ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತಕ್ಕೆ ಮುನ್ನ ನೋಟಿಸ್

Last Updated 26 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಬಿಲ್ ಪಾವತಿಸದ ಬಳಕೆದಾರರ ಸಂಪರ್ಕಗಳನ್ನು ಕಡಿತ ಮಾಡುವ ಮೊದಲು ಇಲಾಖೆಯ ಸಿಬ್ಬಂದಿ ಬಳಕೆದಾರರಿಗೆ ನೋಟಿಸ್ ನೀಡಬೇಕು. ಮನೆಯಲ್ಲಿ ಬಳಕೆದಾರರು ಸಿಗದಿದ್ದರೆ ಮನೆ ಗೋಡೆಯಲ್ಲಿ ಸ್ಟಿಕ್ಕರ್ ಅಂಟಿಸಿ ಬರಬೇಕು. ಈ ವ್ಯವಸ್ಥೆ ಆ.1ರಿಂದ ಜಾರಿಗೆ ಬರಲಿದೆ~ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ.ಮಣಿವಣ್ಣನ್ ತಿಳಿಸಿದರು. 

ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಆಶ್ರಯದಲ್ಲಿ  ಗುರುವಾರ ನಡೆದ ವಿದ್ಯುತ್ ಸಮಸ್ಯೆ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ಬಳಕೆದಾರರು ಮನೆಯಲ್ಲಿ ಇರಲಿಲ್ಲ ಎಂಬ ಕಾರಣ ನೀಡಿ ನೋಟಿಸ್ ನೀಡದೆ ಸಂಪರ್ಕ ಕಡಿತ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸ್ಟಿಕ್ಕರ್ ಅಂಟಿಸಿದ ಬಳಿಕ ಬಳಕೆದಾರರಿಗೆ ಬಿಲ್ ಪಾವತಿಗೆ ಮೂರು ದಿನಗಳ ಕಾಲಾವಕಾಶ ನೀಡಲಾಗುವುದು~ ಎಂದರು.

`ಬೆಸ್ಕಾಂ ವ್ಯಾಪ್ತಿಯಲ್ಲಿ 3200 ಫೀಡರ್‌ಗಳಿದ್ದು, ಪ್ರತಿ ಫೀಡರ್‌ಗೆ ಫೀಡರ್ ಮ್ಯಾನೇಜರ್ ಇರುವರು. ಪ್ರತಿ ಫೀಡರ್‌ಗೆ ನಿರ್ದಿಷ್ಟ ಸಂಖ್ಯೆ ನೀಡಲಾಗುವುದು. ಜನರು ತಮ್ಮ ಅಹವಾಲು, ದೂರುಗಳನ್ನು ಫೇಸ್ ಬುಕ್ ಮೂಲಕ ಅಧಿಕಾರಿಗಳ ಗಮನಕ್ಕೆ ತರಬಹುದು. ಸೆಪ್ಟೆಂಬರ್ ಆರಂಭದ ವೇಳೆಗೆ ಈ ವ್ಯವಸ್ಥೆ ಜಾರಿಗೆ ಬರಲಿದೆ.

ಸಮಸ್ಯೆಗಳನ್ನು ಸರಿಪಡಿಸಿದ ಬಳಿಕ ದೂರುದಾರರಿಗೆ ಈ ಬಗ್ಗೆ ಮಾಹಿತಿ ನೀಡಲಾಗುವುದು~ ಎಂದರು.
ವಿದ್ಯುತ್ ಗ್ರಾಹಕರು 92431 50000 ಸಂಖ್ಯೆಗೆ ಎಸ್‌ಎಂಎಸ್ ಮಾಡಿ ದೂರು ಸಲ್ಲಿಸುವ ವ್ಯವಸ್ಥೆ ಆಗಸ್ಟ್‌ನಿಂದ ಜಾರಿಗೆ ಬರಲಿದೆ.  ಎಂದರು.

ತರಬೇತಿ: ಪಾರದರ್ಶಕತೆ ಹಾಗೂ ವೃತ್ತಿಪರತೆ ತರಲು ಇಲಾಖೆಯ ಸಿಬ್ಬಂದಿಗೆ ತರಬೇತಿ ನೀಡಲು ಬೆಸ್ಕಾಂ ಯೋಜಿಸಿದೆ.  ಈ ನಿಟ್ಟಿನಲ್ಲಿ ಪ್ರತಿ ಸಿಬ್ಬಂದಿಗೆ ಒಂದು ವಾರದ ತರಬೇತಿ ನೀಡಲಾಗುವುದು. ಎರಡು ವರ್ಷಗಳಲ್ಲಿ ತರಬೇತಿ ಪೂರ್ಣಗೊಳಿಸಲಾಗುವುದು.ದಕ್ಷಿಣ ಏಷ್ಯಾದ ದೇಶಗಳ ತರಬೇತಿ ಸಂಸ್ಥೆಗಳಿಂದ ತರಬೇತಿ ನೀಡಲಾಗುವುದು~ ಎಂದು ಮಾಹಿತಿ ನೀಡಿದರು.

ಎಲ್ಲ ಕಡತಗಳನ್ನು ಸ್ಕಾನ್ ಮಾಡಿಸಿ ವೆಬ್‌ಸೈಟ್‌ನಲ್ಲಿ ಹಾಕಲಾಗುತ್ತಿದೆ. ವಿದ್ಯುತ್ ಕಳವು ನಿಯಂತ್ರಣಕ್ಕೆ ಯೋಜನೆ ರೂಪಿಸಲಾಗಿದ್ದು, ಯೋಜನೆ ಆರಂಭಿಕ ಹಂತದಲ್ಲಿದೆ. ದೂರು ನೀಡಿದವರ ಹೆಸರನ್ನು ಗುಪ್ತವಾಗಿ ಇಡಲಾಗುವುದು ಹಾಗೂ ಅವರಿಗೆ ಪ್ರೋತ್ಸಾಹ ಧನ ನೀಡುವ ಪ್ರಸ್ತಾಪವೂ ಇದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT