ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಯಿರಿ ಅಂತರ್ ಬೆಳೆ ಮೊಗದಲ್ಲಿ ಸಂತಸದ ಕಳೆ

Last Updated 3 ಡಿಸೆಂಬರ್ 2012, 19:30 IST
ಅಕ್ಷರ ಗಾತ್ರ

ಅಡಿಕೆ ತೆಂಗು ಇನ್ನಿತರ ಬಹುವಾರ್ಷಿಕ ಸಸಿಗಳನ್ನು ನೆಟ್ಟು ಫಸಲು ಬರವವರೆಗೆ ಪ್ರತಿ ವರ್ಷ ಅಧಿಕ ಹಣ ವೆಚ್ಚಮಾಡಿ ಹಲವು ರೈತರು ಆರ್ಥಿಕ ಸಮಸ್ಯೆಯಲ್ಲಿ ತೊಳಲುತ್ತಿರುತ್ತಾರೆ. ಫಸಲು ಬರುವವರೆಗೆ ಇವುಗಳ ಕೃಷಿಗೆ ಸಾಕಷ್ಟು ಹಣ ಮತ್ತು ಪರಿಶ್ರಮ ಅನಿವಾರ್ಯ.

ಗಿಡ ನೆಟ್ಟು 7-8 ವರ್ಷಗಳ ಕಾಲ ಆದಾಯಕ್ಕೆ ಏನು ಎಂದು ಚಿಂತಿಸುತ್ತಾ ಕಾಲ ಕಳೆಯುವ ಬದಲು ಇವುಗಳ ನಡುವೆ ಸಾಕಷ್ಟು ಆದಾಯ ತರಬಲ್ಲ ಅಂತರ್ ಬೆಳೆಗಳನ್ನು  ಬೆಳೆಯಬಹುದೆಂಬುದನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅರಳೀಕೊಪ್ಪದಲ್ಲಿ ಅಪೂರ್ವ ಅರುಣ್‌ಕುಮಾರ  ಸಾಬೀತು ಪಡಿಸಿದ್ದಾರೆ.    
      
  ಅವರು ಹೊಸನಗರ-ಸಾಗರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಸ್ಥಳದಲ್ಲಿ `ಅಪೂರ್ವ ಫಾರಂ' ಎಂಬ ಹೆಸರಿನಲ್ಲಿ ಸುಮಾರು 15 ಎಕರೆ ವಿಸ್ತೀರ್ಣದ ತಮ್ಮ ಕೃಷಿ  ಭೂಮಿಯಲ್ಲಿ ವಿವಿಧ ಬೆಳೆ ಬೆಳೆಯುತ್ತಿದ್ದಾರೆ.

ಸುಮಾರು ಎರಡು ಎಕರೆ ವಿಸ್ತೀರ್ಣದ ಜಮೀನಿನಲ್ಲಿ ತೆಂಗಿನ ಗಿಡಗಳನ್ನು ಬೆಳೆಸಿದ್ದಾರೆ. ಮೂರು ವರ್ಷದ ಹಿಂದೆ 30/30 ಅಡಿ ಅಂತರದಲ್ಲಿ ತೆಂಗಿನ ಸಸಿ ನೆಟ್ಟಿದ್ದರು.
                                         
ತೆಂಗಿನ ನಡುವೆ ನಿಂಬೆ                                                          
ಇವರು ತೆಂಗಿನ ನಡುವೆ 10 ಅಡಿ ಅಂತರದಲ್ಲಿ ನಿಂಬೆ ಸಸಿ ಹಾಕಿದ್ದಾರೆ. ಎರಡು ತೆಂಗಿನ ಸಸಿಯ ನಡುವೆ ಮೂರು ನಿಂಬೆ ಸಸಿ ಬೆಳೆಸಿದ್ದಾರೆ. ಇವರು ಹಾಕಿರುವ ತೆಂಗಿನ ಸಸಿಗಳು ವಿವಿಧ ತಳಿಗಳದ್ದಾಗಿದ್ದು, ಕೆಲವು ಮೂರು ವರ್ಷ ತುಂಬುತ್ತಿದ್ದಂತೆ ಈಗ ಹೂಗೊನೆ ಬಿಟ್ಟಿವೆ. ಇವರು ಬೆಳೆಸಿರುವ ನಿಂಬೆ ವಿಶೇಷ ತಳಿಯದ್ದಾಗಿದೆ.

ಸೀಡ್‌ಲೆಸ್ ತಳಿಯ ದೊಡ್ಡ ಗಾತ್ರದ ನಿಂಬೆ ಸಸಿ ಇವಾಗಿವೆ.  2/2 ಅಡಿ ಗಾತ್ರದ ಗುಣಿಯಲ್ಲಿ ಹೊಲದ ಮೇಲ್ಮಣ್ಣು, ಸಗಣಿ ಗೊಬ್ಬರ ಮತ್ತು ಸುಣ್ಣ ಹಾಗೂ ರಾಕ್ ಪಾಸ್ಪೇಟ್ ಮಿಶ್ರಣ ಹಾಕಿ ಗಿಡ ಬೆಳೆಸಿದ್ದಾರೆ. ಗಿಡಗಳಿಗೆ ಬೇಸಿಗೆಯಲ್ಲಿ ನೀರುಣಿಸಲು ಮೈಕ್ರೋ ಸ್ಪ್ರಿಂಕರ್ಲ್‌ ಅಳವಡಿಸಿದ್ದು, ಪ್ರತಿ ಎರಡು ದಿನಕ್ಕೊಮ್ಮೆ ನೀರು ಹಾಯಿಸುತ್ತಾರೆ. ಇವರು ಸುಮಾರು 400 ನಿಂಬೆ ಸಸಿ ಬೆಳೆಸಿದ್ದು ವರ್ಷವಿಡೀ ಫಸಲು ನೀಡುತ್ತಿವೆ.     
                                                                        
ನಿಂಬು ನಡುವೆ ಶುಂಠಿ                                                                                      
ಈ ವರ್ಷ ಮಳೆಗಾಲದ ಆರಂಭದಲ್ಲಿ ತೆಂಗಿನ ಸಸಿಗಳ ನಡುವೆ ಬೆಳೆಸಿದ ಈ ನಿಂಬೆ ಸಸಿಗಳ ನಡುವೆ ಅಂತರ್ ಬೆಳೆಯಾಗಿ ಶುಂಠಿ ಕೃಷಿ  ನಡೆಸಿದ್ದಾರೆ. ನಿಂಬು ಗಿಡದಿಂದ 2 ಅಡಿ ದೂರದಲ್ಲಿ ಶುಂಠಿ ಪಟ್ಟೆ ನಿರ್ಮಿಸಿ ಬೀಜ ಹಾಕಿ ಸಗಣಿಗೊಬ್ಬರ ಬಳಸಿ ಬೆಳೆ ಬೆಳೆಯುತ್ತಿದ್ದಾರೆ.

ಇವರು ತಮ್ಮ ಹೊಲದಲ್ಲಿ ಕಳೆ ನಾಶಕ ಬಳಸುವುದಿಲ್ಲ. ಶುಂಠಿ ಸಸಿಗಳ ನಡುವಿನ ಕಳೆಯನ್ನು ಆಳುಗಳಿಂದ ಕೀಳಿಸಿ ಸ್ವಚ್ಛಗೊಳಿಸುತ್ತಾರೆ. ತೆಂಗಿನ ಸಸಿಗಳ ನಡುವೆ ನಡೆಸುವ ಈ ಅಂತರ್ ಬೆಳೆಯಿಂದ ತೆಂಗಿನ ತೋಟದ ಸಾಗುವಳಿ ನಿರಂತರವಾಗಿ ಆಗುವುದರ ಜೊತೆಗೆ ಪರೋಕ್ಷ ನೀರು ಗೊಬ್ಬರ ಹಾಗೂ ಕಳೆ ಸ್ವಚ್ಛತೆ ನಡೆಸಿದಂತಾಗುತ್ತದೆ ಎಂಬುದು ಅವರ ಅಭಿಪ್ರಾಯ.

ಇವರು ನಿಂಬು ಸಸಿಗಳ ನಡುವೆ ಸುಮಾರು ಒಂದೂವರೆ ಎಕರೆ ವಿಸ್ತೀರ್ಣದಲ್ಲಿ 15 ಕ್ವಿಂಟಲ್ ಶುಂಠಿ ಬೀಜ ಹಾಕಿದ್ದಾರೆ. ಪ್ರತಿ 22 ದಿನಕ್ಕೊಮ್ಮೆಯಂತೆ ಗೊಬ್ಬರ, ಮೇಲ್ಮಣ್ಣು ಮತ್ತು ಕಳೆ ತೆಗೆಸಿ ಕೃಷಿ  ನಡೆಸಿ ಗಿಡ ಹುಲುಸಾಗಿ ಬೆಳೆಯುವಂತೆ ಮಾಡಿದ್ದಾರೆ. ಸರಾಸರಿ ಕನಿಷ್ಠವೆಂದರೂ  100 ಕ್ವಿಂಟಲ್ ಶುಂಠಿ ಫಸಲು ದೊರೆಯುವ ನಿರೀಕ್ಷೆಯಲ್ಲಿದ್ದಾರೆ.  
                                                                
ತೆಂಗಿನ ನಡುವೆ ಬೆಳೆಸಿದ ನಿಂಬು ಗಿಡದಲ್ಲಿ ವರ್ಷವಿಡೀ ಫಸಲು ದೊರೆಯುತ್ತಿದೆ. ಪ್ರತಿ ಗಿಡದಿಂದ ವರ್ಷಕ್ಕೆ ಸುಮಾರು 550 ರಿಂದ 600 ನಿಂಬೆ ಹಣ್ಣು ದೊರೆಯುತ್ತಿದೆ.

ಮಾರುಕಟ್ಟೆಯಲ್ಲಿ ಸರಾಸರಿ 2 ರೂ. ನಿಂದ 3ರೂ. ವರೆಗೂ ಮಾರಾಟವಾಗುವ ಈ ದೊಡ್ಡ ಗಾತ್ರದ ನಿಂಬೆ ಹಣ್ಣುಗಳಿಗೆ ಸಾಕಷ್ಟು ಬೇಡಿಕೆ ಇದೆ. ಸಿಪ್ಪೆ ತೆಳುವಾಗಿದ್ದು, ಸಿಹಿ ಹೊಂದಿರುವ ಕಾರಣ ಈ ನಿಂಬೆ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ.

ಇವರು ಒಂದು ನಿಂಬೆ ಗಿಡದಿಂದ ವರ್ಷಕ್ಕೆ ಸರಾಸರಿ ರೂ. 800 ರಿಂದ 1100 ಆದಾಯ ಗಳಿಸುತ್ತಿದ್ದು, ತೆಂಗಿನ ಫಸಲು ಬರುವವರೆಗೆ ಆದಾಯ ಏನು ಎಂಬುದಕ್ಕೆ ಉತ್ತರ ಕಂಡುಕೊಂಡು ಸುತ್ತಮುತ್ತಲ ರೈತರಿಗೆ ಮಾದರಿಯಾಗಿದ್ದಾರೆ. 15 ಎಕರೆ ವಿಸ್ತೀರ್ಣದಲ್ಲಿ ರಬ್ಬರ್, ಅಡಿಕೆ, ತೆಂಗು, ಅನಾನಸ್, ಬಾಳೆ, ತರ ತರದ ಹಣ್ಣಿನ ಸಸಿಗಳು, ಹೂವಿನ ಸಸಿಗಳು, ಔಷಧ ಸಸಿಗಳು, ಕಬ್ಬು , ಅರಿಶಿನ, ಶುಂಠಿ, ಕಾಳು ಮೆಣಸು, ಕಾಫಿ ಇತ್ಯಾದಿ ವೈವಿಧ್ಯಮಯ ಸಸಿಗಳ ಇವರ ತೋಟ ಅಕ್ಷರಶಃ ಅಪೂರ್ವ ಫಾರಂ ಆಗಿದ್ದು ವೀಕ್ಷಣೆಗೆ ಕೃಷಿ  ಆಸಕ್ತರು ಭೇಟಿ ನೀಡುತ್ತಿರುತ್ತಾರೆ.  ಮಾಹಿತಿಗೆ: 9480285634 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT