ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗಾರರಿಗೆ ಸಿಹಿಯಾಗದ ಕಬ್ಬು .ಅವಸಾನದ ಅಂಚಲ್ಲಿ ಕಂಪುಬೀರುವ ಆಲೆಮನೆ.

Last Updated 21 ಫೆಬ್ರುವರಿ 2011, 9:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಆಲೆ ಆಡುತ್ತಾವೆ...ಗಾಣ ತಿರುಗುತ್ತಾವೆ.... ನಟ್ಟ ನಡುವೆ ಹೊರಟೋಗ ಬಳೆಗಾರ...ಅದೇಕಾಣೋ ನನ್ನ ತವರೂರು...’ಜಾನಪದದ ಈ ಹಾಡು ಕೇಳಿದಾಕ್ಷಣ ಆಲೆಮನೆಗಳು ಕಣ್ಮುಂದೆ ಸುಳಿದಾಡುತ್ತವೆ. ಹಳ್ಳಿಗಾಡಿನ ಸಮೃದ್ಧ ಜೀವನ ನೆನಪು ಮಾಡುವ ಶಕ್ತಿ ಈ ಜಾನಪದ ಗೀತೆಗಳಿಗಿದ್ದು, ಆ ಕಾಲದಲ್ಲಿ ಯಥೇಚ್ಛವಾಗಿ ಆಲೆಮನೆಗಳು ಇದ್ದವು ಎಂಬುದನ್ನು ಈ ಹಾಡು ಸಾರಿ ಹೇಳುತ್ತದೆ.

ಆದರೆ ಕಾಫಿ ಕಣಿವೆ ಎಂದು ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಲೆಮನೆಗಳು ಇಂದು ಅವಸಾನದ ಅಂಚು ತಲುಪಿವೆ. ಕಬ್ಬಿನ ಬೆಲೆ ಕುಸಿದಿರುವುದು, ಮಧ್ಯವರ್ತಿಗಳ ಕಾಟ ಹಾಗೂ ಕಾರ್ಮಿಕರ ಕೊರತೆಯೂ ಇದಕ್ಕೆ ಪ್ರಮುಖ ಕಾರಣ. ಜಿಲ್ಲೆಯ ತರೀಕೆರೆ, ಕಡೂರು ತಾಲ್ಲೂಕಿನ ಕೆಲವು ಭಾಗಗಳು, ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ, ಮಲ್ಲೇನಹಳ್ಳಿ, ಮಳಲೂರು, ಕಳಸಾಪುರ, ಬಂಡಿಹಳ್ಳಿ ಗ್ರಾಮಗಳಲ್ಲಿ ಕಬ್ಬನ್ನು ಬೆಳೆಯಲಾಗುತ್ತಿದೆ.

ಇದಕ್ಕೆ ಪೂರಕವಾಗಿ ಎಂಬಂತೆ ನಗರಕ್ಕೆ ಹೊಂದಿಕೊಂಡಿರುವ   ಹಿರೇಮಗಳೂರು, ಕರ್ತಿಕೆರೆ, ಮಾಗಡಿ ಕೈಮರದಲ್ಲೂ ಆಲೆಮನೆಗಳು ಇದ್ದವು. ಆದರೆ ಈಗ ಹತ್ತು ಹಲವು  ಸಮಸ್ಯೆಗಳ ಅಬ್ಬರಕ್ಕೆ  ನಲುಗಿರುವ ಆಲೆಮನೆಗಳು ಕೆಲವೇ ಸ್ಥಳಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಸಮೀಪದ ಮುಗುಳುವಳ್ಳಿ ಗ್ರಾಮದಲ್ಲಿ ಹತ್ತಕ್ಕೂ ಅಧಿಕ ಆಲೆಮನೆಗಳು ಇದ್ದವು. ಇವುಗಳೆಲ್ಲ ಈಗ ಯಾಂತ್ರಿಕೃತ ಆಲೆಮನೆಗಳಾಗಿ ಮಾರ್ಪಟ್ಟಿವೆಯಾದರೂ ಸಮಸ್ಯೆಗಳಿಂದ ಹೊರತಾಗಿಲ್ಲ.

ಈ ಹಿಂದೆ ಜಿಲ್ಲೆಯ ಬಹುತೇಕ ರೈತರು ನೀರಾವರಿ ಪ್ರದೇಶಗಳಲ್ಲಿ  ಸಾವಿರಾರು ಎಕರೆ ಪ್ರದೇಶಗಳಲ್ಲಿ ಕಬ್ಬನ್ನು ಬೆಳೆಯುತ್ತಿದ್ದರು. ರಸ್ತೆಯಲ್ಲಿ ಪ್ರಯಾಣಿಸುವಾಗ ಎಲ್ಲೆಂದರಲ್ಲಿ ಕಬ್ಬಿನ ಪೈರುಗಳು ಕಣ್ಣಿಗೆ ಕಾಣುತ್ತಿದ್ದವು. ಹವಾಮಾನ ವೈಪರಿತ್ಯ, ಮಾರುಕಟ್ಟೆ ಏರುಪೇರು ಮತ್ತು ಅಂತರ್ಜಲ ಕುಸಿತದ ಪರಿಣಾಮವಾಗಿ ಈಗ ನೂರಾರು ಎಕರೆಯಲ್ಲಿ ಮಾತ್ರ ಕಬ್ಬಿನ ಬೆಳೆಯನ್ನು ಕಣ್ತುಂಬಿಕೊಳ್ಳಲು ಸಾಧ್ಯ.

ಸಕ್ಕರೆ ಕಾರ್ಖಾನೆಗಳ ಮಾಲೀಕರು ತಮಗೆ ಬೇಕಾಗುವಷ್ಟು ಕಬ್ಬನ್ನು ಸುತ್ತ ಮುತ್ತಲ ಪ್ರದೇಶದ ರೈತರಿಂದ ಗುತ್ತಿಗೆ ಆಧಾರದ ಮೇಲೆ ಬೆಳೆಸುತ್ತಾರೆ. ಹಾಗಾಗಿ ಬೇರೆ ಕಡೆ ಬೆಳೆದಿರುವ ಕಬ್ಬಿಗೆ ಸ್ವಲ್ಪ ಬೇಡಿಕೆಯೂ ಕುಸಿದಂತೆ ಕಂಡು ಬರುತ್ತಿರುವುದರಿಂದ ಜಿಲ್ಲೆಯ ರೈತರು ಕಬ್ಬು ಬೆಳೆಯಲು ಮನಸ್ಸು ಮಾಡುತ್ತಿಲ್ಲ.ಮುಗುಳುವಳ್ಳಿ ಗ್ರಾಮ ಒಂದು ಕಾಲದಲ್ಲಿ ಆಲೆಮನೆಗಳಿಗೆ ಹೆಸರುವಾಸಿ. ಇಲ್ಲಿ ತಯಾರಿಸುತ್ತಿದ್ದ ಬೆಲ್ಲಕ್ಕೆ ಬೇಡಿಕೆಯೂ ಇತ್ತು. ಸಂಕ್ರಾಂತಿ ಹಬ್ಬ ಬಂತೆಂದರೆ ಸುತ್ತಮುತ್ತಲ ಗ್ರಾಮಸ್ಥರು ಈ ಊರಿಗೆ ತೆರಳಿ ಬೆಲ್ಲ ಖರೀದಿಸುತ್ತಿದ್ದರು.

ಸದ್ಯ ಜನರ ಮನಸ್ಥಿತಿ ಬದಲಾಗಿದ್ದು ಅವರೆಲ್ಲ ಅಂಗಡಿಗಳತ್ತ ಮುಖ ಮಾಡುತ್ತಿರುವುದರಿಂದ ಸಹಜವಾಗಿ ಆಲೆಮನೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ಮುಗುಳುವಳ್ಳಿಯಲ್ಲಿ ಸಕ್ಕರೆ ಕಾರ್ಖಾನೆಯೂ ಕಾರ್ಯಾರಂಭ ಮಾಡಿತ್ತು. ಆದರೆ ಪುಡಿ ಸಕ್ಕರೆಗೆ ಮಾರುಕಟ್ಟೆ ದೊರೆಯದಿರುವುದರಿಂದ ಅದು ಬಾಗಿಲು ಮುಚ್ಚವಂತಾಯಿತು.. ‘ಅಧಿಕ ಬಂಡವಾಳ ಹಾಕಿ ಆಲೆಮನೆ ಆರಂಭಿಸಿದ್ದೀನಿ, ಆದ್ರೆ ಸ್ಥಳೀಯವಾಗಿ ಕಬ್ಬು ದೊರೆಯುತ್ತಿಲ್ಲ. ಬೇರೆ ಜಿಲ್ಲೆಗಳಿಂದ ಕಬ್ಬನ್ನು ಖರೀದಿಸಬೇಕಾದ ಪರಿಸ್ಥಿತಿ, ಮೊದ್ಲು ಆಲೆಮನೆ ಕೆಲಸಕ್ಕೆ ಬರುತ್ತಿದ್ದವರು ಹೆಚ್ಚು ಸಂಬಳ ಸಿಗೋ ಕಾಫಿ ತೋಟಕ್ಕೆ ಹೋಗುತ್ತಿರುವುದರಿಂದ ಕಾರ್ಮಿಕರ ಸಮಸ್ಯೆ ಎದುರಿಸುವಂತಾಗಿದೆ. ಇದರಿಂದ ಆಲೆ ಮನೆ ನಡೆಸೋಕೆ ಸಾಹಸ ಮಾಡ್ತಿದ್ದೀನಿ,’ ಎನ್ನುತ್ತಾರೆ ಮುಗುಳುವಳ್ಳಿ ಗ್ರಾಮದಲ್ಲಿ ಸದ್ಯ ಇರುವ ಆಲೆಮನೆಯೊಂದರ ಮಾಲೀಕರಾದ ಬಸಪ್ಪ.

‘ಹಿಂದಿನಿಂದಲೂ ಆಲೆಮನೆ ನಡೆಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮುಚ್ಚುವ ಹಂತ ಬರಬಹುದು, ಆಲೆಮನೆಗಳ ಉಳಿವಿಗೆ ಸರ್ಕಾರ ಮುಂದಾಗಬೇಕೆಂದು ಮನವಿ ಮಾಡಿದವರು ಮತ್ತೊರ್ವ ಆಲೆ ಮನೆ ಮಾಲೀಕ ರವಿಶಂಕರ್.ಒಟ್ಟಾರೆಯಾಗಿ ಕಳೆದ ಹತ್ತು ವರ್ಷಕ್ಕೆ ಹೋಲಿಸಿದರೆ ಆಲೆಮನೆಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗಿರುವುದು ಆಲೆಮನೆಗಳ ಅವನತಿಗೆ ಹಿಡಿದಿರುವ ಕನ್ನಡಿಯಾಗಿದ್ದು ಭವಿಷ್ಯದಲ್ಲಿ ಆಲೆಮನೆಗಳು ಹೇಗಿದ್ದವೆಂಬುದನ್ನು ಯುವ ಪೀಳಿಗೆಗೆ ಚಿತ್ರಗಳ ಮೂಲಕ ವಿವರಿಸಿ ಹೇಳಬೇಕಾದ ಕಾಲ ದೂರವಿಲ್ಲ ಎನ್ನಲಡ್ಡಿಯಿಲ್ಲ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT