ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆದ ಪೈರಿಗೆ ಸಿಗದ ನೀರು: ರೈತರ ಪರದಾಟ

Last Updated 8 ಅಕ್ಟೋಬರ್ 2011, 10:45 IST
ಅಕ್ಷರ ಗಾತ್ರ

ಯಾದಗಿರಿ:  ಕಾಲುವೆ ನಿರ್ಮಿಸಬೇಕಿರುವ ಜಾಗೆಯಲ್ಲಿ ಇನ್ನೂ ಗಿಡಗಂಟೆಗಳೇ ಬೆಳೆದು ನಿಂತಿವೆ. ಈಗಷ್ಟೇ ನಿರ್ಮಿಸಿರುವ ಕಾಲುವೆಯೂ ಕಳಪೆ ಗುಣಮಟ್ಟದಿಂದ ಕೂಡಿದ್ದು, ನೀರು ಹರಿಸುವ ಮೊದಲೇ ಹಾಳಾಗಿ ಹೋಗುತ್ತಿದೆ. ನೀರಿನ ನಿರೀಕ್ಷೆಯಲ್ಲಿ ಫಸಲು ಬೆಳೆದಿರುವ ರೈತರಿಗೆ ಇದೀಗ ದಿಕ್ಕೇ ತೋಚದಂತಾಗಿದೆ.

ತಾಲ್ಲೂಕಿನ ಪ್ರಮುಖ ಜಲಾಶಯವಾದ ಹತ್ತಿಕುಣಿ ಜಲಾಶಯದ ನೀರು ಹರಿಸಲು ನಿರ್ಮಾಣವಾಗಬೇಕಿದ್ದ ಕಾಲುವೆ ಕಾಮಗಾರಿ ವಿಳಂಬವಾಗಿದ್ದು, ಬೆಳೆದು ನಿಂತಿರುವ ಪೈರಿಗೆ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತಿಕುಣಿ ಕೆರೆಗೆ ಅಡ್ಡಲಾಗಿ ನಿರ್ಮಿಸಿರುವ ಈ ಜಲಾಶಯದಿಂದ ಸುತ್ತಲಿನ ಸುಮಾರು 5000 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ರೈತರ ಜಮೀನುಗಳಿಗೆ ನೀರು ಹರಿಸಲು ಕಾಲುವೆಗಳು ಅಗತ್ಯವಾಗಿದ್ದು, ಈ ವರ್ಷ ನೀರು ಸಿಗುವ ಸಾಧ್ಯತೆ ಕಡಿಮೆ ಎಂದು ರೈತರು ಹೇಳುವಂತಾಗಿದೆ.

ಈ ಜಲಾಶಯವನ್ನೇ ನಂಬಿಕೊಂಡು ನೂರಾರು ರೈತರು ಈಗಾಗಲೇ ಶೇಂಗಾ, ಬತ್ತ ಬಿತ್ತನೆ ಮಾಡಿದ್ದಾರೆ. ಹೊಲಗಳನ್ನು ಸ್ವಚ್ಛ ಮಾಡಿಟ್ಟುಕೊಂಡಿದ್ದು, ನೀರು ಬಂದರೆ, ಬೆಳೆಗೆ ಆಸರೆ ಸಿಕ್ಕಂತಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ಕಾಲುವೆಯ ನಿರ್ಮಾಣ ಕಾಮಗಾರಿಯನ್ನು ನೋಡಿದರೆ, ರೈತರ ನಿರೀಕ್ಷೆ ಹುಸಿಯಾಗುವುದು ನಿಶ್ಚಿತ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ ಹೇಳುತ್ತಾರೆ.

ರೈತರ ಜಮೀನಿಗೆ ನೀರು ಹರಿಸುವ ಕಾಲುವೆಗಳಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ. ಅಲ್ಲದೇ ಈ ಕಾಲುವೆ ದುರಸ್ತಿ ಮಾಡಲು ಸುಮಾರು ರೂ.6 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಕೆಲವೇ ಕಾಲುವೆಗಳ ಕಾಮಗಾರಿ ಆರಂಭವಾಗಿದ್ದು, ಅದೂ ಕಳಪೆ ಮಟ್ಟದ್ದಾಗಿದೆ ಎಂದು ದೂರುತ್ತಾರೆ.

ಹಿಂಗಾರು ಹಂಗಾಮು ಆರಂಭವಾಗಿದ್ದು, ರೈತರು ಬಿತ್ತನೆ ಕಾರ್ಯ ಆರಂಭಿಸಲೂ ಹಿಂದೇಟು ಹಾಕುವಂತಹ ಸ್ಥಿತಿ ಇದೆ. ಕೆಲವು ರೈತರು ನೀರು ಬರಲಿವೆ ಎಂಬ ನಿರೀಕ್ಷೆಯಲ್ಲಿ ಈಗಾಗಲೇ ಬಿತ್ತನೆ ಮಾಡಿದ್ದು, ಅವುಗಳಿಗೆ ನೀರು ಸಿಗದೇ ಪರದಾಡುವಂತಾಗಿದೆ. ಸರ್ಕಾರ ರೈತರ ಅನುಕೂಲಕ್ಕೆ ಒದಗಿಸಿರುವ ಅನುದಾನ ಈ ರೀತಿ ವ್ಯರ್ಥವಾಗುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುತ್ತಾರೆ.

ಈ ಹಿಂದೆ ಹತ್ತಿಕುಣಿ ಜಲಾಶಯಕ್ಕೆ ಭೇಟಿ ನೀಡಿದ್ದ ಗುಲ್ಬರ್ಗ ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ, ಅ.15 ರೊಳಗೆ ರೈತರ ಜಮೀನುಗಳಿಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಸದ್ಯಕ್ಕೆ ನಡೆಯುತ್ತಿರುವ ಕಾಮಗಾರಿಯನ್ನು ನೋಡಿದರೆ, ರೈತರ ಬೆಳೆಗಳು ಒಣಗಿದರೂ, ಜಮೀನಿಗೆ ನೀರು ಹರಿಯುವುದು ಮಾತ್ರ ಕನಸಿನ ಮಾತು ಎಂದು ಕರವೇ ಹೋಬಳಿ ಘಟಕದ ಅಧ್ಯಕ್ಷ ಭೀಮು ರಾಯಪ್ಪನೋರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಒಂದು ವೇಳೆ ಕಾಮಗಾರಿಯನ್ನು ಶೀಘ್ರ ಆರಂಭಿಸಿ, 15 ದಿನಗಳ ಒಳಗಾಗಿ ರೈತರಿಗೆ ನೀರು ಒದಗಿಸಬೇಕು. ಇಲ್ಲವೇ ರೈತರೊಂದಿಗೆ ಕರವೇ ಕಾರ್ಯಕರ್ತರು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT