ, ರಾಜ್ಯದ ಮೇಲೆ ಆಗುತ್ತದೆ. ಈಗ ಬೆಳಗಾವಿಯಲ್ಲಿ, ಚಿಕ್ಕೋಡಿಯನ್ನು ಗೋಕಾಕನ್ನು ಜಿಲ್ಲೆ ಮಾಡಬೇಕೆನ್ನುವ ಜನರು ತುಂಬಿಕೊಂಡಿದ್ದಾರೆ. ಅವರಿಗೆ ತಮ್ಮ ಮೂಗಿನಾಚೆಗೆ ಜಗತ್ತು ಇದೆಯೆಂದು ಅನಿಸಿಯೇ ಇಲ್ಲ.

ಚಿಕ್ಕೋಡಿಯನ್ನೇ ಆಗಲಿ, ಗೋಕಾಕನ್ನೇ ಆಗಲಿ ಜಿಲ್ಲೆಯನ್ನಾಗಿ ಮಾಡದೇ ಹೋದರೆ ಅವು ಎಲ್ಲಿಗೂ ಹೋಗುವುದಿಲ್ಲ.
ಆದರೆ, ನಿಪ್ಪಾಣಿಯನ್ನು ಜಿಲ್ಲೆಯನ್ನಾಗಿ ಮಾಡದೆ, ಕೇವಲ ತಾಲ್ಲೂಕನ್ನಾಗಿ ಮಾಡಿದರೆ, ಕರ್ನಾಟಕ ರಾಜ್ಯದ ಸಮಗ್ರತೆಗೇ ಧಕ್ಕೆ ಉಂಟಾಗುತ್ತದೆ.

ಅದು, ಜಿಲ್ಲೆಯಾಗದೆ ಕೇವಲ ತಾಲ್ಲೂಕು ಆಗುವುದಾದರೆ, ಅದು ಮರಾಠೀ ಬಹುಸಂಖ್ಯಾತರ ತಾಲ್ಲೂಕಾಗಿ, ಕರ್ನಾಟಕವನ್ನು ನಿರಂತರವಾಗಿ ಬಾಧಿಸುವ ಕಂಕುಳ ಮುಳ್ಳಾಗಿ ಪರಿಣಮಿಸಬಹುದು. ಆದರೆ, ಅದು ಜಿಲ್ಲೆಯಾದರೆ ಕರ್ನಾಟಕದ ಭದ್ರಕೋಟೆಯಾಗಿ ಪರಿಣಮಿಸುತ್ತದೆ. ಇದನ್ನು ರಾಜ್ಯದಲ್ಲಿರುವ ಕರ್ನಾಟಕದ ಹಿತಚಿಂತಕರೆಲ್ಲರೂ ಗಂಭೀರವಾಗಿ ಗಮನಿಸಬೇಕು.

ನಿಪ್ಪಾಣಿ ಜಿಲ್ಲೆಯನ್ನು ಬರುವ ತಾಲ್ಲೂಕುಗಳು ಇವು: ನಿಪ್ಪಾಣಿ, ಚಿಕ್ಕೋಡಿ, ರಾಯಭಾಗ, ಅಥಣಿ, ಸಂಕೇಶ್ವರ, ಹಾರೋಗೇರಿ, ಕಾಗವಾಡ ಇಲ್ಲವೆ ಸದಲಗಾ. ಈ ಯಾವ ತಾಲ್ಲೂಕು, ಜಿಲ್ಲಾ ಸ್ಥಳದಿಂದ 60-65 ಕಿಲೋಮೀಟರ್‌ಗಳಷ್ಟು ದೂರದಲ್ಲಿ ಇರುವುದಿಲ್ಲ. ಇವುಗಳಲ್ಲಿ ಹಾರೋಗೇರಿ, ಸಂಕೇಶ್ವರ, ಕಾಗವಾಡ ಇಲ್ಲವೆ ಸದಲಗಾ ಇವುಗಳನ್ನು ತಾಲ್ಲೂಕಾಗಿ ನೂತನವಾಗಿ ನಿರ್ಮಿಸಬೇಕು.
ಈ ವಿಚಾರವನ್ನು ನಾನು ಹಿಂದಿನ ಮೂವತ್ತು ವರ್ಷಗಳಿಂದಲೂ ಪ್ರತಿಪಾದಿಸುತ್ತ ಬಂದಿದ್ದೇನೆ. ಇದನ್ನು ನಾನು ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ಹೇಳಿದಾಗ ಅವರು, `ಮಹಾಜನ ಆಯೋಗದ ವರದಿಯ ಶಿಫಾರಸಿನಂತೆ, ನಿಪ್ಪಾಣಿಯು ಮಹಾರಾಷ್ಟ್ರಕ್ಕೆ ಹೋಗಬೇಕು. ಅದು ಇಲ್ಲಿ ಜಿಲ್ಲೆ ಆಗುವುದು ಹೇಗೆ ಸಾಧ್ಯ?' ಎಂದು ನನ್ನನ್ನು ಕೇಳಿದರು.

ಆಗ ನಾನು ಅವರನ್ನು ಕೇಳಿದೆ: `ಮಹಾಜನ ವರದಿಯ ಶಿಫಾರಸಿನ ಮೇರೆಗೆ ಕಾಸರಗೋಡು ಕರ್ನಾಟಕಕ್ಕೆ ಬರಬೇಕು, ಆದರೆ ಅದು ಬರುವುದೇ? ಕೇರಳದವರು, ಅದು ಕರ್ನಾಟಕಕ್ಕೆ ಬರದಂತೆ ಮಾಡಿದ್ದಾರೆ. ಕಾಸರಗೋಡಿನಲ್ಲಿ ಕರ್ನಾಟಕದ ಬಹುಮತ ಇದೆ. ಕನ್ನಡಿಗರು ಅಲ್ಲಿ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಆ ಸಂಖ್ಯಾ ಬಹುಮತವನ್ನು ತಗ್ಗಿಸಲು, ಕೇರಳ ಸರಕಾರವು ಕಾಸರಗೋಡು ತಾಲ್ಲೂಕಿಗೆ ಮಲಯಾಳೀ ಭಾಷೆಯ ಬಹುಮತ ಇರುವ ಹೊಸದುರ್ಗ ತಾಲ್ಲೂಕನ್ನು ಸೇರಿಸಿ, ಕೇವಲ ಎರಡು ತಾಲ್ಲೂಕುಗಳ ಕಾಸರಗೋಡು ಜಿಲ್ಲೆಯನ್ನು ನಿರ್ಮಿಸಿ, ಕರ್ನಾಟಕದವರು ಕಾಸರಗೋಡನ್ನು ಕೇಳದಂತೆ, ಅದರ ಬಗೆಗೆ ಬಾಯಿ ಹಾಕದಂತೆ ಮಾಡಿದ್ದಾರೆ.

ನಿಪ್ಪಾಣಿಯನ್ನು ಜಿಲ್ಲೆಯನ್ನಾಗಿ ಮಾಡಿದರೆ ಬೆಳಗಾವಿ ಹೆಚ್ಚು ಸುರಕ್ಷಿತವಾಗಿ, ಹೆಚ್ಚು ಭದ್ರವಾಗಿ ಉಳಿಯುತ್ತದೆ. ಮಹಾಜನ ವರದಿಯ ಮೇರೆಗೆ ಮಹಾರಾಷ್ಟ್ರಕ್ಕೆ ಹೋಗಬೇಕಾದ ಖಾನಾಪುರದ ತಂಟೆಗೆ ಯಾರೂ ಹೋಗುವುದಿಲ್ಲ ಖಾನಾಪುರಕ್ಕೂ, ಮಹಾರಾಷ್ಟ್ರಕ್ಕೂ ಯಾವ ಸಲ್ಲಘ್ನತೆ, ಸಂಬಂಧ ಮಾತ್ರ ಇಲ್ಲ.

ಖಾನಾಪುರವು ಮಹಾರಾಷ್ಟ್ರಕ್ಕೆ ಹೋಗಬೇಕಾದರೆ, ಬೆಳಗಾವಿ ಜಿಲ್ಲೆಯನ್ನು ದಾಟಿ, ನಿಪ್ಪಾಣಿ ಜಿಲ್ಲೆಯನ್ನು ದಾಟಿ ಹೋಗಬೇಕು. ನಿಪ್ಪಾಣಿಯು ಜಿಲ್ಲೆಯಾಗಿ ರಚನೆಗೊಂಡರೆ, ಎಲ್ಲ ಪ್ರದೇಶಗಳೂ ಇಲ್ಲಿಯೇ ಉಳಿದು, ಕರ್ನಾಟಕ ರಾಜ್ಯ ಭದ್ರಗೊಳ್ಳುತ್ತದೆ.
ಆಗ ನಾನು ಹೆಗಡೆಯವರಿಗೆ ಹೇಳಿದ ಮಾತು ಇನ್ನೂ ಅಳಿಸಿಹೋಗಿಲ್ಲ `ನಿಪ್ಪಾಣಿಯ ಪ್ರಶ್ನೆ ನಿಮ್ಮ ಸಂಪುಟದ ಸಭೆಯಲ್ಲಿ ಚರ್ಚೆಗೆ ಬಂದಾಗ, ಆ ವಿಷಯದ ಬಗೆಗೆ ನಡೆಯುವ ಚರ್ಚೆಗೆ ನನ್ನನ್ನು ಆಮಂತ್ರಿಸಿರಿ ನಿಮ್ಮ ಸಂಪುಟದ ಸದಸ್ಯರಿಗೆಲ್ಲ ನಾನು ಮನವರಿಕೆ ಮಾಡಿಕೊಡುತ್ತೇನೆ'.

ನಾನು ಬಿಟ್ಟೇನೆಂದರೂ ನಿಪ್ಪಾಣಿಯ ಪ್ರಶ್ನೆ ನನ್ನನ್ನು ಬಿಡದಂತೆ ಹಿಡಿದುಕೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT