ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬೆಳೆ ವಿಪುಲವಾಗಿದೆ, ಕೊಯ್ಯುವವರೇ ಇಲ್ಲ'

ಮಕ್ಕಳ ಸಾಹಿತ್ಯದ 60 ಕೃತಿಗಳ ಲೋಕಾರ್ಪಣೆ
Last Updated 7 ಏಪ್ರಿಲ್ 2013, 20:18 IST
ಅಕ್ಷರ ಗಾತ್ರ

ಬೆಂಗಳೂರು: `ಕನ್ನಡ ಮಕ್ಕಳ ಸಾಹಿತ್ಯ ಕ್ಷೇತ್ರದ ಬೆಳೆ ವಿಪುಲವಾಗಿದೆ. ಆದರೆ, ಕೊಯ್ಯುವವರೇ ಇಲ್ಲ' ಎಂದು ಹಿರಿಯ ಸಾಹಿತಿ ಡಾ.ನಾ. ಡಿಸೋಜ ಆತಂಕ ವ್ಯಕ್ತಪಡಿಸಿದರು.

ನಗರದ `ಹೇಮಂತ ಸಾಹಿತ್ಯ'ವು ಸುವರ್ಣಮಹೋತ್ಸವದ ಮಕ್ಕಳ ಮಾಲೆ ಅಂಗವಾಗಿ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡ ನಾಡು-ನುಡಿ, ಇತಿಹಾಸ, ಸಂಸ್ಕೃತಿ-ಪರಂಪರೆ, ವ್ಯಕ್ತಿಗಳನ್ನು ಪರಿಚಯಿಸುವ 60 ಪುಸ್ತಕಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

`ಈಚಿನ ದಶಕಗಳಲ್ಲಿ ಮಕ್ಕಳ ಸಾಹಿತ್ಯದ ಬಗ್ಗೆ ಪ್ರಕಾಶಕರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಸರ್ಕಾರ ಸಹ ಪುಸ್ತಕ ಖರೀದಿಯಲ್ಲಿ ಧಾರಾಳತನ ತೋರುತ್ತಿದೆ. ಸುಂದರ, ಅರ್ಥಪೂರ್ಣ ಕೃತಿಗಳು ಪ್ರಕಟವಾಗುತ್ತಿವೆ. ಈ ಕೃತಿಗಳನ್ನು ಮಕ್ಕಳಿಗೆ ತಲುಪಿಸುವ ಕಾರ್ಯದಲ್ಲಿ ಯಶಸ್ಸು ಕಂಡಿಲ್ಲ' ಎಂದು ಅವರು ವಿಷಾದಿಸಿದರು.

`ಇಂದು ಪೋಷಕರು ಮಕ್ಕಳಿಗೆ ತಿಂಡಿ, ವೀಡಿಯೋ ಗೇಮ್, ಲ್ಯಾಪ್‌ಟಾಪ್ ಸೇರಿದಂತೆ ಎಲ್ಲವನ್ನೂ ಕೊಡಿಸುತ್ತಿದ್ದಾರೆ. ಇದೇ ಪೋಷಕರು ಮಕ್ಕಳಿಗೆ ಪುಸ್ತಕ ಕೊಡಿಸಲು ಮನಸ್ಸು ಮಾಡುವುದಿಲ್ಲ. ಪುಸ್ತಕಗಳಿಗೆ ಹಣ ವಿನಿಯೋಗಿಸುವುದು ವ್ಯರ್ಥ ಎಂಬ ಭಾವನೆ ಇದೆ. ಪೋಷಕರು ಪುಸ್ತಕಗಳನ್ನು ಖರೀದಿ ಮಾಡದಿದ್ದರೆ ಕೃತಿ ಪ್ರಕಟಿಸಿದರೂ ಪ್ರಯೋಜನ ಇಲ್ಲ' ಎಂದು ಅವರು ಅಭಿಪ್ರಾಯಪಟ್ಟರು.

`ನಾವೆಲ್ಲ ಓದುವಾಗ ತರಗತಿಯಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ 45 ನಿಮಿಷ ಮೀಸಲಿಡಲಾಗುತ್ತಿತ್ತು. ಆ ಅವಧಿಯಲ್ಲಿ ಕೃತಿಗಳ ಓದು, ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿತ್ತು. ಇಂದು ಸಾಹಿತ್ಯ ತರಗತಿ ಶಾಲಾ ಅವಧಿಯಿಂದ ಸಂಪೂರ್ಣವಾಗಿ ನಿರ್ಗಮಿಸಿದೆ. ಶಾಲೆಗಳಲ್ಲಿ ಗ್ರಂಥಾಲಯಗಳು ಇದ್ದರೂ ಉಪಾಧ್ಯಾಯರು ಮಕ್ಕಳಿಗೆ ಪುಸ್ತಕಗಳನ್ನು ನೀಡಲು ಹಿಂಜರಿಯುತ್ತಾರೆ' ಎಂದು ಅವರು ಕಳವಳ ವ್ಯಕ್ತಪಡಿಸಿದರು.

`ಕನ್ನಡ ಸಾಹಿತ್ಯ ಪರಿಷತ್, ರಾಜ್ಯ ಸರ್ಕಾರ ಅಕಾಡೆಮಿಗಳು, ವಿಶ್ವವಿದ್ಯಾಲಯದ ವಿಭಾಗಗಳು ಮಕ್ಕಳ ಸಾಹಿತ್ಯವನ್ನು ಜನಪ್ರಿಯಗೊಳಿಸುವ ಕೆಲಸವನ್ನು ಮಾಡುತ್ತಿಲ್ಲ. ಅತ್ತು ಕರೆದು ಸ್ಥಾಪಿಸಿದ ಬಾಲ ವಿಕಾಸ ಅಕಾಡೆಮಿ ಬದುಕಿದೆಯೋ ಸತ್ತಿದೆಯೋ ಎಂಬುದು ಯಾರಿಗೂ ಗೊತ್ತಿಲ್ಲ' ಎಂದು ಅವರು ಕಟುವಾಗಿ ಹೇಳಿದರು.

`ಈಗಿನ ಅಕಾಡೆಮಿಕ್ ಲೇಖಕರು ಮಕ್ಕಳ ಸಾಹಿತ್ಯ ಎಂದ ಕೂಡಲೇ ಮೂಗು ಮುರಿಯುತ್ತಾರೆ. ಕುವೆಂಪು, ಜಿ.ಪಿ.ರಾಜರತ್ನಂ ಅವರಂತಹ ಸಾಹಿತಿಗಳು ಮಕ್ಕಳ ಸಾಹಿತ್ಯವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿದ್ದರು. ಮಕ್ಕಳ ಸಾಹಿತ್ಯ ಕೃಷಿ ಮಾಡದ ಲೇಖಕರಿಗೆ ಪಶ್ಚಿಮ ಬಂಗಾಳದಲ್ಲಿ ಯಾವುದೇ ಪ್ರಶಸ್ತಿ, ಅನುದಾನ ನೀಡುವುದಿಲ್ಲ. ಅಲ್ಲಿ ಮಕ್ಕಳ ಸಾಹಿತ್ಯ ಚಟುವಟಿಕೆ ನಡೆಸದ ಲೇಖಕನನ್ನು ಲೇಖಕ ಎಂದು ಕರೆಯುವುದಿಲ್ಲ' ಎಂದು ಅವರು ಬೆಳಕು ಚೆಲ್ಲಿದರು.

`ಹಿಂದಿಯಲ್ಲಿ ಶಿಶು ಸಾಹಿತ್ಯ, ಬಾಲ ಸಾಹಿತ್ಯ, ಕಿಶೋರ ಸಾಹಿತ್ಯ ಎಂಬ ಪ್ರಕಾರಗಳಿವೆ. ಮರಾಠಿಯಲ್ಲೂ ಮಕ್ಕಳ ಸಾಹಿತ್ಯಕ್ಷೇತ್ರದಲ್ಲಿ ಉತ್ತಮ ಕೆಲಸ ಆಗುತ್ತಿದೆ. ಬೇರೆ ಭಾಷೆಗಳ ಸಾಹಿತ್ಯ ಬೆಳವಣಿಗೆಯ ಜೊತೆಗೆ ನಮ್ಮ ಮಕ್ಕಳ ಸಾಹಿತ್ಯವನ್ನು ತುಲನೆ ಮಾಡಿದರೆ ನಮಗೆ ನಾಚಿಕೆ ಆಗುತ್ತದೆ. ನಾವು ಮಕ್ಕಳ ಸಾಹಿತ್ಯದಲ್ಲಿ ಜನಪ್ರಿಯ ದಾಟಿಗಳನ್ನೇ ನೆಚ್ಚಿಕೊಂಡಿದ್ದೇವೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು.

`ಈಚಿನ ದಿನಗಳಲ್ಲಿ ಮಕ್ಕಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಿದೆ. ಯುವಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಪೋಷಕರು ವೈಯಕ್ತಿಕ ನೆಲೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಜೀವನಶ್ರದ್ಧೆ, ಹಠ, ಬದುಕು ಎದುರಿಸುವ ಧೀಮಂತ ಶಕ್ತಿಯನ್ನು ನೀಡಬೇಕು. ನಾವು ನಂಬಿರುವ ಎಲ್ಲ ಮಾಧ್ಯಮಗಳು ವ್ಯಾಪಾರೀಕರಣಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಸಾಹಿತ್ಯ ಮಾತ್ರ ಮಕ್ಕಳನ್ನು ಉಳಿಸಬಲ್ಲದು' ಎಂದು ಅವರು ಪ್ರತಿಪಾದಿಸಿದರು.

ಹಿರಿಯ ವಿಮರ್ಶಕ ಡಾ.ಸಾ.ಶಿ.ಮರುಳಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, `ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಇನ್ನಷ್ಟು ಬೆಳವಣಿಗೆ ಹೊಂದಬೇಕಿದೆ. ಕೆಟ್ಟ ಟಿ.ವಿ. ಬಂದು ಎಲ್ಲವನ್ನೂ ಹಾಳು ಮಾಡುತ್ತಿದೆ. ಮನೆಯ ಹಿರಿಯರೊಂದಿಗೆ ಮಕ್ಕಳು ಟಿ.ವಿ. ವೀಕ್ಷಣೆ ಮಾಡುತ್ತಾರೆ. ಇದರಿಂದಾಗಿ ಪುಸ್ತಕದಿಂದ ದೂರ ಸರಿಯುತ್ತಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದರು.

`ಮೈಸೂರು ರಂಗಾಯಣ'ದ ಮಾಜಿ ನಿರ್ದೇಶಕ ಡಾ.ಬಿ.ವಿ.ರಾಜಾರಾಂ, `ಕನ್ನಡದಲ್ಲಿ ಸಾಕಷ್ಟು ಸಂಖ್ಯೆಯ ಮಕ್ಕಳ ನಾಟಕಗಳು ಬಂದಿವೆ. ಬೇಸಿಗೆ ಶಿಬಿರಗಳಲ್ಲಿ ಮಕ್ಕಳ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಆದರೆ, ಈ ಕಾರ್ಯ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಆಗುತ್ತಿಲ್ಲ. ಮಕ್ಕಳ ಸಾಹಿತ್ಯವನ್ನು ಶಾಲೆಗಳಿಗೆ ತಲುಪಿಸುವ ಕೆಲಸ ಆಗಬೇಕಿದೆ' ಎಂದು ಕಿವಿಮಾತು ಹೇಳಿದರು.

ಹಿರಿಯ ಪತ್ರಕರ್ತ ಎಲ್.ಎಸ್.ಶಾಸ್ತ್ರಿ ಬೆಳಗಾವಿ ಕೃತಿಗಳ ಪರಿಚಯ ಮಾಡಿ, `60 ಕೃತಿಗಳಲ್ಲಿ 48 ಕೃತಿಗಳು ವ್ಯಕ್ತಿದರ್ಶನ, 5 ಕ್ಷೇತ್ರ ದರ್ಶನ, ತಲಾ 2 ಕೃತಿಗಳು ಕಲೆ, ಜನಾಂಗಕ್ಕೆ ಸಂಬಂಧಿಸಿದ್ದು. ಎರಡು ಕೃತಿಗಳು ಹೊರತುಪಡಿಸಿ ಉಳಿದ ಕೃತಿಗಳು 64 ಪುಟಗಳನ್ನು ಒಳಗೊಂಡಿದ್ದು, ಪ್ರತಿಯೊಂದರ ಬೆಲೆ ರೂ30. 60 ಪುಸ್ತಕಗಳ ಒಟ್ಟು ಬೆಲೆ ರೂ1,800. ಈ ಮಾಲಿಕೆಯಲ್ಲಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಕೃತಿಗಳ ಪ್ರಕಟಿಸಬೇಕು' ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. `ಮುಖ್ಯಮಂತ್ರಿ' ಚಂದ್ರು, ಲೇಖಕರಾದ ಶಾ.ಮಂ.ಕೃಷ್ಣರಾಯ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT