ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆಗೆ ಪ್ರಧಾನಿ?

Last Updated 22 ಫೆಬ್ರುವರಿ 2011, 16:15 IST
ಅಕ್ಷರ ಗಾತ್ರ


ಬೆಳಗಾವಿ:  ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ 30 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಹೇಳಿದರು.

ಬೆಳಗಾವಿ ಜಿಲ್ಲಾಧಿಕಾರಿಗೆ 17.22 ಕೋಟಿ ರೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ 6 ಕೋಟಿ ರೂ ಹಾಗೂ ವಾರ್ತಾ ಇಲಾಖೆಯ ನಿರ್ದೇಶಕರಿಗೆ 3.50 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಮಂಗಳವಾರ ನಗರದಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ಪೂರ್ವಸಿದ್ಧತೆ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

’ವಿಶ್ವ ಕನ್ನಡ ತೇರು ತರಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈ ತೇರುಗಳು ಮಾ.10 ರಂದು ಮಧ್ಯಾಹ್ನ 3 ಗಂಟೆಗೆ ಬೆಳಗಾವಿ ತಲುಪಲಿವೆ’ ಎಂದು ಅವರು ಹೇಳಿದರು.

’ಮೈಸೂರು ದಸರಾ ಮಾದರಿಯಲ್ಲಿ ಆನೆಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಅಂಬಾರಿ ಭುವನೇಶ್ವರಿ ಭಾವಚಿತ್ರವಿಟ್ಟು ಮೆರವಣಿಗೆ ಮಾಡಲಾಗುವುದು. ಈಗಾಗಲೇ ಆನೆಗಳು ಬೆಳಗಾವಿಯತ್ತ ಹೊರಟಿವೆ’ ಎಂದು ಅವರು ತಿಳಿಸಿದರು.

’ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ, ಡಾ.ಸುಧಾ ಮೂರ್ತಿ ಆಗಮಿಸಲಿದ್ದಾರೆ. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಡಾ.ಪಾಟೀಲ ಪುಟ್ಟಪ್ಪ, ಡಾ. ದೇ ಜವರೇಗೌಡ, ಡಾ.ಸಿದ್ಧಲಿಂಗಯ್ಯ ಆಗಮಿಸಲಿದ್ದಾರೆ’ ಎಂದರು.

‘ಸಮ್ಮೇಳನಕ್ಕೆ ಉದ್ಘಾಟನೆಗಾಗಿ ಪ್ರಧಾನಮಂತ್ರಿಗಳನ್ನು ಆಹ್ವಾನಿಸುವ ಯತ್ನ ಮುಂದುವರೆದಿದ್ದು, ಒಂದೆರಡು ದಿನದಲ್ಲಿಯೇ ಅಂತಿಮವಾಗಲಿದೆ’ ಎಂದು ಅವರು ತಿಳಿಸಿದರು.

’ಪಂಡಿತ್ ಹರಿಪ್ರಸಾದ ಚೌರಾಸಿಯಾ, ಡಾ.ಎಸ್.ಪಿ. ಬಾಲಸುಬ್ಯಮಣ್ಯಂ, ಡಾ.ಬಾಲಮುರಳಿ ಕೃಷ್ಣ, ಡಾ.ಮಾಯಾರಾವ್, ಕೃಪಾ ಫಡಕೆ ಕಾರ್ಯಕ್ರಮ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಕನ್ನಡ ಚಲನಚಿತ್ರ ರಂಗದ 500 ಕಲಾವಿದರು ಒಂದೂವರೆ ಗಂಟೆ ಕಾಲ ರಸಮಂಜರಿ ಕಾರ್ಯಕ್ರಮ ನೀಡಲಿದ್ದಾರೆ’ ಎಂದರು.

ಸಚಿವರಾದ ಉಮೇಶ ಕತ್ತಿ, ಲಕ್ಷ್ಮಣ ಸವದಿ, ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ, ಜಿ.ಪಂ. ಅಧ್ಯಕ್ಷ ಈರಪ್ಪ ಕಡಾಡಿ, ವೈದ್ಯಕೀಯ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಐ.ಎಂ. ವಿಠಲಮೂರ್ತಿ, ಐಜಿಪಿ ಪಿ.ಎಸ್. ಸಂಧು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT