ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗಾರರಿಗೆ ಪರ್ಯಾಯ ಮಾರ್ಗದ ಚಿಂತೆ

ಗುಟ್ಕಾ ನಿಷೇಧ ತಂದ ಆತಂಕ, ಜಿಲ್ಲೆಯಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ
Last Updated 1 ಜೂನ್ 2013, 7:05 IST
ಅಕ್ಷರ ಗಾತ್ರ

ಚಿತ್ರದುರ್ಗ: ಗುಟ್ಕಾ ನಿಷೇಧ ಮತ್ತೊಮ್ಮೆ ರೈತರ ಬದುಕಿನಲ್ಲಿ ಆತಂಕ ಮೂಡಿಸಿದೆ.
ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಪರ್ಯಾಯವೇನು ಎನ್ನುವ ಚರ್ಚೆ ಆರಂಭವಾಗಿದೆ.

ಜಿಲ್ಲೆಯಲ್ಲಿ ಸುಮಾರು 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 12 ಸಾವಿರ ಹೆಕ್ಟೇರ್, ಚಿತ್ರದುರ್ಗ ತಾಲ್ಲೂಕಿನಲ್ಲಿ 4.5 ಸಾವಿರ ಹೆಕ್ಟೇರ್ ಹಾಗೂ ಹಿರಿಯೂರು ಮತ್ತು ಹೊಸದುರ್ಗ ತಾಲ್ಲೂಕಿನಲ್ಲಿ ತಲಾ 2 ಸಾವಿರ ಹಾಗೂ ಚಳ್ಳಕೆರೆ ಮತ್ತು ಮೊಳಕಾಲ್ಮುರಿನಲ್ಲಿ 1 ಸಾವಿರಕ್ಕಿಂತ ಕಡಿಮೆ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ.
ಭೀಮಸಮುದ್ರ ಕೆಂಪು ಅಡಿಕೆ ಮತ್ತು ಚಾಲಿ ಅಡಿಕೆಯನ್ನು ಜಿಲ್ಲೆಯಲ್ಲಿ ಬೆಳೆಯುತ್ತಾರೆ. ಇತ್ತೀಚೆಗೆ ತೀರ್ಥಹಳ್ಳಿ ತಳಿಗೆ ಆದ್ಯತೆ ನೀಡಲಾಗುತ್ತಿದೆ.

ಅಡಿಕೆ ಬೆಳೆಯನ್ನು ಸಾಂಪ್ರದಾಯಿಕವಾಗಿ ಬೆಳೆಯುತ್ತಿದ್ದರೂ 90ರ ದಶಕದಲ್ಲಿ ಅಡಿಕೆ ಬೆಳೆಯುವ ಪ್ರದೇಶ ವ್ಯಾಪಕವಾಗಿ ವಿಸ್ತಾರಗೊಂಡಿತು. 80ರ ದಶಕದಲ್ಲಿ ಅಡಿಕೆಗೆ ಉತ್ತಮ ದರ ದೊರೆತಾಗ ರೈತರು ಅಡಿಕೆಯತ್ತ ಆಕರ್ಷಿತರಾದರು. ವಿವಿ ಸಾಗರ ಅಚ್ಚುಕಟ್ಟು ಪ್ರದೇಶದಲ್ಲೂ ಬಹು ವರ್ಷಗಳಿಂದ ಅಡಿಕೆ ಬೆಳೆಯುತ್ತಿದ್ದಾರೆ.

1990ರ ನಂತರ ಭೀಮಸಮುದ್ರ ಸೇರಿದಂತೆ ಜಿಲ್ಲೆಯಲ್ಲಿ ವ್ಯಾಪಕವಾಗಿ ವಿಸ್ತಾರಗೊಂಡಿತು.

ಒಂದು ಎಕರೆಗೆ ಅಂದಾಜು 1ರಿಂದ 1.5 ಟನ್ ಅಡಿಕೆ ಬೆಳೆಯಲಾಗುತ್ತಿದ್ದು, ಜಿಲ್ಲೆಯಲ್ಲಿ ಸುಮಾರು 25ರಿಂದ 30 ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ. ನೀರಿಗಾಗಿ ಬಹುತೇಕ ಮಳೆಯಾಶ್ರಿತ ಮತ್ತು ಕೊಳವೆಬಾವಿಗಳೇ ಅಡಿಕೆ ತೋಟಗಳಿಗೆ ಆಸರೆಯಾಗಿವೆ. ಆದರೆ,  ಬಯಲುಸೀಮೆಯಲ್ಲಿ ಅಂತರ್ಜಲ ಕುಸಿದು ಸಾವಿರಾರು ಎಕರೆ ಪ್ರದೇಶದಲ್ಲಿ ಅಡಿಕೆ ತೋಟ ಒಣಗಿ ಬೆಂಡಾಗಿದೆ. 500ರಿಂದ 800 ಅಡಿ ಆಳವಾಗಿ ಕೊರೆದರೂ ನೀರು ದೊರೆಯುವುದು ಕಷ್ಟಕರವಾಗಿದೆ.

ಈಗ ಗುಟ್ಕಾ ನಿಷೇಧ ರೈತರನ್ನು ಚಿಂತೆಗೆ ದೂಡಿದೆ. ಚಾಲಿ ಅಡಿಕೆಯನ್ನು ಗುಟ್ಕಾ ಉತ್ಪಾದನೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಈಗ ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸರ್ಕಾರ ಪರ್ಯಾಯ ಪರಿಹಾರ ರೂಪಿಸಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.

`ಬಣ್ಣಕ್ಕಾಗಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಅಡಿಕೆ ಬಳಸುತ್ತಾರೆ. ಅಡಿಕೆಯನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಅಡಿಕೆಯಿಂದ ವೈನ್ ತಯಾರಿಸುವ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಅಡಿಕೆ ತಟ್ಟೆಗಳಿಗೂ ಅಪಾರ ಬೇಡಿಕೆ ಇದ್ದು, ಪ್ಲಾಸ್ಟಿಕ್‌ಗೆ ಪರ್ಯಾಯವಾಗಬಲ್ಲದು. ಈ ರೀತಿಯಲ್ಲಿ ವಿವಿಧ ಉತ್ಪನ್ನಗಳಿಗೆ ಅಡಿಕೆ ಬಳಸುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ' ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ತಾಂತ್ರಿಕ ಅಧಿಕಾರಿ ಎಸ್.ಎಂ. ಇಂದೂಧರ್.

`ರೈತರ ಬಗ್ಗೆ ಎಚ್ಚರವಹಿಸಲಿ'
`ಗುಟ್ಕಾ ಉತ್ಪನ್ನ ತಯಾರಿಕೆ ನಿಲ್ಲಿಸಿದರೆ ರೈತರಿಗೆ ಕಷ್ಟ. ಅಡಿಕೆ ಬೆಳೆಗಾರರಿಗೆ ಪರ್ಯಾಯ ಬೆಳೆಗಳನ್ನು ಬೆಳೆಯಲು ಸರ್ಕಾರ ಸ್ಪಂದಿಸಬೇಕು. ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಗುಟ್ಕಾ ನಿಷೇಧ ಮಾಡಬೇಕಾಗಿತ್ತು. ರೈತರು ಬೀದಿಗೆ ಬರದಂತೆ ಮುಂದಾಲೋಚನೆ ಕ್ರಮಕೈಗೊಳ್ಳಬೇಕು. ಗುಟ್ಕಾ ನಿಷೇಧಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಪರ್ಯಾಯ ಬೆಳೆಗಳ ಬಗ್ಗೆ ಸರ್ಕಾರ ಸ್ಪಂದಿಸಬೇಕು' ಎಂದು ರೈತ ಸಂಘದ ಮುಖಂಡ ಸಿದ್ದವೀರಪ್ಪ ಹೇಳುತ್ತಾರೆ.

ಈಗಾಗಲೇ ಹಲವು ರಾಜ್ಯಗಳಲ್ಲಿ ಗುಟ್ಕಾ ನಿಷೇಧವಾಗಿದ್ದರೂ ವ್ಯತಿರಿಕ್ತ ಪರಿಣಾಮ ಬೀರಿಲ್ಲ. ಕಾನೂನುಬದ್ಧವಾಗಿ ಮಾತ್ರ ಗುಟ್ಕಾ ನಿಷೇಧವಾಗಿದೆ. ಆದರೆ, ಗುಟ್ಕಾ ಉತ್ಪನ್ನ ಮತ್ತು ವಿತರಣೆ ನಿಂತಿಲ್ಲ. ಆದ್ದರಿಂದ, ಅಡಿಕೆ ಬೆಲೆ ಬಿದ್ದು ಹೋಗಿಲ್ಲ. ಕೇವಲ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನಿಷೇಧವಾಗಿದೆ. ಈ ಕಾನೂನು ಕೇವಲ ಹಾಳೆಯಲ್ಲಿ ಉಳಿಯುವುದರಿಂದ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಆದ್ದರಿಂದ, ಅಡಿಕೆ ಬೆಳೆಗಾರರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಸಿದ್ಧವೀರಪ್ಪ ಅಭಿಪ್ರಾಯಪಡುತ್ತಾರೆ.
ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ನುಲೇನೂರು ಶಂಕರಪ್ಪ ಗುಟ್ಕಾ ನಿಷೇಧ ಸ್ವಾಗತಿಸಿದ್ದಾರೆ.

ನಿಷೇಧದಿಂದ ರೈತರಿಗೆ ತೊಂದರೆಯಾಗುವುದಿಲ್ಲ. ಈಗಾಗಲೇ, ಹಲವಾರು ರಾಜ್ಯಗಳಲ್ಲಿ ಗುಟ್ಕಾ ನಿಷೇಧಿಸಲಾಗಿದೆ. ಗುಟ್ಕಾ ನಿಷೇಧದಿಂದ ಶುದ್ಧವಾದ ಅಡಿಕೆಗೆ ಬೆಲೆ ದೊರೆಯುತ್ತದೆ. ಸದ್ಯ ಅಸ್ಕಾಂ ಅಡಿಕೆಯನ್ನು ಗುಟ್ಕಾಗೆ ಹೆಚ್ಚು ಬಳಸುತ್ತಾರೆ. ರೈತರು ತಾಳ್ಮೆಗೆಡಬಾರದು ಎಂದು ಶಂಕರಪ್ಪ ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT