ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಯುವ ಆಶಯಕ್ಕೆ ಬಲ...ಬೆಂಬಲ...

Last Updated 5 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ನಡೆದ ಇಂಡಿಯನ್ ವಾಲಿ ಲೀಗ್‌ನಿಂದ ಸಾಕಷ್ಟು ಯುವ ಆಟಗಾರರು ತಮ್ಮ ಪ್ರತಿಭೆಯನ್ನು ತೋರಿಸಲು ಸಾಧ್ಯವಾಯಿತು.
 
ಮುಂದಿನ ದಿನಗಳಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಇಲ್ಲಿನ ಪ್ರದರ್ಶನ ಮಾನದಂಡವೂ ಆಯಿತು. ಆದರೆ ಕ್ರೀಡಾಭಿಮಾನಿಗಳ ಬೆಂಬಲ ಮಾತ್ರ ಇನ್ನೂ ಸಿಗಬೇಕು...

`ಭಾರತದಲ್ಲಿ ಕ್ರೀಡೆ ಎಂದರೆ ಕ್ರಿಕೆಟ್ ಮಾತ್ರನಾ ಸಾರ್..! ಅದಕ್ಕೆ ಸಿಗುವ ಪ್ರಚಾರ, ಹಣ, ಖ್ಯಾತಿ, ಸ್ಥಾನಮಾನ ಉಳಿದ ಕ್ರೀಡೆಗಳಲ್ಲಿ ಸಿಗುವುದಿಲ್ಲವೇಕೆ? ಹಾಕಿ, ಫುಟ್‌ಬಾಲ್, ವಾಲಿಬಾಲ್, ಕಬಡ್ಡಿ ಇವು ಕ್ರೀಡೆಗಳೇ ಅಲ್ವಾ? ಕ್ರೀಡಾ ಪ್ರೇಮಿಗಳು, ಕೋಟಿ ಕೋಟಿ ಹಣ ಸುರಿಯುವ ಉದ್ಯಮಿಗಳು ಸಹ ಕ್ರಿಕೆಟ್‌ನತ್ತ ಮುಖ ಮಾಡುತ್ತಾರಲ್ಲ? ಹೀಗಾದರೆ ಉಳಿದ ಕ್ರೀಡೆಗಳೇನಾಗಬೇಕು~?
-
ಹೀಗೆ ಪ್ರಶ್ನಿಸಿದ್ದು, ಕೋಲಾರದ ಎನ್. ಜಗದೀಶ್. ಕಳೆದ ವಾರ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ವಾಲಿ ಲೀಗ್‌ನ ಮೊದಲ ಆವೃತ್ತಿಯ (ಐವಿಎಲ್) ಪಂದ್ಯದಲ್ಲಿ ಕರ್ನಾಟಕ ಬುಲ್ಸ್ ತಂಡವನ್ನು ಪ್ರತಿನಿಧಿಸಿದ್ದರು ಜಗದೀಶ್.

ಐಪಿಎಲ್ ಕ್ರಿಕೆಟ್‌ನಿಂದ ಪ್ರಭಾವಿತಗೊಂಡು ಆರಂಭವಾದ ಐವಿಎಲ್ ಕುರಿತು ಜಗದೀಶ್ ಅವರ ಪ್ರತಿಕ್ರಿಯೆ ಪಡೆಯುವಾಗ ಅವರು ಈ ಮೇಲಿನ ಪ್ರಶ್ನೆಗಳನ್ನು ಕೇಳಿದರು. ಅವರ ಮಾತುಗಳಲ್ಲಿಯೂ ನಿಜವಿದೆ.

ಹಾಗೆಯೇ ಮಾತು ಮುಂದುವರಿಸಿದ ಅವರು, ಐವಿಎಲ್ ಮೊದಲ ಆವೃತ್ತಿ ಈ ವರ್ಷ ಆರಂಭವಾಗಿದೆ. ಇನ್ನೂ ಎರಡೂ-ಮೂರು ವರ್ಷಗಳ ನಂತರ ಐವಿಎಲ್ ಖ್ಯಾತಿ ಗಳಿಸುತ್ತದೆ. ನಮಗೂ (ಆಟಗಾರರಿಗೂ) ಉತ್ತಮ ಸ್ಥಾನಮಾನ  ಸಿಗುತ್ತದೆ ಎನ್ನುವ ವಿಶ್ವಾಸ ಅವರದು.

ಆದರೆ, ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಇನ್ನೊಬ್ಬ ಆಟಗಾರ ಸುರೇಶ್ ಗೌಡರ್ ಅವರ ಅಭಿಪ್ರಾಯವೇ ಬೇರೆ. ಬೆಂಗಳೂರಿನಲ್ಲಿ ವಾಲಿಬಾಲ್ ಎಂದರೆ ಯಾರಿಗೂ ಆಸಕ್ತಿಯಿಲ್ಲ.

ಚೆನ್ನೈಯಲ್ಲಿ ನಡೆಯುವ ಎರಡನೇ ಆವೃತ್ತಿ ನೋಡಲು ತುಂಬಾ ಜನ ಬರ್ತಾರೆ ಎನ್ನುವ ಆಶಯ ಅವರದು. ಐಪಿಎಲ್ ಮಾದರಿಯಲ್ಲಿ ಐವಿಎಲ್ ಕೂಡಾ ಕಡಿಮೆ ಸಮಯದಲ್ಲಿ ಜನಪ್ರಿಯತೆ ಗಳಿಸಬೇಕಾದರೆ ಅದಕ್ಕೆ ಗ್ಲಾಮರ್ ಸ್ಪರ್ಶವೂ ಬೇಕು, ಉದ್ಯಮಿಗಳು ಬೆಂಬಲವೂ ಬೇಕು ಎಂದವರೂ ಇನ್ನೂ ಕೆಲವರು.

ಇಂಡಿಯನ್ ವಾಲಿಬಾಲ್ ಫೆಡರೇಷನ್‌ನ ಕನಸಿನ ಕೂಸು ಐವಿಎಲ್‌ನಿಂದ ಅನುಕೂಲ ಆಗಿದ್ದು ಆಟಗಾರರಿಗೆ. ಇಡೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಮರಾಠಾ ವಾರಿಯರ್ಸ್ ತಂಡ ನಿರೀಕ್ಷೆಯಂತೆಯೇ ಚಾಂಪಿಯನ್ ಆಯಿತು. ಏಕೆಂದರೆ ಆ ತಂಡದಲ್ಲಿದ್ದವರು ಬುಹುತೇಕ ಆಟಗಾರರು ಭಾರತ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು.

ಅರ್ಜುನ ಪ್ರಶಸ್ತಿ ಪುರಸ್ಕ್ರೃತ ಕೆ.ಜಿ ಕಪಿಲ್ ದೇವ್ (ಚೆನ್ನೈ ಸ್ಪೈಕರ್ಸ್‌), ಹಿರಿಯ ಆಟಗಾರ ಸುರೇಶ್ ಗೌಡರ (ಕರ್ನಾಟಕ ಬುಲ್ಸ್), ಭಾರತ ರಾಷ್ಟ್ರೀಯ ತಂಡದ ಆಟಗಾರ ಬಲ್ವೀಂದರ್ ಸಿಂಗ್ (ಮರಾಠಾ ವಾರಿಯರ್ಸ್) ಸೇರಿದಂತೆ ಇತರ ಆಟಗಾರರು ಈ ಸಲದ ಐವಿಎಲ್‌ನಲ್ಲಿ ಪಾಲ್ಗೊಂಡಿದ್ದರು.

ಐವಿಎಲ್ ಚೊಚ್ಚಲ ಆವೃತ್ತಿಯ ಪಂದ್ಯಗಳನ್ನು ನೋಡಲು ಹೆಚ್ಚಿನ ಪ್ರಮಾಣದಲ್ಲಿ ಕ್ರೀಡಾಭಿಮಾನಿಗಳು ಬರಲಿಲ್ಲ ಎನ್ನುವುದು ನಿಜ. ಆದರೆ ಆಟಗಾರರಿಗೆ ಬೆಳೆಯಲು, ತಮ್ಮ ಪ್ರತಿಭೆಯನ್ನು ತೋರಿಸಲು ಐವಿಎಲ್ ವೇದಿಕೆಯಾಗಿದ್ದಂತೂ ಸತ್ಯ.
 
ತವರು ನೆಲದಲ್ಲಿಯೇ ಮೊದಲ ಆವೃತ್ತಿ ನಡೆದ ಕಾರಣ ಕರ್ನಾಟಕ ಬುಲ್ಸ್ ತಂಡ ಪ್ರಶಸ್ತಿ ಜಯಿಸಬೇಕು ಎನ್ನುವುದು ಅಭಿಮಾನಿಗಳ ಸಹಜ ನಿರೀಕ್ಷೆಯಾಗಿತ್ತು. ಆದರೆ ಲೀಗ್‌ನ ಮೊದಲ ನಾಲ್ಕು ಪಂದ್ಯಗಳಲ್ಲಿ ಸತತ ಸೋಲು ಕಂಡು, ಕೊನೆಯ ಒಂದು ಪಂದ್ಯದಲ್ಲಿ ಮಾತ್ರ  ಬುಲ್ಸ್ ಗೆಲುವು ಸಾಧಿಸಿತು.

ಮರಾಠಾ ವಾರಿಯರ್ಸ್ ತಂಡ ಚಾಂಪಿಯನ್ ಆಯಿತು. ಆದರೆ ಅನುಭವಿ ಆಟಗಾರರನ್ನು ಒಳಗೊಂಡಿದ್ದ ಚೆನ್ನೈ ಸ್ಪೈಕರ್ಸ್‌ ತಂಡ ಮಾತ್ರ ಎಲ್ಲರೂ ಮೆಚ್ಚುವಂಥ ಪ್ರದರ್ಶನ ನೀಡಿತು.

ಆಟಗಾರರ ನಡುವಿನ ಉತ್ತಮ ಹೊಂದಾಣಿಕೆ, ಅತ್ಯುತ್ತಮ ಬ್ಲಾಕ್ ಹಾಗೂ ಸ್ಮಾಷರ್ ಪರಿಣಿತರನ್ನು ಒಳಗೊಂಡಿದ್ದ ತಂಡ ಗಮನಾರ್ಹ ಪ್ರದರ್ಶನ ನೀಡಿತು. ಆದರೆ ಒಂದು ಪಂದ್ಯದಲ್ಲಿ ಎಡವಟ್ಟು ಮಾಡಿಕೊಂಡಿದ್ದರಿಂದ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ತಂಡ ಸೋತರೂ, ಮನದೀಪ್ ಸಿಂಗ್ ಎತ್ತರದ ಹುಡುಗ ಕಪಿಲ್ ದೇವ್ ಅವರು ಉತ್ತಮ ಪ್ರದರ್ಶನ ನೀಡಿದರು. ಚೆನ್ನೈ ತಂಡದ ಇನ್ನೊಬ್ಬ ಆಟಗಾರ ಎಸ್. ಪ್ರಭಾಕರನ್ `ಅತ್ಯುತ್ತಮ ಅಟ್ಯಾಕರ್~ ಪ್ರಶಸ್ತಿ ಸಹ ಪಡೆದರು.

ತವರು ನೆಲದ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ ಕರ್ನಾಟಕ ತಂಡ ನಿರೀಕ್ಷೆಯಂತೆ ಪ್ರದರ್ಶನ ನೀಡಲಿಲ್ಲ. ಆಡಿದ ಎ್ಲ್ಲಲ ಪಂದ್ಯಗಳಲ್ಲಿ ಒಂದೇ ರೀತಿಯ ತಪ್ಪುಗಳನ್ನು ಮಾಡಿತು. ಸಾಕಷ್ಟು ಸರ್ವಿಸ್ ಪಾಯಿಂಟ್‌ಗಳನ್ನು ಕಳೆದುಕೊಂಡಿತು.
ಹಾಗೆಯೇ ಹೊರ ಹೋಗುವ ಚೆಂಡಿಗೆ ಕೈ ತಾಗಿಸಿ ವಿನಾ ಕಾರಣ ಪಾಯಿಂಟ್ ಬಿಟ್ಟು ಕೊಟ್ಟು ಲೀಗ್ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಿತು.

ಯಾರೂ ಗೆದ್ದರೂ, ಯಾರೂ ಸೋತರೂ ಅದು ಮುಖ್ಯವಲ್ಲ. ಇತರ ಕ್ರೀಡೆಗೆ ಸಿಕ್ಕ ಜನಪ್ರಿಯತೆ ಎಲ್ಲಾ ಕ್ರೀಡೆಗಳಿಗೂ ಸಿಗಬೇಕು. ಆಗ ಉಳಿದ ಕ್ರೀಡೆಗಳು ಭವಿಷ್ಯದ ದಿನಗಳಲ್ಲಿ ಹೆಚ್ಚು ಖ್ಯಾತಿ ಗಳಿಸಲು ಸಾಧ್ಯ ಎನ್ನುವುದು ಸಂಘಟಕರ ಆಶಯ.

ಐವಿಎಲ್‌ನ ಇನ್ನೂಳಿದ ಮೂರು ಅವೃತ್ತಿಗಳು ಕ್ರಮವಾಗಿ ಚೆನ್ನೈ, ಯಾನಂ ಹಾಗೂ ಹೈದರಾಬಾದ್‌ನಲ್ಲಿ ನಡೆಯಲಿವೆ. ಮುಂದಿನ ಕೆಲ ವರ್ಷಗಳಲ್ಲಿ ಐವಿಎಲ್ ಕೂಡಾ ತನ್ನದೇ ನೆಲೆಯನ್ನು ಕಂಡು ಕೊಳ್ಳಬೇಕು. ಹೆಚ್ಚು ಪ್ರಚಾರ ಗಳಿಸಬೇಕು. ಇದಕ್ಕೆ ಕ್ರೀಡಾಭಿಮಾನಿಗಳ ಬೆಂಬಲವೂ ಬೇಕು...!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT