ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿತೆರೆಗೆ ಚುಂಚನಗಿರಿ

Last Updated 16 ಜೂನ್ 2011, 19:30 IST
ಅಕ್ಷರ ಗಾತ್ರ

ಪೌರಾಣಿಕ ಹಾಗೂ ಐತಿಹಾಸಿಕ ಕಥೆಯುಳ್ಳ `ಶ್ರೀ ಕ್ಷೇತ್ರ ಆದಿಚುಂಚನಗಿರಿ~ ಸಿನಿಮಾ ಕಳೆದ ವಾರ ಸೆಟ್ಟೇರಿದೆ. ಆದುಚುಂಚನಗಿರಿ ಸಂಸ್ಥಾನದ ಉಗಮ ಹಾಗೂ ಅದರ ಹಿಂದಿರುವ ಪೌರಾಣಿಕ ಕಥೆಗಳನ್ನೇ ಆಧಾರವಾಗಿಟ್ಟುಕೊಂಡು ನಿರ್ಮಾಪಕ ಬಿ.ವಿ.ನರಸಿಂಹಯ್ಯ ಅವರು ಈ ಸಿನಿಮಾ ನಿರ್ಮಾಣಕ್ಕೆ ಕೈಹಾಕಿದ್ದಾರೆ. `ಶ್ರೀ ಕ್ಷೇತ್ರ ಆದಿಚುಂಚನಗಿರಿ~ ಎಂಬ ಹೆಸರುಳ್ಳ ಈ ಚಿತ್ರದ ಸಾರಥ್ಯವನ್ನು ಸಾಯಿಪ್ರಕಾಶ್ ಅವರಿಗೆ ವಹಿಸಿಕೊಡಲಾಗಿದೆ.

ಆದಿಚುಂಚನಗಿರಿಗೆ ಆ ಹೆಸರು ಹೇಗೆ ಬಂತು? ಒಕ್ಕಲಿಗರ ಉಗಮ ಎಲ್ಲಿ ಮತ್ತು ಹೇಗೆ ಆಯಿತು? ಎನ್ನುವ ಪ್ರಶ್ನೆಗಳು ಸೇರಿದಂತೆ- ಪುರಾಣ, ತ್ರೇತಾಯುಗ ಹಾಗೂ ದ್ವಾಪರ ಯುಗದಲ್ಲಿ ಆದಚುಂಚನಗಿರಿ ಕುರಿತು ಇರುವ ಪ್ರತಿಯೊಂದು ಕಥೆಯನ್ನೂ ಈ ಚಿತ್ರ ಒಳಗೊಂಡಿರುತ್ತದೆ ಎಂದು ಚಿತ್ರ ನಿರ್ದೇಶಕ ಸಾಯಿಪ್ರಕಾಶ್ ಹೇಳಿದರು. ಅಂದಹಾಗೆ, ಸಾಯಿಪ್ರಕಾಶ್ ಅವರಿಗಿದು 90ನೇ ಚಿತ್ರ.

`ಶ್ರೀ ಕ್ಷೇತ್ರದ ಬಗ್ಗೆ ಇಂಥದ್ದೊಂದು ಚಿತ್ರ ನಿರ್ಮಾಣ ಮಾಡಬೇಕು ಎಂಬ ಸಂಕಲ್ಪ ಮನಸ್ಸಿನಲ್ಲಿ ಮೂಡಿತು. ತಕ್ಷಣ ಬಾಲಗಂಗಾಧರನಾಥ ಸ್ವಾಮೀಜಿ ಅವರಲ್ಲಿ ಕೇಳಿದೆ. ಅವರು ಚಿತ್ರ ನಿರ್ಮಾಣಕ್ಕೆ ತಮ್ಮ ಸಹಮತ ಸೂಚಿಸುವುದರ ಜತೆಗೆ ಆಶೀರ್ವಾದ ನೀಡಿದರು. ಜತೆಗೆ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಶೇಖರ ಸ್ವಾಮೀಜಿ ಅವರೇ ಚಿತ್ರಕ್ಕೆ ಕಥೆಯನ್ನು ನೀಡಿದರು. ಈವರೆಗೆ ಕ್ಷೇತ್ರ ಕುರಿತು ಚಿತ್ರ ನಿರ್ಮಿಸಲು ಅನೇಕರು ಪ್ರಯತ್ನಿಸಿದ್ದಾರೆ.

ಆದರೆ ಅವರಿಗೆ ದಕ್ಕದ ಅವಕಾಶ ನನಗೆ ಸಿಕ್ಕಿರುವುದು ನನ್ನ ಪುಣ್ಯವೇ ಸರಿ~ ಎಂದು ನಿರ್ಮಾಪಕ ನರಸಿಂಹಯ್ಯ ಅಭಿಪ್ರಾಯಪಟ್ಟರು. ಇದು ಇವರ ಚೊಚ್ಚಲ ಚಿತ್ರ. ಹಾಗಾಗಿ, ಚಿತ್ರ ನಿರ್ಮಾಣದಲ್ಲಿ ಅನುಭವ ಇರುವ ವಿ.ಮೋಹನದಾಸ ಪೈ ಅವರು ಕಾರ್ಯಕಾರಿಣಿ ನಿರ್ಮಾಪಕರಾಗಿದ್ದಾರೆ.

ಚಿತ್ರದ ಮುಹೂರ್ತಕ್ಕೆ ಸ್ವತಃ ಬಾಲಗಂಗಾಧರನಾಥ ಸ್ವಾಮೀಜಿ ಆಗಮಿಸಿದ್ದರು. ಹಿರಿಯ ನಿರ್ದೇಶಕ ಕಾಶೀನಾಥ್ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ದಸರಾ ಸಂದರ್ಭದಲ್ಲಿ ತೆರೆಗೆ ತರಬೇಕು ಎಂಬುದು ನಿರ್ದೇಶಕರ ಆಶಯ.
ಗೋಟೂರಿ ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿದ್ದಾರೆ.
 
`ಆದಿಚುಂಚನಗಿರಿಯ ಇತಿಹಾಸದೊಂದಿಗೆ ಪುರಾಣಗಳ ಪುಟಗಳನ್ನು ತಿರುವಿಹಾಕಲಾಯಿತು. ಜತೆಗೆ ರಾಜೇಶ್ವರಿ ಗೌಡ ಅವರ ಸಂಶೋಧನಾ ಗ್ರಂಥವನ್ನೂ ಆಧಾರವಾಗಿ ತೆಗೆದುಕೊಳ್ಳಲಾಯಿತು. ನಾಲ್ಕು ಯುಗಗಳಿಗೆ ತಕ್ಕಂತೆ ಭಾಷೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವೆಡೆ ಶ್ಲೋಕ ಹಾಗೂ ಅದರ ಅರ್ಥ ಇರುವಂತೆ ಸಂಭಾಷಣೆ ಮಾಡಲಾಗಿದೆ.~ ಎಂದು ತಾವು ಮಾಡಿಕೊಂಡ ತಯಾರಿ ಕುರಿತು ಗೋಟೂರಿ ಮಾತನಾಡಿದರು.

`ಚಿತ್ರದಲ್ಲಿ ಕಾಲಭೈರವೇಶ್ವರನಾಗಿ ಚೇತನ್ ನಟಿಸುತ್ತಿದ್ದಾರೆ. ಉಳಿದಂತೆ ಅಂಬರೀಷ್ ಅವರು ರಾಜನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ವಾಮೀಜಿ ಅವರ ಪಾತ್ರದಲ್ಲಿ ಅವರೇ ನಟಿಸಬೇಕು. ಉಳಿದ ಪಾತ್ರಗಳ ಪಟ್ಟಿಯನ್ನು ತಯಾರಿಸಿ ಸ್ವಾಮೀಜಿ ಅವರಿಗೆ ನೀಡುತ್ತೇವೆ. ಅವರು ಯಾರಿಗೆ `ಆಶೀರ್ವಾದ~ ನೀಡುತ್ತಾರೋ ಅವರುಗಳು ಚಿತ್ರದಲ್ಲಿ ನಟಿಸಲಿದ್ದಾರೆ~ ಎಂದು ಸಾಯಿಪ್ರಕಾಶ್ ತಿಳಿಸಿದರು.

`ಶ್ರೀ ಕ್ಷೇತ್ರ ಆದಿಚುಂಚನಗಿರಿ~ ಚಿತ್ರದಲ್ಲಿ ಹತ್ತು ಹಾಡುಗಳು ಇರಲಿವೆ. ಗುರುಕಿರಣ್‌ಗೆ ಸಂಗೀತ ಸಂಯೋಜನೆ ಜವಾಬ್ದಾರಿ ವಹಿಸಿಕೊಡಲಾಗಿದೆ. ಸಾಹಿತ್ಯ ಡಾ.ದೊಡ್ಡರಂಗೇಗೌಡ ಅವರು ನೀಡಲಿದ್ದಾರೆ. ಛಾಯಾಗ್ರಹಣ ಸುಂದರನಾಥ ಸುವರ್ಣ ಅವರದು. `ಶ್ರೀಮಂಜುನಾಥ~ ಚಿತ್ರದಲ್ಲಿನ ಅವರ ಕೆಲಸದಿಂದ ಪ್ರಭಾವಿತರಾದ ನಿರ್ದೇಶಕರು ಅವರ ಹೆಗಲಿಗೆ ಕ್ಯಾಮೆರಾ ಜವಾಬ್ದಾರಿ ವಹಿಸಿದ್ದಾರೆ.

ಈ ಚಿತ್ರ ಕಮರ್ಷಿಯಲ್ಲೋ ಅಥವಾ ಡಾಕ್ಯುಮೆಂಟರಿಯೋ ಎಂಬ ಪತ್ರಕರ್ತರ ಪ್ರಶ್ನೆಗೆ ಸಂಭಾಷಣೆಕಾರ ಗೋಟೂರಿ ಹೇಳಿದ್ದು- `ಡಾಕುಗಳ ಕುರಿತು ತೆಗೆಯುವುದು ಡಾಕ್ಯುಮೆಂಟರಿ. ಆದರೆ ಇದು ಅದಲ್ಲ~  ಈ ಮಾತಿಗೆ ಪತ್ರಕರ್ತರು ತಕರಾರು ತೆಗೆದರು. `ಅಬ್ದುಲ್ ಕಲಾಂ ಕುರಿತು ಡಾಕ್ಯುಮೆಂಟರಿ ಬಂದಿದೆ. ಹಾಗಾದರೆ ಕಲಾಂ ಅವರನ್ನು ಏನನ್ನುತ್ತೀರಿ?~ ಎಂದು ಪ್ರಶ್ನೆ ಹಾಕಿದರು. ಕೊನೆಗೆ, ಮಧ್ಯಪ್ರವೇಶಿಸಿದ ನಿರ್ದೇಶಕರು, ನಿರ್ಮಾಪಕರು ಸುದ್ದಿಮಿತ್ರರನ್ನು ಸಮಾಧಾನಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT