ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ವಿಟಿಯು ಕುಲಪತಿ ವಜಾಕ್ಕೆ ಎಬಿವಿಪಿ ಆಗ್ರಹ

Last Updated 15 ಜನವರಿ 2012, 9:55 IST
ಅಕ್ಷರ ಗಾತ್ರ

ಬೆಳಗಾವಿ: ಸುಳ್ಳು ದಾಖಲೆಗಳನ್ನು ನೀಡಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಯಾಗಿರುವ ಆರೋಪ ಎದುರಿಸುತ್ತಿರುವ ಡಾ. ಮಹೇಶಪ್ಪ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿತು.

ನಗರದ ಚನ್ನಮ್ಮ ವೃತ್ತದಲ್ಲಿ ಕೆಲ ಕಾಲ ಪ್ರತಿಭಟಿಸಿದ ಎಬಿವಿಪಿ ಕಾರ್ಯಕರ್ತರು, ಬಳಿಕ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಕುಲಪತಿ ಡಾ. ಮಹೇಶಪ್ಪ ವಿರುದ್ಧ ಘೋಷಣೆಗಳನ್ನು ಕೂಗಿದರು. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಜಿಲ್ಲಾ ಸಂಚಾಲಕ ಮಾರುತಿ ಸುಣಗಾರ, “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯವಸ್ಥೆಯ ಪಾವಿತ್ರ್ಯವನ್ನು ಕಾಪಾಡಬೇಕಿದ್ದ ಕುಲಪತಿಗಳೇ ಸುಳ್ಳು ದಾಖಲೆಗಳನ್ನು ನೀಡಿರುವುದು ದುರಂತ. ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರದಿದ್ದರೂ ಡಾ. ಮಹೇಶಪ್ಪ ಅವರು ಖೊಟ್ಟಿ ಪ್ರಮಾಣಪತ್ರ ನೀಡಿರುವುದು ಖಂಡಿನೀಯ” ಎಂದರು.

“ಮೈಸೂರು ವಿವಿಯಿಂದ ಬಿ.ಇ. ಮ್ಯಾಕಾನಿಕಲ್ ವಿಷಯದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾಗಿ ತಪ್ಪು ಮಾಹಿತಿ ನೀಡಿದ್ದಾರೆ. ಮೈಸೂರು ವಿವಿಯಿಂದ ಘಟಿಕೋತ್ಸವ ಪ್ರಮಾಣಪತ್ರ ಪಡೆದುಕೊಳ್ಳದ ಮಹೇಶಪ್ಪನವರು ವಿವಿಧ ಹುದ್ದೆಗಳಿಗೆ ನೇಮಕವಾಗುವಾಗ ಯಾವ ಪ್ರಮಾಣಪತ್ರ ಸಲ್ಲಿಸಿದ್ದರು ಎಂಬ ಸಂಶಯ ಮೂಡುತ್ತದೆ. 28 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟಿಸಿದ ಸ್ವಪ್ರಬಂಧಗಳ ಮಾಹಿತಿಯನ್ನು ನೀಡಿಲ್ಲ. ವಿಟಿಯು ವೆಬ್‌ಸೈಟ್‌ನಲ್ಲಿ ಪಿಎಚ್‌ಡಿ ಮಾರ್ಗದರ್ಶಕರ ಪಟ್ಟಿಯಲ್ಲಿ ಡಾ. ಮಹೇಶಪ್ಪ ಅವರ ಹೆಸರು ಇಲ್ಲ” ಎಂದು ತಿಳಿಸಿದರು.

“ಸುಳ್ಳು ದಾಖಲೆಗಳನ್ನು ನೀಡಿದ ಮಹೇಶಪ್ಪ ಅವರು ಪಡೆದಿರುವ ದರ್ಜೆಯ ಕುರಿತು ರಾಜ್ಯಪಾಲರಿಗೆ ಪರಿಶೀಲಿಸಲು ಹೈಕೋರ್ಟ್ ಆದೇಶಿಸಿರುವುದು ಸ್ವಾಗತಾರ್ಹ. ಕುಲಾಧಿಪತಿಗಳಾದ ರಾಜ್ಯಪಾಲರು ಈ ಬಗ್ಗೆ ಪರಿಶೀಲನೆ ನಡೆಸಿ ಕುಲಪತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶಿವಯೋಗಿ ಬೆಂಬಳಗಿ, ಸುಜಯ್ ಉದೋಶಿ, ಪ್ರಫುಲ್ ಕೊಡಲಿ, ಗಂಗಾಧರ, ಬಸವರಾಜ ಓಸಿ, ರೋಶನಿ ಕುಲಕರ್ಣಿ ಮತ್ತಿತರರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT