ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿ ಬೆಳಕಲ್ಲಿ ಸಂಗೀತ ಶಾಲೆ

Last Updated 20 ಜನವರಿ 2012, 19:30 IST
ಅಕ್ಷರ ಗಾತ್ರ

ಭಾವಗಳಿಗೆ ಸೇತುವಾಗಿರುವ ಸಂಗೀತಕ್ಕೆ ಯಾವ ಎಲ್ಲೆಯೂ ಇಲ್ಲ. ಅನುಭವ-ಅನುಭಾವಗಳನ್ನು ಸುಂದರವಾಗಿ ಅಭಿವ್ಯಕ್ತಗೊಳಿಸುವುದು ಸಂಗೀತದಿಂದ ಸಾಧ್ಯ. ಇಡೀ ಜಗತ್ತನ್ನು ಒಂದೆಡೆ ತರುವ ಮಾಯಾ ಶಕ್ತಿ ಸಂಗೀತಕ್ಕಿದೆ. ಇದೇ ಕಾರಣಕ್ಕೆ ಸಂಗೀತಾಭ್ಯಾಸ ಮಾಡುವವರ ಸಂಖ್ಯೆಯೂ ದಿನೇದಿನೇ ಹೆಚ್ಚುತ್ತಿದೆ.

ಅನೇಕ ವರ್ಷಗಳಿಂದ ಸಂಗೀತ ಶಾಲೆಯನ್ನು ನಡೆಸಿಕೊಂಡು ಬರುತ್ತಿರುವ ಬೆಂಗಳೂರು `ಸ್ಕೂಲ್ ಆಫ್ ಮ್ಯೂಸಿಕ್~ನದ್ದು ಅದೇ ಉದ್ದೇಶ.   ಸಾಧ್ಯವಾದಷ್ಟೂ ಮಟ್ಟಿಗೆ ಹೆಚ್ಚು ವಿದ್ಯಾರ್ಥಿಗಳಿಗೆ ಸಂಗೀತ ಸೇವೆ ಒದಗಿಸಬೇಕೆಂಬ ಹಂಬಲ.

ಇದೀಗ `ಬೆಂಗಳೂರು ಸ್ಕೂಲ್ ಆಫ್ ಮ್ಯೂಸಿಕ್~ಗೆ 25 ವರ್ಷ ಪೂರೈಸಿದ ಸಂಭ್ರಮ. 1987ರಲ್ಲಿ ಅರುಣಾ ಸುಂದರ್‌ಲಾಲ್ ಅವರಿಂದ ಆರಂಭವಾದ ಈ ಸಂಗೀತ ಶಾಲೆ ಇದುವರೆಗೂ ನಡೆದುಬಂದ ಹಾದಿ ಸಂಗೀತಕ್ಕೆ ಪೂರಕ. ಈ 25 ವರ್ಷದ ಸಂಭ್ರಮಕ್ಕೆಂದೇ ವರ್ಷವಿಡೀ ಅನೇಕ ಕಾರ್ಯಕ್ರಮಗಳನ್ನು `ಒಡಿಸ್ಸಿ 2012~ ಎಂಬ ಹೆಸರಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಸಂಗೀತ ಒಂದು ಒಪ್ಪಂದವಿದ್ದಂತೆ. ಮುಂದಿನ ಪೀಳಿಗೆಗೆ ಅದರ ಪ್ರಾಮುಖ್ಯ ತಿಳಿಸಲು, ಸಂಗೀತದ ಬಗ್ಗೆ ಅರಿವು ಮೂಡಿಸಲು, ಸಂಗೀತದಲ್ಲಿ ಇನ್ನೂ ಅನೇಕ ಆವಿಷ್ಕಾರ ನಡೆಸಲು `ಬೆಂಗಳೂರು ಸ್ಕೂಲ್ ಆಫ್ ಮ್ಯೂಸಿಕ್~ ಶ್ರಮಿಸುತ್ತಿದೆ. ಸಂಗೀತದ ಮೂಲಕ ಸಂತಸ, ಭರವಸೆ, ಶಾಂತಿಯನ್ನು ಪಸರಿಸುವುದೇ ನಮ್ಮ ಧ್ಯೇಯವಾಕ್ಯ ಎನ್ನುತ್ತಾರೆ ಅರುಣಾ.

ಬೆಂಗಳೂರು `ಸ್ಕೂಲ್ ಆಫ್ ಮ್ಯೂಸಿಕ್~ ಕೇವಲ ಸಂಗೀತ ಶಾಲೆಯನ್ನಷ್ಟೇ ನಡೆಸಿಕೊಂಡು ಬರುತ್ತಿಲ್ಲ. ಇದು ಸಹಾಯಾರ್ಥ ಸಂಸ್ಥೆ ಕೂಡ ಹೌದು. ಅನೇಕ ಅನಾಥ, ವಿಕಲಚೇತನ ಮತ್ತು ಹಿಂದುಳಿದ ಮಕ್ಕಳಿಗೆ ಉಚಿತವಾಗಿ ಸಂಗೀತ ಸೇವೆ ಒದಗಿಸುತ್ತಾ ಬಂದಿದೆ. ಎಲ್ಲಾ ವಯೋಮಿತಿಯವರಿಗೂ ಇಲ್ಲಿ ಅವಕಾಶವಿದೆ.

ದೇಶ ವಿದೇಶಗಳ ಮಟ್ಟದಲ್ಲಿ ಸಂಗೀತ ಕುರಿತು ಕಾರ್ಯಾಗಾರ, ಸಂಗೀತ ಸಮಾರಂಭಗಳನ್ನು ನಡೆಸುವ ಮೂಲಕ ಸಂಗೀತವನ್ನು ಪ್ರಪಂಚದಾದ್ಯಂತ ಪಸರಿಸುವ ಪ್ರಯತ್ನ ಮಾಡುತ್ತಿದೆ. ಇದುವರೆಗೂ ಸುಮಾರು 13 ಅಂತರರಾಷ್ಟ್ರೀಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಗಿಟಾರ್, ವಯೊಲಿನ್, ಕೊಳಲು, ತಬಲ ಹೀಗೆ ಹಲವು ಸಾಧನಗಳ ಬಗ್ಗೆ ಕಲಾವಿದರು ತರಬೇತಿ ನೀಡುತ್ತಾರೆ.

ಸ್ವಿಟ್ಜರ್ಲೆಂಡ್ ಮತ್ತು ಇನ್ನಿತರ ದೇಶದ ಕಲಾವಿದರ ಸಹಕಾರದೊಂದಿಗೆ ಸಂಗೀತದಲ್ಲಿ ವಿವಿಧ ರೀತಿಯ ಪ್ರಯೋಗಗಳನ್ನು ನಡೆಸಿಕೊಂಡು ಬಂದಿರುವ ಖ್ಯಾತಿ ಈ ಶಾಲೆಯದ್ದು. ಮೊದಲು ಬೆಂಗಳೂರಿನ ಫ್ರೇಝರ್ ಟೌನ್‌ನಲ್ಲಿನ ಅರುಣಾ ಅವರ ಮನೆಯಲ್ಲಿ ಆರಂಭವಾದ ಸಂಗೀತ ಶಾಲೆ ಇದೀಗ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಆರ್.ಟಿ ನಗರದಲ್ಲಿನ ಈಸ್ಟ್ ವೆಸ್ಟ್ ಸೆಂಟರ್‌ನಲ್ಲಿ `ಬೆಂಗಳೂರು ಸ್ಕೂಲ್ ಆಫ್ ಮ್ಯೂಸಿಕ್~ ತನ್ನ ಸಂಗೀತ ಸೇವೆಯನ್ನು ಒದಗಿಸುತ್ತಿದೆ.

ಸಂಗೀತ ವಿನಿಮಯಕ್ಕೆಂದು ವರ್ಷಕ್ಕೆ 25-30 ಸಂಗೀತ ಕಾರ್ಯಕ್ರಮವನ್ನು ಶಾಲೆಯ ವತಿಯಿಂದ ಹಮ್ಮಿಕೊಳ್ಳಲಾಗುತ್ತದೆ. ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಲಾವಿದರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಅದೇ ರೀತಿ ಈ ವರ್ಷವೂ ತನ್ನ 25ನೇ ವರ್ಷದ ಜ್ಞಾಪಕಾರ್ಥವಾಗಿ `ಒಡಿಸ್ಸಿ 2012~ ಎಂಬ ಹೆಸರಿನಲ್ಲಿ 40 ಕಾರ್ಯಕ್ರಮಗಳನ್ನು ಸಂಸ್ಥೆ ಹಮ್ಮಿಕೊಂಡಿದೆ ಎಂಬುದನ್ನು ಕಾರ್ಯಕ್ರಮದ ಅಧ್ಯಕ್ಷ ಚಿರಂಜೀವಿ ಸಿಂಗ್ ಕೂಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT