ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳವಣಿಗೆಯ ಅನುಭವ ಕೊಡುವುದೇ ಉತ್ತಮ ಕೃತಿ

ಸಾಹಿತ್ಯ ಸಾಂಗತ್ಯ
Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

* ನೀವು ಓದನ್ನು ತೀರಾ ಹಚ್ಚಿಕೊಂಡದ್ದು ಯಾವಾಗ? ಯಾವಾಗ ನಿಮ್ಮ ಓದಿನ ಯಾನ ಆರಂಭವಾಯಿತು? ನಿಮ್ಮ ಬಾಲ್ಯದಲ್ಲಿ ಓದಿಗೆ ಇದ್ದ ವಾತಾವರಣ ಯಾವ ಬಗೆಯದು?
ನನ್ನ ಓದಿನ ಯಾನ ಅಯಾಚಿತವಾಗಿ ಆರಂಭವಾಯಿತು. ನಾನು ಹುಟ್ಟಿದ್ದು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಖ್ಯಾತಿವೆತ್ತ ಹೊನ್ನಾಪುರಮಠ ಮನೆತನದಲ್ಲಿ. ನನ್ನ ಅಜ್ಜ ಹುಚ್ಚಯ್ಯನವರು 1850ರಲ್ಲಿಯೇ `ಚಂದ್ರೋದಯ' ಮುದ್ರಣಾಲಯವನ್ನು ಆರಂಭಿಸಿದ್ದರು.

ಅದು ಅಪ್ಪನ ಕೈ ಗೆ ಬಂದ ಮೇಲೆ ಪ್ರತಿದಿನದ ಪ್ರೂಫ್ ಕೆಲಸದಲ್ಲಿ ಮೂಲ ಕರಡಲ್ಲ ಶಾಲೆಯ ಪಾಠವನ್ನು ಧ್ವನಿ ಮಾಡಿ ಓದಬೇಕಿತ್ತು. ಅಕ್ಷರ ಜೋಡಿಸಿ ಓದುವ ಪರಿಪಾಟಿಗೆ ನಾನು ತೆರೆದುಕೊಂಡದ್ದು ಹೀಗೆ. ದಿನಗಳೆದಂತೆ ಅಪ್ಪ ಪ್ರೂಫ್ ತಿದ್ದುತ್ತಲೇ ವಿಶಿಷ್ಟ ಶಬ್ದಗಳ ವ್ಯತ್ಪತ್ತಿ, ಅರ್ಥ ಹಾಗೂ ಪ್ರಯೋಗಸಾಧ್ಯತೆಗಳನ್ನು ಕುರಿತು ವಿವರಿಸುತ್ತಿದ್ದ. ಇದರಿಂದ ಶಬ್ದಾರ್ಥಗಳೊಡನೆ ಆಟ ಆಡುವ ಪ್ರವೃತ್ತಿ, ಸಂತೋಷ ನನ್ನಲ್ಲಿ ಹುಟ್ಟಿಕೊಂಡಿತು.

ಇದಲ್ಲದೆ ನನ್ನ ಅಜ್ಜ ಗದಿಗೆಯ್ಯ 19ನೇ ಶತಮಾನದ ಕೊನೆಯ ದಶಕಗಳಲ್ಲಿ 34 ಪುಸ್ತಕಗಳನ್ನು ರಚಿಸಿ ತಾವೇ ಪ್ರಕಟಿಸಿದ್ದರು. ಅವುಗಳಲ್ಲಿ ಬಾಲಭಾರತ, ಬಾಲರಾಮಾಯಣ, ಅಬ್ರಹಾಂ ಲಿಂಕನ್ ಚರಿತ್ರೆ ಮುಂತಾದವುಗಳನ್ನು ಎತ್ತಿಕೊಂಡು ನಾನು ಓದತೊಡಗಿದೆ. ನಮ್ಮ ಮನೆಗೆ ಬರುತ್ತಿದ್ದ ದಿನಪತ್ರಿಕೆ, ವಾರಪತ್ರಿಕೆ, ಮಾಸಿಕಗಳಲ್ಲಿ ಆಗ ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ಇರುತ್ತಿತ್ತು.

ಅವುಗಳನ್ನು ತಪ್ಪದೇ ಓದುತ್ತಿದ್ದೆ. ಶಾಲಾಪಠ್ಯಗಳೂ ಆಸಕ್ತಿದಾಯಕವೇ ಆಗಿರುತ್ತಿದ್ದವು. ಎರಡು ಮೂರನೇ ತರಗತಿಯಲ್ಲಿ ಕಡ್ಡಾಯವಾಗಿ ಮೂಡಿ ಬಂದ ಓದು ನಂತರ ಐಚ್ಛಿಕವಾಗಿ ಬೆಳೆದು ಹದಿಹರೆಯಕ್ಕೆ ಕಾಲಿಡುವಷ್ಟರಲ್ಲಿ ಮನೆಯ ಟೆರೇಸ್ ಮೇಲೆ ಏಕಾಕಿಯಾಗಿ ಕುಳಿತು ಆಕಾಶ, ನಕ್ಷತ್ರ, ಚಂದ್ರರೊಂದಿಗೆ ಮಾತನಾಡಿಕೊಳ್ಳುತ್ತಲೇ ಎರವಲು ತಂದ ಕಥೆ-ಕಾದಂಬರಿಗಳನ್ನು ಓದುವ ಹುಚ್ಚು ಹತ್ತಿತು. ಆಗ ಊಟ, ನಿದ್ರೆಯ ಪರಿವೆಯೇ ಇರುತ್ತಿರಲಿಲ್ಲ. ಈಗಲೂ ಅಷ್ಟೇ. ಬರವಣಿಗೆಗಿಂತ ಓದಿನ ಬಗ್ಗೇ ಪ್ರೀತಿ, ಮೋಹ. ಎಂಥ ಗದ್ದಲದಲ್ಲೂ ನಿರಾಳವಾಗಿ ಓದಬಲ್ಲೆ. ರೈಲು ಪ್ರಯಾಣ ನನಗೆ ತುಂಬ ಇಷ್ಟವಾಗುವುದು ಓದಿನ ಸವಲತ್ತಿಗಾಗಿಯೇ.

*ನಿಮ್ಮ ಓದನ್ನು ಆರಂಭಿಸಿದ ದಿನಗಳಲ್ಲಿ ಅತ್ಯಂತ ಖುಷಿಕೊಟ್ಟ ಅಥವಾ ಇಷ್ಟವಾದ ಪುಸ್ತಕಗಳ ಬಗ್ಗೆ ಹೇಳಿ.
ಓದಿನ ಅಗಾಧ ಸಮ್ಮೊಹಕತೆಗೆ ನಾನು ಈಡಾದದ್ದು ಕಥೆಗಳಿಂದಾಗಿ. ಚಂದಮಾಮ, ವೀರಮಾತೆ, ಪ್ರಪಂಚಗಳಲ್ಲಿ ಪ್ರಕಟವಾಗುತ್ತಿದ್ದ ಬಾಲಸಾಹಿತ್ಯ, ಸಚಿತ್ರ ಕಥಾಮಾಲಿಕೆ, ಅಲ್ಲಾವುದ್ದೀನ್ ಮತ್ತು ಸೋಜಿಗದ ದೀಪ, ಅಲೀಬಾಬಾ ನಾಲ್ವತ್ತು ಜನ ಕಳ್ಳರು ಮುಂತಾದ ಕಥೆಗಳ ಮಾಂತ್ರಿಕತೆಯಲ್ಲಿ ಮೈಮರೆಯುತ್ತಿದ್ದೆ.

ಪಠ್ಯಗಳಲಿಯ್ಲ `ನಾಗರಹಾವೆ ಹಾವೊಳು ಹೂವೆ', `ಅಜ್ಜನ ಕೋಲಿದು', `ಪಾತರಗಿತ್ತಿ ಪಕ್ಕ'ದಂಥ ರಚನೆಗಳನ್ನು ಓದುತ್ತ, ಹಾಡುತ್ತ, ಎದೆ ತುಂಬಿಬರುತ್ತಿತ್ತು! `ನಾವು ಎಳೆಯರು ನಾವು ಗೆಳೆಯರು'ಗೆ ಧಾಟಿ ಹಚ್ಚಿ `ನಾಳೆ ನಾವೇ ನಾಡ ಹಿರಿಯರು ನಮ್ಮ ಕನಸದೊ ಸುಂದರ' ಎಂದಾಗ ನಾನು ದೊಡ್ಡವಳಾಗುವುದನ್ನು ಅನುಭವಿಸುವ ಸಂತಸವೇ ವಿಚಿತ್ರವಾದದ್ದು.

`ನಾನು ಪಂಜರ ಪಕ್ಷಿ' ಎಂದು ನನ್ನ ಪಾಡೇ ಹಾಡಾದಂತೆ ಎಷ್ಟೋ ವರ್ಷಗಳವರೆಗೆ ಒಬ್ಬಳೇ ಪ್ರಯಾಣಿಸುತ್ತಿದ್ದಾಗಲೂ ಗುನುಗುಡುತ್ತಿದ್ದೆ... ಇಂಥ ಕಥೆ ಪದ್ಯಗಳೇ ಬಿಡಿಬಿಡಿಯಾಗಿ ನೆನಪಿನಲ್ಲಿ ಉಳಿದಿವೆಯೇ ಹೊರತು ಪುಸ್ತಕದ ಹೆಸರು ಕಷ್ಟ. ಹಾಂ, ನನ್ನ ಅಜ್ಜ ಬರೆದ ರಾಮಕೃಷ್ಣ ಪರಮಹಂಸರ ಸತ್ಕಥೆಗಳು, ನೀತಿಮಂಜರಿ... ನಂತರದಲ್ಲಿ ನಗರ ಕೇಂದ್ರ ಗ್ರಂಥಾಲಯಕ್ಕೆ ಸದಸ್ಯೆಯಾಗಿ ತರುತ್ತಿದ್ದ ಶರಶ್ಚಂದ್ರ, ತ್ರಿವೇಣಿ, ಅನಕೃ, ತರಾಸು, ಬಸವರಾಜ ಕಟ್ಟೀಮನಿಯವರ `ಮಾಡಿ ಮಡಿದವರು', ಭೈರಪ್ಪನವರ `ದೂರ ಸರಿದರು'... ಮಾಧ್ಯಮಿಕ ಶಾಲೆಯ ಕೊನೆಯ ಹಂತಕ್ಕೆ ಬಂದಾಗ ವಿವೇಕಾನಂದರ ಕೃತಿಶ್ರೇಣಿ-1, 2, 3... ಹೀಗೆ... ಓದಿದ್ದೆಲ್ಲ ಅರ್ಥವಾಗುತ್ತಿತ್ತೆಂದೇನೂ ಅಲ್ಲ.

ಓದಬೇಕು ಓದಬೇಕು ಅನಿಸುತ್ತಿತ್ತು. ತಿಳಿಯದಾಗ, ಸೇರದಾಗ ಪ್ಯಾರಾಗಳನ್ನಾಗಲಿ, ಪುಟಗಳನ್ನಾಗಲಿ ಹಾರಿಸಿ ಓದಿದ್ದೇ ಇಲ್ಲ. ಕೈಗೆ ಎತ್ತಿಕೊಂಡ ಪುಸ್ತಕ ಅರ್ಧಕ್ಕೆ ಬಿಟ್ಟದ್ದೂ ನೆನಪಿಲ್ಲ. ಇತ್ತಿಚಿನ ಹತ್ತು ವರ್ಷಗಳಲ್ಲಿ ಮಾತ್ರ ಕೈಗೆ ಬಂದ ಹೊಸ ಪುಸ್ತಕಗಳನ್ನೆಲ್ಲ ಓದಲು ಮನಸ್ಸಾಗುವುದಿಲ್ಲ.

*ನಿಮ್ಮ ಪ್ರಕಾರ ಅತ್ಯುತ್ತಮ ಸಾಹಿತ್ಯ ಕೃತಿ ಎಂದರೆ ಯಾವುದು? ನಿಮ್ಮ ಓದಿನ ವ್ಯಾಪ್ತಿಯಲ್ಲಿ ಒಂದೆರಡು ಉದಾಹರಣೆ ಕೊಡಲು ಸಾಧ್ಯವೆ?
ಯಾವ ಕೃತಿ ಓದುವುದರಿಂದ ನಮಗೆ ಬೆಳವಣಿಗೆಯ ಅನುಭವವಾಗುತ್ತದೋ, ಹೊಸ ತಿಳಿವು, ಹೊಸ ಅನುಭವವುಂಟಾಗುತ್ತದೋ ಮನಸ್ಸು ಹಗುರವಾಗುತ್ತದೋ ಅದು ಉತ್ತಮ ಸಾಹಿತ್ಯ ಕೃತಿ ಎಂದು ನನ್ನ ಅನಿಸಿಕೆ. ಅಂಥ ಕೃತಿಗಳಿಗೆ ನಮ್ಮ ಮನೋಭಾವವನ್ನು ರೂಪಿಸಬಲ್ಲ, ಬದಲಿಸಬಲ್ಲ ಸಾಮರ್ಥ್ಯವಿರುತ್ತದೆ.

ಉತ್ತಮ ಸಾಹಿತ್ಯ ಕೃತಿ ಬಗ್ಗೆ ಬಹುವಚನದಲ್ಲೇ ಹೇಳಬೇಕು. ಬೇಂದ್ರೆ, ಕುವೆಂಪು, ಶಿವರಾಮ ಕಾರಂತ, ಹಾಂ- 1967ರಲ್ಲಿ ನನ್ನಣ್ಣನ ಮದುವೆಗೆ ಉಡುಗೊರೆಯಾಗಿ ಬಂದ `ಬಾಳ್ವೆಯೇ ಬೆಳಕು' ಓದಿದಾಗ ನನಗೆ ಹೊಸ ದಿಗಂತದ ದರ್ಶನವಾಯಿತು. ಅದು ನನ್ನ ಗಂಭೀರ ಓದಿಗೆ ದಿಕ್ಸೂಚಿಯಾಯಿತು. ಆ ದಿನಗಳಲ್ಲಿ ನನ್ನ ಕೈಗೆ ಸಿಕ್ಕ ಎಲ್ಲ ನಮೂನೆಯ ಪುಸ್ತಕಗಳನ್ನು ಓದುತ್ತಿದ್ದೆ.

1972ರಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರಿಂದ ಓದಿನ ಆಯ್ಕೆಯ ಮಹತ್ವ ಅರಿತುಕೊಂಡೆ. ನಂತರ ತೇಜಸ್ವಿ, ಅನಂತಮೂರ್ತಿ, ಲಂಕೇಶ, ಶಾಂತಿನಾಥ ದೇಸಾಯಿ, ವೀಣಾ ಶಾಂತೇಶ್ವರ, ದೇವನೂರ ಮಹಾದೇವ, ಕಾರ್ನಾಡ, ಕಂಬಾರ... ಹೊಸ ಲೋಕವೇ ತೆರೆದುಕೊಂಡಿತು... ಸಾಕ್ರೆಟಿಸನ ಕೊನೆಯ ದಿನಗಳು, ಗಾಂಧೀಜಿ ಆತ್ಮಕಥೆ, ಬಾಪುಕುಟಿ,  ಹೀಗೆ. ಆ ಮೊದಲು ಹಿಂದಿಯಲ್ಲಿ ಗುಲ್ಶನ್ ನಂದಾರಂಥವರ ಕಾದಂಬರಿಗಳನ್ನು ಓದುತ್ತಿದ್ದ ನನ್ನ ಆಸಕ್ತಿ ನಂತರ ಪ್ರೇಮಚಂದ್, ಶಿವಾನಿ, ಅಜ್ಞೇಯ, ಹರಿವಂಶರಾಯ್ ಬಚ್ಚನ್ ಮುಂತಾದವರತ್ತ ಹರಿಯಿತು.

ದಾಸ್ತೋವಸ್ಕಿ, ಚೆಕಾವ್, ಆನಾ ಆಹ್ಮತೋವಾ, ಅಮೃತಾ ಪ್ರೀತಂ, ಕುಂದನಿಕಾ ಕಪಾಡಿಯಾ, ಚಿತ್ರಾ ಮುದಗಲ್, ಮಾಧವಿ ಕುಟ್ಟಿ, ಅಷಿತಾ, ಸಾರಾ ಜೋಸೆಫ್ ಮುಂತಾದವರನ್ನು ಕನ್ನಡದಲ್ಲಿ ಓದಿದೆ. ಗಾಂಧೀಜಿ, ಲಾಲ್ ಬಹದ್ದೂರ ಶಾಸ್ತ್ರಿ, ವಿವೇಕಾನಂದ, ರಾಮಕೃಷ್ಣ ಪರಮಹಂಸ, ನಾರಾಯಣ ಗುರುಗಳ ಬದುಕು ಚಿಂತನೆಯ ಕೃತಿಗಳು ನನ್ನ ಓದಿನ ಸಾರ್ಥಕತೆಯನ್ನು ಹೆಚ್ಚಿಸಿವೆ.

*ಯಾವ ಸಾಹಿತ್ಯ ಕೃತಿಗಳು ನಿಮ್ಮ ಮೇಲೆ ತೀರಾ ಪ್ರಭಾವ ಬೀರಿವೆ? ಅವು ನಿಮ್ಮ, ಬದುಕು ಹಾಗೂ ಸಾಹಿತ್ಯವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿವೆಯೇ?
ಕನ್ನಡ ಸಾಹಿತ್ಯವನ್ನು ಶಿಸ್ತುಬದ್ಧವಾಗಿ ಅಭ್ಯಸಿಸಲೆಂದೇ ನಾನು ಮನೋವಿಜ್ಞಾನ ಸ್ನಾತಕೋತ್ತರ ಪದವಿಯ ನಂತರ ಕನ್ನಡ ಸಾಹಿತ್ಯದ ವಿದ್ಯಾರ್ಥಿನಿಯಾಗಿ ಡಿಪ್ಲೊಮಾ, ಮತ್ತು ಎಂಎ ಓದಿದೆ, ಪಿಎಚ್.ಡಿ ಮಾಡಿದೆ. ಈ ಓದು ಚಿಂತನೆಯ ಹೊಸ ಮಜಲುಗಳನ್ನು, ಗ್ರಹಿಕೆಯ ವಿಭಿನ್ನ ನೆಲೆಗಳನ್ನು ತೆರೆದು ತೋರಿತು.

ಸಾಹಿತ್ಯದ ಓದು ನನ್ನೊಳಗಿನೊಳಗನ್ನು ಅರಿಯಲು ಪ್ರಕೃತಿಯ ಅನಿವಾರ್ಯ ಸಹಬಂಧ ತಿಳಿಯಲು ಮನುಷ್ಯ ಸ್ವಭಾವ - ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ನನಗೆ ಉಪಾಧಿಯಾಗಿ ಒದಗಿ ಬಂದಿದೆ. ದಾಂಪತ್ಯದ ಮನಸ್ತಾಪ ಸಂಭಾಳಿಸಲು, ಕೆಲವೊಮ್ಮೆ ವಿನಾಕಾರಣ ನನ್ನ ಮೇಲೆ ದಾಳಿ ಮಾಡುವ ಅಸಮಾಧಾನ, ಅಸಂತುಷ್ಟಿಗಳನ್ನು ನೀಗಿಕೊಳ್ಳಲು ಸಹ ನಾನು ಓದಿಗೆ ಶರಣಾಗುತ್ತೇನೆ.

ಕಾವ್ಯಮೀಮಾಂಸೆ ಓದುವಾಗ ಎಡ್ವರ್ಡ್ ಬುಲ್ಲೋನ `ಮಾನಸಿಕ ದೂರ'ದ ತಿಳಿವಳಿಕೆ ಬರೀ ಸಾಹಿತ್ಯದ ಓದಿಗೆ ಮಾತ್ರವಲ್ಲ. ಬರವಣಿಗೆಗೂ, ಅದರಂತೆ ಬದುಕಿಗೂ ಅನ್ವಯವಾಗುವುದನ್ನು ಅರ್ಥಮಾಡಿಕೊಂಡಿರುವೆ. ಪುತಿನ ಹೇಳಿದ `ಭವನಿಮಜ್ಜನಚಾತುರ್ಯ', `ಲಘಿಮಾಕೌಶಲ'ಗಳು ಹೆಣ್ಣಿನ ಜೀವನದಲ್ಲಿಯೂತೂ ಅಗತ್ಯ ರೂಢಿಸಿಕೊಳ್ಳಬೇಕಾದ ಲಕ್ಷಣಗಳು ಅನ್ನಿಸಿವೆ. ದಲಿತ, ಮುಸ್ಲಿಂ ಮುಂತಾದ ಹಲವು ಸಂವೇದನೆಗಳ ತಿಳಿವು; ಬುದ್ಧ, ಬಸವ, ಮಾರ್ಕ್ಸ್, ಗಾಂಧಿ, ಅಂಬೇಡ್ಕರ್ ಚಿಂತನೆಯ ಅರಿವು ಮೊದಲು ನನ್ನಲ್ಲಿ ಮೂಡಿದ್ದೇ ಸಾಹಿತ್ಯದ ಓದಿನಿಂದ. ವಚನಸಾಹಿತ್ಯ ನನ್ನನ್ನು ಮೂಕವಿಸ್ಮಿತಗೊಳಿಸಿದೆ.

`ಕಳಬೇಡ, ಕೊಲಬೇಡ'ದಂಥ ಸರಳ ವಚನವೂ ಅಗಾಧ ಪ್ರಭಾವ ಬೀರಿದೆ. ನಿಜಗುಣ ಶಿವಯೋಗಿಗಳ `ಮನಕಂಜಿ ನಡೆಯದೆ ಜನಕಂಜಿ ನಡೆದರೆ ಮನದಾಣ್ವ ಗುರುಸಿದ್ಧ ಮರೆಯಾಗ್ವನಲ್ಲ' ವಚನ ನನಗೆ ಸದಾ ಸ್ಮರಣೀಯ. ಅಕ್ಕನ `ತೆರಣಿಯ ಹುಳ'... ಇಂಥ ಒಂದೇ ಎರಡೇ... ಹಲವು ಉಕ್ತಿ, ಪದಪುಂಜ, ಹೊಳಹುಗಳು ನನ್ನ ಜೀವನಕ್ಕೆ ಬೆಳಕು, ಹೊಳಪು ನೀಡಿವೆ. ನನ್ನ ಕೈಹಿಡಿದು ನಡೆಸುತ್ತಿವೆ.

*ಈಗ ಪುಸ್ತಕಗಳ ಓದು ಕಡಿಮೆಯಾಗುತ್ತಿದೆ, ಪುಸ್ತಕಗಳಿಗೆ ಭವಿಷ್ಯವಿಲ್ಲ ಎಂಬ ಮಾತುಗಳು ಆಗಾಗ ಕೇಳಿಬರುತ್ತಿವೆ. ಕನ್ನಡದ ಕವಿಯಾಗಿ ಈ ಕುರಿತು ಏನೆನ್ನಿಸುತ್ತದೆ?
ಪುಸ್ತಕಗಳ ಓದು ಈಗ ಕಡಿಮೆಯಾಗುತ್ತಿರುವುದನ್ನು ಅಲ್ಲಗಳೆಯಲಾಗದು. ಚೋದ್ಯವೆಂದರೆ ಲೇಖಕರ ಸಂಖ್ಯೆ ಮತ್ತು ಪುಸ್ತಕ ಪ್ರಕಟಣೆಯ ಸಂಖ್ಯೆಯೂ ಹೆಚ್ಚುತ್ತಿರುವುದು ಸತ್ಯವೇ. ನಾನು ಪಾಟಿ, ಪೇಣೆ ಬಳಸಿ ರಠಈಕ ಕಲಿತಿದ್ದೆ. ಈಗಿನ ಮಕ್ಕಳು ಕಂಪ್ಯೂಟರ್ ಬಳಸಿ ಓದುತ್ತಾರೆ, ಬರೆಯುತ್ತಾರೆ.

ಕಾಲದ ವೇಗ ಅಸಹಜ ಗತಿ ಪಡೆಯುತ್ತಿದೆ. ಹಲವು ಆಧುನಿಕೋತ್ತರ ಒತ್ತಡಗಳಲ್ಲಿ ಸಿಲುಕಿದ ಮನುಷ್ಯ ಅವುಗಳ ಶಮನಕ್ಕಾಗಿ ಪುಸ್ತಕದ ಸ್ಪರ್ಶಚಿಕಿತ್ಸೆಯನ್ನೇ ಪಡೆಯಬೇಕು ಎಂದು ನನಗನಿಸುತ್ತದೆ.

*ಓದು ಮನುಷ್ಯನ ಬದುಕಿಗೆ ತೀರ ಅಗತ್ಯ, ಅನಿವಾರ್ಯ ಅನ್ನಿಸುತ್ತದೆಯೇ?
ಓದು ಎಂಬುದನ್ನು ಪುಸ್ತಕ ಅಥವಾ ಅಕ್ಷರ ಗ್ರಹಿಕೆಗೆ ಮಾತ್ರ ಸೀಮಿತಗೊಳಿಸಬೇಕಿಲ್ಲ. ಅಕ್ಷರಜ್ಞಾನವೇ ಇಲ್ಲದ ಅನೇಕ ಸಾಮಾನ್ಯ ಜನ ಈಗಲೂ ಅಸಾಮಾನ್ಯ ರೀತಿಯಲ್ಲಿ ಬದುಕುತ್ತಿದ್ದಾರೆ.

ವ್ಯಕ್ತಿ, ವಸ್ತು, ಪರಿಸ್ಥಿತಿಗಳನ್ನು ಓದುತ್ತಲೇ ಮನುಷ್ಯರೊಂದಿಗೆ, ಪ್ರಕೃತಿಯೊಂದಿಗೆ ಹೊಂದಿಕೊಂಡು ಸಂತುಷ್ಟಿಯ ಸಹಬಾಳ್ವೆ ನಡೆಸಿದ್ದಾರೆ. ಬುದ್ಧಿ-ಭಾವನೆಗಳ ಅಗಾಧ ಸಾಧ್ಯತೆಗಳನ್ನು ಬಳಸಿಕೊಳ್ಳಲು ಅಕ್ಷರಜ್ಞಾನವೂ ಒಂದು ಸಾಧನ ಅಷ್ಟೆ, ಅದೇ ಅನಿವಾರ್ಯವಲ್ಲ. ಆದರೆ ನನಗೆ ಮಾತ್ರ ಇಹ-ಪರ, ಕನಸು-ನನಸು ಎಲ್ಲಕ್ಕೂ ಅಕ್ಷರವೇ ಉಸಿರು.

*ಧಾರವಾಡದಂತಹ ಸಾಹಿತ್ಯಕ ವಾತಾವರಣವಿರುವ ಊರಿನಲಿರ‌್ಲುವುದು ನಿಮ್ಮ ಓದು ಬರಹಗಳಿಗೆ ಯಾವ ರೀತಿ ಪೂರಕವಾಗಿದೆ? ಬೆಂಗಳೂರಿನಂಥ ನಗರದಲ್ಲಿದ್ದರೆ ಓದು ಬರಹದಂತಹ ಚಟುವಟಿಕೆಗಳಿಗೆ ಇನ್ನೂ ಹೆಚ್ಚಿನ ಅವಕಾಶ ಸಿಗುತ್ತಿತ್ತು ಎಂಬ ಯೋಚನೆ ಎಂದಾದರೂ ಬಂದಿತ್ತೆ?
ಧಾರವಾಡದೊಂದಿಗೆ ನನ್ನದು ಕರುಳುಬಳ್ಳಿಯ ಸಂಬಂಧ. ಹೇಳಿಕೊಳ್ಳುವಂಥ ನಗರವೂ ಅಲ್ಲದ, ಹಳ್ಳಿಯೂ ಅಲ್ಲದ ಧಾರವಾಡದ ಕಮನೀಯ ಸ್ವಭಾವದಲ್ಲಿ ಅಯಸ್ಕಾಂತೀಯ ಗುಣವಿದೆ. ನೇರ, ಸ್ಪಷ್ಟ, ನಿರ್ಭಿಡೆಯ ವ್ಯಕ್ತಿತ್ವಕ್ಕೆ ಸಾಹಿತ್ಯಿಕ ವಾತಾವರಣ ಮೆರಗು ನೀಡಿದೆ. ಧಾರವಾಡದ ಸಹಜ, ಸರಳ, ಸೀದಾಸಾದಾ ಜೀವನವೈಖರಿಯನ್ನು ಬಿಟ್ಟು ಎಲ್ಲಿಗೂ ಹೋಗಲು ಮನಸ್ಸಾಗುವುದಿಲ್ಲ. ಬೆಂಗಳೂರಿನಂಥ ನಗರದ ಕೃತ್ರಿಮತೆ ದಿಕ್ಕೆಡಿಸುತ್ತದೆ. ಯಾವುದೇ ಹೆಚ್ಚಿನ ಅವಕಾಶಕ್ಕಾಗಿ ಸಂತುಲಿತ ಬದುಕಿನ ಶೈಲಿಯನ್ನು ಅತಂತ್ರಗೊಳಿಸಿಕೊಳ್ಳಲಾದೀತೆ...

*ಈಗ ನೀವು ಗಮನಿಸಿದಂತೆ  ಕಥೆ, ಶಿಶುಗೀತೆಗಳಿಗೆ ಸಂಬಂಧಿಸಿದಂತೆ ಮಕ್ಕಳು ಓದು ಹೇಗಿದೆ? ಮಕ್ಕಳಿಗಾಗಿ ಯಾವ ಲೇಖಕ/ ಪುಸ್ತಕ/ ಕವಿತೆಗಳನ್ನು ನೀವು ಶಿಫಾರಸು ಮಾಡುತ್ತೀರಿ?
ಈಗಿನ ಮಕ್ಕಳ ಕಲ್ಪನೆಗೂ ನಮ್ಮ ಕಾಲದಲ್ಲಿಯ ರಮ್ಯ ಕಲ್ಪನೆಗೂ ಸಾಕಷ್ಟು ಅಂತರವಿದೆ ಅನಿಸುತ್ತದೆ. ಅದ್ಭುತ ರಮ್ಯ ಕಥೆಗಳನ್ನು ಕೇಳುವುದಕ್ಕಿಂತ ದೃಶ್ಯ ಮಾಧ್ಯಮದ ಮಿಕ್ಕಿಮೌಸ್‌ದಂಥ ಲಘು ಆಟೋಟದ ಕಥೆಗಳೇ ಇಂದಿನ ಮಕ್ಕಳನ್ನು ರಂಜಿಸುತ್ತವೆ.

ಶಾಲಾಪಠ್ಯಕ್ರಮದಲ್ಲಿಯೂ ಬುದ್ಧಿಗೆ ಒತ್ತು ನೀಡಲಾಗಿದ್ದು ಭಾವನಾತ್ಮಕತೆ ಹಿನ್ನಡೆಗೊಂಡಿದೆ. ನಮ್ಮ ಕಾಲದಲ್ಲಿ ಧಾರವಾಡ ಆಕಾಶವಾಣಿ ಮಕ್ಕಳಿಗಾಗಿ ಬಿತ್ತರಿಸುತ್ತಿದ್ದ ಭಾನುವಾರದ `ಗಿಳಿವಿಂಡು' ಕಾರ್ಯಕ್ರಮದಲ್ಲಿ ಕಥೆ, ಹಾಡು, ಚರ್ಚೆ, ಆಟ, ಸ್ಪರ್ಧೆ ಮುಂತಾದವು ಪ್ರಸಾರವಾಗುತ್ತಿದ್ದವು. ಅದರಲ್ಲಿ ಮುಖ್ಯವಾಗಿ ಮಕ್ಕಳೇ ಭಾಗವಹಿಸುತ್ತಿದ್ದರು. ಅದನ್ನು ಕೇಳುವ ಮಕ್ಕಳಲ್ಲಿ ಮನೋವಿಕಾಸದೊಂದಿಗೆ ಸರ್ವತೋಮುಖ ಬೆಳವಣಿಗೆಗೆ ಪ್ರೇರಣೆ ದೊರೆಯುತ್ತಿತ್ತು. ಜೊತೆಗೆ ಅದು ಓದಿನ ಅಭಿರುಚಿಯನ್ನು ಬೆಳೆಸುತ್ತಿತ್ತು.

ಮಕ್ಕಳಿಗಾಗಿ ಅಂಥ ಕೇಳು-ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಪಂಚತಂತ್ರ, ಈಸೋಪನ ಕಥೆಗಳು, ಕಾಲ್ಪನಿಕ ಕಟ್ಟುಕಥೆಗಳು ಮಕ್ಕಳಲ್ಲಿ ಕಲ್ಪನಾಶಕ್ತಿಯನ್ನು, ಉತ್ಸಾಹ, ಉತ್ಸುಕತೆಗಳನ್ನು, ಜೀವನಪಾಠಗಳನ್ನು ಬಿತ್ತಬಲ್ಲವು. ದಿನಕ್ಕೊಂದು ಇಂಥ ಕಥೆ ಮಕ್ಕಳನ್ನು ಅದ್ಭುತ ರಮ್ಯಲೋಕದಲ್ಲಿ ಹಾರಾಡಿಸಿಯೂ ನೆಲದ ಅರಿವನ್ನು ಮೂಡಿಸಬಲ್ಲದು. ರಾಜರತ್ನಂ, ಪಂಜೆ ಮಂಗೇಶರಾಯರು, ಶಂ.ಗು. ಬಿರಾದಾರ, ಶಿಶು ಸಂಗಮೇಶ ಮುಂತಾದವರ ಶಿಶುಗೀತೆಗಳು ಮಕ್ಕಳಿಗೂ ಹಿರಿಯರಿಗೂ ಮುದ ನೀಡಬಲ್ಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT