ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗಳಿಗಾಗಿ ಹಾರ್ಟಿ ಕ್ಲಿನಿಕ್

Last Updated 12 ಸೆಪ್ಟೆಂಬರ್ 2011, 6:25 IST
ಅಕ್ಷರ ಗಾತ್ರ

ಹಾವೇರಿ: ನಗರದ ತೋಟಗಾರಿಕಾ ಇಲಾಖೆ ಆವರಣದಲ್ಲೊಂದು ತೋಟ ಗಾರಿಕಾ ಬೆಳೆಗಳಿಗೂ ಕ್ಲಿನಿಕ್ ಇದೆ. ಹಾರ್ಟಿ ಕ್ಲಿನಿಕ್ ಎಂಬ ಹೆಸರಿನ ಇದು ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ನೀಡುವ ಆಸ್ಪತ್ರೆ. ಕಳೆದ 8 ತಿಂಗಳ ಹಿಂದಿನಿಂದಲೂ ನಗರದಲ್ಲಿ ಸದ್ದಿಲ್ಲದೇ ಕಾರ್ಯನಿರ್ವಹಿಸುತ್ತಿದ್ದು, ಆದರೆ  ಪ್ರಚಾರದ ಕೊರತೆಯಿಂದ ರೈತರಿಗೆ ಹಾರ್ಟಿ ಕ್ಲಿನಿಕ್ ಎಂದರೇನು ಎಂದು ಕೇಳುವ ಪರಿಸ್ಥಿತಿಯಿದೆ.

ಬೆಳೆಗಳ ಆರೋಗ್ಯ ರಕ್ಷಣೆಗಾಗಿ ರಾಜ್ಯ ಸರ್ಕಾರ ಇಡೀ ರಾಜ್ಯದಾದ್ಯಂತ ಇಂತಹ ಹಾರ್ಟಿ ಕ್ಲಿನಿಕ್ ಅನ್ನು (ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ) ಆರಂಭಿಸಿದ್ದು, ಈವರೆಗೂ ಅಧಿಕೃತವಾಗಿ ಉದ್ಘಾಟನೆ ಮಾಡಿಲ್ಲ. ಹೀಗಾಗಿ ಎಷ್ಟೋ ಜನ ರೈತರಿಗೆ ಇಂತಹದೊಂದು ಕ್ಲಿನಿಕ್ ಗೊತ್ತೇ ಇಲ್ಲ.

ತೋಟಗಾರಿಕೆ ವಲಯ ಅಭಿವೃದ್ಧಿ ಪಡಿಸುವುದರ ಜತೆಗೆ, ರೈತ ಕುಟುಂಬ ಗಳಿಗೆ ಖಚಿತ ಆದಾಯ ಒದಗಿಸ ಬೇಕೆನ್ನುವ ಆಶಯದೊಂದಿಗೆ ಆರಂಭ ವಾಗಿರುವ ಈ ಹಾರ್ಟಿ ಕ್ಲಿನಿಕ್ ಬಗ್ಗೆ ಈವರೆಗೆ ಇಲಾಖೆಗೆ ಬರುವ ರೈತರಿಗೆ ಮಾತ್ರ ಮಾಹಿತಿ ನೀಡುತ್ತಿರುವುದರಿಂದ ಎಂಟು ತಿಂಗಳೂ ಗತಿಸಿದರೂ ಸರ್ಕಾರದ ಉದ್ದೇಶ ಈಡೇರ ದಂತಾಗಿದೆ.

ತೋಟಗಾರಿಕೆ ವಲಯ ಅಭಿವೃದ್ಧಿ ಪಡಿಸಬೇಕಿದ್ದಲ್ಲಿ ರೈತರಿಗೆ ಹೆಚ್ಚಿನ ಮಾಹಿತಿ ಒದಗಿಸುವುದು, ಕಾಲ ಕಾಲಕ್ಕೆ ಕೈಗೊಳ್ಳಬಹುದಾದ ಕ್ರಮಗಳು, ಪರ್ಯಾಯ ಉತ್ಪನ್ನ ಹಾಗೂ ನೂತನ ತಂತ್ರಜ್ಞಾನ ಕುರಿತು ಕಾರ್ಯಾಗಾರ, ಕೇಂದ್ರ ಸರ್ಕಾರದ ರಾಷ್ಟ್ರೀಯ ತೋಟ ಗಾರಿಕೆ ಮಿಷನ್ ಯೋಜನೆಯಡಿ ಕೈ ಗೊಳ್ಳಬಹುದಾದ ಕಾರ್ಯಕ್ರಮಗಳು, ರೈತರಿಗೆ ದೊರೆಯಬಹುದಾದ ಸಾಲ ಸೌಲಭ್ಯ, ಸಹಾಯಧನ ಅನುಸರಿಸ ಬೇಕಾದ ನಿಯಮಾವಳಿ ತಿಳಿಸುವ ಜತೆಗೆ ಕ್ಷೇತ್ರೋತ್ಸವ, ಕೃಷಿ ಮೇಳ, ಪ್ರಗತಿಪರ ರೈತರ ಸಮ್ಮೇಳನ ಹಾಗೂ ಹವಾಮಾನ ವೈಪರಿತ್ಯದ ಪರಿಣಾಮ ಉತ್ಪನ್ನಗಳ ಇಳುವರಿ ಮೇಲೆ ಉಂಟಾಗಬಹುದಾದ ದುಷ್ಪರಿಣಾಮ ಕೈಗೊಳ್ಳಬಹುದಾದ ಮುಂಜಾಗ್ರತೆ ಕ್ರಮ ಸೇರಿದಂತೆ ಉಪಯುಕ್ತ ಮಾಹಿತಿ ಸೇರಿದಂತೆ ಹತ್ತು ಹಲವು ವಿಷಯಗಳ ಕುರಿತು ಮಾಹಿತಿಯನ್ನು ಈ ಕೇಂದ್ರದ ಮೂಲಕ ರೈತರಿಗೆ ನೀಡಲಾಗುತ್ತದೆ.

ಮಣ್ಣು ಹಾಗೂ ನೀರಿನ ಪರೀಕ್ಷೆ, ತೋಟಗಾರಿಕೆ ಬೆಳೆಗಳ ಸಂಸ್ಕರಣೆ ಹಾಗೂ ಮಾರುಕಟ್ಟೆ, ಅಗತ್ಯ ಸಲಕರಣೆ, ಉಪಕರಣ ಲಭ್ಯತೆ ವಿವರ ಒದಗಿಸುವುದು ಸೇರಿದಂತೆ ಒಟ್ಟಾರೆ ಹೂ ಹಣ್ಣು, ತರಕಾರಿ, ಔಷಧಿ ಬೆಳೆಗಳ ಸಮಗ್ರ ಮಾಹಿತಿ ಸಂಗ್ರಹಿಸಿ ಏಕಗವಾಕ್ಷಿ ಮೂಲಕ ಜಿಲ್ಲೆ ಹಾಗೂ ರಾಜ್ಯಮಟ್ಟದ ಮುಖವಾಣಿಯೂ ಆಗಿದೆ.

ಜನವರಿ ತಿಂಗಳಿನಲ್ಲಿ ಆರಂಭವಾದ ಈ ಕ್ಲಿನಿಕ್ ಕೆಲ ಕಾರಣಗಳಿಂದ ಅಧಿಕೃತವಾಗಿ ಉದ್ಘಾಟನೆಯಾಗಿಲ್ಲ. ಆದರೂ ತನ್ನ ಕಾರ್ಯವನ್ನು ಮಾತ್ರ ನಿಲ್ಲಿಸಿಲ್ಲ. ಈವರೆಗೂ 500ಕ್ಕೂ ಹೆಚ್ಚಿನ ರೈತರು ಕಿನ್ಲಿಕ್‌ಗೆ ಭೇಟಿ ನೀಡಿ ಅನೇಕ ಮಾಹಿತಿ ಪಡೆದಿದ್ದಾರೆ. ಜೊತೆಗೆ ಹಲವು ರೈತರ ಕ್ಷೇತ್ರಕ್ಕೆ ತೆರಳಿ ಮಾಹಿತಿ ಸಹ ನೀಡಲಾಗಿದೆ.

ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಕೃಷ್ಣ ತಿಳಿಸುತ್ತಾರೆ.

ಹಾರ್ಟಿ ಕಿನ್ಲಿಕ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ತೋಟಗಾರಿಕೆಯಲ್ಲಿ ಪದವಿ ಪಡೆದ ಅಭ್ಯರ್ಥಿಗಳನ್ನು ವಿಷಯ ತಜ್ಞರನ್ನಾಗಿ ನೇಮಕ ಮಾಡಿ ಕೊಳ್ಳಲಾಗಿದೆ. ಅವರು ರೈತರಿಗೆ ಅವಶ್ಯ ವಿರುವ ವಿಷಯ ಹಾಗೂ ಮಾಹಿತಿ ಯನ್ನು ಒದಗಿಸಲಿದ್ದಾರೆ. ಸದ್ಯ ತೋಟ ಗಾರಿಕೆ ಇಲಾಖೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಲಿನಿಕ್ ಶೀಘ್ರವೇ ಸ್ವಂತ  ಕಟ್ಟಡ ಹೊಂದಲಿದ್ದು, ಆಗ ಉದ್ಘಾಟನೆ ಮಾಡಲಾಗುವುದು ಎಂದು ಅವರು ಹೇಳುತ್ತಾರೆ.

ನಮಗೆ ಗೊತ್ತೇ ಇಲ್ಲ: ನಾವು ತೋಟಗಾರಿಕೆ ಇಲಾಖೆಗೆ ಹಲವು ಬಾರಿ ಬಂದಿದ್ದೇವೆ. ಆದರೆ, ಇಂತಹದೊಂದು ಮಾಹಿತಿ ಕೇಂದ್ರ ಇದೆ ಎಂಬುದು ನಮಗೆ ಈವರೆಗೆ ತಿಳಿದಿಲ್ಲ. ಹಾರ್ಟಿ ಕ್ಲಿನಿಕ್ ಎಂದರೆ ಯಾವುದೇ ಆಸ್ಪತ್ರೆಯ ಜಾಗ ವಿರಬೇಕು ಎಂದು ಆ ಕಡೆ ಹೋಗಿಯೇ ಇಲ್ಲ ಎನ್ನುತ್ತಾರೆ ರೈತ ಮಹಾದೇವಪ್ಪ.

ಈ ಕ್ಲಿನಿಕ್‌ನ ಪ್ರಯೋಜನ ರೈತರಿಗೆ ದೊರೆಯಲು ಸಾಧ್ಯವಾಗುತ್ತದೆ. ಇನ್ನೂ ಮೇಲಾದರೂ ಅಧಿಕಾರಿಗಳು ಈ ಕುರಿತು ರೈತರಿಗೆ ಈ ಬಗ್ಗೆ ತಿಳಿಸಿ ಕೊಡಲು ಮುಂದಾಗಬೇಕೆಂದು ಅವರು ಒತ್ತಾಯಿಸುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT