ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆ ಜಾರಿಗೆ ಸಹಕರಿಸಿ: ಡಿಸಿ ಸೂಚನೆ

Last Updated 17 ಜುಲೈ 2013, 9:49 IST
ಅಕ್ಷರ ಗಾತ್ರ

ಕೋಲಾರ: ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಸರ್ಕಾರ ಜಾರಿಗೊಳಿಸುತ್ತಿರುವ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಮತ್ತು ರಾಷ್ಟ್ರೀಯ ಕೃಷಿ ವಿಮಾ ಯೋಜನೆಯ ಲಾಭ ರೈತರಿಗೆ ತಲುಪಲು ಬ್ಯಾಂಕ್‌ಗಳು ಸಹಕರಿಸಬೇಕು. ಈ ನಿಟ್ಟಿನಲ್ಲಿ ಲೀಡ್ ಬ್ಯಾಂಕ್ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರಭಾರಿ ಜಿಲ್ಲಾಧಿಕಾರಿ  ಡಾ.ವಿ.ವೆಂಕಟೇಶಮೂರ್ತಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೃಷಿ ಚಟುವಟಿಕೆಗಳ ಪರಿಶೀಲನೆ ಸಲುವಾಗಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ಹಲವು ಬ್ಯಾಂಕ್‌ಗಳಲ್ಲಿ ರೈತರ ಅರ್ಜಿಗಳನ್ನು ಸ್ವೀಕರಿಸುವ ಹಂತದಲ್ಲಿಯೇ ಸಮಸ್ಯೆಗಳು ಎದುರಾಗುತ್ತಿವೆ. ಅಂಥ ಶಾಖೆಗಳಿಗೆ ಲೀಡ್ ಬ್ಯಾಂಕ್ ಸ್ಪಷ್ಟ ಸೂಚನೆ ನೀಡಬೇಕು ಎಂದರು.

ಸಭೆಯಲ್ಲಿ ಮಾತನಾಡಿದ ಕೃಷಿ ಇಲಾಖೆಯ ವಿವಿಧ ತಾಲ್ಲೂಕಿನ ಸಹಾಯಕ ನಿರ್ದೇಶಕರು, ಬೆಳೆ ವಿಮೆ ಸೌಲಭ್ಯ ಪಡೆಯುವ ರೈತರಿಗೆ ಬ್ಯಾಂಕ್‌ಗಳು ನಿರೀಕ್ಷಿತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ರೈತ ಸಂಪರ್ಕ ಕೇಂದ್ರಗಳಲ್ಲೂ ಸಿಬ್ಬಂದಿ ಕೊರತೆ ಇರುವುದರಿಂದ ರೈತರನ್ನು ಸ್ಥಳೀಯ ಬ್ಯಾಂಕ್ ಶಾಖೆಗಳಿಗೆ ಕರೆದೊಯ್ದು ಸೇವೆ ನೀಡುವುದು ಕಷ್ಟವಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಡಾ.ವೆಂಕಟೇಶಮೂರ್ತಿ, ರೈತರಿಗೆ ಸಮರ್ಪಕವಾಗಿ ಸ್ಪಂದಿಸದ ಬ್ಯಾಂಕ್‌ಗಳ ಪಟ್ಟಿಯನ್ನು ಕೊಟ್ಟರೆ ಅಗತ್ಯ ಕ್ರಮ ಕೈಗೊಳ್ಳುವಂತೆ ಲೀಡ್ ಬ್ಯಾಂಕ್‌ಗೆ ಸೂಚಿಸಲಾಗುವುದು ಎಂದು ತಿಳಿಸಿದರು.

ಕಡಿಮೆ ಸಿಬ್ಬಂದಿ ಇರುವ ಕೆಲವು ಶಾಖೆಗಳಲ್ಲಿ ಹೆಚ್ಚಿನ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಅಲ್ಲಿನ ಸಿಬ್ಬಂದಿ ರೈತರಿಗೆ ಸ್ಪಂದಿಸುವಲ್ಲಿ ಏರುಪೇರಾಗಿರುವ ಸಾಧ್ಯತೆ ಇದೆ. ರೈತರಿಗೆ ತೊಂದರೆ ಎದುರಾಗಿರುವ ಬ್ಯಾಂಕ್‌ಗಳ ಬಗ್ಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಲೀಡ್ ಬ್ಯಾಂಕ್ ಪ್ರತಿನಿಧಿ ಗಿರಿಧರ್ ಸ್ಪಷ್ಟಪಡಿಸಿದರು.

ರಸಗೊಬ್ಬರ ವಿತರಣೆ:
ರಸಗೊಬ್ಬರವನ್ನು ಸಹಕಾರಿ ಸಂಘಗಳ ಮೂಲಕವೇ ವಿತರಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೆ ಬಂಗಾರಪೇಟೆ ಮತ್ತು ಶ್ರೀನಿವಾಸಪುರ ತಾಲ್ಲೂಕಿನ ಹಲವು ಸಹಕಾರ ಸಂಘಗಳು ರದ್ದಾಗಿರುವ ಹಿನ್ನೆಲೆಯಲ್ಲಿ ರಸಗೊಬ್ಬರ ವಿತರಣೆಗೆ ತೊಂದರೆಯಾಗಿದೆ. ಹೀಗಾಗಿ ಖಾಸಗಿ ಸಂಸ್ಥೆಗಳ ಮೂಲಕ ವಿತರಿಸಲು ಕ್ರಮ ಕೈಗೊಳ್ಳಬೇಕಾಗಿದೆ.

ಇಲ್ಲವಾದರೆ ರೈತರಿಗೆ ತೊಂದರೆಯಾಗುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಿಕ್ಕಣ್ಣ ವಿವರಿಸಿದರು.
ರಸಗೊಬ್ಬರನ್ನು ಹೆಚ್ಚು ಕಾಲ ಬಳಸದೇ ಇರುವುದರಿಂದ ಅದರ ಗುಣಮಟ್ಟ ಕುಸಿಯುತ್ತದೆ. ರೈತರಿಗೆ ಸಕಾಲದಲ್ಲಿ ದೊರಕುವುದಿಲ್ಲ. ಸರ್ಕಾರಕ್ಕೂ ನಷ್ಟವಾಗುತ್ತದೆ ಎಂದು ವಿವಿಧ ತಾಲ್ಲೂಕುಗಳ ಕೃಷಿ ಅಧಿಕಾರಿಗಳು ಹೇಳಿದರು.

ಬಂಗಾರಪೇಟೆ ಮತ್ತು ಶ್ರೀನಿವಾಸಪುರ ತಾಲ್ಲೂಕುಗಳಲ್ಲಿ ರಸಗೊಬ್ಬರನ್ನು ಖಾಸಗಿ ಸಂಸ್ಥೆಗಳ ಮೂಲಕ ವಿತರಿಸಲು ಪ್ರಸ್ತಾವನೆ  ಸಲ್ಲಿಸಿ ಎಂದು ಪ್ರಭಾರಿ ಜಿಲ್ಲಾಧಿಕಾರಿ ಸೂಚಿಸಿದರು.

ರಾಗಿ ಅಗತ್ಯ:
ಮಳೆಯು ವಿಳಂಬವಾಗಿರುವ ಹಿನ್ನೆಲೆಯಲ್ಲಿ ನೆಲಗಡಲೆ ಮತ್ತು ತೊಗರಿಯನ್ನು ಬಿತ್ತನೆ ಮಾಡದೆ ಉಳಿದಿರುವ ರೈತರು ಮುಂದಿನ ದಿನಗಳಲ್ಲಿ ರಾಗಿ ಬೆಳೆಯುವ ಸಾಧ್ಯತೆ ಇರುವುದರಿಂದ ರಾಗಿ ಬಿತ್ತನೆ ಬೀಜವನ್ನು ಹೆಚ್ಚು ಸಂಗ್ರಹಿಸಿಡಬೇಕು ಎಂದು ಸೂಚಿಸಿದರು.
ಪ್ರಸ್ತುತ ಜಿಲ್ಲೆಯಲ್ಲಿ 1850 ಕ್ವಿಂಟಲ್ ರಾಗಿ ಬಿತ್ತನೆ ಬೀಜ ದಾಸ್ತಾನು ಇದೆ. ಬೇಡಿಕೆ ಸಲ್ಲಿಸಿದ ಒಂದು ದಿನದೊಳಗೆ  ದಾವಣಗೆರೆಯಿಂದ ರಾಗಿ ಪಡೆದು ವಿತರಿಸಲಾಗುವುದು ಎಂದು ರಾಜ್ಯ ಬೀಜ ನಿಗಮದ ಅಧಿಕಾರಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT