ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆನಷ್ಟದ ದಾರಿಯಲ್ಲಿ ನಲುಗಿದ ರೈತ

Last Updated 4 ಅಕ್ಟೋಬರ್ 2012, 8:00 IST
ಅಕ್ಷರ ಗಾತ್ರ

ಕೋಲಾರ: ಮುಂಗಾರು ಅವಧಿ ಮುಗಿಯುವ ಹೊತ್ತಿಗೆ ಜಿಲ್ಲೆಯಲ್ಲಿ ಈಗ ಬೆಳೆ ನಷ್ಟದ ದಾರಿ ತೆರೆದುಕೊಂಡಿದೆ. ನಡೆದಷ್ಟೂ ದೂರ ಒಣಗಿದ ಬೆಳೆಗಳೇ ಕಾಣಲಾರಂಭಿಸಿವೆ. ರಾಗಿ, ನೆಲಗಡಲೆ, ತೊಗರಿ, ಭತ್ತ, ಜೋಳ, ಅಲಸಂದೆ, ಅವರೆ ಸೇರಿದಂತೆ ಬಹುತೇಕ ಎಲ್ಲ ಬೆಳೆಗಳೂ ಸೊರಗುತ್ತಿದೆ.

ಈ ಬೆಳೆಗಳ ಪೈಕಿ ಪ್ರಧಾನ ಬೆಳೆಯಾದ ರಾಗಿ ಬಿತ್ತನೆ ಮಾಡಿರುವ ರೈತರಿಗಂತೂ ನಷ್ಟ ಖಚಿತ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಅದರ ಜೊತೆಗೆ ನೆಲಗಡಲೆಯೂ ನೆಲಕಚ್ಚಿದೆ. ಕೊಂಚ ಮಳೆ ಬಿದ್ದರೆ ರಾಗಿ ಚೇತರಿಸಿಕೊಂಡು ಹೊಳೆಯುವ ಬೆಳೆ. ಆದರೆ ನೆಲಗಡಲೆ ಹಾಗಲ್ಲ. ಅದು ಚೇತರಿಸಿಕೊಳ್ಳುವ ಸಾಧ್ಯತೆ ಕ್ಷೀಣಿಸಿದೆ.


ಕಳೆದ ಮಾಸಾಂತ್ಯದ ಹೊತ್ತಿಗೆ ಕೃಷಿ ಇಲಾಖೆ ಅಧಿಕಾರಿಗಳು ನಡೆಸಿದ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಶೇ 50ಕ್ಕಿಂತ ಹೆಚ್ಚು ಬೆಳೆನಷ್ಟವಾಗುವ ಪ್ರದೇಶ ವ್ಯಾಪ್ತಿ ಜಿಲ್ಲೆಯಲ್ಲಿ 29,852 ಹೆಕ್ಟೇರ್‌ನಷ್ಟಿದೆ. ಜಿಲ್ಲೆಯ ಒಟ್ಟು 1.2 ಲಕ್ಷ ಹೆಕ್ಟೇರ್ ಕೃಷಿ ಭೂಮಿಯ ಪೈಕಿ ಕೇವಲ 86,597 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಈ ಬಾರಿ ಬಿತ್ತನೆಯಾಗಿದೆ.

56,214 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯಾಗಿದೆ. 15,893 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ರಾಗಿ ಸಂಪೂರ್ಣ ಹಾಳಾಗುವ ಭೀತಿ ಎದುರಿಸುತ್ತಿದೆ. ನೆಲಗಡಲೆ 10,401 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. 7571 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಉಳಿದಂತೆ, ಅವರೆ 2186, ತೊಗರಿ 1964, ಜೋಳ 951, ಅಲಸಂದೆ 390, ಭತ್ತ 275 ಹೆಕ್ಟೇರ್‌ನಷ್ಟು ನಷ್ಟವಾಗಲಿದೆ.

ಮಾಲೂರು- ಮುಳಬಾಗಲು ಮತ್ತು ಶ್ರೀನಿವಾಸಪುರ ತಾಲ್ಲೂಕುಗಳಲ್ಲಿ ಬೆಳೆನಷ್ಟದ ಪ್ರಮಾಣ ಶೇ 50ಕ್ಕಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಮುಳಬಾಗಲು ತಾಲ್ಲೂಕಿನಲ್ಲಿ 18,447, ಮಾಲೂರು ತಾಲ್ಲೂಕಿನಲ್ಲಿ 3620 ಮತ್ತು ಶ್ರೀನಿವಾಸಪುರದಲ್ಲಿ 7,785 ಹೆಕ್ಟೇರ್‌ನಷ್ಟ ಬೆಳೆನಷ್ಟವಾಗಲಿದೆ. ಉಳಿದಂತೆ ಬಂಗಾರಪೇಟೆ ಮತ್ತು ಕೋಲಾರ ತಾಲ್ಲೂಕುಗಳಲ್ಲಿ ಬೆಳೆನಷ್ಟದ ಪ್ರಮಾಣ ಕಡಿಮೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸುತ್ತವೆ.
 

ಸಮಿತಿ ರಚನೆ: ಜಿಲ್ಲೆಯಲ್ಲಿ ಬೆಳೆ ನಷ್ಟದ ವ್ಯಾಪ್ತಿಯನ್ನು ಗುರುತಿಸಲು ಐದು ತಾಲ್ಲೂಕಿನಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಸಮೀಕ್ಷಾ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಕೃಷಿ, ತೋಟಗಾರಿಕೆ, ಜಲಾನಯನ ಇಲಾಖೆ ಅಧಿಕಾರಿಗಳು ಮತ್ತು ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು ಸದಸ್ಯರಾಗಿದ್ದು, ಜಂಟಿಯಾಗಿ ಸಮೀಕ್ಷೆ ನಡೆಸಲಿದ್ದಾರೆ.

2012-13ನೇ ಸಾಲಿನಲ್ಲಿ ಗ್ರಾಮ ಲೆಕ್ಕಿಗರು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಒಟ್ಟಾಗಿ ಪ್ರತಿ ಹಳ್ಳಿಯ ರೈತರ ಬೆಳೆ ಪರಿಶೀಲಿಸಿ ನಷ್ಟದ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಸೂಚಿಸಲಾಗಿದೆ. 2ರಿಂದ 3 ವಾರದಲ್ಲಿ ಬೆಳೆ ನಷ್ಟದ ಸಮೀಕ್ಷೆ ಮುಗಿಯುವ ಸಾಧ್ಯತೆ ಇದೆ. ನಂತರ ರೈತರಿಗೆ ನೀಡಬೇಕಾದ ಪರಿಹಾರದ ಬಗ್ಗೆ ಚಿಂತಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಬುಧವಾರ `ಪ್ರಜಾವಾಣಿ~ಗೆ ತಿಳಿಸಿದರು.

ನಷ್ಟ ಹೆಚ್ಚು: ಮುಂದಿನ ದಿನಗಳಲ್ಲಿ ಬೆಳೆನಷ್ಟ ಹೆಚ್ಚಾಗುವ ಸಾಧ್ಯತೆ ಸ್ಪಷ್ಟವಾಗಿ ಗೋಚರಿಸುತ್ತಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು. ಅಸಮರ್ಪಕ ಮುಂಗಾರಿನ ಪರಿಣಾಮ ಅಲ್ಲಲ್ಲಿ ಬಿತ್ತನೆ ತಡವಾಗಿದೆ. ನಂತರವಾದರೂ ಮಳೆ ಬರಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ.

ಹೀಗಾಗಿ ತಹಶೀಲ್ದಾರ್ ನೇತೃತ್ವದ ಸಮಿತಿಯ ಸಮೀಕ್ಷೆ ಪೂರ್ಣಗೊಳ್ಳುವ ಹೊತ್ತಿಗೆ ಬೆಳೆನಷ್ಟದ ಪ್ರಮಾಣ ದುಪ್ಪಟ್ಟಾಗಲೂಬಹುದು ಎನ್ನುತ್ತಾರೆ ಮತ್ತೊಬ್ಬ ಅಧಿಕಾರಿ.

ನಡೆಯದ ಸಮೀಕ್ಷೆ: ಜಿಲ್ಲಾಡಳಿತ 2011-12ನೇ ಸಾಲಿನ ಬೆಳೆನಷ್ಟದ ಸಮೀಕ್ಷೆ ನಡೆಸಿಲ್ಲ. ಇದೀಗ ಪ್ರಸಕ್ತ ಸಾಲಿನ (2012-13) ಬೆಳೆ ನಷ್ಟ ಸಮೀಕ್ಷೆ ಪ್ರಾರಂಭಿಸಿದೆ. ಕಳೆದ ವರ್ಷದ ಬೆಳೆನಷ್ಟದ ಪರಿಹಾರ ಇಲ್ಲಿಯವರೆಗೆ ಸಿಕ್ಕಿಲ್ಲ. ಅಧಿಕಾರಿಗಳು ಸಮರ್ಪಕ ಮಾಹಿತಿಯನ್ನೂ ಸಂಗ್ರಹಿಸಿಲ್ಲ ಎಂದರು.

ಕಳೆದ ವರ್ಷ ಜುಲೈ- ಆಗಸ್ಟ್ ಹೊತ್ತಿಗೆ ಬೆಳೆ ನಷ್ಟದ ಅಂದಾಜು ಮಾಡುವ ಕೆಲಸವಾಗಬೇಕಾಗಿತ್ತು. ಆ ನಿಟ್ಟಿನಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ಹಾಕಿಕೊಟ್ಟರೂ ಕೆಳ ಹಂತದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆ ಕೆಲಸ ನಡೆಯದಿರುವುದು ವಿಷಾದನೀಯ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಕಂದಾಯ ಇಲಾಖೆಯ ಹಿರಿಯ ಅಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT