ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬೆಳೆ ವಿಮೆ ಬಾರದಿದ್ದರೆ, ಕೃಷಿ ಇಲಾಖೆಗೆ ಬೀಗ'

Last Updated 18 ಡಿಸೆಂಬರ್ 2012, 9:45 IST
ಅಕ್ಷರ ಗಾತ್ರ

ಹಾವೇರಿ: `ಕೃಷಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಮಾಡಿದ ತಪ್ಪಿನಿಂದ ನೂರಾರು ರೈತರು ಬೆಳೆ ವಿಮೆಯಿಂದ ವಂಚಿತರಾಗುವಂತಾಗಿದೆ. ಅಧಿಕಾರಿಗಳು ತಮ್ಮ ತಪ್ಪನ್ನು ಸರಿಪಡಿಸಿ ರೈತರಿಗೆ ಬೆಳೆವಿಮೆ ಬರುವಂತೆ ಮಾಡಬೇಕು. ಇಲ್ಲವಾದರೆ, ಕೃಷಿ ಇಲಾಖೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು' ಎಂದು ತಾ.ಪಂ. ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ನಗರದ ತಾ.ಪಂ. ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಬೆಳೆ ವಿಮೆ ಬಗ್ಗೆ ಪ್ರಸ್ತಾಪಿಸಿದ ಸದಸ್ಯ ಪರಮೇಶಪ್ಪ ಕುರವತ್ತಿಗೌಡ್ರ, ರೈತರ ನಿಜವಾದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೇ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡದೇ ಕಚೇರಿಯಲ್ಲಿಯೇ ಕುಳಿತು ವರದಿ ತಯಾರಿಸಿ ಕಂಪೆನಿಗೆ ಕೊಡುತ್ತಿರುವುದೇ ರೈತರು ಸೌಲಭ್ಯದಿಂದ ವಂಚಿತರಾಗಲು ಕಾರಣವಾಗಿದೆ ಎಂದು ಕೃಷಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಮಾಡುವ ತಪ್ಪಿಗೆ ರೈತರೇಕೆ ಬಲಿಪಶುಗಳಾಗಬೇಕು ಎಂದು ಪ್ರಶ್ನಿಸಿದ ಅವರು, ಅಧಿಕಾರಿಗಳು ಮಾಡಿರುವ ತಪ್ಪನ್ನು ಅವರೇ ಸರಿಪಡಿಸಬೇಕು. ಇಲ್ಲದಿದ್ದರೇ, ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಹೇಳಿದರು.

ಕುರವತ್ತಿಗೌಡ್ರ ಅವರ ನಿಲುವಿಗೆ ಉಪಾಧ್ಯಕ್ಷ ಬಸವರಾಜ ಕಳಸದ, ಸದಸ್ಯರಾದ ಶ್ರೀನಿಧಿ ದೇಶಪಾಂಡೆ, ಚನ್ನಬಸಪ್ಪ ಅರಳಿ ಸೇರಿದಂತೆ ಬಹುತೇಕ ಸದಸ್ಯರು ಬೆಂಬಲ ವ್ಯಕ್ತಪಡಿಸಿ, ಸದಸ್ಯರು ನಡೆಸುವ ಹೋರಾಟದಲ್ಲಿ ತಾವು ಕೂಡಾ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಸದಸ್ಯರಾದ ಶ್ರೀನಿಧಿ ದೇಶಪಾಂಡೆ, ಚನ್ನಬಸಪ್ಪ ಅರಳಿ, ಉಪಾಧ್ಯಕ್ಷ ಬಸವರಾಜ ಕಳಸದ ಮಾತನಾಡಿ, ಅನೇಕ ರೈತರು ಮುಂಗಾರು ಹಂಗಾಮಿನ ವಿಮಾ ಕಂತು ಕಟ್ಟಿದ್ದಾರೆ. ಆದರೆ, ಹಿಂಗಾರು ಹಂಗಾಮು ಆರಂಭವಾದರೂ ಮುಂಗಾರಿನ ಬೆಳೆ ವಿಮೆ ಬಂದಿಲ್ಲ. ವಿಮೆ ಪರಿಹಾರಕ್ಕಾಗಿ ಬೆಳೆ ಕಟಾವು ಪ್ರಯೋಗ ಮಾಡುವಾಗ ಅಧಿಕಾರಿಗಳು ರೈತರನ್ನಾಗಲಿ, ಸ್ಥಳೀಯ ಜನಪ್ರತಿನಿಧಿಗಳನ್ನಾಗಲಿ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಅರೋಪಿಸಿದರು. 

ಬೆಳೆ ವಿಮೆ ಪರಿಹಾರ ಪಡೆಯಲು ಬೇಕಾದ ಬೆಳೆ ಪ್ರಮಾಣಪತ್ರ ಬ್ಯಾಂಕ್‌ಗೆ ನೀಡಲು ಡಿ. 31 ಕೊನೆಯ ದಿನವಾಗಿದೆ. ಬೆಳೆವಿಮೆಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ರೈತರಿಗೆ ಗ್ರಾಮಗಳಲ್ಲಿ ಡಂಗುರ ಸಾರಿ ಪ್ರಚಾರ ಪಡಿಸಬೇಕು ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಡಾ. ಬಸವರಾಜ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಡಿ. 23ರಂದು ರೈತ ದಿನ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಅಂತೆಯೇ ಕೃಷಿ ಮೇಳ, ಕೃಷಿ ವಸ್ತು ಪ್ರರ್ದಶನ ಹಮ್ಮಿಕೊಳ್ಳವ ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ತಾ.ಪಂ. ಅಧ್ಯಕ್ಷೆ ಮೆಹರುನ್ನಿಸಾ ಜಿಗಳೂರ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT