ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ಕಾಂ ತಂತಿ ಅಕ್ರಮ ದಾಸ್ತಾನು: ಬಂಧನ

Last Updated 9 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಲ್ಲಸಂದ್ರದ ವೆಂಕಟರಮಣಪ್ಪ ಎನ್ನುವವರು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ (ಬೆಸ್ಕಾಂ) ವಿದ್ಯುತ್ ತಂತಿ ಮತ್ತು ಇನ್ಸುಲೇಟರ್‌ಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಿಕೊಂಡಿರುವುದನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಪತ್ತೆಹಚ್ಚಿದ್ದಾರೆ.

ನಂತರ ಆರೋಪಿಯನ್ನು ಬಂಧಿಸಿದ ಬೆಸ್ಕಾಂ ಜಾಗೃತದಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಚಿಕ್ಕಲ್ಲಸಂದ್ರ ನಿವಾಸಿಯಾಗಿರುವ ವೆಂಕಟರಮಣಪ್ಪ ವಿದ್ಯುತ್ ಕಾಮಗಾರಿ ಗುತ್ತಿಗೆದಾರರಾಗಿದ್ದಾರೆ. ಅವರ ಮನೆಯ ಪಕ್ಕದ ಗೋದಾಮಿನಲ್ಲಿ ಅಪಾರ ಪ್ರಮಾಣದ ವಿದ್ಯುತ್ ತಂತಿ ಮತ್ತು ಇನ್ಸುಲೇಟರ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದಾರೆ ಎಂಬ ಮಾಹಿತಿ ಲೋಕಾಯುಕ್ತ ಪೊಲೀಸರಿಗೆ ಲಭ್ಯವಾಗಿತ್ತು.

ಸೋಮವಾರ ಬೆಳಿಗ್ಗೆಯೇ ಆರೋಪಿಯ ಮನೆ ಮತ್ತು ಗೋದಾಮಿನ ಮೇಲೆ ದಾಳಿ ನಡೆಸಿದ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ಎಸ್.ಗಿರೀಶ್ ನೇತೃತ್ವದ ತನಿಖಾ ತಂಡ ಶೋಧಕಾರ್ಯ ನಡೆಸಿತು.
ಸುಮಾರು 200 ಮೀಟರ್ ಉದ್ದದ ವಿದ್ಯುತ್ ತಂತಿ (ಕೇಬಲ್) ಮತ್ತು 30ಕ್ಕೂ ಹೆಚ್ಚು ಇನ್ಸುಲೇಟರ್‌ಗಳು ಗೋದಾಮಿನಲ್ಲಿ ಪತ್ತೆಯಾದವು.
 
ಅವುಗಳ ಮೇಲೆ ಬೆಸ್ಕಾಂನ ಮುದ್ರೆ ಇತ್ತು. ಬೆಸ್ಕಾಂ ವತಿಯಿಂದ ನಡೆಯುವ ಕಾಮಗಾರಿಗಳಲ್ಲಿ ಬಳಕೆ ಮಾಡುವುದಕ್ಕಾಗಿ ಸರ್ಕಾರಿ ಸ್ವಾಮ್ಯದ ಈ ಕಂಪೆನಿಯೇ ಅವುಗಳನ್ನು ತರಿಸಿತ್ತು ಎಂಬುದು ತನಿಖೆ ವೇಳೆ ಪತ್ತೆಯಾಗಿದೆ.

ನಂತರ ಪದ್ಮನಾಭನಗರದಲ್ಲಿರುವ ಬೆಸ್ಕಾಂ ವಿಭಾಗೀಯ ಕಚೇರಿಗೆ ಭೇಟಿ ನೀಡಿದ ಲೋಕಾಯುಕ್ತ ಪೊಲೀಸರು, ಆರೋಪಿಯ ಮನೆಯ ಗೋದಾಮಿನಲ್ಲಿ ಪತ್ತೆಯಾದ ವಸ್ತುಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಪ್ರಯತ್ನಿಸಿದರು.

ಆದರೆ, ಅಲ್ಲಿ ಕೂಡ ಖಚಿತ ಮಾಹಿತಿ ದೊರೆಯಲಿಲ್ಲ. ಬೆಸ್ಕಾಂಗೆ ಸೇರಿದ ವಸ್ತುಗಳನ್ನು ಆರೋಪಿಯ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇಡಲಾಗಿತ್ತು ಎಂಬುದು ಪ್ರಾಥಮಿಕ ತನಿಖೆ ವೇಳೆ ಖಚಿತವಾಯಿತು ಎಂದು ಮೂಲಗಳು ತಿಳಿಸಿವೆ.

ಆರೋಪಿಯನ್ನು ವಶಕ್ಕೆ ಪಡೆದ ತನಿಖಾ ತಂಡ, ಹೇಳಿಕೆ ದಾಖಲಿಸಿಕೊಂಡಿತು. ನಂತರ ವೆಂಕಟರಮಣಪ್ಪ ಅವರನ್ನು ಬೆಸ್ಕಾಂ ಜಾಗೃತ ದಳದ ಜಯನಗರ ವಿಭಾಗದ ಪೊಲೀಸರ ವಶಕ್ಕೆ ಒಪ್ಪಿಸಿದ ಡಿವೈಎಸ್‌ಪಿ ಗಿರೀಶ್, ಖುದ್ದಾಗಿ ದೂರು ದಾಖಲಿಸಿದರು. ಜಾಗೃತ ದಳದ ಇನ್‌ಸ್ಪೆಕ್ಟರ್ ಮಂಜುನಾಥ್ ಅವರು ಆರೋಪಿಯ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT